ಬೆಂಗಳೂರು, ಸೆ.18 www.bengaluruwire.com : ರಾಜಧಾನಿಯ ಸ್ಥಳೀಯಾಡಳಿತ ಸಂಸ್ಥೆಯಲ್ಲಿ ಮೇಯರ್ ನೇತೃತ್ವದ ಕೌನ್ಸಿಲ್ ಇಲ್ಲದೇ ಹಲವು ವರ್ಷಗಳೇ ಸಂದಿದೆ. ಪದೇ ಪದೇ ಪಾಲಿಕೆಯ ಆಡಳಿತದಲ್ಲಿ ಭ್ರಷ್ಟತೆ ತಾಂಡವಾಡುತ್ತಿರುವ ಬಗ್ಗೆ ಒಂದಿಲ್ಲೊಂದು ವರದಿಯಾಗುತ್ತಲೇ ಇದೆ.
ಇದೀಗ ಈ ಬಗ್ಗೆ ಪಾಲಿಕೆಯಲ್ಲಿ ಮಹಾಪೌರ ಪದ್ಧತಿ ಜಾರಿಗೆ ಬಂದ 76 ವರ್ಷಗಳಲ್ಲೇ ವ್ಯಾಪಕ ಭ್ರಷ್ಟಾಚಾರ, ಅಕ್ರಮಗಳು ಪಾಲಿಕೆ “ನಗರ ಯೋಜನೆ ಇಲಾಖೆ”, “ರಸ್ತೆಗಳ ಮೂಲಭೂತ ಸೌಕರ್ಯ ಇಲಾಖೆ”, “ಯೋಜನೆ (ಕೇಂದ್ರ) ಇಲಾಖೆ”, “ಬೃಹತ್ ನೀರುಗಾಲುವೆ ಇಲಾಖೆ”, “ಘನತ್ಯಾಜ್ಯ ನಿರ್ವಹಣೆ ಇಲಾಖೆ”, “ಕಲ್ಯಾಣ ಇಲಾಖೆ” ಮತ್ತು “ಆಡಳಿತ ಇಲಾಖೆ”ಗಳಲ್ಲಿ ತಮ್ಮ ಅಧಿಕಾರದ ಅವಧಿಯಲ್ಲಿ ತಾಂಡವಾಡುತ್ತಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಆಡಳಿತಾಧಿಕಾರಿ ಉಮಾಶಂಕರ್ ಅವರಿಗೆ ಬಹಿರಂಗ ಖಂಡನಾ ಪತ್ರ ಬರೆದಿದ್ದಾರೆ.
ಅಲ್ಲದೇ “ರಾಜ್ಯದ ಅತ್ಯಂತ ಹಿರಿಯ ಐಎಎಸ್ ಅಧಿಕಾರಿಗಳಾಗಿರುವ ತಾವುಗಳು ಬೇರೊಬ್ಬ ಭ್ರಷ್ಟರ ಕಾನೂನು ಬಾಹಿರ ಆದೇಶಗಳಿಗೆ ತಲೆ ಬಾಗಿ ಈ ರೀತಿ ನಿರಂತರವಾಗಿ ಕಾನೂನು ಬಾಹಿರ ಕಾರ್ಯಗಳನ್ನು ಎಸಗುತ್ತಿದ್ದೀರ. ಪಾಲಿಕೆಯ ಇತಿಹಾಸದಲ್ಲಿ ಕಂಡು ಕೇಳರಿಯದಂತಹ ವ್ಯಾಪಕ ಭ್ರಷ್ಟಾಚಾರಗಳಿಗೆ ಮುಕ್ತವಾದ ಅವಕಾಶ ಕಲ್ಪಿಸಿಕೊಟ್ಟಿರುವುದು ಪಾಲಿಕೆಯ ಹಿತದೃಷ್ಟಿಯಿಂದ ಶ್ರೇಯಸ್ಕರವಲ್ಲ. ಮಹಾನಗರ ಪಾಲಿಕೆಯ ಮುಖ್ಯಸ್ಥರಾಗಿರುವ ಮುಖ್ಯ ಆಯುಕ್ತರಾಗಿರುವ ಮತ್ತು ಆಡಳಿತಾಧಿಕಾರಿಗಳಾಗಿರುವ ತಮ್ಮಗಳ ವಿರುದ್ಧ ತನಿಖಾ ಸಂಸ್ಥೆಗಳಲ್ಲಿ ದೂರು ನೀಡಬಾರದೇಕೆ ? ಎಂಬ ವಿಷಯವನ್ನೂ ಸಹ ಬೆಂಗಳೂರು ಮಹಾನಗರದ ಸಮಸ್ತ ನಾಗರಿಕರ ಪರವಾಗಿ ತಮ್ಮಿಬ್ಬರನ್ನು ಕೇಳಲು