ಬೆಂಗಳೂರು, ಸೆ.05 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಪಾಲಿಕೆ 6110 ಕಾಮಗಾರಿಗಳಲ್ಲಿ ಬಾಕಿ ಉಳಿಸಿಕೊಂಡ ಶೇ.25ರಷ್ಟು ಬಿಲ್ ಮೊತ್ತವೇ 1763.28 ಕೋಟಿ ರೂ.ಗಳಾಗಿದೆ.
ಸಾಲಸೋಲ ಮಾಡಿ, ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಕಾಮಗಾರಿ ಮುಗಿಸಿ ಹಲವು ವರ್ಷಗಳಾದರೂ ಈಗಾಗಲೇ ನೀಡಿದ ಶೇ.75ರಷ್ಟು ಬಿಲ್ ನಲ್ಲೇ ಜಿಎಸ್ ಟಿ ಹಣವನ್ನು ಪಾಲಿಕೆ ಅಧಿಕಾರಿಗಳು ಕಡಿತ ಮಾಡಿಕೊಂಡಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರು ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದರು. ಬಾಕಿ ಉಳಿದ ಶೇ.25ರಷ್ಟು ಬಿಲ್ ಮೊತ್ತವೇ 1763.38 ಕೋಟಿ ರೂ. ಗಳಾಗಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರದಿಂದ ಬಿಲ್ ಬಾಕಿ ಪಾವತಿ ಮಾಡಬೇಕೆಂದು ಆಗ್ರಹಿಸಿ ಬಿಬಿಎಂಪಿ ಗುತ್ತಿಗೆದಾರರ ಸದಸ್ಯರು ಸೋಮವಾರದಿಂದ ನಗರದಲ್ಲಿ ಎಲ್ಲಾ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದ್ದರು. ಬುಧವಾರದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಅದೇ ದಿನ ಉಪಮುಖ್ಯಮಂತ್ರಿಗಳು ಇನ್ನು 8 ದಿನಗಳಲ್ಲಿ ಶೇ.25ರಷ್ಟು ಬಾಕಿ ಬಿಲ್ ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದರಿಂದ ಗುತ್ತಿಗೆದಾರರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ.
ಆದರೆ ಮೊದಲೇ ಆರ್ಥಿಕ ಸಂಕಷ್ಟದಿಂದ ನಲಗುತ್ತಿರುವ ಪಾಲಿಕೆ ಕೇವಲ 8 ದಿನಗಳ ಒಳಗಾಗಿ ಬಾಕಿ ಉಳಿದ ಪಾಲಿಕೆ ಹಾಗೂ ರಾಜ್ಯ ಸರ್ಕಾರದ ವಿವಿಧ ರೀತಿಯ ಅನುದಾನಗಳ ಅಡಿ ಕೈಗೊಂಡ 6110 ಕಾಮಗಾರಿಗಳ 1763.38 ಕೋಟಿ ರೂ. ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳುವುದು ಅನುಮಾನದಂತೆ ತೋರುತ್ತಿದೆ.
ಬಿಬಿಎಂಪಿ ಅನುದಾನದ ಶೇ.75ರಷ್ಟು ಪಾವತಿ ಏಪ್ರಿಲ್ 2021ರಿಂದ 2022ರ ಡಿಸೆಂಬರ್ ವರೆಗೆ ನಡೆಸಿದ ಕಾಮಗಾರಿಗಳ ಹಣ ಗುತ್ತಿಗೆದಾರರಿಗೆ ಪಾಲಿಕೆ ಕೊಟ್ಟಿದೆ. ಶೇ.25 ರಷ್ಟು ಹಣ ಏಪ್ರಿಲ್ 2021ರಿಂದ ಡಿಸೆಂಬರ್ 2022ರ ತನಕದ ಕಾಮಗಾರಿಗಳ ಬಿಲ್ ಬಾಕಿಯಿದೆ. ಇನ್ನೂ ಪಾವತಿಯಾಗಿಲ್ಲ. ಇನ್ನು 2023 ಜನವರಿಂದ ಬಿಬಿಎಂಪಿ ಅನುದಾನದಲ್ಲಿ ನಡೆಸಿದ ವಿವಿಧ ಅಭಿವೃದ್ಧಿ ಕೆಲಸಗಳ ಬಿಲ್ ಈತನಕ ಶೇ.100 ರಷ್ಟು ಬಾಕಿಯಿದೆ.
