ಬೆಂಗಳೂರು, ಸೆ.16 www.bengaluruwire.com : ವಾರ್ಡ್ ನಂಬರ್ 91ರ ಭಾರತಿ ನಗರದ ತಿಮ್ಮಯ್ಯ ರಸ್ತೆಯಲ್ಲಿ ಇರುವ ಬಿಬಿಎಂಪಿಯ ಹೆರಿಗೆ ಆಸ್ಪತ್ರೆಯನ್ನು (ಅಥವಾ ಪೂರ್ ಹೌಸ್) ದುರಸ್ತಿ ಹೆಸರಿನಲ್ಲಿ ಕಳೆದ ಮೂರು ವರ್ಷಗಳಿಂದ ಮುಚ್ಚಲಾಗಿದೆ.
ಇದರಿಂದ ಹೆಚ್ಚಿನ ಜನಸಾಂದ್ರತೆ, ಬಹುದೊಡ್ಡ ಸಂಖ್ಯೆಯಲ್ಲಿ ಕೆಳ ಮಾಧ್ಯಮ ಮತ್ತು ಬಡ ಕೂಲಿ ಕಾರ್ಮಿಕರು ಹೆಚ್ಚಿರುವ ಪ್ರದೇಶದಲ್ಲಿ ಗರ್ಭಿಣಿ ಸ್ತ್ರೀಯರು, ಬಾಣಂತಿಯರು, ಮಕ್ಕಳು ತೊಂದರೆಗೊಳಗಾಗಿದ್ದಾರೆ.
ಶಿವಾಜಿನಗರದ ಬಳಿಯಿರುವ ಈ ವಾರ್ಡಿನಲ್ಲಿ ಬಡ ಮಧ್ಯಮ ವರ್ಗದವರೇ ಹಲವು ವರ್ಷಗಳಿಂದ ನೆಲೆಸಿರುತ್ತಾರೆ. ಇಲ್ಲಿನ ಸುತ್ತ ಮುತ್ತಲಿನ ವಾರ್ಡಿನ ಗರ್ಭಿಣಿ ಸ್ತ್ರೀಯರು, ಬಾಣಂತಿಯರು ಹಾಗೂ ಮಕ್ಕಳ ತುರ್ತು ಚಿಕಿತ್ಸೆಗಾಗಿ ಇದೇ ಆಸ್ಪತ್ರೆಯನ್ನು ದೀರ್ಘ ಕಾಲದಿಂದ ಅವಲಂಬಿಸಿದ್ದರು. ಎಲ್ಲಾ ರೀತಿಯಲ್ಲೂ ಅತ್ಯಂತ ಅನುಕೂಲಕರವಾಗಿದ್ದ ಈ ಆಸ್ಪತ್ರೆಯನ್ನು ದುರಸ್ತಿ ಹೆಸರಿನಲ್ಲಿ ಮುಚ್ಚಿ ಈಗ ಮೂರು ವರ್ಷಗಳೇ ಕಳೆದಿದೆ. ಹೀಗಾಗಿ ಶಿವಾಜಿನಗರದ ತಿಮ್ಮಯ್ಯ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯನ್ನು (ಪೂರ್ ಹೌಸ್) ಶೀಘ್ರವಾಗಿ ಪುನರಾರಂಭಿಸಿಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಬೆಂಗಳೂರು ಜಿಲ್ಲಾ ಸಮಿತಿ (AIMSS) ಬಿಬಿಎಂಪಿ ಆರೋಗ್ಯ ಇಲಾಖೆಗೆ ಮನವಿ ಮಾಡಿದೆ.
ಇಲ್ಲಿನ ಜನಸಾಮಾನ್ಯರು ತುರ್ತು ಸಮಯಲ್ಲಿ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಕೊಟ್ಟು ಖಾಸಗಿ ಆಸ್ಪತ್ರೆಗೆ ಹೋಗುವ ಸ್ಥಿತಿವಂತರಲ್ಲ. ಸ್ವಲ್ಪ ಹತ್ತಿರದ ಬೌರಿಂಗ್ ಆಸ್ಪತ್ರೆಯಲ್ಲಿಯೂ ಸಹ ಹಲವು ಕಾರಣಗಳಿಂದ ಹೆರಿಗೆಯ ಸೌಕರ್ಯಗಳನ್ನು ತೆರವುಗೊಳಿಸಿದೆ. ಹಾಗಾಗಿ ದೂರದ ಘೋಷ ಆಸ್ಪತ್ರೆ, ಹಲಸೂರಿನ ಆಸ್ಪತ್ರೆ ಅಥವಾ ಸಾಲ ಮಾಡಿ ಖಾಸಗಿ ಆಸ್ಪತ್ರೆಗೆ ತೆರಳಬೇಕಾಗಿದೆ. ಹೆರಿಗೆಯ ನೋವಿನಿಂದ ಬಳಲುವ ಗರ್ಭಿಣಿಯು ಸರ್ಕಾರಿ ಆಸ್ಪತ್ರೆಗಾಗಿ ಅಲೆಯಬೇಕಾದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಎ.ಶಾಂತಾ ಅವರು ಪರಿಸ್ಥಿತಿಯ ತೆರೆದಿಟ್ಟಿದ್ದಾರೆ.
