ಬೆಂಗಳೂರು, ಸೆ.6, www.bengaluruwire.com : ಮಧ್ಯಮ ಮತ್ತು ಕಡಿಮೆ ಆದಾಯದ ಪಾಲಿಸಿದಾರರಿಗೆ ಆರೋಗ್ಯ ವಿಮೆಯ ಮೇಲಿನ ಶೇ.18 ಜಿಎಸ್ ಟಿ ತೆರಿಗೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪ್ರಧಾನಮಂತ್ರಿ ನರೇಂದ್ರಿ ಅವರನ್ನು ಉಲ್ಲೇಖಿಸಿ ಜಿಎಸ್‌ಟಿ ಕೌನ್ಸಿಲ್‌ಗೆ ಶುಕ್ರವಾರ ಪತ್ರ ಬರೆದಿದ್ದಾರೆ. ಹೆಚ್ಚಿನ ಜಿಎಸ್‌ಟಿ ದರದಿಂದಾಗಿ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಆರೋಗ್ಯ ವಿಮೆಯನ್ನು ಕೈಗೆಟುಕದಂತೆ ಹಾಗೂ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಉದ್ದೇಶವನ್ನು ಬುಡಮೇಲು ಮಾಡುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಸೇವೆಗಳ ವ್ಯಾಪ್ತಿಯಿಂದ ಹೊರಗಿರುವ ವೈದ್ಯಕೀಯ ತುರ್ತುಸ್ಥಿತಿ ಸಂದರ್ಭ ಮತ್ತು ವಿಶೇಷ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆರೋಗ್ಯ ರಕ್ಷಣೆ ನೀಡುವಲ್ಲಿ ಆರೋಗ್ಯ ವಿಮೆಯ ಪ್ರಾಮುಖ್ಯತೆಯನ್ನು ಸಚಿವರು ಎತ್ತಿ ತೋರಿಸಿದ್ದಾರೆ. 2047 ರ ಹೊತ್ತಿಗೆ ಸಾರ್ವತ್ರಿಕ ವಿಮೆ ಎಂಬ ಸರ್ಕಾರದ ದೃಷ್ಟಿಕೋನವು ಹೆಚ್ಚಿನ ಜಿಎಸ್ ಟಿ ದರದಿಂದ ದುರ್ಬಲಗೊಂಡಂತಾಗಿದೆ. ಈ ಜಿಎಸ್ ಟಿ ದರವು ಹಲವರಿಂದ ಪ್ರತಿಭಟನೆಯ ಹೊರತಾಗಿಯೂ 2017 ರಿಂದ ಬದಲಾಗದೆ ಹಾಗೆಯೇ ಉಳಿದಿದೆ.
ಹೆಚ್ಚಿನ ಜಿಎಸ್ ಟಿ ದರವು ಪ್ರೀಮಿಯಂ ವೆಚ್ಚಗಳ ಮೇಲೆ ನೇರ ಪರಿಣಾಮ ಬೀರುತ್ತದೆ, ಆರೋಗ್ಯ ವಿಮೆಯನ್ನು ಹೆಚ್ಚು ಅಗತ್ಯವಿರುವವರಿಗೆ ಎಟುಕದಂತಾಗಿದೆ. ನಾಗರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ಆರೋಗ್ಯ ಯೋಜನೆಗಳನ್ನು ಖಾಸಗಿ ಆರೋಗ್ಯ ವಿಮೆಯೊಂದಿಗೆ ಸಂಯೋಜಿಸುವ ಎರಡು ಹಂತದ ಕವರೇಜ್ ವ್ಯವಸ್ಥೆಯ ಅಗತ್ಯವನ್ನು ಸಚಿವ ದಿನೇಶ್ ಗುಂಡೂರಾವ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಜಿಎಸ್ ಟಿ ಕೌನ್ಸಿಲ್ ಇದೇ ಸೆಪ್ಟೆಂಬರ್ 9 ರಂದು ಸಭೆ ಸೇರಲಿದೆ ಈ ಹಿನ್ನಲೆಯಲ್ಲಿ ಆರೋಗ್ಯ ವಿಮೆಯನ್ನು ಹೆಚ್ಚು ಕೈಗೆಟುಕುವ ಮತ್ತು ಎಲ್ಲರಿಗೂ ಕೈಗೆಟುಕುವಂತೆ ಮಾಡಲು ಅದರ ಮೇಲಿನ ಜಿಎಸ್ ಟಿ ತೆರಿಗೆ ದರವನ್ನು ಕಡಿಮೆ ಮಾಡಲು ಮರುಪರಿಶೀಲಿಸುವಂತೆ ಸಚಿವರು ಮನವಿ ಮಾಡಿದ್ದಾರೆ.