ಬೆಂಗಳೂರು, ಸೆ.26 www.bengaluruwire.com : ಬಿಡಿಎ ನಿರ್ಮಿಸಿದ ಸರ್.ಎಂ.ವಿಶ್ವೇಶ್ವರಯ್ಯ 1 ರಿಂದ 9ನೇ ಬ್ಲಾಕ್ ಗಳ ಬಡಾವಣೆ ನಿವೇಶನದಾರರನ್ನು ಪ್ರತಿನಿಧಿಸುವ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಪ್ರಾಂಭವಾದ 15 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಇದೇ ಸೆಪ್ಟೆಂಬರ್ 29 ಭಾನುವಾರ ನಡೆಯುತ್ತಿದೆ. ಇದು ಬಡಾವಣೆ ನಿವಾಸಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.
2003-2004ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 1 ರಿಂದ 9 ಬ್ಲಾಕ್ ಗಳಲ್ಲಿ ಬಡಾವಣೆಯಲ್ಲಿ ನಿವೇಶನವನ್ನು ರಚಿಸಿ ಅರ್ಹ ಅರ್ಜಿದಾರರಿಗೆ 9 ಬ್ಲಾಕ್ ಗಳಲ್ಲಿ ರಚಿಸಲಾಗಿದ್ದ 17,000 ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಇದಾದ ಬಳಿಕ 2010ರ ಮಾರ್ಚ್ 30ರಂದು ಬಡಾವಣೆಯ ನಾಗರೀಕರ ಅನುಕೂಲಕ್ಕೆಂದು ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ನಿವಾಸಿಗಳ ಮತ್ತು ನಿವೇಶನದಾರರ ಕ್ಷೇಮಾಭಿವೃದ್ಧಿ ಸಂಘ ನೋಂದಣಿಯಾಗಿ ಜಾರಿಗೆ ಬಂದಿತ್ತು. ಆದರೆ 16-02-2013ರಂದು ಸಂಘದ ಹೆಸರನ್ನು “ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ”ವೆಂದು ಅಸೋಸಿಯೇಷನ್ ಬೈಲಾಗೆ ತಿದ್ದುಪಡಿ ತಂದು ಬದಲಾವಣೆ ಮಾಡಲಾಗಿದೆ.
2010ರ ಇಸವಿಯಿಂದ ಸಂಘ ಸ್ಥಾಪನೆಯಾದಾಗಿನಿಂದ ಈವರೆಗೆ ಮೂರು ವರ್ಷಗಳಿಗೊಮ್ಮೆ ಚುನಾವಣೆಗಳು ನಿಗದಿಯಾಗಿದ್ದರೂ ಸಂಘದ ಅಧ್ಯಕ್ಷರಾಗಿ ಡಿ.ಎಸ್.ಗೌಡರು ಹಾಗೂ ಅವರ ನೇತೃತ್ವದ ತಂಡವೇ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಮೂರು ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದರೆ 2024ರ ಸೆಪ್ಟೆಂಬರ್ 29ರ ಭಾನುವಾರ ನಡೆಯುತ್ತಿರುವ ಚುನಾವಣೆಗೆ ಇದೇ ಮೊದಲ ಬಾರಿಗೆ ರಮೇಶ್.ಎನ್. ನೇತೃತ್ವದಲ್ಲಿ ಸರ್.ಎಂ.ವಿ.ಎಲ್.ಬೆಳವಣಿಗೆ ಸುಧಾರಕ ತಂಡ” (SMVL GROWTH REFORMERS TEAM) ವು ಹಾಲಿ ಅಧ್ಯಕ್ಷರಾಗಿರುವ ಡಿ.ಎಸ್.ಗೌಡರ ಬಣಕ್ಕೆ ಸ್ಪರ್ಧೆ ನೀಡುತ್ತಿದೆ.