ಇದನ್ನೂ ಓದಿ : 1) Small Savings | ಗಮನಿಸಿ : ನಿಮ್ಮ ಸಣ್ಣ ಉಳಿತಾಯ ಖಾತೆಯಲ್ಲಿನ ಹಣದ ಮೇಲೆ ಪರಿಣಾಮ ಬೀರುತ್ತದೆ ಈ 5 ಹೊಸ ನಿಯಮಗಳು
ಈ ಎಲ್ಲಾ ಕಾರಣಗಳಿಂದ ಪೂರ್ ಹೌಸ್ ಹೆರಿಗೆ ಆಸ್ಪತ್ರೆಯ ಜೊತೆಗೆ ನಗರದ ಬಿಬಿಎಂಪಿ ವಲಯದ ಹಲವು ಹೆರಿಗೆ ಆಸ್ಪತ್ರೆಗಳನ್ನು (ಉದಾ. ಯಶವಂತಪುರ ಹೆರಿಗೆ ಆಸ್ಪತ್ರೆ) ಶೀಘ್ರವಾಗಿ ಪುನರಾರಂಭಿಸಬೇಕೆಂದು ಎಐಎಂಎಸ್ಎಸ್ ಶಾಂತ ಎ ನೇತೃತ್ವದ ನಿಯೋಗವು ಇತ್ತೀಚೆಗೆ ನಗರದ ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ (ಆರೋಗ್ಯ ಮತ್ತು ನೈರ್ಮಲ್ಯ) ಸೂರಳ್ಕರ್ ವಿಕಾಸ್ ಕಿಶೋರ್ ರವರನ್ನು ಭೇಟಿಮಾಡಿ ಸ್ಥಳೀಯ ನಾಗರಿಕರ ಸಹಿ ಸಂಗ್ರಹದೊಂದಿಗಿನ ಮನವಿ ಪತ್ರವನ್ನು ಸಲ್ಲಿಸಿತು.
ಮನವಿ ಸ್ವೀಕರಿಸಿ ಮಾತನಾಡಿದ ವಿಶೇಷ ಆಯುಕ್ತರು ‘ತಿಮ್ಮಯ್ಯ ರೋಡ್ ನಲ್ಲಿರುವ ಪೂರ್ ಹೌಸ್ ಹೆರಿಗೆ ಆಸ್ಪತ್ರೆಯು ಬ್ರಾಂಡ್ ಬೆಂಗಳೂರು ಅಡಿಯಲ್ಲಿ ನಿರ್ಮಾಣವಾಗಲು ತೆಗೆದುಕೊಳ್ಳಲಾಗಿದೆ. ಆದರೆ ಅದಕ್ಕೆ ಆರ್ಥಿಕ ನೆರವು ಸರ್ಕಾರದಿಂದ ಇನ್ನು ಲಭ್ಯವಾಗಿಲ್ಲ. ಹಾಗೆಯೇ ಯಶವಂತಪುರ ಹೆರಿಗೆ ಆಸ್ಪತ್ರೆಯ ಸಂಬಂಧಪಟ್ಟ ನಿರ್ಧಾರಿತ ಕಡತ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ಮಧ್ಯೆ ಸಿಲುಕಿಕೊಂಡಿದೆ. ಆದ್ದರಿಂದ ಕೆಲಸವು ನಿಂತಿದೆ. ರಾಜ್ಯ ಸರ್ಕಾರವು ಸೂಕ್ತ ರೀತಿಯಲ್ಲಿ ತ್ವರಿತವಾಗಿ ಸ್ಪಂದಿಸಿದರೆ ಕೆಲಸವು ಮುಂದುವರೆಯುವುದು. ಅದಕ್ಕಾಗಿ ನಾವು ಕಾಯುತ್ತಿದ್ದೇವೆ’ ಎಂದು ಉತ್ತರಿಸಿದರು.
ಸಂಘಟನೆಯ ಪರವಾಗಿ ಹೇಮಾವತಿ, ಅನುರಾಧ, ನಿರ್ಮಲ ಮತ್ತು ಸ್ಥಳೀಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.