ಬೆಂಗಳೂರು, ಸೆ.17 www.bengaluruwire.com : ನಮ್ಮ ಮೆಟ್ರೋ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಇಂದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಮೆಟ್ರೋ ಮಾರ್ಗ ರೈಲುಹಳಿಯಂತೆ ಸಾವಿನ ರಹದಾರಿಗಳಾಗುತ್ತಿದಿಯಾ ಎಂಬ ಪ್ರಶ್ನೆ ಮೂಡಿದೆ?
2024 ನೇ ಇಸವಿಯಲ್ಲಿ ನಮ್ಮ ಮೆಟ್ರೋ ನೇರಳೆ, ಗುಲಾಬಿ ಮಾರ್ಗಗಳಲ್ಲಿ ರೈಲು ಆಗಮಿಸುತ್ತಿರುವಾಗ ಉದ್ದೇಶಪೂರ್ವಕವಾಗಿ ಆತ್ಮಹತ್ಯೆಗೆ ಯತ್ನ, ಅಕಸ್ಮಾತ್ ಆಗಿ ಅಪಘಾತಗಳು ಸಾಮಾನ್ಯ ಎನ್ನುವಂತಾಗಿದೆ. ಆದರೆ ಇಂತಹ ಘಟನೆಗಳಾದಾಗ ಭದ್ರೆತೆಗೆಂದು ಪ್ರತಿ ಮೆಟ್ರೊ ನಿಲ್ದಾಣದಲ್ಲಿ ನಿಯೋಜಿತರಾದ ಭದ್ರತಾ ಸಿಬ್ಬಂದಿ ಸೂಕ್ತ ಸಮಯದಲ್ಲಿ ಆಗಮಿಸಿ ಘಟನೆ ನಡೆಯದಂತೆ ತಪ್ಪಿಸುವ ಅಥವಾ ಅವಗಢಗಳಾದಾಗ ಸೂಕ್ತ ಸಮಯದಲ್ಲಿ ಆಗಮಿಸಿ ವ್ಯಕ್ತಿಗಳನ್ನು ರಕ್ಷಸುವ ಕಾರ್ಯದಲ್ಲಿ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದೆ.
“ಇಂದು ಮಧ್ಯಾಹ್ನ 2.13 ಗಂಟೆಗೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ರೈಲು ಸಮೀಪಿಸುತ್ತಿರುವಾಗ ಸುಮಾರು 30 ವರ್ಷ ವಯಸ್ಸಿನ ಬಿಹಾರ ಮೂಲದ ಸಿದ್ದಾರ್ಥ್ ಎಂಬ ವ್ಯಕ್ತಿ ಟ್ರ್ಯಾಕ್ ಮೇಲೆ ಹಾರಿದ್ದಾರೆ. ಘಟನೆಯ ನಂತರ ತಕ್ಷಣವೇ ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ ಇಟಿಎಸ್ ಅನ್ನು ಸ್ಟೇಷನ್ ಕಂಟ್ರೋಲರ್ ಮತ್ತು ತಂಡವು ಬಳಸಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿ ವ್ಯಕ್ತಿಯನ್ನು ರಕ್ಷಿಸಲಾಯಿತು. ಪ್ರಾಥಮಿಕ ಮಾಹಿತಿಯ ಪ್ರಕಾರ ಯಾವುದೇ ಗಾಯಗಳು ವರದಿಯಾಗಿಲ್ಲ” ಎಂದು ಮೆಟ್ರೊ ಹೇಳಿದೆ.
“ಮಧ್ಯಾಹ್ನ 2.13 ಗಂಟೆಯಿಂದ 2.30ಗಂಟೆಯವರೆಗೆ ಚಲ್ಲಘಟ್ಟ ಮೆಟ್ರೊ ನಿಲ್ದಾಣದ ಬದಲು ಮೈಸೂರು ರಸ್ತೆ ಮೆಟ್ರೋ ನಿಲ್ದಾಣದ ವರೆಗೆ 2 ರೈಲುಗಳು ಶಾರ್ಟ್ ಲೂಪ್‌ನಲ್ಲಿ ಕಾರ್ಯನಿರ್ವಹಿಸಿದವು. ಸಂಪೂರ್ಣ ನೇರಳೆ ಮಾರ್ಗದಲ್ಲಿ ರೈಲು ಸೇವೆಗಳು ಮಧ್ಯಾಹ್ನ 2.31 ಗಂಟೆಗೆ ಪುನರಾರಂಭಿಸಲಾಯಿತು” ಎಂದು ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿ ಪತ್ರಿಕಾ ಪ್ರಕಟಣೆ ನೀಡಿ ಕೈತೊಳೆದುಕೊಂಡಿದ್ದಾರೆ.