ಸಹಕಾರ ಸಂಘಗಳ ಉಪನಿಬಂಧಕರಾಗಿ ನಿವೃತ್ತರಾದ ದೊಡ್ಡತಮ್ಮೇಗೌಡ ಎಂಬುವರು ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಚುನಾವಣಾ ಅಧಿಕಾರಿಯಾಗಿದ್ದು, ಈಗಾಗಲೇ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಸೆ.16ರಂದು ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಸೆ.21ರಂದು ಉಮೇದುವಾರಿಕೆ ಸಲ್ಲಿಸಲು ಕಡೆಯ ದಿನಾಂಕವಾಗಿತ್ತು. ಇನ್ನು ಅದೇ ದಿನ ಸಂಜೆ 5 ಗಂಟೆ ಉಮೇದುವಾರಿಕೆ ಅರ್ಜಿ, ನಾಮಪತ್ರಗಳ ಪರಿಶೀಲನೆ ನಡೆದು ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿತ್ತು. ಸೆ.23ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿತ್ತು. ಅದೇ ದಿನ ಸಂಜೆ 5 ಗಂಟೆಯ ಬಳಿಕ ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಒಟ್ಟಾರೆ 38 ಮಂದಿ ಅಂತಿಮವಾಗಿ 20 ಸ್ಥಾನಗಳಿಗೆ ಸ್ಪರ್ಧೆ ನೀಡಲು ಕಣದಲ್ಲಿದ್ದಾರೆ.
ಸರ್ವ ಸದಸ್ಯರ ಸಭೆ ಹಾಗೂ ಚುನಾವಣೆ :
ಸೆ.29ರ ಭಾನುವಾರ 3ನೇ ಬ್ಲಾಕ್ ನಲ್ಲಿರುವ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಡಿ.ಎಸ್.ಗೌಡ ಅವರ ಅಧ್ಯಕ್ಷತೆಯಲ್ಲಿ 10 ಗಂಟೆಗೆ 2023-24ರ ಸರ್ವ ಸದಸ್ಯರ ಸಭೆ ನಡೆಯಲಿದೆ. ತದನಂತರ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯ ತನಕ ಚುನಾವಣೆ ನಡೆಯಲಿದೆ.
ಸಂಘದ ಚುನಾವಣೆಯು ಹೇಗೆ ನಡೆಯುತ್ತೆ? :
ಒಬ್ಬ ಮತದಾರನಿಗೆ 20 ಹುದ್ದೆಗಳಿಗೆ 20 ಮತ ಹಾಕುವ ಹಕ್ಕಿದೆ :
ಸಂಘದ ಚುನಾವಣೆ ನಡೆಯುವ ಬಗ್ಗೆ ಬೆಂಗಳೂರು ವೈರ್ ಜೊತೆ ಮಾತನಾಡಿದ ಚುನಾವಣಾಧಿಕಾರಿ ದೊಡ್ಡತಮ್ಮೇಗೌಡ, “ಮತದಾನ ಮಾಡಲು ಆಗಮಿಸುವವರು ತಪ್ಪದೇ ಸಂಘವು ವಿತರಿಸಿದ ಗುರುತಿನ ಚೀಟಿಯನ್ನು ತರುವುದನ್ನು ಖಡ್ಡಾಗೊಳಿಸಲಾಗಿದೆ. ಪ್ರತಿಯೊಬ್ಬ ಸಂಘದ ಸದಸ್ಯರು ಚುನಾವಣೆ ನಡೆಯುವ ಸ್ಥಳಕ್ಕೆ ಆಗಮಿಸಿ ತಮ್ಮ ಗುರ್ತಿನ ಕಾರ್ಡ್ ತೋರಿಸಿ ಮತಚೀಟಿಯನ್ನು ಹಾಗೂ ತಲಾ ಎರಡು ಮತಪತ್ರವನ್ನು ಪಡೆಯಬೇಕು. ಪ್ರತಿ ಮೂರು ಬ್ಲಾಕ್ ಬಡಾವಣೆಗೆ ಒಂದರಂತೆ ಒಟ್ಟು ಮೂರು ಬೂತ್ ಗಳನ್ನು ಮಾಡಲಾಗುತ್ತದೆ. ಪ್ರತಿ ಸದಸ್ಯ ಅಥವಾ ಮತದಾರ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಜಿ ಹೀಗೆ ತಲಾ ಒಂದೊಂದು ಹುದ್ದೆಗೆ ಒಂದೊಂದು ಮತ ಚಲಾಯಿಸಬೇಕು. ಅಂದರೆ ಒಟ್ಟಾರೆ 5 ಮಂದಿ ಪದಾಧಿಕಾರಿ ಹುದ್ದೆ ಅಭ್ಯರ್ಥಿಗೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವ ಯಾವುದೇ 15 ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕಲು ಅವಕಾಶವಿದೆ. ಅಂದರೆ ಸಂಘದ 20 ಸ್ಥಾನಗಳಿಗೆ ಮತಹಾಕುವ ಅವಕಾಶವಿದೆ” ಎಂದಿದ್ದಾರೆ.
