ಬೆಂಗಳೂರು, ಸೆ.25 www.bengaluruwire.com : ಬಿಬಿಎಂಪಿ ಆಟದ ಮೈದಾನದ ಗೇಟ್ ಬಿದ್ದು ಮೃತಪಟ್ಟ ಬಾಲಕ ನಿರಂಜನ್ ನಿವಾಸಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿ ಪೋಷಕರಿಗೆ ₹10 ಲಕ್ಷ ಮೊತ್ತದ ಪರಿಹಾರದ ಚೆಕ್ ವಿತರಿಸಿದರು.
ಮಲ್ಲೇಶ್ವರಂನ ಬಾಲಕನ ನಿವಾಸಕ್ಕೆ ಶಿವಕುಮಾರ್ ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಬಿಬಿಎಂಪಿ ಆಟದ ಮೈದಾನದಲ್ಲಿ ಗೇಟ್ ಬಿದ್ದು ಮೃತಪಟ್ಟ ಬಾಲಕನ ಮನೆಗೆ ನಮ್ಮ ಸಚಿವರು ಹಾಗೂ ಶಾಸಕರು ಬಂದು ಸಾಂತ್ವನ ಹೇಳಿದ್ದರು. ನಾನು ಅವರ ಮನೆಗೆ ಬಂದು ಬಾಲಕನ ತಂದೆ ತಾಯಿ ಭೇಟಿ ಮಾಡಿದೆ. ಬಿಬಿಎಂಪಿ ವತಿಯಿಂದ 5 ಲಕ್ಷ ಹಾಗೂ ಪಕ್ಷದ ವತಿಯಿಂದ (ಬ್ಲಾಕ್ ಕಾಂಗ್ರೆಸ್) 5 ಲಕ್ಷ ಪರಿಹಾರ ಸೇರಿ ಒಟ್ಟು 10 ಲಕ್ಷದ ಚೆಕ್ ನೀಡಲಾಗಿದೆ.
ಮೃತಪಟ್ಟ ಬಾಲಕನ ನೇತ್ರವನ್ನು ಕುಟುಂಬದವರು ದಾನ ಮಾಡಿ ನಮಗೆ ಮಾದರಿಯಾಗಿದ್ದಾರೆ. ಬಡತನವಿದ್ದರೂ ಸಮಾಜ ಹಾಗೂ ದೇಶಕ್ಕೆ ಕಾಣಿಕೆ ನೀಡುವ ತೀರ್ಮಾನವನ್ನು ನಾವು ಮೆಚ್ಚಬೇಕು. ಮಗನನ್ನು ಕಳೆದುಕೊಂಡಿರುವ ನೋವನ್ನು ಭರಿಸುವ ಶಕ್ತಿ ಅವರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಈ ಕುಟುಂಬದ ಜತೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ದಿನೇಶ್ ಗುಂಡೂರಾವ್ ಅವರ ಫೌಂಡೇಶನ್ ವತಿಯಿಂದ ಮೃತ ಬಾಲಕನ ತಂಗಿಯ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಗುವುದು. ಮಾನವೀಯತೆ ದೃಷ್ಟಿಯಿಂದ ಈ ನೆರವು ನೀಡುತ್ತಿದ್ದೇವೆ. ಇದು ನಮ್ಮ ಧರ್ಮ.
ಬಿಬಿಎಂಪಿ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಬೇರೆ ಪಾರ್ಕ್ ಹಾಗೂ ಮೈದಾನಗಳ ಪರಿಸ್ಥಿತಿ ಇದೇ ರೀತಿ ಇದೆಯೇ ಎಂದು ಮಾಧ್ಯಮದವರು ಕೇಳಿದಾಗ, “ಈ ಪ್ರಕರಣದ ವರದಿ ಕೇಳಿದ್ದೇವೆ. ವರದಿ ಬಂದ ಬಳಿಕ ತೀರ್ಮಾನ ಮಾಡುತ್ತೇವೆ. ಬೆಂಗಳೂರಿನ ಬೇರೆ ಕಡೆಗಳಲ್ಲಿ ಗೇಟ್ ಪರಿಶೀಲನೆ ನಡೆಸಲಾಗುವುದು” ಎಂದು ತಿಳಿಸಿದರು.