ಬೆಂಗಳೂರು, ಆ.28 www.bengaluruwire.com : ರಾಜಧಾನಿ ಬೆಂಗಳೂರಿನ ರೈಲ್ವೇ ಸ್ಟೇಷನ್ ಮೂಲಕ ತರುತ್ತಿದ್ದ ಮಾಂಸವು ನಾಯಿಮಾಂಸ ಅದಲ್ಲ ಬದಲಿಗೆ ಅದು ಕುರಿ ಮಾಂಸ. ಇದರ ಗುಣಮಟ್ಟದಲ್ಲೂ ಯಾವುದೇ ಸಮಸ್ಯೆಯಿರಲಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅವರು, ನಗರದ ಹೋಟೆಲ್ ಗಳಿಗೆ ನಾಯಿ ಮಾಂಸ ಪೂರೈಕೆ ಮಾಡಲಾಗುತ್ತಿದೆ ಎಂಬುದು ಕೇವಲ ವದಂತಿಯಾಗಿದೆ. ಇದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬಂತು. ಈ ರೀತಿ ಆರೋಪಗಳು ಕೇಳಿಬಂದ ಕೂಡಲೇ ಆಹಾರ ಸುರಕ್ಷತೆ ಇಲಾಖೆಯಿಂದ ಮೂರು ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಅದಲ್ಲದೆ ನಾಯಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಮಾಡಲಾದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಲಾಯಿತು. ಆಗ ಅದು ನಾಯಿ ಮಾಂಸವಲ್ಲ ಬದಲಿಗೆ ಕುರಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ ಎಂದು ಸಚಿವರು ಹೇಳಿದರು.
ಬೆಂಗಳೂರು ಹೊರವಲಯದಲ್ಲಿ ಕಲುಷಿತ ನೀರಿನಲ್ಲಿ ಸೊಪ್ಪು ಹಾಗೂ ತರಕಾರಿ ಬೆಳೆಯುವ ಪ್ರಕರಣವೂ ವರದಿಯಾಗಿತ್ತು. ಕಲುಷಿತ ನೀರಿನಲ್ಲಿ ಸೊಪ್ಪು, ತರಕಾರಿ ಬೆಳೆಯುವ ಪ್ರಕರಣ ಗಮನಕ್ಕೆ ಬಂದರೆ ಸಂಬಂಧಿಸಿದ ಇಲಾಖೆ ಜೊತೆಗೆ ಸೇರಿ ಕಡಿವಾಣ ಹಾಕುತ್ತೇವೆ. ಆದರೆ, ಕೋಲಾರ ಭಾಗದಲ್ಲಿ ಸಂಸ್ಕರಿಸಿದ ನೀರಿನಲ್ಲಿ ಬೆಳೆದ ತರಕಾರಿ ಸೊಪ್ಪುಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿಲ್ಲ. ತರಕಾರಿ ಹಾಗೂ ಸೊಪ್ಪುಗಳಲ್ಲಿ ಯಾವುದೇ ಅಸುರಕ್ಷಿತ ರಾಸಾಯನಿಕ ಅಂಶಗಳು ಇಲ್ಲವೆಂದು ಮಾಹಿತಿ ನೀಡಿದರು.
