ಬೆಂಗಳೂರು, ಸೆ.1 www.bengaluruwire.com : ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವೃಷಭಾವತಿನಗರ ಹಾಗೂ ಕಾಮಾಕ್ಷಿಪಾಳ್ಯದಲ್ಲಿ ಶಾಸಕರಾದ ಕೆ.ಗೋಪಾಲಯ್ಯರವರ ನೇತೃತ್ವದಲ್ಲಿ, ಬೃಹತ್ ಪ್ರಮಾಣದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುಮಾರು 2500 ಕ್ಕೂ ಹೆಚ್ಚು ಜನ ಈ ಶಿಬಿರದ ಪ್ರಯೋಜನವನ್ನು ಪಡೆದರು.
ನಾಗಪುರ ವಾರ್ಡಿನ ಶಾಸಕರ ಕಚೇರಿಯಲ್ಲಿ ಸ್ಥಳೀಯ ಶಾಸಕ ಕೆ.ಗೋಪಾಲಯ್ಯನವರು ಹಾಗೂ ಶ್ರೀ ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಜಯರಾಮ್ ಪೌಷ್ಟಿಕ ಆಹಾರ ಕಿಟ್ ಗಳನ್ನು ವಿತರಣೆ ಮಾಡಿದರು. ಪ್ರತಿಯೊಬ್ಬರಿಗೂ ನೀಡುವ ಪೌಷ್ಠಿಕ ಆಹಾರ ಕಿಟ್ ಗಳಲ್ಲಿ, ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ, ಅಡುಗೆ ಎಣ್ಣೆ, ರಾಗಿ ಹಿಟ್ಟು, 5 ರೀತಿಯ ಕಾಳುಗಳು, ಹಾಲಿನ ಪುಡಿಯ ಡಬ್ಬ, ಪಲ್ಮಾ ಕೇರ್ ಪೌಡರ್ ಮತ್ತು ಮಾಸ್ಕ್ ಗಳನ್ನು ಒಳಗೊಂಡಿದ್ದವು.
ಶಾಸಕರಾದ ಗೋಪಾಲಯ್ಯರವರು ರೋಗಿಗಳನ್ನು ಕುರಿತು ಮಾತನಾಡಿ, ಕಳೆದ 29 ತಿಂಗಳುಗಳಿಂದ ಪೌಷ್ಠಿಕ ಆಹಾರ ಕಿಟ್ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇದುವರೆಗೂ 645ಕ್ಕೂ ಹೆಚ್ಚು ಕ್ಷಯರೋಗಿಗಳು ಪೌಷ್ಠಿಕಾಂಶ ಆಹಾರ ಕಿಟ್ ಮತ್ತು ಔಷಧಿಗಳನ್ನು ತೆಗೆದುಕೊಂಡು ಸಂಪೂರ್ಣ ಗುಣಮುಖರಾಗಿದ್ದಾರೆ. ಆದ್ದರಿಂದ, ಪೌಷ್ಠಿಕ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಉಪಯೋಗಿಸಿ ಖಾಯಿಲೆ ವಾಸಿ ಮಾಡಿಕೊಳ್ಳುವಂತೆ ಹಾಗೂ ಧೈರ್ಯದಿಂದ ಇರುವಂತೆ ಸಲಹೆ ನೀಡಿದರು.
ಶ್ರೀ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್, ಮತ್ತು ಲಯನ್ಸ್ ಇಂಟರ್ನ್ಯಾಷನಲ್, ಮಾತೃ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಬಸವೇಶ್ವರನಗರ ಅಪೋಲೋ ಆಸ್ಪತ್ರೆ, ವೈಷ್ಣವಿ ಲಯನ್ಸ್ ಕ್ಲಬ್, ಮೋದಿ ಕಣ್ಣಿನ ಆಸ್ಪತ್ರೆ, ಕರ್ನಾಟಕ ಕ್ಯಾನ್ಸರ್ ಸೊಸೈಟಿ ಇವರುಗಳ ಸಹಯೋಗದೊಂದಿಗೆ ಶಿಬಿರವನ್ನು ನಡೆಸಲಾಯಿತು.
ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ವಿಶೇಷವಾಗಿ ರಕ್ತದೊತ್ತಡ, ಡಯಾಬಿಟೀಸ್, ಲಿವರ್ ಫಂಕ್ಷನ್, ಥೈರಾಯ್ಡ್, ಮೂಳೆ ದಂತ, ಸ್ತ್ರೀರೋಗ, ಇನ್ನಿತರ ಖಾಯಿಲೆಗಳ ಪರೀಕ್ಷೆ ನಡೆಸಿ ರೋಗಿಗಳಿಗೆ ಮಾಡಿ ಉಚಿತ ಔಷಧಿ ವಿತರಿಸಲಾಯಿತು. ವಿಶೇಷವಾಗಿ ಸ್ತನ ಕ್ಯಾನ್ಸರ್ ಕಾಯಿಲೆಯ ತಪಾಸಣೆ ನಡೆಸಿ ಸಲಹೆ ಮತ್ತು ಔಷಧಿ ನೀಡಲಾಯಿತು. ಕಣ್ಣಿನ ದೋಷ ಇರುವವರಿಗೆ ಆಧುನಿಕ ತಂತ್ರಜ್ಞಾನದಲ್ಲಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ವ್ಯವಸ್ಥೆಯನ್ನು ಕಲ್ಪಿಸಲಾಯಿತು ಎಂದು ಶಾಸಕ ಕೆ.ಗೋಪಾಲಯ್ಯ ಹೇಳಿದರು.
ಮಾತೃ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಮಹೇಂದ್ರ ರವರು ಶಾಸಕರ ಪುತ್ರರಾದ ಡಾ.ಜಿ ಮಂಜುನಾಥ್ ಗೌಡ, ಡಾ. ಜಿ.ಸಂಜಯ್ ಗೌಡರವರು, ಬಿಬಿಎಂಪಿ ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡಿದ್ದರು. ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ, ಶ್ರೀ ಮಹಾಲಕ್ಷ್ಮಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಜಯರಾಮ್, ಖಜಾಂಚಿ ವೆಂಕಟೇಶ್ ರವರು, ಲಯನ್ ಎನ್ ಮೋಹನ್ ಕುಮಾರ್, ಕ್ಷೇತ್ರದ ಸ್ಥಳೀಯ ಮುಖಂಡರುಗಳಾದ ಡಿ ಶಿವಣ್ಣ, ವೆಂಕಟೇಶ್ ಮೂರ್ತಿ, ಶಿವಾನಂದಮೂರ್ತಿ, ನಿಸರ್ಗ ಜಗದೀಶ್, ಮಂಜುನಾಥ್, ಸ್ವಾಮಿ ಮತ್ತು ಕಾರ್ಯಕರ್ತರು ಶಿಬಿರದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಸ್ವಯಂ ಸೇವೆ ಸಲ್ಲಿಸಿದರು.