ಬೆಂಗಳೂರು, ಆ.30 www.bengaluruwire.com : ಇಂದಿರಾ ನಗರದ ಜನನಿಬಿಡ 100 ಅಡಿ ಮುಖ್ಯ ರಸ್ತೆಯಲ್ಲಿ 4 ಕಾರುಗಳ ಕಿಟಕಿ ಗಾಜು ಒಡೆದು ದುಷ್ಕರ್ಮಿಗಳು ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತು, ಲ್ಯಾಪ್ ಟಾಪ್ ಮತ್ತು ಮೂರು ಬ್ಯಾಗ್ ಗಳನ್ನು ಕಳ್ಳತನ ಮಾಡಿದ್ದಾರೆ. ಈ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳೆದ ಗುರುವಾರ ರಾತ್ರಿ 7.30ರ ಸಂದರ್ಭದಲ್ಲಿ ಇಂದಿರಾನಗರದ ಮುಖ್ಯರಸ್ತೆಯಲ್ಲಿನ ಗ್ಲೋಬಲ್ ದೇಸಿ ಸ್ಟೋರ್ ಮತ್ತು ವೆಸ್ಟ್‌ಸೈಡ್ ಬಳಿ ಈ ದುಷ್ಕೃತ್ಯ ನಡೆದಿದೆ. ಕಳ್ಳರ ಈ ಹೈಟೆಕ್ ಕಳ್ಳತನದ ಬಗ್ಗೆ ಕಾರಿನಲ್ಲಿ ಕಳುವಾದ ವಸ್ತುವಿನ ಮಾಲೀಕರೆನ್ನಲಾದ ಸೂರ್ಯ ಎಂಬುವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕೃತ್ಯದ ವಿವರವನ್ನು ಹಂಚಿಕೊಂಡಿದ್ದಾರೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
“ಆಗಸ್ಟ್ 22 ರಂದು, ರಾತ್ರಿ 7:30 ರ ಸುಮಾರಿಗೆ, ಗ್ಲೋಬಲ್ ದೇಸಿ ಸ್ಟೋರ್ ಮತ್ತು ವೆಸ್ಟ್‌ಸೈಡ್ ಬಳಿ ಜನನಿಬಿಡ ಇಂದಿರಾ ನಗರ ಮುಖ್ಯ 100 ಅಡಿ ರಸ್ತೆಯಲ್ಲಿ 4 ಕಾರುಗಳು ಡಿಕ್ಕಿ ಹೊಡೆದವು. ಎಲ್ಲಾ 4 ಕಾರುಗಳ ಗಾಜುಗಳನ್ನು ಒಡೆದ ಕಳ್ಳರು, ಲ್ಯಾಪ್‌ಟಾಪ್‌ಗಳು ಮತ್ತು ಬೆಲೆಬಾಳುವ ವಸ್ತುಗಳನ್ನು 3 ಬ್ಯಾಗ್‌ಗಳನ್ನು ದೋಚಿದ್ದಾರೆ. ಬಲಿಯಾದವರಲ್ಲಿ ನಾನೂ ಒಬ್ಬ.”
“ಸಿಸಿಟಿವಿ ದೃಶ್ಯಾವಳಿಗಳು ಎಲ್ಲವನ್ನೂ ತೋರಿಸುತ್ತವೆ. ಕಿಟಕಿಗಳನ್ನು ಸದ್ದಿಲ್ಲದೆ ಒಡೆಯಲು ಒಬ್ಬ ವ್ಯಕ್ತಿ ವಿಶೇಷ ಸಾಧನವನ್ನು ಬಳಸುತ್ತಾನೆ (ಪೊಲೀಸರು ಇದು ಸಾಮಾನ್ಯವೆಂದು ಹೇಳುತ್ತಾರೆ). ಇನ್ನೊಬ್ಬ ಅಪರಿಚಿತ ವ್ಯಕ್ತಿ ಭದ್ರತಾ ಸಿಬ್ಬಂದಿಯ ಗಮನವನ್ನು ಬೇರೆಡೆಗೆ ಸೆಳೆಯುತ್ತಾನೆ. ಅವರು ಕಾರಿನಲ್ಲಿರುವ ಬ್ಯಾಗ್ ಗಳನ್ನು ಕದ್ದು ಅಲ್ಲಿಂದ ಹೊರಡುತ್ತಾರೆ. ಎಲ್ಲಾ ಜನನಿಬಿಡ ಬೀದಿಯಲ್ಲಿ ನಡೆದು ಹೋಗುತ್ತದೆ”
“ಇದೇ ಮೊದಲಲ್ಲ ಮೇಲ್ನೋಟಕ್ಕೆ ಇದೇ ರಸ್ತೆಯಲ್ಲಿ ಈ ಹಿಂದೆಯೂ ಇದೇ ರೀತಿಯ ಕಳ್ಳತನ ನಡೆದಿತ್ತು. ಬೆಂಗಳೂರಿನ ರಸ್ತೆಗಳು ದಿನದಿಂದ ದಿನಕ್ಕೆ ಸುರಕ್ಷತೆ ಕಡಿಮೆಯಾಗಿದೆ. ಹೀಗಾಗಿ ಕಾರಿನಲ್ಲಿ ಯಾವುದೇ ರೀತಿಯ ಬೆಲೆ ಬಾಳುವ ವಸ್ತುಗಳನ್ನು ಇಡಬೇಡಿ. ಪೊಲೀಸರಿಂದ ತ್ವರಿತ ಕ್ರಮದ ಅಗತ್ಯವಿದೆ! ದಯವಿಟ್ಟು ತನಿಖೆ ನಡೆಸಿ ಈ ಕಳ್ಳರನ್ನು ಮತ್ತೆ ಕಳ್ಳತನ ಮಾಡುವ ಮೊದಲು ತಡೆಯಲು ಕ್ರಮ ಕೈಗೊಳ್ಳಿ” ಎಂದು ಸೂರ್ಯ ಎಂಬುವರು ಪೋಸ್ಟ್ ಮಾಡಿದ್ದಾರೆ.
ಈ ರೀತಿಯ ಕೃತ್ಯಗಳು ಪದೇ ಪದೇ ನಡೆಯುತ್ತಿದ್ದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ದಿನೇ ದಿನೇ ಬೆಂಗಳೂರು ಅಸುರಕ್ಷಿತ ನಗರವಾಗುತ್ತಿದೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.