ಮುಂಬೈ, ಆ.30 www.bengaluruwire.com : ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಉದ್ಯಮಿ ಗೌತಮ್ ಅದಾನಿ ಅಗ್ರಪಟ್ಟಕ್ಕೇರಿದ್ದಾರೆ. ಈ ನಡುವೆ ಭಾರತದಲ್ಲಿ ಶತಕೋಟ್ಯಾಧಿಪತಿಗಳಾಗಿರುವ ಕುಬೇರರ ಸಂಖ್ಯೆ 334ಕ್ಕೆ ತಲುಪಿದೆ ಎಂದು ಹುರುನ್ ಇಂಡಿಯಾ ಬಿಡುಗಡೆ ಮಾಡಿರುವ 2024ರ ಭಾರತದ ಶ್ರೀಮಂತರ ಪಟ್ಟಿಯಲ್ಲಿ ತಿಳಿಸಿದೆ.
ಸಿರಿವಂತರ ರ್ಯಾಂಕಿಂಗ್ ಪಟ್ಟಿಯಲ್ಲಿ 11.61 ಕೋಟಿ ರೂ.ಮೌಲ್ಯದ ಸಂಪತ್ತು ಹೊಂದಿರುವ ಗೌತಮ್ ಅದಾನಿ ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಭಾರತದ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. 2020ರಲ್ಲಿ ಗೌತಮ್ ಅದಾನಿ ನಾಲ್ಕನೇ ಸ್ಥಾನದಲ್ಲಿದ್ದರು.
ಮುಕೇಶ್ ಅಂಬಾನಿ ಸದ್ಯ 10.14 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಶಿವನಾಡರ್ ಹೆಚ್.ಸಿ.ಎಲ್. 3.14 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, ಸೈರಸ್ ಪೂನಾವಾಲಾ 2.89 ಲಕ್ಷ ಕೋಟಿ ರೂ., ದಿಲೀಪ್ ಸಾಂಘ್ವಿ 2.49 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದಾರೆ.
ಭಾರತದಲ್ಲಿ ಶತಕೋಟ್ಯಾಧೀಶರ ಸಂಖ್ಯೆ 334ಕ್ಕೆ ಏರಿಕೆಯಾಗಿದೆ. ಇವೆರಲ್ಲರ ಒಟ್ಟು ಸಂಪತ್ತು ₹159 ಲಕ್ಷ ಕೋಟಿಯಾಗಿದೆ. ಇದು ದೇಶದ ಜಿಡಿಪಿ ಗಾತ್ರದ ಅರ್ಧಕ್ಕಿಂತಲೂ ಹೆಚ್ಚಿನದ್ದಾಗಿದೆ. 2023ರಲ್ಲಿ ಭಾರತದಲ್ಲಿ ಐದು ದಿನಕೊಬ್ಬರು ಶತಕೋಟ್ಯಾಧಿಪತಿಗಳ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದಾರೆ. ಈ ವರ್ಷ ದೇಶದ ಅತಿ ಹೆಚ್ಚು ಸಂಪತ್ತು ಉಳ್ಳವರ ಸಂಖ್ಯೆ 220 ರಿಂದ 1539ಕ್ಕೆ ತಲುಪಿದೆ. ಇವರಲ್ಲಿ 272 ಮಂದಿ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಸ್ಥಾನ ಹೊಂದಿದ್ದಾರೆ. ಗಮನಾರ್ಹವಾಗಿ, ಪಟ್ಟಿಯು 1,500 ಪ್ರವೇಶಗಳನ್ನು ಮೀರಿದ್ದು ಇದೇ ಮೊದಲ ಬಾರಿಗೆ. ಕಳೆದ ಐದು ವರ್ಷಗಳಲ್ಲಿ ಶ್ರೀಮಂತರ ಸಂಖ್ಯೆ ಶೇ.86 ರಷ್ಟು ಜಿಗಿತವಾಗಿದೆ.
ಇದನ್ನೂ ಓದಿ : Krishna Temples | ಶ್ರೀ ಕೃಷ್ಣನ ಪ್ರಧಾನ 10 ದೇವಸ್ಥಾನಗಳು ಯಾವುದು? ಈ ಪೈಕಿ ನೀವೆಷ್ಟು ದೇವಾಲಯ ನೋಡಿದ್ದೀರಾ?
ಕುಟುಂಬ ನಡೆಸುವ ವ್ಯವಹಾರಗಳು ಮತ್ತು ಆರಂಭಿಕ ಸಂಸ್ಥಾಪಕರಿಂದ ಹಿಡಿದು ಖಾಸಗಿ ಇಕ್ವಿಟಿ ಹೂಡಿಕೆದಾರರು, ಏಂಜೆಲ್ ಹೂಡಿಕೆದಾರರು, ಮುಂದಿನ ಪೀಳಿಗೆಯ ನಾಯಕರು ಮತ್ತು ಚಲನಚಿತ್ರ ತಾರೆಯರು, ಹೀಗೆ ಭಾರತದ ಶ್ರೀಮಂತರ ಪಟ್ಟಿಯು ವೈವಿಧ್ಯಮಯ ಸಂಪತ್ತು ಸೃಷ್ಟಿಕರ್ತರನ್ನು ಹೊಂದಿದೆ.
ಶ್ರೀಮಂತರ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ಬಿಲಿಯನೇರ್ ಕೈವಲ್ಯ ವೋಹ್ರಾ, ಇವರ ವಯಸ್ಸು 21. ವೋಹ್ರಾ ಜೆಪ್ಟೊ (Zepto) ನ ಸಹ-ಸಂಸ್ಥಾಪಕ. ಈ ಸಂಸ್ಥೆಯು $5 ಬಿಲಿಯನ್ ಸ್ಟಾರ್ಟ್ಅಪ್ ಆಗಿದೆ. ಜೆಪ್ಟೋ ಸಹ-ಸಂಸ್ಥಾಪಕರಾದ ಆದಿತ್ ಪಲಿಚಾ ಅವರು 22 ವರ್ಷ ವಯಸ್ಸಿನವರಾಗಿದ್ದು, ಪಟ್ಟಿಯಲ್ಲಿ ಎರಡನೇ ಕಿರಿಯವರಾಗಿದ್ದಾರೆ. ದೇಶದಲ್ಲಿ ಒಂದು ಲಕ್ಷ ಕೋಟಿ ರೂ ಮೌಲ್ಯವನ್ನು ಹೊಂದಿದ 8 ಶ್ರೀಮಂತರಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಬಿಲಿಯನೇರ್ ಗಳು ಇರುವ ನಗರಗಳಲ್ಲಿ ಮುಂಬೈ ಪ್ರಥಮ ಸ್ಥಾನದಲ್ಲಿದೆ.