ಬೆಂಗಳೂರು, ಸೆ.05 www.bengaluruwire.com : ರಾಜ್ಯದ ಚಲನಚಿತ್ರ ರಂಗದಲ್ಲಿ ಕಲಾವಿದೆಯವರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಸಂಬಂಧ ಮಾಲಿವುಡ್‌ನ ಹೇಮಾ ಕಮಿಟಿಯಂತೆ ಕನ್ನಡ ಚಿತ್ರರಂಗದಲ್ಲೂ (Sandalwood) ಲೈಂಗಿಕ ಕಿರುಕುಳ ತಡೆಗೆ ಸಮಿತಿ ರಚಿಸುವಂತೆ ಮುಖ್ಯಮಂತ್ರಿಯನ್ನು, ಫೈರ್ (Film Industry for Right and Equality)ನಿಯೋಗ ಗುರುವಾರ (ಸೆ.5) ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಫೈರ್ ಎನ್ನುವ ಸಂಸ್ಥೆಯ ಮೂಲಕ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ನೇತೃತ್ವದಲ್ಲಿ ನಿಯೋಗ ಸಿಎಂ ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ನಟಿಯರಾದ ಶ್ರುತಿ ಹರಿಹರನ್, ನೀತು, ಹಿರಿಯ ಲೇಖಕಿ ಡಾ.ವಿಜಯಾ ಸೇರಿ ಇತರರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗುರುವಾರ ಭೇಟಿ ಮಾಡಿ, ಸಮಿತಿ ರಚನೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಕೇರಳದಲ್ಲಿದ್ದಂತೆ ರಾಜ್ಯದಲ್ಲೂ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಅಂತ ಸ್ಯಾಂಡಲ್‌ವುಡ್ ಕೂಡ ಒತ್ತಾಯಿಸಿದೆ. ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ಲೇಖಕರು, ರಂಗಭೂಮಿ ಕಲಾವಿದರು, ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ 140ಕ್ಕೂ ಹೆಚ್ಚು ಜನರ ಸಹಿಯುಳ್ಳ ಮನವಿ ಪತ್ರವನ್ನು ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.
ನೆರೆಯ ಕೇರಳ ಚಲನಚಿತ್ರ ರಂಗದಲ್ಲಿ ನಟಿಯರು, ಸಹನಟಿಯರ ಮೇಲೆ ಲೈಂಗಿಕ(sexual assault) ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ನ್ಯಾಯಮೂರ್ತಿ ಹೇಮಾ ವರದಿಯಲ್ಲಿಯೂ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದು, ಅನೇಕ ನಟಿಯರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ.
ಲೈಂಗಿಕ ದೌರ್ಜನ್ಯ ಸಂಬಂಧ ಸಮಿತಿ ರಚಿಸುವಂತೆ ಒತ್ತಾಯಿಸಿ,ನಿರ್ದೇಶಕಿ ಕವಿತಾ ಲಂಕೇಶ್, ನಟಿಯರಾದ ಪೂಜಾ ಗಾಂಧಿ, ನಿಶ್ವಿಕಾ ನಾಯ್ಡು, ಐಂದ್ರಿತಾ ರೈ, ನೀತು ಶೆಟ್ಟಿ, ಮಾನ್ವಿತಾ ಕಾಮತ್, ಚೈತ್ರಾ ಆಚಾರ್, ಧನ್ಯ ರಾಮಕುಮಾರ್, ಸಿಂಧು ರಾವ್, ಸಾನ್ವಿ ಶ್ರೀವಾಸ್ತವ್, ಸಂಯುಕ್ತ ಹೆಗ್ಡೆ, ಮೇಘನಾ ಗಾಂವ್ಕಾರ್, ಶ್ರದ್ಧಾ ಶ್ರೀನಾಥ್, ನಟರಾದ ಸುದೀಪ್, ಕಿಶೋರ್, ದಿಗಂತ್ ಮಚಾಲೆ, ವಿನಯ್ ರಾಜಕುಮರ್, ಶರತ್ ಲೋಹಿತಾಶ್ವ, ನಿರ್ದೇಶಕರಾದ ಮನ್ಸೋರೆ, ಬಿ.ಸುರೇಶ್, ಕವಿರಾಜ್, ಸಹಿಕಹಿ ಚಂದ್ರು, ಸಿಹಿಕಹಿ ಗೀತಾ ಅವರು ಸೇರಿದಂತೆ ಹಲವರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.