ನವದೆಹಲಿ, ಆ.29 www.bengaluruwire.com : ದೇಶದ ಕಡಲ ತೀರದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ಬಂದಿದೆ. ಭಾರತೀಯ ನೌಕಾಪಡೆಯ ಎರಡನೇ ಪರಮಾಣು ಸಿಡಿತಲೆ ಕ್ಷಿಪಣಿ ಆಧಾರಿತ ಜಲಾಂತರ್ಗಾಮಿ ಎಸ್‌ಎಸ್‌ಬಿಎನ್ (ಹಡಗು, ಜಲಂತರ್ಗಾಮಿ, ಸ್ಪೋಟಕ, ಪರಮಾಣು) ಐಎನ್‌ಎಸ್ ಅರಿಘಾಟ್ (INS Arighat) ಬಹುಪಯೋಗಿ ಹಡಗು ದೇಶದ ಸೇವೆಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ.
ಎಸ್-3 ಎಂದೂ ಕರೆಯಲ್ಪಡುವ, ಐಎನ್ಎಸ್ ಅರಿಘಾಟ್ ಭಾರತದ ಮೊದಲ ಐಎನ್ಎಸ್ ಅರಿಹಂತ್ ಸುಧಾರಿತ ಆವೃತ್ತಿಯಾಗಿದೆ. ವಿಶಾಖಪಟ್ಟಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಐಎನ್ಎಸ್ ಅರಿಘಾಟ್ ಜಲಂತರ್ಗಾಮಿ ನೌಕೆಯನ್ನು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇವೆಗೆ ನಿಯೋಜಿಸಲಾಗಿದೆ.
ಐಎನ್ಎಸ್ ಅರಿಘಾಟ್ ಸಾಮರ್ಥ್ಯ ಹಾಗೂ ವಿಶೇಷತೆಗಳೇನು ? :
ಐಎನ್ಎಸ್ ಅರಿಘಾಟ್ ಜಲಾಂತರ್ಗಾಮಿ ನೌಕೆಯಾದ ಅರಿಹಂತ್ ವರ್ಗದ ಸ್ಥಳೀಯ ಪರಮಾಣು ಜಲಾಂತರ್ಗಾಮಿ ನೌಕೆಗಳ ಎರಡನೇ ಆವೃತ್ತಿ ಇದಾಗಿದೆ. 2009 ರಲ್ಲಿ ಸೇರ್ಪಡೆಗೊಂಡು ಅಸ್ತಿತ್ವದಲ್ಲಿರುವ ಐಎನ್ಎಸ್ ಅರಿಹಂತ್ ಅನ್ನು ಇದು ಬೆಂಬಲಿಸುತ್ತದೆ. ಹಿಂದೂಸ್ಥಾನ್ ವರದಿಯ ಪ್ರಕಾರ, ಐಎನ್ಎಸ್ ಅರಿಘಾಟ್ ಸಮುದ್ರ ಮೇಲ್ಮೈಯಲ್ಲಿ ಗರಿಷ್ಠ 12-15 ನಾಟಿಕಲ್ (22-28 ಕಿ.ಮೀ/ಪ್ರತಿ ಗಂಟೆಗೆ) ವೇಗವನ್ನು ತಲುಪಬಹುದು ಮತ್ತು ಜಲಂತರ್ಗಾಮಿಯಾಗಿ ಮುಳುಗಿದಾಗ 24 ನಾಟಿಕಲ್ ವೇಗದಲ್ಲಿ (44 ಕಿ.ಮೀ/ಪ್ರತಿ ಗಂಟೆಗೆ) ಸಾಗಲಿದೆ. ಐಎನ್ಎಸ್ ಅರಿಹಂತ್‌ನಂತೆಯೇ, ಐಎನ್ಎಸ್ ಅರಿಘಾಟ್ ತನ್ನ ತೆಕ್ಕೆಯಲ್ಲಿ ನಾಲ್ಕು ಉಡಾವಣಾ ಟ್ಯೂಬ್‌ಗಳನ್ನು ಹೊಂದಿದೆ ಮತ್ತು 3,500 ಕಿಲೋಮೀಟರ್‌ಗಳಷ್ಟು ದೂರ ಕ್ರಮಿಸುವ ನಾಲ್ಕು ಪರಮಾಣು ಸಾಮರ್ಥ್ಯದ ಕೆ-4 ಎಸ್ಎಲ್ ಬಿಎಂ (K-4 Submarine Launched Ballistic Missiles -SLBM)ಗಳನ್ನು ಅಥವಾ 750 ಕಿ.ಮೀ ದೂರದವರೆಗೆ ಕ್ರಮಿಸುವ ಹನ್ನೆರಡು K-15 SLBM ಕ್ಷಿಪಣಿಗಳನ್ನು ಸಾಗಿಸಬಲ್ಲದು.
2017 ರಲ್ಲಿ ವಿಶಾಖಪಟ್ಟಣಂನ ಶಿಪ್ ಬಿಲ್ಡಿಂಗ್ ಸೆಂಟರ್ (ಎಸ್‌ಬಿಸಿ) ಯಲ್ಲಿ ಉಡಾವಣೆಯಾದಾಗಿನಿಂದ ನಿರ್ಮಾಣ ಮತ್ತು ಪರೀಕ್ಷೆಯ ಹಂತದಲ್ಲಿರುವ ಐಎನ್‌ಎಸ್ ಅರಿಘಾಟ್ ಸಹ ಟಾರ್ಪಿಡೊಗಳಿಂದ ಶಸ್ತ್ರಸಜ್ಜಿತವಾಗಿರುತ್ತದೆ. (ಟಾರ್ಪಿಡೊ ಎಂಬುದು ಜಲಂತಾರ್ಗಾಮಿ ನೌಕೆಯಲ್ಲಿ ಬಳಸುವ ಆಯುಧವಾಗಿದ್ದು, ನೀರಿನ ಮೇಲ್ಮೈ ಮೇಲೆ ಅಥವಾ ಕೆಳಗೆ ಉಡಾವಣೆಯಾಗುವ ಹಾಗೂ ಗುರಿಯತ್ತ ಸ್ವಯಂ ಚಾಲಿತವಾಗಿ ಸಾಗುವ ಸಾಮರ್ಥ್ಯ ಹೊಂದಿರುತ್ತದೆ.) ಯುದ್ಧದ ಸನ್ನಿವೇಶಗಳಲ್ಲಿ ಶತ್ರು ಜಲಾಂತರ್ಗಾಮಿ ನೌಕೆಗಳು ಮತ್ತು ಮೇಲ್ಮೈ ಹಡಗುಗಳ ವಿರುದ್ಧ ಕಾದಾಡುವ ಸಾಮರ್ಥ್ಯ ಹೊಂದಿದೆ.
ಐಎನ್ಎಸ್ ಅರಿಘಾಟ್‌ನ ಸೇರ್ಪಡೆಯೊಂದಿಗೆ, ಭಾರತವು ಎರಡು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದಂತಾಗಿದೆ. ಒಂದು ಐಎನ್ಎಸ್ ಅರಿಹಂತ್ (S-2) ಮತ್ತು ಐಎನ್ಎಸ್ ಅರಿಘಾಟ್ (ಏ-3). ಈ ನೌಕೆಗಳು ಸಾಗರಗಳಲ್ಲಿ ಸಕ್ರಿಯವಾಗಿ ಗಸ್ತು ತಿರುಗುತ್ತದೆ. ಭಾರತವು ಈಗಾಗಲೇ ಅಗ್ನಿ ಸರಣಿಯಂತಹ ಭೂ ಆಧಾರಿತ ಪರಮಾಣು ಕ್ಷಿಪಣಿಗಳನ್ನು ಮತ್ತು ವಾಯು ಉಡಾವಣಾ ನ್ಯೂಕ್ಲಿಯರ್ ಮಿಸೈಲ್ ಸಾಮರ್ಥ್ಯವನ್ನು ಹೊಂದಿರುವುದರಿಂದ, ನೂತನ ಎಸ್ಎಸ್ ಬಿಎನ್ ಜಲಂತರ್ಗಾಮಿ ನೌಕೆಯ ಸೇರ್ಪಡೆಯಿಂದ ಭಾರತ ಭೂ, ವಾಯು ಹಾಗೂ ಜಲಮಾರ್ಗಗಳಲ್ಲಿ ಪರಮಾಣು ತ್ರಿಕೋನವನ್ನು ಹೊಂದಿದಂತಾಗಿದೆ.