ಇನ್ನು ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್‌ಗಳಲ್ಲಿ (ಪಿಜಿಗಳಲ್ಲಿ) ಆಹಾರ ಗುಣಮಟ್ಟ ಸರಿಯಿಲ್ಲ ಎಂದು ದೂರುಗಳು ಬರ್ತಾಯಿದೆ. ಈ ಸಂಬಂದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟಿಂಗ್ ಕಿಟ್ ಆಳವಡಿಸಲು ಮುಂದಾಗಿದ್ದು ಸಾರ್ವಜನಿಕರೇ ಹೋಗಿ ಟೆಸ್ಟ್ ಮಾಡಬಹುದು. ಫುಡ್ ಕೋರ್ಟ್ , ಸಾರ್ವಜನಿಕರ ಸ್ಥಳಗಳಲ್ಲಿ ಈ ರೀತಿ ಟೆಸ್ಟಿಂಗ್ ಕಿಟ್ ಅಳವಡಿಸಲಾಗುತ್ತದೆ. ಅನುಮಾನ ಬಂದ ತಿಂಡಿಗಳನ್ನು ಅಲ್ಲೇ ನೇರವಾಗಿ ಟೆಸ್ಟ್ ಮಾಡಬಹುದು. ರಾಸಾಯನಿಕ ಬಳಕೆಯಂತಹ ಅನುಮಾನಗಳಿಗೆ ಉತ್ತರ ಕಂಡುಕೊಳ್ಳಬಹುದು ಎಂದು ಹೇಳಿದರು.
ಕಳೆದ ಬಾರಿ ಕೋವಿಡ್ ನಂತರ ಜಿಲ್ಲಾ ಆಸ್ಪತ್ರೆಗಳಲ್ಲಿ ಐಸೊಲೇಷನ್ ಬೆಡ್ ಗಳನ್ನು ಕಾಯ್ದಿರಿಸಲಾಗಿದೆ. ಮಂಕಿಪಾಕ್ಸ್ ಪ್ರಕರಣಗಳು ರಾಜ್ಯದಲ್ಲಿ ಕಂಡು ಬಂದಿಲ್ಲ. ಬೆಂಗಳೂರು ಮತ್ತು ಮಂಗಳೂರಿನ ಬಂದರುಗಳಲ್ಲಿ ವಿದೇಶಗಳಿಂದ ಬರುವವರನ್ನು ತಪಾಸಣೆಗೊಳಪಡಿಸಿ, ಶಂಕಿತ ಪ್ರಕರಣಗಳಲ್ಲಿ ಅವುಗಳನ್ನು ತಪಾಸಣೆಗೊಳಪಡಿಸಿ ರೋಗಲಕ್ಷಣಗಳು ಕಂಡು ಬಂದಲ್ಲಿ ಅಂತಹವರನ್ನು 21 ದಿನಗಳ ಕಾಲ ಕ್ವಾರಂಟೈನ್ ನಲ್ಲಿಡಲಾಗುತ್ತದೆ. ರೋಗಲಕ್ಷಣಗಳು ಕಡಿಮೆಯಾದ ನಂತರ ಅವರನ್ನು ಬಿಡುಗಡೆಮಾಡಲಾಗುತ್ತದೆ. ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಯನ್ನು ಇದಕ್ಕಾಗಿ ಕಾಯ್ದಿರಲಾಗಿದೆ. ಪಾಸಿಟಿವ್ ಪ್ರಕರಣಗಳಲ್ಲಿ ಮಾತ್ರ ಅವರ ಜೊತೆ ಸಂಪರ್ಕಿತರವನ್ನು ಪರಿಶೀಲನೆಗೊಳಪಡಿಸಲಾಗುತ್ತದೆ ಎಂದು ಮಾಧ್ಯಮವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಹಣ್ಣು ಮತ್ತು ತರಕಾರಿಗಳ 385 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ವಿಶ್ಲೇಷಿಸಲಾದ 266 ಮಾದರಿಗಳಲ್ಲಿ 239 ಮಾದರಿಗಳು ಸುರಕ್ಷಿತ ಎಂದು ಮತ್ತು 27 ಮಾದರಿಗಳು ಕ್ರಿಮಿನಾಶಕಗಳ ಶೇಷಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮತ್ತು ಫಂಗಸ್ ಬೆಳವಣಿಗೆ ಕಂಡುಬಂದಿರುವುದರಿಂದ ಅಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿಕೆ ಮಾದರಿಗಳ ವಿಶ್ಲೇಷಣಾ ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ ಎಂದರು.
ನಂತರ ಮಾತನಾಡಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್ ಮಾತನಾಡಿ, ಆಗಸ್ಟ್ ತಿಂಗಳಲ್ಲಿ ಪನ್ನೀರ್‌ನ 211 ಆಹಾರ ಮಾದರಿಗಳನ್ನು, ಕೇಕ್‌ನ 246 ಆಹಾರ ಮಾದರಿಗಳನ್ನು, ವಾದ 67 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದೆ. ವಿಶ್ಲೇಷಣಾ ವರದಿಗಳು ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು. ಇದಲ್ಲದೆ ಇದೇ ತಿಂಗಳ 30, 31ನೇ ತಾರೀಖುಗಳಂದು ಜಿಲ್ಲಾ ಕೇಂದ್ರಗಳು ಮತ್ತು ತಾಲ್ಲೂಕು ಕೇಂದ್ರಗಳಲ್ಲಿನ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳ ತಪಾಸಣೆ ಹಾಗೂ ರಾಜ್ಯಾದ್ಯಂತ ಮಾಂಸ, ಮೀನು ಮತ್ತು ಮೊಟ್ಟೆಗಳ ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲು ನಡೆಸುವ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಲೋಪಗಳು ಕಂಡುಬಂದಲ್ಲಿ ಕ್ರಮವಹಿಸಲಾಗುವುದು.
ಜುಲೈ ತಿಂಗಳಲ್ಲಿ 4 ಆಹಾರ ಉದ್ದಿಮೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಯನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅವುಗಳ ಪರವಾನಿಗೆಯನ್ನು ಅಮಾನತ್ತುಗೊಳಿಸಲಾಗಿದೆ. ಈ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ. ಇದುವರೆಗೆ ಆಹಾರ ಸುರಕ್ಷತೆ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ, ರಾಜ್ಯಾದ್ಯಂತ 106 ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದ್ದು, 34 ಪಕರಣಗಳಲ್ಲಿ 1 ದಿನದ ಜೈಲು ಶಿಕ್ಷೆಯನ್ನು 5 ಪ್ರಕರಣಗಳಲ್ಲಿ 5, 10, 30, 45 ಮತ್ತು 60 ದಿನಗಳ ಜೈಲು ಶಿಕ್ಷೆಯನ್ನು (ತಲಾ 1 ಪ್ರಕರಣ), 4 ಪ್ರಕರಣಗಳಲ್ಲಿ 90 ದಿನದ ಜೈಲು ಶಿಕ್ಷೆಯನ್ನು ಮತ್ತು 2 ಪ್ರಕಣಗಳಲ್ಲಿ 6 ತಿಂಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯನ್ನು ವಿಧಿಸಲಾಗಿರುತ್ತದೆ. ಇದಲ್ಲದೆ 18 ಪ್ರಕರಣಗಳಲ್ಲಿ ನ್ಯಾಯಾಲಯದಿಂದ ದಂಡವನ್ನು ವಿಧಿಸಲಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಇಲಾಖೆಯ ಎಲ್ಲಾ ಆಹಾರ ಸುರಕ್ಷತಾಧಿಕಾರಿಗಳಿಗೆ ಆನ್‌ಲೈನ್ ಮೂಲಕ ಸಲ್ಲಿಕೆಯಾಗುವ ಪರವಾನಿಗೆ ಅಥವಾ ನೋಂದಣಿ ಅರ್ಜಿಗಳನ್ನು ಶೀಘ್ರುಗತಿಯಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗುವಂತೆ ಮತ್ತು ತಪಾಸಣೆಯ ವಿವರಗಳನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಪಾರದರ್ಶಕವಾಗಿ ದಾಖಲಿಸಲು ಅನುಕೂಲವಾಗುವಂತೆ ಟ್ಯಾಬ್ ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಆಯುಕ್ತ ಶ್ರೀನಿವಾಸ್ ತಿಳಿಸಿದರು.