ನವದೆಹಲಿ, ಸೆ.23 www.bengaluruwire.com : ಗುಜರಾತ್ ಮೂಲದ ಸುಂದರಿ ರಿಯಾ ಸಿಂಘಾ (Rhea Singha) ಮಿಸ್ ಯೂನಿವರ್ಸ್ ಇಂಡಿಯಾ 2024 (Miss Universe India 2024) ಕಿರೀಟವನ್ನು ಗೆದ್ದು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಜಾಗತಿಕ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮಿಸ್ ಯೂನಿವರ್ಸ್ ಇಂಡಿಯಾ 2024 ರ ಗ್ರ್ಯಾಂಡ್ ಫಿನಾಲೆ ಭಾನುವಾರ ರಾಜಸ್ಥಾನದ ಜೈಪುರದಲ್ಲಿ ನಡೆಯಿತು. ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ರಿಯಾ ಸಿಂಘಾ ವಿಜಯಿಯಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡರು.
ತಮ್ಮ ಈ ಗೆಲುವಿನ ಬಗ್ಗೆ ರಿಯಾ ಸಂತೋಷವನ್ನು ತಡೆಯಲಾಗದೆ, ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಅವರು, “ನಾನು ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟವನ್ನು ಗೆದ್ದಿದ್ದೇನೆ. ಇದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಮಟ್ಟಕ್ಕೆ ಏರಲು ನಾನು ತುಂಬಾ ಕೆಲಸ ಮಾಡಿದ್ದೇನೆ, ನಾನು ಈ ಕಿರೀಟ ಪಡೆಯಲು ಸಾಕಷ್ಟು ಅರ್ಹನೆಂದು ಪರಿಗಣಿಸಬಹುದು. ಹಿಂದಿನ ವಿಜೇತರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ.” ಎಂದು ಬಹಳ ಉತ್ಸಾಹದಿಂದ ಪ್ರತಿಕ್ರಿಯೆ ನೀಡಿದರು.
ಮಿಸ್ ಯೂನಿವರ್ಸ್ ಇಂಡಿಯಾ ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ನಟಿ ಮತ್ತು 2015ರ ಮಿಸ್ ಯೂನಿವರ್ಸ್ ಇಂಡಿಯಾ ಊರ್ವಶಿ ರೌತೆಲಾ ಮಾತನಾಡುತ್ತಾ, “ಭಾರತವು ಈ ವರ್ಷ ಮತ್ತೆ ಮಿಸ್ ಯೂನಿವರ್ಸ್ ಕಿರೀಟವನ್ನು ಗೆಲ್ಲುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಈ ಸ್ಪರ್ಧೆಯಲ್ಲಿ ಪ್ರಾಂಜಲ್ ಪ್ರಿಯಾ ಮೊದಲ ರನ್ನರ್ ಅಪ್ ಆಗಿದ್ದರೆ, ಛಾವಿ ವರ್ಗ್ ಮೂರನೇ ಸ್ಥಾನ ಪಡೆದರು. ನಾಲ್ಕನೇ ಸ್ಥಾನವನ್ನು ಸುಶ್ಮಿತಾ ರಾಯ್ ಹಾಗೂ 5ನೇ ಸ್ಥಾನಕ್ಕೆ ರೂಪ್ಫುಝಾನೊ ವಿಸೊ ತೃಪ್ತಿಪಟ್ಟಿದ್ದಾರೆ.