ನೌಕಾಪಡೆಯ ಭವಿಷ್ಯದ ಯೋಜನೆ ಹಾಗೂ ಕಾರ್ಯತಂತ್ರ :
ಇಂಡೋ ಪೆಸಿಫಿಕ್‌ನ ಹೃದಯಭಾಗದಲ್ಲಿರುವ ಭಾರತದ ಕಾರ್ಯತಂತ್ರದ ಭಾಗವಾಗಿ ಎರಡು ಎಸ್ಎಸ್ ಬಿಎನ್ ನೌಕೆಗಳು ಸಮುದ್ರ ಪ್ರದೇಶದಲ್ಲಿ ಗಣನೀಯ ಹತೋಟಿಯನ್ನು ಸಾಧಿಸಲಿದೆ. ದೇಶದ ಕಡಲ ಹಿತಾಸಕ್ತಿಗಳಿಗೆ ಸವಾಲು ಹಾಕಲು ಪ್ರಯತ್ನಿಸುವ ಯಾವುದೇ ನೌಕಾ ಪಡೆಗಳಿಗೆ ಘಾತಕವಾಗಿ ಈ ನೌಕೆಗಳು ಕಾರ್ಯನಿರ್ವಹಿಸುತ್ತವೆ. ಐಎನ್ಎಸ್ ಅರಿಹಂತ್ ವರ್ಗದ ಎರಡೂ ಜಲಾಂತರ್ಗಾಮಿ ನೌಕೆಗಳು ಸ್ವದೇಶಿ ಪರಮಾಣು ರಿಯಾಕ್ಟರ್‌ಗಳಿಂದ ಕೂಡಿದ ಹಾಗೂ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಪರಮಾಣು ಕ್ಷಿಪಣಿಗಳನ್ನು ಹೊಂದಿವೆ. ಐಎನ್ಎಸ್ ಅರಿಹಂತ್ ತಾಂತ್ರಿಕ ಪ್ರದರ್ಶಕರಾಗಿ ಸೇವೆ ಸಲ್ಲಿಸಿದರೆ, ಐಎನ್ಎಸ್ ಅರಿಘಾಟ್ ಹಿಂದಿನ ಎಲ್ಲಾ ತಾಂತ್ರಿಕ ಸವಾಲುಗಳನ್ನು ಮೆಟ್ಟಿನಿಂತು ಹೆಚ್ಚು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿನ ಹೊಸ ಆವೃತ್ತಿಯಾಗಿದೆ.
ಇದನ್ನೂ ಓದಿ : ನೀವು ಜಮೀನು, ನಿವೇಶನ, ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿಸುತ್ತಿದ್ದೀರಾ? ಗಮನಿಸಿ, ಈ ಎಲ್ಲಾ ಕಾನೂನು ದಾಖಲೆಗಳು ಮುಖ್ಯ
ಈ ನಿಟ್ಟಿನಲ್ಲಿ ಮುಂದೆ ಎಸ್ಎಸ್ ಬಿಎನ್ ಎಸ್-4 ಕಾರ್ಯಾರಂಭದ ನಂತರ, ಭಾರತವು ಹೊಸ ದರ್ಜೆಯ ಜಲಾಂತರ್ಗಾಮಿ ನೌಕೆಗಳ ನಿರ್ಮಾಣವನ್ನು ಪ್ರಾರಂಭಿಸಲು ಸಜ್ಜಾಗುತ್ತದೆ. ಅವು 3,000 ಕಿಲೋಮೀಟರ್‌ಗಳ ವ್ಯಾಪ್ತಿಯೊಂದಿಗೆ ಪರಮಾಣು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಕೊಂಡೊಯ್ಯುವ ಹಾಗೂ ಹೆಚ್ಚುವರಿ ಕ್ಷಿಪಣಿಯನ್ನು ಹೊಂದುವಷ್ಟು ದೊಡ್ಡ ಮಟ್ಟದಲ್ಲಿ ನೌಕೆ ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.