ಬೆಂಗಳೂರು, ಸೆ.03 www.bengaluruwire.com : ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಡೆಂಗ್ಯೂ ಜ್ವರ ಹಾಗೂ ಸಂಬಂಧಿತ ರೋಗವನ್ನು ಸಾಂಕ್ರಾಮಿಕ ರೋಗವೆಂದು ರಾಜ್ಯ ಸರ್ಕಾತ ಅಧಿಕೃತವಾಗಿ ಘೋಷಿಸಿದೆ. ಇನ್ನು ಮುಂದೆ ಡೆಂಗ್ಯೂ ಹರಡುವ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವಂತೆ ನೈರ್ಮಲ್ಯತೆ ಕಾಪಾಡದೆ ಇರುವವರಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ.
ಇದಲ್ಲದೆ ಕರ್ನಾಟಕ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ 2020ಕ್ಕೆ ತಿದ್ದುಪಡಿ ತಂದು ಕರ್ನಾಟಕ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ 2024 ಎಂದು ಆ.31ರ ಕರ್ನಾಟಕ ಗೆಜೆಟ್ ನಲ್ಲಿ ಅಧಿಸೂಚನೆ ಹೊರಡಿಸಿದೆ.
ರಾಜ್ಯದಲ್ಲಿ ಡೆಂಗ್ಯೂ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ನಿಯಮಗಳನ್ನು ಜಾರಿಗೆ ತಂದಿದೆ. ತೆರೆದ ಸ್ಥಳ, ಮನೆ, ಕಟ್ಟಡ, ಖಾಲಿ ಜಾಗಗಳಲ್ಲಿ ಅನಗತ್ಯವಾಗಿ ಸೊಳ್ಳೆ ಸಂತಾನೋತ್ಪತ್ತಿ ಹರಡಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಡೆಂಗ್ಯುವಿನಂತಹ ಮಾರಕ ರೋಗಗಳಿಗೆ ಸೊಳ್ಳೆ ಉತ್ಪತ್ತಿಗಳಿಗೆ ಕಾರಣವಾಗುವ ನಿಂತ ನೀರನ್ನು ತೆರವುಗೊಳಿಸಿ ಸೂಕ್ತ ರಾಸಾಯನಿಕ ಸಿಂಪಡಣೆ ಇನ್ನಿತರ ಕ್ರಮಗಳನ್ನು, ಸ್ವತ್ತಿನ ಮಾಲೀಕರು ಅಥವಾ ಆ ಸ್ವತ್ತಿನ ಸ್ವಾಧೀನತೆ ಹೊಂದಿದವರು ಕೈಗೊಳ್ಳಬೇಕು. ಒಂದೊಮ್ಮೆ ಈ ನಿಯಮಗಳನ್ನು ಉಲ್ಲಂಘಿಸುವ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸ್ವತ್ತಿನ ಮಾಲೀಕರಿಗೆ ದಂಡ ವಿಧಿಸಲು ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸದ್ಯ ಬೆಂಗಳೂರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಚಾಲ್ತಿಯಲ್ಲಿತ್ತು :
ಪ್ರಸ್ತುತ ಬೆಂಗಳೂರಿನಲ್ಲಿ ಬಿಬಿಎಂಪಿ ಹಾಗೂ ಮಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಮಾತ್ರ ತೆರೆದ ಸ್ಥಳ ನಿಂತ ನೀರನ್ನು ತೆರವು ಗೊಳಿಸಲು ಭೂಮಾಲೀಕರನ್ನು ಹೊಣೆಗಾರರನ್ನಾಗಿ ಮಾಡುವ ಕಾನೂನು ಜಾರಿಗೊಳಿಸಿದೆ. ಇನ್ನು ಮುಂದೆ ಕರ್ನಾಟಕ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ 2024ರ ಅನ್ವಯ ರಾಜ್ಯಾದ್ಯಂತ ಡೆಂಗ್ಯೂ ನಿಯಂತ್ರಿಸುವ ಹಿನ್ನಲೆಯಲ್ಲಿ ಸ್ಥಳೀಯ ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಡೆಂಗ್ಯೂ ಸಾಂಕ್ರಾಮಿಕ ರೋಗ ತಡೆಗೆ ಸೂಕ್ತ ಅಧಿಕಾರವನ್ನು ಈ ತಿದ್ದುಪಡಿ ಕಾನೂನಿನಲ್ಲಿ ನೀಡಲಾಗಿದೆ. ಕಾಲ ಕಾಲಕ್ಕೆ ಈ ಅಧಿಕಾರಿಗಳು ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಕಟ್ಟಡ, ನಿವೇಶನ, ನೀರಿನ ಟ್ಯಾಂಕ್, ಉದ್ಯಾನವನ, ಆಟದ ಮೈದಾನ ಮತ್ತಿತರ ಕಡೆಗಳಿಗೆ ತೆರಳಿ ಪರಿಶೀಲನೆ ನಡೆಸಲು ತಿದ್ದುಪಡಿ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
ನೋಟಿಸ್ ಪಡೆದ 24 ಗಂಟೆಯ ಒಳಗೆ ಕ್ರಮ ಕೈಗೊಳ್ಳಬೇಕು :
ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಪ್ರದೇಶ, ಮನೆ, ಕಟ್ಟಡ, ಖಾಸಗಿ ಅಥವಾ ಸರ್ಕಾರಿ ಸ್ವತ್ತಿನ ಖಾಲಿ ನಿವೇಶನದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ನೋಟಿಸ್ ನೀಡಿ 24 ಗಂಟೆಗಳ ಒಳಗೆ ಕ್ರಮ ಕೈಗೊಳ್ಳಲು ಡೆಂಗ್ಯೂ ಹರಡಲು ಕಾರಣವಾಗುವ ನಿಂತ ನೀರನ್ನು ತೆರವುಗೊಳಿಸಲು ನೋಟಿಸ್ ನೀಡಬೇಕು. ಆ ನೋಟಿಸ್ ಪಡೆದ ನಂತರ ನಿರ್ದಿಷ್ಟಪಡಿಸಿದ ಸಮಯದ ಒಳಗಾಗಿ ಸ್ವತ್ತಿನ ಬಳಕೆದಾರರು ಅಥವಾ ಮಾಲೀಕರು ಕ್ರಮ ಕೈಗೊಳ್ಳಬೇಕು.
ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿ ಡೆಂಗ್ಯೂ ಹರಡಲು ಕಾರಣವಾಗಲು ಸಾಧ್ಯತೆಯಿರುವ ಸ್ಥಳದಲ್ಲಿ ನಿಂತ ನೀರು ಹಾಗೂ ಸೊಳ್ಳೆ ಉತ್ಪತ್ತಿಯಾಗದಂತೆ ರಾಸಾಯನಿಕ ಸಿಂಪಡಣೆ ಸೇರಿದಂತೆ ಮತ್ತಿತರ ಕ್ರಮ ಕೈಗೊಳ್ಳಬೇಕು. ಹೀಗೆ ಕ್ರಮ ಕೈಗೊಂಡಾಗ ಆದ ವೆಚ್ಚವನ್ನು ಸಂಬಂಧಿಸಿದ ವ್ಯಕ್ತಿ ಅಥವಾ ಸಂಸ್ಥೆಗೆ ವಿಧಿಸಬೇಕು ಎಂದು ನಿಯಮಗಳಲ್ಲಿ ತಿಳಿಸಿದೆ.
2017ರಲ್ಲೇ ಸಿಎಸ್ ಉನ್ನತ ಮಟ್ಟದ ಸಮಿತಿ ಶಿಫಾರಸ್ಸು :
ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು 2017ರಲ್ಲಿ ಎಲ್ಲ ನಗರ ಪಾಲಿಕೆಯಲ್ಲಿ ಡೆಂಗ್ಯೂ ತಡೆಗಟ್ಟಲು ನಾಗರೀಕ ಬೈಲಾ ಆಳವಡಿಕೆ ಮಾಡುವಂತೆ ಶಿಫಾರಸು ಮಾಡಿತ್ತು. ಇದರಲ್ಲಿ ಖಾಸಗಿ ಜಾಗದಲ್ಲಿ ಸೊಳ್ಳೆಗಳು ಉತ್ಪತ್ತಿಯಾದರೆ ಅದನ್ನು ನಾಶಗೊಳಿಸುವ ಜವಾಬ್ದಾರಿ ಆ ಜಾಗದ ಮಾಲೀಕರದ್ದಾಗಿದೆ ಎಂದಿತ್ತು. ರಾಜ್ಯ ಸರ್ಕಾರವೂ ಸಹ ನಗರ ಸ್ಥಳೀಯಾಡಳಿತದಲ್ಲಿ ಬೈಲಾ ಅಳವಡಿಸಿಕೊಳ್ಳಲು ಸೂಚನೆ ನೀಡಿತ್ತು. ಇದೀಗ ರಾಜ್ಯಾದ್ಯಂತ ಡೆಂಗ್ಯೂ ಒಂದು ಸಾಂಕ್ರಾಮಿಕ ರೋಗವೆಂದು ಘೋಷಿಸಿ ಕರ್ನಾಟಕ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ 2020ಕ್ಕೆ ತಿದ್ದುಪಡಿ ತಂದಿದೆ. ನಿಯಮ ಉಲ್ಲಂಘಿಸಿದರೆ ಸ್ವತ್ತಿನ ಮಾಲೀಕರೂ ಅಥವಾ ಸ್ವಾಧೀನದಾರಿಗೂ ದಂಡ ವಿಧಿಸಬಹುದಾಗಿದೆ.
ಕಾನೂನು ಉಲ್ಲಂಘಿಸಿದರೆ ವಿಧಿಸುವ ದಂಡದ ಪ್ರಮಾಣ :
ಮನೆಗಳಿಗೆ (ಒಳಾಂಗಣ ಮತ್ತು ಹೊರಾಂಗಣ ಎರಡೂ ಒಳಗೊಂಂತೆ) ನಗರ ಪ್ರದೇಶದಲ್ಲಿ 400 ರೂ., ಗ್ರಾಮಾಂತರ ಪ್ರದೇಶದಲ್ಲಿ 200 ರೂ. ದಂಡ ವಿಧಿಸಲಾಗುತ್ತದೆ.