“ನಿಗದಿಪಡಿಸಿದ ಬೂತ್ ನಲ್ಲಿ ತಮ್ಮ ಬಳಿಯಿರುವ ಎರಡು ಮತಪತ್ರದ ಪೈಕಿ ಒಂದು ಮತಪತ್ರದಲ್ಲಿ ಸ್ಪರ್ಧಿಸುತ್ತಿರುವ ಐದು ಪದಾಧಿಕಾರಿ ಹುದ್ದೆಗೆ ಸ್ಪರ್ಧಿಸಿರುವ 10 ಅಭ್ಯರ್ಥಿಗಳ ಹೆಸರಿರುತ್ತದೆ. ಹಾಗೇ ಮತ್ತೊಂದು ಮತಪತ್ರದಲ್ಲಿ ಸ್ಪರ್ಧೆಯಲ್ಲಿರುವ 20 ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ 28 ಅಭ್ಯರ್ಥಿಗಳ ಹೆಸರಿರುತ್ತದೆ. ಅದರಲ್ಲಿ ತಮಗೆ ಸೂಕ್ತರೆನಿಸಿದ ಹೆಸರಿನ ಮುಂದೆ ಸ್ವಸ್ತಿಕ್ ಸೀಲ್ ಒತ್ತಿ ತಮ್ಮ ಮತ ಚಲಾಯಿಸಬಹುದು. ಆನಂತರ ಮತಪತ್ರವನ್ನು ನಿಗದಿತ ಸ್ಥಳದಲ್ಲಿ ಇಟ್ಟಿರುವ ಆಯಾ ಮತ ಪೆಟ್ಟಿಗೆಗೆ ಹಾಕಬೇಕು” ಎಂದು ಅವರು ಮತದಾರರಿಗೆ ಮಾಹಿತಿ ನೀಡಿದ್ದಾರೆ.
“ಸೆ.29ರಂದು ಸಂಜೆ 4 ಗಂಟೆಗೆ ಚುನಾವಣೆ ಮತದಾನದ ಅವಧಿ ಮುಗಿದ ಬಳಿಕ, ಮತಗಳ ಎಣಿಕೆ ಅಭ್ಯರ್ಥಿಗಳ ಮುಂದೆ ನಡೆಯಲಿದ್ದು, ಆದಾದ ಬಳಿಕ ಚುನಾವಣಾ ಫಲಿತಾಂಶ ಪ್ರಕಟಣೆ ಮಾಡುತ್ತೇವೆ” ಎಂದು ಚುನಾವಣಾಧಿಕಾರಿ ತಮ್ಮೇಗೌಡ ತಿಳಿಸಿದ್ದಾರೆ.
ಸಂಘ ಪ್ರಾರಂಭವಾದಾಗಿನಿಂದ ಇದು ಮೊದಲ ಚುನಾವಣಾ ಸ್ಪರ್ಧೆ :
1 ರಿಂದ 9 ಬ್ಲಾಕ್ ಗಳಲ್ಲಿನ ಬಡಾವಣೆ ನಿವಾಸಿಗಳು ಹಾಗೂ ಸಂಘದ ಸದಸ್ಯರಲ್ಲೂ ಸಂಘ ಪ್ರಾರಂಭವಾದಗಿನಿಂದಲೂ ಒಂದು ಬಾರಿಯೂ ಎದುರಾಳಿ ಸ್ಪರ್ಧೆಯಾಗದೇ ಕೇವಲ ಅವಿರೋಧವಾಗಿ ಆಯ್ಕೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ತಾವು ಮತ ಹಾಕುತ್ತಿರುವ ಬಗ್ಗೆ ಸಂಘದ ಸದಸ್ಯರು ಹಾಗೂ ಮತದಾರರೂ ಆಗಿರುವ ಬಡಾವಣೆಯ ನಿವಾಸಿಗಳು ಹರ್ಷಗೊಂಡಿದ್ದಾರೆ. ಹೀಗಾಗಿ ಈ ಚುನಾವಣೆಯು ಮಹತ್ವ ಪಡೆದುಕೊಂಡಿದೆ. ಸಂಘದಲ್ಲಿ ಒಟ್ಟಾರೆ 1176 ಮತದಾರರಿದ್ದು, ಸೆ.29ರಂದು ನಡೆಯುವ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಸಂಘದ ಮತದಾರರು ಕಾತುರರಾಗಿದ್ದಾರೆ. ಈ ಬಾರಿ ಹೊಸಬರಿಗೆ ಅವಕಾಶ ನೀಡುವ ಹುಮ್ಮಸ್ಸಿನಲ್ಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಘದಲ್ಲಿ ಹೆಚ್ಚಿನ ಸದಸ್ಯತ್ವ ಪಡೆಯುವ ಅಗತ್ಯತೆ ಹೆಚ್ಚಾಗಿದೆ :