ಇಚ್ಛಿಸುತ್ತೇನೆ” ಎಂದು ಅವರು ಪತ್ರದಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಇದಲ್ಲದೇ “ನಗರ ಯೋಜನೆ ಇಲಾಖೆ”, “ರಸ್ತೆಗಳ ಮೂಲಭೂತ ಸೌಕರ್ಯ ಇಲಾಖೆ”, “ಯೋಜನೆ (ಕೇಂದ್ರ) ಇಲಾಖೆ”, “ಬೃಹತ್ ನೀರುಗಾಲುವೆ ಇಲಾಖೆ”, “ಘನತ್ಯಾಜ್ಯ ನಿರ್ವಹಣೆ ಇಲಾಖೆ”, “ಕಲ್ಯಾಣ ಇಲಾಖೆ” ಮತ್ತು “ಆಡಳಿತ ಇಲಾಖೆ”ಗಳಲ್ಲಿ ಬ್ರೋಕರ್ ಗಳ ಹಾವಳಿ, ಪ್ರಭಾವಿಗಳ ಹಸ್ತಕ್ಷೇಪ, ಮುಖ್ಯ ಅಭಿಯಂತರರ ಭ್ರಷ್ಟಾಚಾರ, ಕಮಿಷನ್ ವ್ಯವಹಾರಗಳನ್ನು ವಿಸ್ತ್ರತವಾಗಿ ಪ್ರಕರಣಗಳ ಉದಾಹರಣೆ ಸಹಿತ ತೆರೆದಿಟ್ಟಿದ್ದಾರೆ.
ನಗರ ಯೋಜನೆ ಇಲಾಖೆಗೆ ಸಂಬಂಧಿಸಿದಂತೆ, ಚದರಡಿಗಳಷ್ಟು ವಿಸ್ತೀರ್ಣದ ನಕ್ಷೆ ಮಂಜೂರಾತಿ ಕಾರ್ಯವನ್ನು ವಲಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಗರ ಯೋಜನೆ ಜಂಟಿ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ನೀಡಬೇಕು. ಎಕರೆಗಟ್ಟಲೆ ವಿಸ್ತೀರ್ಣದ ಪ್ರದೇಶದ ನಕ್ಷೆ ಮಂಜುರಾತಿ ಕಾರ್ಯವನ್ನು ಕೇಂದ್ರ ಕಛೇರಿಯಲ್ಲಿರುವ ಉತ್ತರ ಮತ್ತು ದಕ್ಷಿಣ ಜಂಟಿ ನಿರ್ದೇಶಕರ ಕಛೇರಿಗಳಿಂದ ನೀಡಬೇಕು.
ನಗರ ಯೋಜನೆ ವಲಯ ಕೆಲಸಗಳು ಕೇಂದ್ರ ಕಚೇರಿ ಬಾಗಿಲು ತಟ್ಟುತ್ತಿದೆ :
ಆದರೆ, ಕಳೆದ ಒಂದು ವರ್ಷದಿಂದ ಸಣ್ಣ ಪ್ರಮಾಣದ ವಸತಿ ಮತ್ತು ವಾಣಿಜ್ಯ ಕಟ್ಟಡಗಳ ನಕ್ಷೆ ಮಂಜೂರಾತಿ ಕಾರ್ಯದ ಅನುಮೋದನೆಯನ್ನೂ ಸಹ ವಲಯದಿಂದ ಕೇಂದ್ರ ಕಛೇರಿಯ ಅಪರ ನಿರ್ದೇಶಕರಿಗೆ ಕಳುಹಿಸಿ, ಆ ನಂತರ ಬೇರೆ ಯಾರೋ ದೂರವಾಣಿಯ ವಾಟ್ಸಪ್ ಕಾಲ್ ಗಳಲ್ಲಿ ಸೂಚಿಸಿದ (ನಕ್ಷೆ ಮಂಜೂರಾತಿ ನೀಡುವಾಗ ನೀಡುವ ವಿಶಿಷ್ಟ ಗುರುತಿನ ಸಂಖ್ಯೆ) ಎಲ್ ಪಿ ನಂಬರ್ ಗಳಿಗಷ್ಟೇ ಅನುಮೋದನೆ ನೀಡುವ ಕಾರ್ಯ ಯಾವುದೇ ಎಗ್ಗಿಲ್ಲದೇ ನಡೆಯುತ್ತಿದೆ.
