ಮುಂಬೈ, ಸೆ.06 www.bengaluruwire.com : ಠೇವಣಿದಾರರ ಇತ್ತೀಚಿನ ಸಂಖ್ಯೆಗಳ ಪ್ರಕಾರ , ಎಲೆಕ್ಟ್ರಾನಿಕ್ ರೂಪದಲ್ಲಿ ಷೇರುಗಳು ಮತ್ತು ಸೆಕ್ಯುರಿಟೀಸ್ ಗಳನ್ನು ಹೊಂದಿರುವ ಭಾರತದ ಒಟ್ಟು ಡಿಮೆಟಿರಿಯಲೈಸ್ಡ್-ಡಿಮ್ಯಾಟ್ ಖಾತೆ (DEMATERIALISED – DEMAT ACCOUNTS)ಗಳ ಸಂಖ್ಯೆ ಆಗಸ್ಟ್‌ನಲ್ಲಿ ಮೊದಲ ಬಾರಿಗೆ 17 ಕೋಟಿಯನ್ನು ಮೀರಿದೆ.
ಆಗಸ್ಟ್‌ನಲ್ಲಿ ಒಟ್ಟು 42.3 ಲಕ್ಷ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದ್ದು, ದೇಶಾದ್ಯಂತ ಒಟ್ಟು 17.11 ಕೋಟಿ ಡಿಮ್ಯಾಟ್ ಖಾತೆಗಳಿಗೆ ಏರಿಕೆಯಾಗಿದೆ. ಜುಲೈನಲ್ಲಿ 44.44 ಲಕ್ಷ ಡಿಮ್ಯಾಟ್ ಖಾತೆಗಳಿಗಿಂತ ಸ್ವಲ್ಪ ಕಡಿಮೆ ಸೇರ್ಪಡೆಯಾಗಿದೆ ಎಂದು ಡಿಪಾಸಿಟರಿಗಳ ಡೇಟಾ ತೋರಿಸುತ್ತದೆ. ಆಗಸ್ಟ್ 2023 ರಲ್ಲಿ 31 ಲಕ್ಷದಷ್ಟು ಖಾತೆಗಳ ಸೇರ್ಪಡೆಗೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚಾಗಿದೆ.
ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಒಟ್ಟು ಡಿಮ್ಯಾಟ್ ಖಾತೆಗಳು ಈಗ ಒಂಬತ್ತನೇ ಸ್ಥಾನದಲ್ಲಿದೆ. ಅಂದರೆ ಒಟ್ಟು ಡಿಮ್ಯಾಟ್ ಎಣಿಕೆಯು ರಷ್ಯಾ, ಇಥಿಯೋಪಿಯಾ, ಮೆಕ್ಸಿಕೋ ಮತ್ತು ಜಪಾನ್‌ನಂತಹ ದೇಶಗಳ ಜನಸಂಖ್ಯೆಯನ್ನು ಮೀರಿಸಿದೆ ಮತ್ತು ಬಾಂಗ್ಲಾದೇಶದ ಜನಸಂಖ್ಯೆಗೆ ಹತ್ತಿರದಲ್ಲಿದೆ ಎನ್ನುತ್ತವೆ ವರದಿಗಳು.
ಡಿಮ್ಯಾಟ್ ಅಕೌಂಟ್ 16 ಕೋಟಿಗೆ ತಲುಪಿದ ಎರಡು ತಿಂಗಳ ನಂತರ ಈ ಮೈಲಿಗಲ್ಲು ತಲುಪಿದೆ. ಜನವರಿ 2023 ರಿಂದ, 6 ಕೋಟಿಗೂ ಹೆಚ್ಚು ಹೊಸ ಡಿಮ್ಯಾಟ್ ಖಾತೆಗಳು ಸೇರ್ಪಡೆಯಾಗಿದೆ. 2024 ರ ಇಸವಿಯಲ್ಲಿ, ಸುಮಾರು 3.18 ಕೋಟಿ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ. ಆದರೆ 2023 ರಲ್ಲಿ ಒಟ್ಟು 3.10 ಕೋಟಿ ಸೇರ್ಪಡೆಗಳನ್ನು ಈ ಬಾರಿ ಮೀರಿಸಲಾಗಿದೆ. ಇದು ಭಾರತೀಯ ಕುಟುಂಬಗಳಲ್ಲಿ ಇಕ್ವಿಟಿ ಹೂಡಿಕೆ (Equity Investment)ಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ.