ಬೆಂಗಳೂರು, ಸೆ.2 www.bengaluruwire.com : ಕಾಲೇಜು ದಿನಗಳಲ್ಲಿ, ಹಿಂದಿನ ದಿನಗಳಲ್ಲಿ ಬಳಸಿದ ಬೈಕ್, ಕಾರು ಅಥವಾ ಇನ್ಯಾವುದೇ ವಾಹನಗಳ ಬಗ್ಗೆ ಪ್ರತಿಯೊಬ್ಬರಿಗೂ ಒಂದು ವಿಸದೇಷ ಭಾವನಾತ್ಮಕ ಸಂಬಂಧ, ಪ್ರೀತಿ, ಹಳೆಯ ನೆನಪುಗಳು ಇದ್ದೇ ಇರುತ್ತೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಹೊರತಾಗಿಲ್ಲ.
ಅವರು ಕಾಲೇಜು ದಿನಗಳಲ್ಲಿ ಬಳಸುತ್ತಿದ್ದ ಬೆಂಕಿ ಉಗುಳಿಕೊಂಡು ಸಂಚರಿಸಿ, ತುಕ್ಕು ಹಿಡಿದು ಮೂಲೆ ಸೇರಿದ್ದ ಯಜ್ಡಿ ಬೈಕ್ (Yezdi Bike) ಈಗ ಫಳ ಫಳ ಹೊಳೆಯುವ ನವ ಸುಂದರಿಯಂತೆ ಸಿದ್ಧವಾಗಿ ಡಿ.ಕೆ.ಶಿವಕುಮಾರ್ ಕೈ ಸೇರಿದೆ. ಇದನ್ನು ಕಂಡ ಅವರಿಗೆ ಅಪಾರ ಸಂತೋಷವಾಗಿದೆ.
ವಿಂಟೇಜ್ ಬೈಕ್ ಪ್ರೇಮಿಯಾಗಿರುವ ಸುಪ್ರೀತ್ ಎಂಬುವವರು ಭಾನುವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಡಿಸಿಎಂ ಅವರು ಕಾಲೇಜು ದಿನಗಳಲ್ಲಿ ಬಳಸಿದ್ದ ಯಜ್ಡಿ ಬೈಕ್ (ನಂಬರ್ CAE 7684) ಅನ್ನು ಮರುವಿನ್ಯಾಸ ಮಾಡಿ ಸದಾಶಿವನಗರದ ನಿವಾಸಕ್ಕೆ ತಂದು ನಿಲ್ಲಿಸಿದಾಗ ಅದನ್ನು ಕಂಡ ಶಿವಕುಮಾರ್ ಅವರು ಒಂದು ಕ್ಷಣ ಮೂಕ ವಿಸ್ಮಿತರಾದರು.
ತಾವೇ ಸ್ವತಃ ಬೈಕ್ ಕಿಕ್ ಮಾಡಿ ಸ್ಟಾರ್ಟ್ ಮಾಡಿ ಖುಷಿಪಟ್ಟರು. “ನಾನು ಕಾಲೇಜು ದಿನಗಳಲ್ಲಿ ಬಳಸುತ್ತಿದ್ದ ಬೈಕ್ ಇದು, ಕನಕಪುರದ ಮನೆಯಲ್ಲಿ ಧೂಳು ಹಿಡಿದಿತ್ತು. ಸುಮಾರು 40 ವರ್ಷಗಳ ನಂತರ ನನ್ನ ಸ್ನೇಹಿತರು ಅದಕ್ಕೆ ಹೊಸ ರೂಪ ಕೊಟ್ಟು ತಂದಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.
ಈ ಬಗ್ಗೆ ಬೈಕಿನ ಹೊಸ ಲುಕ್ ಫೊಟೊವನ್ನು ಎಕ್ಸ್‌ನಲ್ಲಿನ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿ, “ಕಾಲೇಜ್ ಡೇಸ್ ನಲ್ಲಿ ಬೈಕ್ ಕ್ರೇಜ್ ಸಾಮಾನ್ಯ. ನನ್ನ ಕಾಲೇಜು ದಿನಗಳಲ್ಲಿ ಓಡಿಸಿದ ಬೈಕ್ ಕೆಲ ವರ್ಷಗಳಿಂದ ಧೂಳು ಹಿಡಿದಿತ್ತು, ವಿಂಟೇಜ್ ಬೈಕ್ ಪ್ರೇಮಿಯಾದ ಸುಪ್ರಿತ್ ಎನ್ನುವ ಯುವಕ ಸಂಪೂರ್ಣವಾಗಿ ಮರು ನವೀಕರಣ ಮಾಡಿ ಇಂದು ನನಗೆ ಹಸ್ತಾಂತರಿಸಿದರು. ನನ್ನ ಮೊದಲ ಬೈಕ್ ಇದು, ಇದರೊಂದಿಗೆ ಸಾವಿರಾರು ನೆನಪುಗಳು ಬೆಸೆದುಕೊಂಡಿವೆ. ಆ ನೆನಪಿನ ಪುಟಗಳಿಗೆ ಹೋಗಿ ಬಂದ ಅನುಭವವಾಯಿತು” ಎಂದು ಹೇಳಿದ್ದಾರೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.