ಒಂದರಿಂದ 9ನೇ ಬಡಾವಣೆಯಲ್ಲಿ ಶೇ.50ಕ್ಕೂ ಹೆಚ್ಚು ನಿವೇಶನಗಳಲ್ಲಿ ಮನೆಗಳು ಬಂದಿದ್ದು, ಇದೀಗ ಸಾವಿರಾರು ಜನರು ವಿವಿಧ ಬ್ಲಾಕ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಬಡಾವಣೆಯ ವ್ಯಾಪ್ತಿಯಲ್ಲಿ ರಸ್ತೆ, ಬೀದಿ ದೀಪ, ಕಸ ವಿಲೇವಾರಿ, ಸುರಕ್ಷತೆ, ಕೆರೆ- ಉದ್ಯಾನವನ ಸಂರಕ್ಷಣೆ, ಕುಡಿಯುವ ನೀರು ಮತ್ತಿತರ ವಿಷಯಗಳಲ್ಲಿ ಒಂದಿಲ್ಲೊಂದು ಕೊರತೆ, ಸಮಸ್ಯೆಗಳು ಕಂಡು ಬರುತ್ತಿರುತ್ತದೆ. ಹೀಗಾಗಿ ಇವೆಲ್ಲವುಗಳನ್ನು ನಿವಾರಿಸಿ ಬಡಾವಣೆಯ ನಿವಾಸಿಗಳಿಗೆ ಸ್ಪಂದಿಸುವ, ಉತ್ತಮ ಆಡಳಿತ ನೀಡುವವರಿಗೆ ಮತ ಹಾಕಲು ಮತದಾರರು ನಿರ್ಧರಿಸಿದ್ದಾರೆ.
17 ಸಾವಿರ ನಿವೇಶನದಾರರಿದ್ದರೂ 1176 ಸಂಘದ ಸದಸ್ಯತ್ವ ಯಾಕೆ ? :
1 ರಿಂದ 9ನೇ ಬ್ಲಾಕ್ ವರೆಗೆ ಬಿಡಿಎ 17,000ಕ್ಕೂ ಹೆಚ್ಚು ನಿವೇಶನಗಳನ್ನು ರಚಿಸಿ ಅರ್ಹ ಅರ್ಜಿದಾರರಿಗೆ ನಿವೇಶನ ಹಂಚಿಕೆ ಮಾಡಿದೆ. 2010ರಿಂದ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆಯಾದರೂ 2024ನೇ ಸೆಪ್ಟೆಂಬರ್ ವರೆಗೆ ಕೇವಲ 1176 ಮಂದಿ ಸದಸ್ಯರಿದ್ದಾರೆ. ಬಡಾವಣೆಯಲ್ಲಿ ಈಗಾಗಲೇ ಸಾಕಷ್ಟು ನಿವೇಶನದಾರರು ಮನೆ ಕಟ್ಟಿಕೊಂಡು ಬಂದಿದ್ದು, ಬಡಾವಣೆಯಲ್ಲಿ ಜನಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೂ ಸದಸ್ಯರ ಸಂಖ್ಯೆ ಹೆಚ್ಚಾಗಿಲ್ಲ. ಇನ್ನು ಮುಂದೆ ಚುನಾಯಿಸಿ ಆರಿಸಿ ಬರುವ ಆಡಳಿತ ಮಂಡಳಿಯು ಹೆಚ್ಚಿನ ಸಂಖ್ಯೆಯಲ್ಲಿ ಹೊಸದಾಗಿ ಸದಸ್ಯರನ್ನು ಸಂಘಕ್ಕೆ ಸೇರ್ಪಡೆ ಮಾಡುವ ಅಗತ್ಯವಿದೆ ಎಂದು ಸಂಘದ ಸದಸ್ಯರೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.