ಬೀದರ್ ಆ.31 www.bengaluruwire.com : ಭಾರತೀಯ ವಾಯುಪಡೆ ಬೀದರಿನ ಸೂರ್ಯಕಿರಣ ಏರೋಬ್ಯಾಟಿಕ್ ಟೀಂ ನಿಂದ ಬೀದರ ಕೋಟೆಯ ಮೇಲೆ ಶುಕ್ರವಾರ ಆಕರ್ಷಕ ಏರ್ ಶೋ ನಡೆಯಿತು.
ಸೂರ್ಯಕಿರಣ ಟೀಂ ಲೀಡರ್ ಗ್ರೂಪ್ ಕ್ಯಾಪ್ಟನ್ ಗುರುಪ್ರಿತ್ ಸಿಂಗ್ ದಿಲ್ಲೋನ್ ನೇತೃತ್ವದಲ್ಲಿ ನಡೆದ ಏರ್ ಶೋ ಕಾರ್ಯಕ್ರಮದಲ್ಲಿ 9 ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ಮೇಲ್ಮುಖ, ಕೆಳಮುಖ, ಸುತ್ತುತ್ತಾ, ಪರಸ್ಪರ ವಿರುದ್ಧ ದಿಕ್ಕಿನಲ್ಲಿ, ಹೀಗೆ ವಿವಿಧ ರೀತಿಯಲ್ಲಿ ಸಾಗಿ ಬಾನಲ್ಲಿ ರಾಷ್ಟ್ರೀ ಧ್ವಜ ಕೇಸರಿ, ಬಿಳಿ, ಹಸಿರು ಬಣ್ಣಗಳು ಹಾಗೂ ಹೃದಯದ ಚಿತ್ರಗಳನ್ನು ಬಿಡಿಸಿ ಆಕರ್ಷಕ ಪ್ರದರ್ಶನ ನೀಡುವ ಮೂಲಕ ನೋಡುಗರನ್ನು ಮಂತ್ರಮುಗ್ದರನ್ನಾಗಿಸಿದವು.
ಕೆಲವೊಂದು ಸಲ ಏರೋಬ್ಯಾಟಿಕ್ ತಂಡ ವಿಮಾನಗಳು ಒಂಟಿಯಾಗಿ, ಕೆಲವೊಮ್ಮೆ ಜೋಡಿಯಾಗಿ ಮತ್ತು ತಂಡವಾಗಿ ಬರುತ್ತಿದ್ದ ವಿಮಾನಗಳು ಕ್ಷಣಮಾತ್ರದಲ್ಲಿ ಬೀದರ್ ಲೋಟೆಯ ಮೇಲೆ ಹಾರಿ ಕಣ್ಮರೆಯಾಗಿ ಪುನಃ ಅತೀವ ವೇಗದಲ್ಲಿ ಆಗಮಿಸಿ ಮುಗಿಲಿನಲ್ಲಿ ಚಿತ್ತಾರ ಮೂಡಿಸಿದವು. ಇವುಗಳನ್ನು ಅಲ್ಲಿ ನೆರೆದಿದ್ದ ಜನರು ತಮ್ಮ ಮೊಬೈಲ್, ಕ್ಯಾಮರಾದಲ್ಲಿ ಸೆರೆ ಹಿಡಿದು ಖುಷಿಪಟ್ಟರು. ಆಕಾಶದಲ್ಲಿ ಯಾವ ದಿಕ್ಕಿನಿಂದ ವಿಮಾನಗಳು ಬರುತ್ತಿವೆ ಎನ್ನುವುದನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದರು.
1996 ರಲ್ಲಿ ಆರಂಭಿಸಲಾದ ಸೂರ್ಯಕಿರಣ ಏರೋಬ್ಯಾಟಿಕ್ ಟೀಂ ವಿಮಾನಗಳು ಇಲ್ಲಿಯವರೆಗೆ ಭಾರತ ಮಾತ್ರವಲ್ಲದೆ ಶ್ರೀಲಂಕಾ, ಸಿಂಗಾಪುರ್, ದುಬೈ ಸೇರಿದಂತೆ ಇತರೆ ದೇಶಗಳಲ್ಲಿ 600 ಕ್ಕಿಂತಲೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದೆ. 9 ವಿಮಾನಗಳ ಈ ಏರಕ್ರಾಪ್ಟ್ ಟೀಂ ಇಡೀ ಏಷ್ಯಾ ಖಂಡದಲ್ಲಿಯೆ ಭಾರತದಲ್ಲಿ ಮಾತ್ರ ಇರುವುದು. ಈ ಲೋಹದ ಹಕ್ಕಿಗಳು ಆಕಾಶದಲ್ಲಿ ಆಕರ್ಷಕ ಪ್ರದರ್ಶನ ನೀಡುವ ಮೂಲಕ ಜನರನ್ನು ಮಂತ್ರಮುಗ್ದರನ್ನಾಗಿಸುತ್ತವೆ.
ಇಂದೂ ಕೂಡ (ಆ.31) ಬೀದರ ಕೋಟೆಯ ಮೇಲೆ ಏರ್ ಶೋ ಕಾರ್ಯಕ್ರಮ ನಡೆಯಲಿದ್ದು. ಬೀದರ ನಗರದ ಎಲ್ಲಾ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸರಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ಈ ಏರ್ ಶೋ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು ಮಧ್ಯಾಹ್ನ 3 ಗಂಟೆಗಳ ಒಳಗೆ ಬೀದರ ಕೋಟೆಯ ಒಳಗಡೆ ನಿಗಧಿತ ಸ್ಥಳದಲ್ಲಿ ಹಾಜರಿದ್ದು ಈ ಏರ್ ಶೋ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಏರ್ ಶೋ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಬೀದರ ನಗರದ ಸಾರ್ವಜನಿಕರು ಕುಟುಂಬ ಸಮೇತವಾಗಿ ಆಗಮಿಸಿ ವೀಕ್ಷಿಸಿದರು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.