ಸಂಜೆ 5 ನಂತರ ಖಾಸಗಿ ವ್ಯಕ್ತಿಗಳದ್ದೇ ದರ್ಬಾರ್ :
ಪ್ರತಿ ನಿತ್ಯ ಬಿಬಿಎಂಪಿಯ ಕೇಂದ್ರ ಕಛೇರಿಯಲ್ಲಿರುವ ನಗರ ಯೋಜನೆಯ ಜಂಟಿ ನಿರ್ದೇಶಕರು (ಉತ್ತರ ಮತ್ತು ದಕ್ಷಿಣ) ಅಥವಾ ಉಪ ನಿರ್ದೇಶಕರುಗಳ ಕಛೇರಿಗಳಿಗೆ 8 ಕ್ಕೂ ಹೆಚ್ಚು ಖಾಸಗಿ ವ್ಯಕ್ತಿಗಳು ಹಾಗೂ ಪ್ರತೀ ವಲಯದಲ್ಲಿರುವ ಜಂಟಿ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರುಗಳ ಕಛೇರಿಗಳಿಗೆ ತಲಾ 2 ರಿಂದ 4 ಮಂದಿ ಖಾಸಗಿ ವ್ಯಕ್ತಿಗಳು ಸಂಜೆ 5 ರ ನಂತರ ಬೇಟಿ ಕೊಡುತ್ತಾರೆ.
ಬಳಿಕ ಆಯಾ ದಿನದ ನಕ್ಷೆ ಮಂಜೂರಾತಿ ಕೋರಿ ಆನ್ ಲೈನ್ (Online)ನಲ್ಲಿ ಸಲ್ಲಿಕೆಯಾಗುವ ಪ್ರಾರಂಭಿಕ ಪ್ರಮಾಣ ಪತ್ರ (Commencement Certificate) ವನ್ನು ಕೋರಿ ಸಲ್ಲಿಕೆಯಾಗುವ ಅರ್ಜಿಗಳು ಮತ್ತು ಸ್ವಾಧೀನಾನುಭವ ಪತ್ರ (Occupancy Certificate) ಗಳನ್ನು ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಖುದ್ದು ಪರಿಶೀಲನೆ ಮಾಡಿ ಅದರ ವಿವರಗಳನ್ನು ಬೇರೆಡೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
“ಇದೆಲ್ಲಾ ಸಾಲದೆಂಬಂತೆ ನಗರ ಯೋಜನೆ ಇಲಾಖೆಯಲ್ಲಿರುವ ಎಲ್ಲಾ ಅಧಿಕಾರಿಗಳು ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸುವ, ಸಿಸಿ, ಒಸಿಯನ್ನು ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ನಿವೇಶನಗಳ ಮಾಲೀಕರಿಂದ ಅಥವಾ ಗುತ್ತಿಗೆದಾರರಿಂದ ಮಂತ್ರಿಗಳಿಗೆ ನೀಡಬೇಕೆಂದು ಅಪಾರ ಪ್ರಮಾಣದ ಹಣವನ್ನು ಹಾಗೂ ನಗರ ಯೋಜನೆ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ನೀಡಬೇಕೆಂದು ಅಪಾರ ಪ್ರಮಾಣದ ಹಣವನ್ನು ರಾಜಾರೋಷವಾಗಿ ಕೇಳುತ್ತಿರುವುದು ಪ್ರತಿ ನಿತ್ಯ ನಡೆಯುತ್ತಿರುವ ಸರ್ವೇ ಸಾಮಾನ್ಯ ಸಂಗತಿಯಾಗಿದೆ” ಎಂದು ವಿವರಿಸಿದ್ದಾರೆ.