ರಾಜ್ಯ ಸರ್ಕಾರ ಅನುದಾನದಡಿ 2021-2022, 2022-23, 2023-24ನೇ ಸಾಲಿನಲ್ಲಿ ನಡೆಸಿದ್ದ ಹಳೆಯ ಕಾಮಗಾರಿಗಳಿಗೆ ಫೆಬ್ರವರಿ 2024 ರ ತನಕ ಶೇ.75ರಷ್ಟು ಹಣ ಪಾವತಿಯಾಗಿತ್ತು. ಆದರೆ 2021ರ ಏಪ್ರಿಲ್ ನಿಂದ ಶೇ.25ರಷ್ಟು ಕಾಮಗಾರಿ ಬಿಲ್ ಪಾವತಿಯಾಗದೆ ಬಾಕಿ ಉಳಿದಿದೆ.
5090 ಕಾಮಗಾರಿಗಳ 3127 ಕೋಟಿ ಶೇ.100ರಷ್ಟು ಬಾಕಿ :
ಬೆಂಗಳೂರು ವೈರ್ ಗೆ ಲಭ್ಯವಾದ ಸೆ.04 ತನಕದ ಇತ್ತೀಚೆಗಿನ ವರದಿ ಪ್ರಕಾರ ಪಾಲಿಕೆಯ ವ್ಯಾಪ್ತಿಯಲ್ಲಿ ಬಿಬಿಎಂಪಿ ಅನುದಾನ (1744.56 ಕೋಟಿ ರೂ.) ಹಾಗೂ ರಾಜ್ಯ ಸರ್ಕಾರದ ಗ್ರಾಂಟ್ (1382.77 ಕೋಟಿ ರೂ.) ಅಡಿಯಲ್ಲಿ ಒಟ್ಟಾರೆ 5090 ಕಾಮಗಾರಿಗಳ ಬಿಲ್ ಗಳ ಮೊತ್ತ 3127.33 ಕೋಟಿ ರೂ. ಆಗಿದ್ದು, ಶೇ.100 ರಲ್ಲಿ ಬಿಡಿಗಾಸು ಇನ್ನೂ ಪಾವತಿಯಾಗದೆ ಬಾಕಿ ಉಳಿದಿದೆ.
2023-24ರಿಂದ ಈತನಕ ಬಿಬಿಎಂಪಿ 6180 ಕೋಟಿ ರೂ. ಬಿಲ್ ಪಾವತಿ :
2023-24ನೇ ಸಾಲಿನಲ್ಲಿ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಕೈಗೊಂಡ 6047 ಕಾಮಗಾರಿಗಳ ಪೈಕಿ 3,831.48 ಕೋಟಿ ರೂ.ಗಳಷ್ಟು ಹಣವನ್ನು ಪಾಲಿಕೆಯು ವಿವಿಧ ಕಾಂಟ್ರಾಕ್ಟರ್ ಗಳಿಗೆ ಪಾವತಿ ಮಾಡಿದೆ. ಇನ್ನು 2024-25ನೇ ಸಾಲಿನಲ್ಲಿ 4,084 ಕಾಮಗಾರಿಗಳಿಗೆ 2,348.65 ಕೋಟಿ ರೂ. ಹಣ ಕಾಂಟ್ರಾಕ್ಟರ್ ಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ.
8 ದಿನದಲ್ಲಿ ಕ್ರಮವಹಿಸದಿದ್ದರೆ ಮತ್ತೆ ಪ್ರತಿಭಟನೆ :
“ಬುಧವಾರದಿಂದ ಉಪವಾಸ ಸತ್ಯಾಗ್ರಹ ಕೂತಿದ್ದೆವು. ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಕಾನೂನು ಪ್ರಕಾರ ಸಮಸ್ಯೆಗೆ ಪರಿಹಾರ ಸೂಚಿಸಲು ಎಂಟು ದಿನದ ಸಮಯ ಕೇಳಿ, ಪ್ರತಿಭಟನೆ ವಾಪಸ್ ಪಡೆಯಲು ಕೋರಿದ್ದರು. ಅದರಂತೆ ಪ್ರತಿಭಟನೆಯೇನೊ ವಾಪಸ್ ಪಡೆದಿದ್ದೇವೆ. ಗುತ್ತಿಗೆದಾರರ ಲಾಭಾಂಶ ಶೇ.10ಕ್ಕಿಂತ ಕಡಿಮೆಯಿದೆ. ಹೀಗಿರುವಾಗ ನಮ್ಮ ಬೇಡಿಕೆ ಎಂಟು ದಿನಗಳಲ್ಲಿ ಹಣ ಪಾವತಿಗೆ ಕ್ರಮ ಕೈಗೊಳ್ಳದಿದ್ದರೆ ಪುನಃ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪುನಃ ಅನಿರ್ದಿಷ್ಟಾವಧಿ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ಪ್ರಾರಂಭಿಸುತ್ತೇವೆ.”
– ಕೆ.ಟಿ.ಮಂಜುನಾಥ್, ಅಧ್ಯಕ್ಷ, ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