ಬೆಂಗಳೂರು, ಸೆ.23 www.bengaluruwire.com : ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ನಾರಾಯಣಪುರದ ವಿಲ್ಲಾವೊಂದರಲ್ಲಿ ಮನೆ ಕಳ್ಳತನ ಪ್ರಕರಣದಲ್ಲಿ ಬಂಧಿತನಾದ ವ್ಯಕ್ತಿಯಿಂದ 9 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಚಿನ್ನಾಭರಣ, ಮೊಬೈಲ್ ಫೋನ್, ವಾಚ್ ಹಾಗೂ ಅಮೆರಿಕನ್ ಡಾಲರ್ ಹಣ ಸೇರಿದಂತೆ ಒಟ್ಟು 21 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಲ್ಲಾವೊಂದಕ್ಕೆ ನುಗ್ಗಿ 1 ವಾಚ್, ಮೊಬೈಲ್, ಪರ್ಸ್‌ನಲ್ಲಿ 3,900 ಅಮೆರಿಕನ್ ಡಾಲರ್ ಕಳ್ಳತನ ಮಾಡಿದ್ದಾಗಿ ಸೆ.07ರಂದು ದೂರು ದಾಖಲಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಾಗ, ಗುಬ್ಬಿ ಕ್ರಾಸ್ ಬಳಿ ತ್ರಿಪುರಾ ರಾಜ್ಯದ ಓರ್ವ ವ್ಯಕ್ತಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು.
ತನಿಖೆ ಮುಂದುವರೆಸಿದಾಗ ಸೆ.12ರಂದು ಕೊತ್ತನೂರು ಪೊಲೀಸ್ ಠಾಣಾ ಸರಹದ್ದಿನ ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿರುವ ಐಷರಾಮಿ ವಿಲ್ಲಾಗಳಲ್ಲಿ ಚಿನ್ನಾಭರಣ, ಮೊಬೈಲ್ ಫೋನ್ ಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.
ಈ ಪ್ರಕರಣದ ಆರೋಪಿಯ ಬಂಧನದಿಂದ ಕೊತ್ತನೂರು ಪೊಲೀಸ್ ಠಾಣೆಯ 4, ಯಲಹಂಕ ಪೊಲೀಸ್ ಠಾಣೆಯ 2, ಚಿಕ್ಕಜಾಲ ಪೊಲೀಸ್ ಠಾಣೆಯ 2,ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 9 ಕನ್ನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಪಿಯಿಂದ ಒಟ್ಟು 170 ಗ್ರಾಂ ಚಿನ್ನಾಭರಣಗಳು, ವಿವಿಧ ಕಂಪನಿಯ ಬೆಲೆ ಬಾಳುವ 33 ವಾಚ್‌ಗಳು, 3,900 ಅಮೆರಿಕನ್ ಡಾಲರ್ ಹಾಗೂ 5 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 21 ಲಕ್ಷ ರೂಪಾಯಿಯಾಗಿದೆ. ಈ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತರಾದ ವಿ.ಜೆ. ಸಜೀತ್ ಮಾರ್ಗದರ್ಶನದಲ್ಲಿ ನಡೆದಿದೆ.