ಬೆಂಗಳೂರು, ಸೆ.03 www.bengaluruwire.com : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರವಷ್ಟೇ ಬಿಬಿಎಂಪಿ ಎಲ್ಲಾ ವಲಯಗಳಲ್ಲಿ ಸಾಮಾನ್ಯ ಜನರು ಆನ್ ಲೈನ್ ಮೂಲಕ ಕಟ್ಟಡ ಕಟ್ಟಲು ‘ನಂಬಿಕೆ ನಕ್ಷೆ’ ಪಡೆಯಬಹುದು ಎಂದು ಹೇಳಿದ್ದರು. ದುರಂತ ಅಂದರೆ ಕಳೆದ ಗುರುವಾರದಿಂದ ಬಿಬಿಎಂಪಿ ವೆಬ್ ಸೈಟ್ ಸೂಕ್ತ ರೀತಿ ಕಾರ್ಯನಿರ್ವಹಿಸುತ್ತಿಲ್ಲ.
ಇದರಿಂದ ಪಾಲಿಕೆ ಅಧಿಕಾರಿ, ಸಿಬ್ಬಂದಿ ಹಾಗೂ ಆನ್ ಲೈನ್ ನಲ್ಲಿ ವ್ಯವಹರಿಸುವ ಸಾರ್ವಜನಿಕರಿಗೆ ತೊಂದರೆಯಾಗಿದೆ. bbmp.gov.in ಎಂಬ ಬಿಬಿಎಂಪಿಯ ಅಧಿಕೃತ ವೆಬ್ ಸೈಟಿಗೆ ಪಾಲಿಕೆಯ ರಸ್ತೆ ಅಗೆತ, ಜಾಬ್ ಕೋಡ್ ವಿತರಣೆ, ಡಿಸಿಬಿಲ್ ಪಾವತಿ, ಪಾಲಿಕೆ ಸಿಬ್ಬಂದಿ ವೇತನ ಪಾವತಿ, ವ್ಯಾಪಾರ ಪರವಾನಗಿ, ಆಸ್ತಿ ತೆರಿಗೆ ಪಾವತಿ, ಜನನ ಮತ್ತು ಮರಣ ಪ್ರಮಾಣಪತ್ರ, ವಿದ್ಯುತ್ ಚಿತಾಗಾರ ಬುಕಿಂಗ್, ಹಲವು ಆಪ್ ಸಾಫ್ಟ್ ವೇರ್ ಗಳನ್ನು, ಇತರ ಇಲಾಖೆಗಳ ವೆಬ್ ಸೈಟಿನ ಲಿಂಕ್ ಗಳನ್ನು ಕನೆಕ್ಟ್ ಮಾಡಲಾಗಿದೆ.
ಕಳೆದ ಗುರುವಾರದಮದ ಪಾಲಿಕೆಯಿಂದ ಗುತ್ತಿಗೆದಾರರಿಗೆ, ಸೇವಾದಾರರಿಗೆ ಹಣ ಪಾವತಿಸುವ ಐಎಫ್ ಎಂಎಸ್ ಸಾಫ್ಟ್ ವೇರ್, ಅಧಿಕಾರಿ ಸಿಬ್ಬಂದಿಗೆ ವೇತನ ಪಾವತಿಸುವ ಎಚ್ ಆರ್ ಎಂಎಸ್, ನಗರ ಯೋಜನೆ ವಿಭಾಗದಿಂದ ದಾಖಲೆ ಪರಿಶೀಲನೆ, ಸಾರ್ವಜನಿಕರು ಕಟ್ಟಡ ನಕ್ಷೆ ಮಂಜೂರಾತಿ, ವಿವಿಧ ಪ್ರಮಾಣಪತ್ರಗಳಿಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅನುವಾಗುವಂತೆ ಇರುವ ಬಿ-ಪಾಸ್ (B-Pass) ಇಒಡಿಬಿ ಸಾಫ್ಟ್ ವೇರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಸಾರ್ವಜನಿಕರು, ಪಾಲಿಕೆ ಸಿಬ್ಬಂದಿ, ಗುತ್ತಿಗೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ.
ಆದರೆ ಸೋಮವಾರ ಮಧ್ಯಾಹ್ನದಿಂದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಐಎಫ್ ಎಂಎಸ್ ಕಾರ್ಯಾಚರಣೆ ಸರಿಯಾದ ಕಾರಣ ಪಾಲಿಕೆ ನೌಕರರ ವೇತನ ಪಾವತಿಸಲು ಸಾಧ್ಯವಾಗಿದೆ. ಆದರೆ ಐಎಫ್ ಎಂಸ್ ಸಾಫ್ಟ್ ವೇರ್ ವಲಯ ಮಟ್ಟದಲ್ಲಿ ಇನ್ನೂ ಸರಿಹೋಗಿಲ್ಲ. ಇ-ಆಫೀಸ್ ಕೂಡ ಆಗಾಗ ಕೈಕೊಡುತ್ತಿರುವುದರಿಂದ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ ಎಂದು ಪಾಲಿಕೆ ಉನ್ನತ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.