ಭದ್ರತಾ ಲೋಪದ ಬಗ್ಗೆ ಬಿಎಂಆರ್ ಸಿಎಲ್ ನೌಕರರ ಸಂಘದಿಂದ ಎಂಡಿಗೆ ದೂರು :
ಆದರೆ ಇಂತಹ ಘಟನೆಗಳ ನಡೆಯಲು ಭದ್ರತಾ ಲೋಪಗಳೇ ಕಾರಣ ಎಂದು ಬಿಎಂಆರ್ ಸಿಎಲ್ ನೌಕರರ ಸಂಘ ಆರೋಪಿಸಿದೆ. ಈ ಸಂಬಂಧ “ಎಲ್ಲಾ ಭದ್ರತಾ ಸಿಬ್ಬಂದಿ ಆಯಾ ಮೆಟ್ರೊ ನಿಲ್ದಾಣಗಳಲ್ಲಿನ ನಿರ್ವಹಣೆ ಮತ್ತು ಕಾರ್ಯಾಚರಣೆ ಸಿಬ್ಬಂದಿಗೆ ಬೆಂಬಲಿಸುತ್ತಿಲ್ಲ. ಇಂದು ನಡೆದ ಘಟನೆಯಲ್ಲಿ ಭದ್ರತಾ ಲೋಪಗಳು, ಯಾವುದೇ ಭದ್ರತಾ ಸಿಬ್ಬಂದಿ ದೇಹವನ್ನು ಹೊರತೆಗೆಯಲು ಸಹಾಯ ಮಾಡಲಿಲ್ಲ, ನಿಲ್ದಾಣದ ನಿಯಂತ್ರಕ ಮತ್ತು ಬಿಎಂಆರ್ ಸಿಎಲ್ ಇತರ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಹಳಿಯಿಂದ ತೆಗೆದು ಸಹಾಯ ಮಾಡಿದರು” ಎಂದು ಬಿಎಂಆರ್ ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಆರೋಪಿಸಿದ್ದಾರೆ.
“ಇಲ್ಲಿ ಸಂಪೂರ್ಣವಾಗಿ ಭದ್ರತಾ ಲೋಪವಾಗಿದೆ. ಮೆಟ್ರೊದ ಚೀಫ್ ಸೆಕ್ಯುರಿಟಿ ಆಫೀಸರ್ ಸೆಲ್ವಂ ಅವರ ಬೇಜವಾಬ್ದಾರಿ ಹೊಂದಿದ ನಿವೃತ್ತ ಅಧಿಕಾರಿ. ಈ ವ್ಯಕ್ತಿಯು ಎಲ್ಲಾ ಭದ್ರತಾ ಸಿಬ್ಬಂದಿಗೆ ಮೆಟ್ರೊನಲ್ಲಿನ ನಿರ್ವಹಣೆ ಮತ್ತು ಕಾರ್ಯಾಚರಣೆಯ ಕಾರ್ಯವನ್ನು ಬೆಂಬಲಿಸದಂತೆ ಸೆಕ್ಯುರಿಟಿ ಗಾರ್ಡ್ ಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಬೇಜವಾಬ್ದಾರಿ ಅಧಿಕಾರಿಯಿಂದಾಗಿ ಇಂತಹ ಘಟನೆಗಳು ಮರುಕಳಿಸುತ್ತಿದೆ. ಹೀಗಾಗಿ ಸೆಲ್ವಂ ಎಂಬ ಅಧಿಕಾರಿಯನ್ನು ಕೆಲಸದಿಂದ ತೆಗೆದು, ಇಂತಹ ಘಟನೆಗಳಿಂದ ಮೆಟ್ರೊಗೆ ಆದ ಆರ್ಥಿಕ ನಷ್ಟವನ್ನು ಈ ವ್ಯಕ್ತಿಯ ಸಂಬಳ ಹಾಗೂ ಇವರನ್ನು ನೇಮಿಸಿದ ಗುತ್ತಿಗೆದಾರರಿಂದ ವಸೂಲಿ ಮಾಡಬೇಕು” ಎಂದು ಬಿಎಂಆರ್ ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.