ವಸತಿ ಪ್ರಕಾರಗಳು, ಆರೋಗ್ಯ ಸೌಲಭ್ಯಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ತಿನಿಸುಗಳು, ಲಾಡ್ಜ್‌ಗಳು, ರೆಸಾರ್ಟ್‌ಗಳು, ಹೋಂಸ್ಟೇಗಳು, ಅಮ್ಯೂಸ್‌ಮೆಂಟ್ ಪಾರ್ಕ್‌ಗಳು, ಮಾಲ್‌ಗಳು, ಸೂಪರ್ ಮಾರ್ಕೆಟ್‌ಗಳು, ಸಣ್ಣಪುಟ್ಟ ಅಂಗಡಿಗಳು, ಟೆಂಡರ್ ತೆಂಗಿನಕಾಯಿ ಮಾರಾಟಗಾರರು, ಕಾರ್ಖಾನೆಗಳು, ಕೈಗಾರಿಕೆಗಳು ರಿಪೇರಿ ಅಂಗಡಿಗಳು ಸೇರಿದಂತೆ ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳು ಘನತ್ಯಾಜ್ಯ ಸಂಗ್ರಹ ಯಾರ್ಡ್‌ಗಳು, ಸಸ್ಯ ನರ್ಸರಿ, ಸಿನಿಮಾ ಥಿಯೇಟರ್, ಕನ್ವೆನ್ಷನ್ ಹಾಲ್‌ಗಳು, ಅಂತಹ ಯಾವುದೇ ಇತರ ರಚನೆಗಳು ಸೇರಿದಂತೆ ಇನ್ನಿತರರಿಗೆ ನಗರ ಪ್ರದೇಶದಲ್ಲಿ 1,000 ರೂ., ಗ್ರಾಮಾಂತರ ಪ್ರದೇಶದಲ್ಲಿ 500 ರೂ. ದಂಡ ವಿಧಿಸಲಾಗುತ್ತದೆ.
ಸಕ್ರಿಯ ಕಟ್ಟಡ ನಿರ್ಮಾಣ ಸ್ಥಳಗಳು, ನಿರ್ಮಾಣ ಕಾರ್ಯ ನಿಂತಿರುವ ಸ್ಥಳಗಳು ಮತ್ತು ಖಾಲಿ ನಿವೇಶನಗಳು ಅಥವಾ ತೆರೆದ ಭೂಮಿಗಳಲ್ಲಿ ಡೆಂಗ್ಯೂ ಹರಡಲು ಕಾರಣವಾಗುವ ಸೊಳ್ಳೆ ಉತ್ಪತ್ತಿಗೆ ಅವಕಾಶ ನೀಡುವಂತೆ ಸ್ವಚ್ಛತೆ ಕಾಪಾಡದವರಿಗೆ ನಗರ ಪ್ರದೇಶದಲ್ಲಿ 2,000 ರೂ., ಗ್ರಾಮಾಂತರ ಪ್ರದೇಶದಲ್ಲಿ 1000 ರೂ. ದಂಡ ವಿಧಿಸಲಾಗುತ್ತದೆ.
ಗಡುವಿನೊಳಗೆ ಕ್ರಮಕೈಗೊಳ್ಳದಿದ್ದರೆ ಪ್ರತಿವಾರವೂ ಹೆಚ್ಚುವರಿ ದಂಡ :
ಬಿಬಿಎಂಪಿ ಪ್ರದೇಶ ಮತ್ತು ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರವು ಸೂಚಿಸಿದ ದಂಡದ ದರಗಳು ಮೇಲಿನ ದರಗಳಿಗಿಂತ ಹೆಚ್ಚಿಸಬಹುದು. ಸಕ್ಷಮ ಪ್ರಾಧಿಕಾರದಿಂದ ನಿಂತ ನೀರು ಅಥವಾ ಡೆಂಗ್ಯೂ ಹರಡುವ ಸ್ಥಳದಲ್ಲಿ ಸ್ವಚ್ಛಗೊಳಿಸುವ ಸೂಚನೆಯನ್ನು ಸ್ವೀಕರಿಸಿದ ನಂತರವೂ ಕ್ರಮ ಕೈಗೊಳ್ಳದಿದ್ದರೆ ಪ್ರತಿವಾರಕ್ಕೂ ಹೆಚ್ಚುವರಿಯಾಗಿ, ಮೇಲೆ ನಿರ್ದಿಷ್ಟಪಡಿಸಿದ ಒಟ್ಟು ದಂಡದ ಮೊತ್ತದ ಐವತ್ತು ಪ್ರತಿಶತವನ್ನು ಹೆಚ್ಚುವರಿಯಾಗಿ ವಿಧಿಸಲು ಸಾಂಕ್ರಾಮಿಕ ರೋಗಗಳ ನಿಯಂತ್ರಣ ತಿದ್ದುಪಡಿ ಕಾಯ್ದೆ 2024ರಲ್ಲಿ ತಿಳಿಸಿದೆ.