ಬೆಂಗಳೂರು, ಸೆ.24 www.bengaluruwire.com : ಸಾಮಾಜಿಕ ಜಾಲತಾಣವನ್ನು ಇತ್ತೀಚೆಗೆ ತಮ್ಮ ಚೌಕಟ್ಟು, ಎಲ್ಲೆ ಮೀರಿ ದುರುಪಯೋಗಪಡಿಸಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇತ್ತೀಚೆಗಷ್ಟೇ ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ, ರೀಲ್ಸ್ ಮಾಡುವ ಸುಗಂಧಾ ಶರ್ಮಾ ತಮ್ಮ ತಪ್ಪಿಗೆ ಈಗ ಕೆಲಸ ಕಳೆದುಕೊಂಡಿದ್ದಾರೆ.
ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಆಕೆಯ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ದೂರು ನೀಡಿದ್ದಾಗಿ ಹೇಳಿದ್ದಾರೆ. ಸುಗಂಧ ಶರ್ಮಾ ಎಂಬಾಕೆ ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮೂಲಕ ದುರಹಂಕಾರ ಪ್ರದರ್ಶಿಸಿದ್ದರು. ಉತ್ತರ ಭಾರತ ಮೂಲದ ರೀಲ್ಸ್ ಮಾಡುತ್ತಿದ್ದ, ಸುಗಂಧಾ ಶರ್ಮಾರನ್ನ ಅವರನ್ನು ಬೆಂಗಳೂರಿನಲ್ಲಿನ ಖಾಸಗಿ ಕಂಪನಿಯೇ ಕೆಲಸದಿಂದ ಕಿತ್ತು ಹಾಕಿದೆ. ಹೀಗಾಗಿ ಈಗ ಬೆಂಗಳೂರನ್ನೇ ಬಿಡುವ ಪರಿಸ್ಥಿತಿ ಬಂದಿದೆ.
ಈಕೆಯ ಹೇಳಿಕೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಕನ್ನಡಿಗರು ಸುಗಂಧಾ ಶರ್ಮಾಗೆ ಬೆಂಗಳೂರನ್ನು ತೊರೆಯುವಂತೆ ಚಾಲೆಂಜ್ ಹಾಕಿದ್ದರು. ಈಗ ಸ್ವತಃ ಅವರೇ ಕೆಲಸ ಕಳೆದುಕೊಂಡಿದ್ದಾರೆ.
ಅಸಲಿಗೆ ಏನಿದು ವಿವಾದ? :
ಸುಗಂಧಾ ಶರ್ಮಾ ರೀಲ್ಸ್ ನಲ್ಲಿ, ನೀವು ಹೊರಟು ಹೋಗಿ ಎನ್ನುತ್ತಿದ್ದೀರಾ. ನಿಜವಾಗಿಯೂ ನಾವೆಲ್ಲರೂ ಬೆಂಗಳೂರು ತೊರೆದರೆ ನಿಮ್ಮ ನಗರ ಖಾಲಿಯಾಗುತ್ತದೆ. ನಿಮ್ಮ ಪಿ.ಜಿ.ಗಳು ಖಾಲಿ ಆಗುತ್ತವೆ. ನಿಮಗೆ ಹಣ ಸಂಪಾದನೆಯಾಗುವುದಿಲ್ಲ. ಕೋರಮಂಗಲದ ಎಲ್ಲ ಕ್ಲಬ್‌ಗಳು ಖಾಲಿಯಾಗುತ್ತವೆ. ಪಂಜಾಬಿ ಸಂಗೀತಕ್ಕೆ ಕುಣಿಯುವ ಚೆಂದದ ಹುಡುಗಿಯರು ಕಾಣಿಸುವುದಿಲ್ಲ. ಯೋಚಿಸಿ ಮಾತನಾಡಿ. ಉತ್ತರ ಭಾರತೀಯರು ತೊರೆಯಬೇಕು ಎನ್ನುವ ನಿಮ್ಮ ಆಸೆ ನಿಜವಾದರೆ ಬೆಂಗಳೂರಿನ ಕಳೆಯೇ ಹೋಗಿಬಿಡುತ್ತದೆ ಎಂದಿದ್ದರು.
ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸುಗಂಧಾ ವಿರುದ್ಧ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಕಿಡಿ ಕಾರಿದ್ದರು. ಭಾಷೆಯ ನೆಪದಲ್ಲಿ ಜನರ ನಡುವೆ ಕಂದಕ ಸೃಷ್ಟಿಸಲು ಯತ್ನಿಸುತ್ತಿರುವ ಈಕೆಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೆಲವು ನೆಟ್ಟಿಗರು ಪೊಲೀಸರಿಗೂ ಟ್ಯಾಗ್ ಮಾಡಿದ್ದರು.
ಬರೀ ಕಮೆಂಟ್ ಅಲ್ಲ ಅಖಾಡಕ್ಕಿಳಿದಿದ್ದ ಕನ್ನಡ ಹೋರಾಟಗಾರರು :
ಬೆಂಗಳೂರಿನಲ್ಲಿ ವಾಸವಿರುವ ಸುಗಂಧ್ ಶರ್ಮಾ ಅವರ ವಿರುದ್ಧ ದೂರು ನೀಡಲು ಕನ್ನಡ ಪರ ಕಾರ್ಯಕರ್ತರು ಮೊದಲು ಆಕೆ ಕೆಲಸ ಮಾಡುತ್ತಿದ್ದ ಕಚೇರಿಯನ್ನು ಹುಡುಕಿ ಆಕೆಯ ವಿವಾದಿತ ವಿಡಿಯೋ ಬಗ್ಗೆ ತಿಳಿ ಹೇಳಿ ಮನವರಿಕೆ ಮಾಡಿಕೊಟ್ಟರು. ಬೆಂಗಳೂರಿನಲ್ಲಿರುವ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, “ಕನ್ನಡಿಗರಿಗೆ ಜಯವಾಗೋವರೆಗೂ ನಮ್ಮ ಹೋರಾಟ. ಸುಗಂಧ ಶರ್ಮ ಬೆಂಗಳೂರಿನ ವಿರುದ್ದ ಮಾತನಾಡಿರೋ ವಿಷಯವಾಗಿ ಕಳೆದ 2ದಿನದಿಂದ ಆಕೆಯ ಮಾಹಿತಿ ಹುಡುಕಿ ಫ್ರಿಡಂಆಪ್ ಸಂಸ್ಥೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತನಾಡಿ ಈಕೆಯ ಕನ್ನಡವಿರೋಧಿ ನೀತಿ ಕಂಡು ಈಕೆಯನ್ನು ಕೆಲಸದಿಂದ ತೆಗೆದಿದ್ದು,ಆಕೆಯ ಮೇಲೆ ಕ್ರಮಕ್ಕೆ ಕೋರಮಂಗಲ ಠಾಣೆಲಿ ದೂರು ಕೊಡುತ್ತಿದ್ದೇವೆ.” ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇನ್ನು ಫೇಸ್ ಬುಕ್‌ನಲ್ಲಿ ಸುಗಂಧ್ ಶರ್ಮಾ ವಿರುದ್ಧ ಕಿಡಿಕಾರಿ ಅಲ್ಲೂ ಪೋಸ್ಟ್ ಹಾಕಿರುವ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ, “ಆಕೆಯ ಮೇಲೆ ಕ್ರಮ ಆಗುವವರೆಗೂ ನಾವು ವಿರಮಿಸಲ್ಲ. ಹಾಗೂ ಇನ್ನೊಂದು ಕಂಪನಿ ಆಕೆಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರೆ ಕೂಡಲೇ ಆಕೆಯನ್ನು ಕೆಲ್ಸದಿಂದ ತೆಗೆದು ಅವರ ಊರಿಗೆ ಕಳಿಸಬೇಕು. ಇಲ್ಲವಾದರೆ ಅದನ್ನು ಹುಡುಕಿ ಕಂಪನಿ ವಿರುದ್ದ ಹೋರಾಟ ಮಾಡುವೆವು…” ಎಂದು ಖಾರವಾಗಿ ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ರೂಪೇಜ್ ರಾಜಣ್ಣ ಕಾರ್ಯವನ್ನು ಶ್ಲಾಘಿಸಿದ್ದರೆ, ಸುಗಂಧ್ ಶರ್ಮಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.