ಬಿಬಿಎಂಪಿಯ ನಗರ ಯೋಜನೆ ವಿಭಾಗದ ಬಿ-ಪಾಸ್ ಸಾಫ್ಟ್ ವೇರ್ ಕಾರ್ಯನಿರ್ವಹಿಸಿದ ಕಾರಣ ನಗರ ಯೋಜನೆ ಎಂಜಿನಿಯರ್ ಗಳು ಕಟ್ಟಡಕ್ಕೆ ಸಂಬಂಧಿಸಿದ ನಕ್ಷೆ, ದಾಖಲೆಗಳನ್ನು ಪರಿಶೀಲಿಸಲು, ದಾಖಲೆಗಳನ್ನು ಡೌನ್ ಲೋಡ್ ಮಾಡಲು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಸಾರ್ವಜನಿಕರು ಕಟ್ಟಡ ನಕ್ಷೆ ಮಂಜೂರಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.
ಬಿಬಿಎಂಪಿ bbmp.gov.in ವೆಬ್ ಸೈಟಿನಲ್ಲಿ ಅಳವಡಿಸಿರುವ, ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸಿನ ಕೂಸಿನ ಯೋಜನೆಯಾದ ಬ್ರಾಂಡ್ ಬೆಂಗಳೂರು ವೆಬ್ ಸೈಟ್ ಕೂಡ ಈ ವೆಬ್ ತಾಣದ ಮೂಲಕ ಕೊಟ್ಟ ಲಿಂಕ್ ಗೂಗಲ್ ಕ್ರೋಮ್ ಮೂಲಕ ತೆರೆಯಲಾಗುತ್ತಿಲ್ಲ. Your connection is not private ಎಂಬ ಮಾಹಿತಿ ಕಾಣಸಿಗುತ್ತಿದೆ.
ಇದನ್ನೂ ಓದಿ : BIG NEWS | ಡೆಂಗ್ಯೂ ಸಾಂಕ್ರಾಮಿಕ ರೋಗವೆಂದು ಅಧಿಕೃತ ಘೋಷಣೆ : ಕಾನೂನು ಉಲ್ಲಂಘಿಸಿದರೆ ನಿಮಗೆ ಬೀಳುತ್ತೆ ದಂಡ
ಉನ್ನತ ಮೂಲಗಳ ಮಾಹಿತಿ ಪ್ರಕಾರ ಬಿಬಿಎಂಪಿ bbmp.gov.in ವೆಬ್ ಸೈಟಿನ ಡೊಮೈನ್ ಸಮಸ್ಯೆಯಾಗಿದೆ. ಇದರಿಂದ ಪಾಲಿಕೆ ವೆಬ್ ಸೈಟಿಗೆ ಲಿಂಕ್ ಮಾಡಿರುವ ಸಾಫ್ಟ್ ವೇರ್ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲು ತೊಡಕಾಗಿದೆ. ಇದನ್ನು ಸರಿಪಡಿಸಲು ಬಿಬಿಎಂಪಿ ಐಟಿ ವಿಭಾಗ ಗೂಗಲ್ ಕಂಪನಿಯ ಮೊರೆಹೋಗಿದೆ. ಆದರೆ ಆ ಸಂಸ್ಥೆಯಿಂದ ಸೂಕ್ತ ರೀತಿ ಸ್ಪಂದನೆ ವ್ಯಕ್ತವಾಗಿಲ್ಲ ಎಂದು ಗೊತ್ತಾಗಿದೆ.
ಬಿಬಿಎಂಪಿ ವೆಬ್ ಸೈಟ್ ಡೊಮೈನ್ ಸಮಸ್ಯೆ :
“ಬಿಬಿಎಂಪಿ ಅಧಿಕೃತ ವೆಬ್ ಸೈಟ್ bbmp.gov.in ನಲ್ಲಿ ಸಮಸ್ಯೆ ಕಂಡುಬಂದಿರುವುದು ನಿಜ. ವೆಬ್ ಸೈಟಿನ ಡೊಮೈನ್ ಸಮಸ್ಯೆ ಎದುರಾಗಿದ್ದು ಇದನ್ನು ಸರಿಪಡಿಸಲು ಗೂಗಲ್ ಸಂಸ್ಥೆಯನ್ನು ಸಂಪರ್ಕಿಸಿದ್ದೇವೆ. ಈತನಕ ಪಾಲಿಕೆಯ ವೆಬ್ ಸೈಟಿನಲ್ಲಿ ಕಂಡುಬಂದ ಸಮಸ್ಯೆ ಪರಿಹರಿಸಿದ್ದೇವೆ. ನೀವು ಗಮನಕ್ಕೆ ತಂದ ವಿಷಯಗಳ ಬಗ್ಗೆ ಗಮನಹರಿಸಿ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ.”
– ಗಾಯತ್ರಿ ನಾಯಕ್, ಉಪ ಆಯುಕ್ತರು, ಬಿಬಿಎಂಪಿ ಐಟಿ ಮತ್ತು ಮಾರುಕಟ್ಟೆ
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.