ಬೆಂಗಳೂರು, ಸೆ.11 www.bengaluruwire.com : ನಗರದ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜೆಟ್ ಪ್ಯಾಚರ್ ಯಂತ್ರದ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂದು ವಲಯ ಜಂಟಿ ಆಯುಕ್ತರಾದ ಅಜಯ್ ರವರು ತಿಳಿಸಿದರು.
ನಗರದ ಆರ್.ಆರ್ ನಗರ ವಲಯದ ಪಂತರಪಾಳ್ಯ – ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಬುಧವಾರ ರಸ್ತೆ ಗುಂಡಿ ಪರಿಶೀಲನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ಜೆಟ್ ಪ್ಯಾಚರ್ ಯಂತ್ರದ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ಇದರಿಂದ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬಹುದಾಗಿದೆ ಎಂದು ಹೇಳಿದರು.
ಏನಿದು ಜೆಟ್ ಪ್ಯಾಚರ್ ಯಂತ್ರ?:
ಜೆಟ್ ಪ್ಯಾಚರ್ ಯಂತ್ರದ ಮೂಲಕ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚಬಹುದಾಗಿದೆ. ಈ ಯಂತ್ರದಲ್ಲಿ ಒಂದು ಬಾರಿಗೆ 150 ರಿಂದ 180 ಚ.ಮೀ ಅಗಲದ ರಸ್ತೆ ಗುಂಡಿಗಳನ್ನು ಮುಚ್ಚಬಹುದಾಗಿದ್ದು, ರಸ್ತೆ ಗುಂಡಿ ಮುಚ್ಚಿದ ಕೂಡಲೇ ವಾಹನಗಳು ಅದರ ಮೇಲೆ ಸರಾಗವಾಗಿ ಸಂಚಾರ ಮಾಡಬಹುದಾಗಿರುತ್ತದೆ ಎಂದು ಹೇಳಿದರು.

ಆರ್.ಆರ್ ನಗರ ವಲಯದಲ್ಲಿ ಸಂಪೂರ್ಣ ರಸ್ತೆ ಹಾಳಾಗಿರುವುದನ್ನು ಹೊರತುಪಡಿಸಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಗಲು ರಾತ್ರಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದ್ದು, ಕಾಲಮಿತಿಯೊಳಗಾಗಿ ಗುಂಡಿಗಳನ್ನು ಮುಚ್ಚಲಾಗುವುದೆಂದು ತಿಳಿಸಿದರು.

ವಲಯ ವ್ಯಾಪ್ತಿಯಲ್ಲಿ ಬರುವ 20 ವಾರ್ಡ್ ಗಳಲ್ಲಿ ಅಭಿಯಂತರರು 20ನೇ ಮೇ 2024 ರಿಂದ ಇದುವರೆಗೆ 2,443 ರಸ್ತೆಗುಂಡಿಗಳನ್ನು ಗುರುತಿಸಿದ್ದು, ಅದರಲ್ಲಿ 2408 ರಸ್ತೆಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದ್ದು, 35 ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ಇನ್ನು “ರಸ್ತೆ ಗುಂಡಿ ಗಮನ ತಂತ್ರಾಂಶ” ದಲ್ಲಿ ಸಾರ್ವಜನಿಕರಿಂದ 461 ದೂರುಗಳು ದಾಖಲಾಗಿದ್ದು, ಅದರಲ್ಲಿ 86 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಬಾಕಿಯಿರುವ 302 ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಶೀಘ್ರ ಮುಗಿಸಲಾಗುವುದೆಂದು ತಿಳಿಸಿದರು.
ರಾಜರಾಜೇಶ್ವರಿ ನಗರ ವಲಯ ರಸ್ತೆಗಳ ಬಗ್ಗೆ :
* ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 02
* ವಾರ್ಡ್ ಗಳ ಸಂಖ್ಯೆ: 20
* ರಾಜರಾಜೇಶ್ವರಿ ನಗರ ವಲಯದ ಒಟ್ಟು ವಿಸ್ತೀರ್ಣ: 112.01 ಚ.ಕಿ.ಮೀಟರ್
* ವಾರ್ಡ್ ರಸ್ತೆಗಳ ಸಂಖ್ಯೆ: 11367
* ವಾರ್ಡ್ ರಸ್ತೆಗಳ ಉದ್ದ: 1829.44 ಕಿ.ಮೀ
* ಪ್ರಮುಖ ರಸ್ತೆಗಳ ಸಂಖ್ಯೆ: 44
* ಪ್ರಮುಖ ರಸ್ತೆಗಳ ಉದ್ದ: 216.45
* ವಲಯ ವ್ಯಾಪ್ತಿಯ ರಸ್ತೆಗಳ ಒಟ್ಟು ಉದ್ದ: 2045.89 ಕಿ.ಮೀ
ರಸ್ತೆ ಗುಂಡಿ ಮುಚ್ಚುವ ಸ್ಥಳದಲ್ಲಿ ಮುಖ್ಯ ಅಭಿಯಂತರರಾದ ಸ್ವಯಂಪ್ರಭಾ, ಕಾರ್ಯಪಾಲಕ ಅಭಿಯಂತರಾದ ಪಾಪರೆಡ್ಡಿ, ಆರಿಫ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.