ಬೆಂಗಳೂರು, ಸೆ.1 www.bengaluruwire.com : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗಾಗಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮರ ಬದುಕು, ಸರಳತೆ, ಅಹಿಂಸಾ ಮಾರ್ಗ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು, ಸ್ವಾತಂತ್ರ್ಯ ಚಳುವಳಿ ಇತ್ಯಾದಿ ವಿಚಾರಗಳ ಬಗ್ಗೆ ಅರಿವು ಮೂಡಿಸಲು ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ ತಿಳಿಸಿದ್ದಾರೆ.
ವಿವಿಧ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಮೂರು ಪ್ರತ್ಯೇಕ ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡು
ವಿಜೇತರಾದವರಿಗೆ ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ ರೂ. 3,000₹, ದ್ವಿತೀಯ ಬಹುಮಾನ ರೂ. 2,000 ₹ ಹಾಗೂ ತೃತೀಯ ಬಹುಮಾನ ರೂ. 1,000 ₹ ನಗದು ಹಾಗೂ ಪ್ರಮಾಣ ಪತ್ರವನ್ನು ಅಕ್ಟೋಬರ್ 02 ರಂದು ನಡೆಯುವ ಜಿಲ್ಲಾ ಮಟ್ಟದ ಗಾಂಧೀ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ವಿತರಿಸಲಾಗುವುದು. ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಬಂಧಗಳನ್ನು ಈ ಮೂರೂ ವಿಭಾಗಗಳಲ್ಲಿ ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಬಂಧ ವಿಷಯಗಳು, ಪ್ರೌಢ ಶಾಲಾ ವಿಭಾಗ :
1) ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ,
2) ಗಾಂಧೀಜಿಯವರ ವಿಚಾರದಲ್ಲಿ ಸತ್ಯಾಗ್ರಹ.
3) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗ್ಗೆ.
4) ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗ್ಗೆ. ಯಾವುದಾದರೂ ಒಂದು ವಿಷಯವನ್ನು ಆಯ್ದುಕೊಂಡು ಸುಮಾರು 900 ಪದಗಳಿಗೆ ಮೀರದಂತೆ ಪ್ರಬಂಧ ರಚಿಸಬೇಕು.
ಪದವಿ ಪೂರ್ವ ಶಿಕ್ಷಣ ವಿಭಾಗ :
1) ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ.
2) ದೇಶದ ಕಳಂಕವಾದ ಅಸ್ಪೃಶ್ಯತೆ ನಿವಾರಿಸುವಲ್ಲಿನ ಗಾಂಧೀಜಿಯವರ ಪ್ರಯೋಗಗಳು.
3) ಗಾಂಧೀಜಿಯವರನ್ನು ಜಗತ್ತು ಗ್ರಹಿಸಿದ ರೀತಿ.
4) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗ್ಗೆ.
ಹೀಗೆ ಯಾವುದಾದರೂ ಒಂದು ವಿಷಯವನ್ನು ಆಯ್ದುಕೊಂಡು ಸುಮಾರು 1500 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕು.
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗ :
1) ಇಂದಿನ ಪ್ರಜಾಪ್ರಭುತ್ವದಲ್ಲಿ ಸತ್ಯಾಗ್ರಹದ ಮಹತ್ವ.
2) ದೇಶ ನಿರ್ಮಾಣದಲ್ಲಿ ಗಾಂಧೀಜಿಯವರ ಜಾತ್ಯಾತೀತ ನಿಲುವುಗಳು.
3) ಗಾಂಧೀಜಿಯವರ ಧಾರ್ಮಿಕ ಸಹಿಷ್ಣುತೆ ಚಿಂತನೆ, ಸ್ವಾತಂತ್ರ್ಯ ಮತ್ತು ಸಮಾನತೆಯ ಪರಿಕಲ್ಪನೆಗಳು.
4) ಗಾಂಧೀಜಿಯವರ ವಿಚಾರದಲ್ಲಿ ಸತ್ಯದ ಪರಿಕಲ್ಪನೆ.
5) ಗಾಂಧೀಜಿಯವರು ಕಂಡ ಸ್ವರಾಜ್ಯ ಮತ್ತು ಆರ್ಥಿಕ ಚಿಂತನೆಗಳು ಈ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 2000 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕು.
ವಿದ್ಯಾರ್ಥಿಗಳು ತಮಗೆ ಸಂಬಂಧಪಟ್ಟ ವಿಭಾಗದ ವಿಷಯಗಳಲ್ಲಿ ಸೆಪ್ಟೆಂಬರ್ 10 ರೊಳಗಾಗಿ ತಮ್ಮ ಶಾಲಾ ಕಾಲೇಜುಗಳಲ್ಲಿ ನಡೆಸಲಾಗುವ ಪ್ರಬಂಧ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ಮುಖ್ಯಸ್ಥರನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.