ಇಂಚಿಂಚಿಗೂ ಲಂಚಕ್ಕೆ ಬೇಡಿಕೆ :
ಉದಾಹರಣೆಗೆ, (ಎ) ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗೆ ಸಂಬಂಧಿಸಿದಂತೆ ಅಂತಿಮ ಹಂತದ ಸ್ವಾಧೀನಾನುಭವ ಪತ್ರ (Final Occupancy Certificate) ವನ್ನು ನೀಡಲು ಮಂತ್ರಿಗಳಿಗೆ ನೀಡಬೇಕೆಂದು 80 ಲಕ್ಷ ರೂಪಾಯಿಗಳಷ್ಟು ಹಣ ಕೇಳಿರುತ್ತಾರೆ. ನಗರ ಯೋಜನೆ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ನೀಡಬೇಕೆಂದು 30 ಲಕ್ಷ ರೂ., ಮತ್ತು ಒಸಿ ನೀಡುವ ಶುಲ್ಕವನ್ನಾಗಿ 33.50 ಲಕ್ಷ ರೂ. ಹಣವನ್ನು ಪಾವತಿಸಬೇಕೆಂದು ರಾಜಾರೋಷವಾಗಿ ಕೇಳಿರುತ್ತಾರೆ.
(ಬಿ) ಅದೇ ಬನ್ನೇರುಘಟ್ಟ ರಸ್ತೆಯಲ್ಲಿರುವ ಬಹಳಷ್ಟು ವೈದ್ಯರೇ ವಾಸ ಮಾಡುತ್ತಿರುವ ವಸತಿ ಸಮುಚ್ಛಯಕ್ಕೆ ಸಂಬಂಧಿಸಿದಂತೆ ಒಸಿ ನೀಡಲು ಮಂತ್ರಿಗಳಿಗೆ ನೀಡಬೇಕೆಂದು 70 ಲಕ್ಷ ರೂ., ಅಧಿಕಾರಿಗಳಿಗೆ 25 ಲಕ್ಷ ರೂ. ಮತ್ತು ಒಸಿ ನೀಡುವ ಶುಲ್ಕವನ್ನಾಗಿ 23 ಲಕ್ಷ ರೂ. ಹಣವನ್ನು ಪಾವತಿಸಬೇಕೆಂದು ನೇರವಾಗಿ ಬೇಡಿಕೆ ಇಟ್ಟಿರುತ್ತಾರೆ.
ಪ್ರತೀ ನಿತ್ಯ ಈ ರೀತಿಯ ನೂರಾರು ಪ್ರಕರಣಗಳು ಯಾವುದೇ ಎಗ್ಗಿಲ್ಲದೇ ತಮ್ಮ ಮೂಗಿನ ಅಡಿಯಲ್ಲಿಯೇ ನಡೆಯುತ್ತಿದ್ದರೂ ಸಹ ತಾವು ಸುಮ್ಮನೆ ಇರುವುದು ಏಕೆ? ಎಂದು ಆಡಳಿತಾಧಿಕಾರಿ ಉಮಾಶಂಕರ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಪ್ರಶ್ನಿಸಿದ್ದಾರೆ.