ತುರ್ತು ಸಂದರ್ಭ ಎದುರಿಸುವ ಬಗ್ಗೆ ಭದ್ರತಾ ಸಿಬ್ಬಂದಿಗೆ ಸೂಕ್ತ ತರಬೇತಿಯಿಲ್ಲ :
ಸಾಮಾನ್ಯವಾಗಿ ಮೆಟ್ರೊ ರೈಲು ಬಂದು ಹೋಗಲು ಎರಡು ಮಾರ್ಗಗಳಿದ್ದು, ಪ್ರತಿಯೊಂದರಲ್ಲೂ 750 ಕಿಲೋ ವೋಲ್ಟ್ ಎರಡು ಟ್ರ್ಯಾಕ್ ಗಳಲ್ಲಿ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಹೀಗಿರುವಾಗ ಯಾವುದೇ ವ್ಯಕ್ತಿ ಇಂತಹ ಹಳಿಯ ಮೇಲೆ ಆಕಸ್ಮಾತ್ ಕಾಲಿಟ್ಟರೆ ಪ್ರಾಣಾಪಾಯವಾಗುತ್ತದೆ. ಪ್ರತಿ ಮೆಟ್ರೊ ನಿಲ್ದಾಣದಲ್ಲೂ ಭದ್ರತಾ ಸಿಬ್ಬಂದಿ ಅಪರಿಚಿತ ವ್ಯಕ್ತಿಗಳು ರೈಲು ಮಾರ್ಗದ ಮೇಲೆ ತೆರಳದಂತೆ ಎಚ್ಚರವಹಿಸಬೇಕು. ಅಂತಹುದರಲ್ಲಿ ಅಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗುವ ಭದ್ರತಾ ಸಿಬ್ಬಂದಿ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಹೀಗಾಗಿ ಆತ್ಮಹತ್ಯೆ, ಅವಘಡಗಳಂತಹ ಕೃತ್ಯ ಮರುಕಳಿಸುತ್ತಿದೆ ಎಂದು ಸೂರ್ಯನಾರಾಯಣ ಮೂರ್ತಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಹಲವು ಕಡೆಗಳಲ್ಲಿ ಹೊಸ ಭದ್ರತಾ ಟೆಂಡರ್ ವಿಸ್ಡಮ್ ಎಂಬ ಸಂಸ್ಥೆಗೆ ಲಭಿಸಿದೆ. ಕೆಸಿಐಸಿಐ ಕೆಲವು ನಿಲ್ದಾಣಗಳಲ್ಲಿ ಮಾತ್ರ ಭದ್ರತಾ ಟೆಂಡರ್ ಲಭಿಸಿದೆ. ಸೆಲ್ವಮ್ ಎಂಬಾತ ವಿಸ್ಡಮ್ ಸಂಸ್ಥೆಯ ಗುತ್ತಿಗೆ ಅಧಿಕಾರಿಯಾಗಿದ್ದಾರೆ. ಭದ್ರತಾ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಅಥವಾ ಈ ರೀತಿ ಘಟನೆ ನಡೆಯುವಾಗ ವ್ಯಕ್ತಿ ಆತ್ಮಹತ್ಯೆ ಆಗುವುದನ್ನು ತಪ್ಪಿಸಲು ಇವರಿಗೆ ಸೂಕ್ತ ತರಬೇತಿ ಕೊಟ್ಟಿಲ್ಲ. ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗೆ ಮೆಟ್ರೋ ಮಾರ್ಗವನ್ನು ಆಯ್ದುಕೊಳ್ಳುತ್ತಿರುವುದು ದುರಂತ. ಇನ್ ಚಾರ್ಜ್ ಆಫೀಸರ್ ಸೆಲ್ವಮ್ ಅವರನ್ನು ಮೊದಲು ಕೆಲಸದಿಂದ ತೆಗೆದು ಹಾಕಬೇಕು ಎಂದು ಅವರು ಮೆಟ್ರೊ ಎಂಡಿಯನ್ನು ಆಗ್ರಹಿಸಿದ್ದಾರೆ.
ಭದ್ರತಾ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮೆಟ್ರೊ ನೌಕರರನ್ನು ಬಲಿಪಶು ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅವರು ಮರುಗಿದ್ದಾರೆ.