ಇ-ಪ್ರಕ್ಯೂರ್ ಮೆಂಟ್ ನಿಯಮ ಗಾಳಿಗೆ ತೂರುತ್ತಿರುವ ಹಿನ್ನಲೆಯೇನು?:
ರಸ್ತೆಗಳ ಮೂಲಭೂತ ಸೌಕರ್ಯ ಇಲಾಖೆ, ಯೋಜನೆ (ಕೇಂದ್ರ) ಇಲಾಖೆ ಮತ್ತು ಬೃಹತ್ ನೀರುಗಾಲುವೆ ಇಲಾಖೆಗಳ ಮೂಲಕ ಕೈಗೊಂಡಿರುವ / ಕೈಗೊಳ್ಳುತ್ತಿರುವ ಕಾಮಗಾರಿಗಳಿಗೆ ಪೂರ್ವ ನಿರ್ಧರಿತ ಗುತ್ತಿಗೆದಾರರಿಗೆ ಕೆಟಿಪಿಪಿ (KTPP) ಕಾಯ್ದೆಯ ಇ-ಪ್ರಕ್ಯೂರ್ ಮೆಂಟ್ (e – Procurement) ವಿಧಾನದಲ್ಲಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಕಾರ್ಯಾದೇಶ ಪತ್ರಗಳನ್ನು ನೀಡುತ್ತಿರುವ ಹಿನ್ನೆಲೆ ಏನು? ಎಂದು ಎನ್.ಆರ್.ರಮೇಶ್ ಬಹಿರಂಗ ಪತ್ರದಲ್ಲಿ ಕೇಳಿದ್ದಾರೆ.
ಟೆಂಡರ್ ನಲ್ಲಿಪೂರ್ವ ನಿಗದಿತ ಗುತ್ತಿಗೆದಾರರಿಗೆ ಮಣೆ :
ಉಳಿದಂತೆ ನಗರದ ಮೇಲ್ಸೇತುವೆ, ಕೆಳಸೇತುವೆ, ಎಲಿವೇಟೆಡ್ ಕಾರಿಡಾರ್, ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗಳಲ್ಲಿ ಪೂರ್ವ ನಿಗದಿತ ಗುತ್ತಿಗೆದಾರರನ್ನು ಹೊರತುಪಡಿಸಿ ಇನ್ನಿತರ ಅರ್ಹ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ನಿಮ್ಮ ಅಧಿಕಾರಿಗಳು ಒತ್ತಡ ಹೇರುತ್ತಿರುವುದು ಹಾಗೂ ಅಂತಹ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ, ಅಂತಹ ಗುತ್ತಿಗೆದಾರರನ್ನು ನಿಯಮಬಾಹಿರವಾಗಿ ಅನರ್ಹಗೊಳಿಸುತ್ತಿರುವುದು ಸುಳ್ಳೇ? ಎಂದಿದ್ದಾರೆ.
ಕಾಂಟ್ರಾಕ್ಟರ್ ಗಳಿಂದ ಸಿಇಗಳು ಶೇ.7ರಷ್ಟು ಕಮಿಷನ್ ಪಡೆಯುತ್ತಿದ್ದಾರಾ?:
ಇದಲ್ಲದೇ ಪಾಲಿಕೆ ಆಡಳಿತ ವಿಭಾಗದಲ್ಲಿನ ವೈಫಲ್ಯ, ಮುಖ್ಯ ಅಭಿಯಂತರರುಗಳ ಮೂಲಕ 8 ವಲಯಗಳಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುತ್ತಿರುವ ವಿಷಯ, ಗುತ್ತಿಗೆದಾರರಿಂದ ಚೀಫ್ ಎಂಜಿನಿಯರ್ ಗಳು ಶೇ.7ರಷ್ಟು ಕಮಿಷನ್ ಕಮಿಷನ್ ಪಡೆಯುತ್ತಿರುವುದು ನಿಜವೇ? ಸುಳ್ಳೇ ? ಮತ್ತು ಮುಖ್ಯ ಅಭಿಯಂತರರುಗಳು ಇಂತಹ ಕಾನೂನು ಬಾಹಿರ ಕಾರ್ಯ ಮಾಡುತ್ತಿರುವುದು ಯಾರಿಗಾಗಿ ?
ನಿಮ್ಮ ಇಂತಹ ಕಾನೂನು ಬಾಹಿರ ನಡೆಗಳಿಂದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇನ್ನೆಂದೂ ಸರಿಪಡಿಸಲಾಗದಷ್ಟು ಹದಗೆಟ್ಟು ಹೋಗಿರುವ ಸಂಗತಿ ತಮಗೆ ತಿಳಿದಿದೆಯೇ? ಇಲ್ಲವೇ? ಎಂದು ಎನ್.ಆರ್.ರಮೇಶ್ ತಮ್ಮ ಖಂಡನಾ ಪತ್ರದಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.