ಬೆಂಗಳೂರು, ಆ.28 www.bengaluruwire.com : ಪಶ್ಚಿಮ ಘಟ್ಟ ಪ್ರದೇಶಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಆಗಸ್ಟ್ 2ರಂದು ಹೊರಡಿಸಿರುವ 6ನೇ ಅಧಿಸೂಚನೆ (ಕಸ್ತೂರಿ ರಂಗನ್ ಸಮಿತಿ ವರದಿ)ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ, 10 ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ಚರ್ಚ ನಡೆಸಿ, ಸಂಪುಟಕ್ಕೆ ಅಭಿಪ್ರಾಯ ಮಂಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಸಚಿವರುಗಳಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ, ಮಾಂಕಾಳ್ ವೈದ್ಯ ಭಾಗಿಯಾಗಿ ಪರಿಸರ ಸೂಕ್ಷ್ಮ ಪ್ರದೇಶದ ಕುರಿತಂತೆ ಕೇಂದ್ರದ ಅಧಿಸೂಚನೆ ಒಪ್ಪಿಕೊಂಡರೆ ಪಶ್ಚಿಮಘಟ್ಟದ ಜನರ ಬದುಕಿನ ಮೇಲೆ ಆಗಬಹುದಾದ ಪರಿಣಾಮ, ಸಾಧಕ ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಈಶ್ವರ ಖಂಡ್ರೆ ಮಾತನಾಡಿ ಕಸ್ತೂರಿ ರಂಗನ್ ಸಮಿತಿ ವರದಿಯಲ್ಲಿ, ರಾಜ್ಯದ ಪಶ್ಚಿಮ ಘಟ್ಟದಲ್ಲಿ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವಂತೆ ಸೂಚಿಸಿದೆ. ಆದರೆ ಈಗಾಗಲೇ ರಾಜ್ಯ ಸರ್ಕಾರ ವನ್ಯಜೀವಿಧಾಮ, ಅಭಯಾರಣ್ಯ, ಹುಲಿ ಸಂರಕ್ಷಿತ ಮೀಸಲು ಸೇರಿದಂತೆ ವಿವಿಧ ಅರಣ್ಯ ಪ್ರದೇಶದಲ್ಲಿ 16632 ಚದರ ಕಿ.ಮೀ.ಪ್ರದೇಶವು ಘೋಷಿತ ಅರಣ್ಯ, ಸಂರಕ್ಷಿತ ಪ್ರದೇಶ ಮತ್ತು ಸಂರಕ್ಷಿತ ಪ್ರದೇಶಗಳಿಗೆ ಹೊಂದುಕೊಂಡಿರುವ ಪರಿಸರ ಸೂಕ್ಷ್ಮ ವಲಯ (ಇ.ಎಸ್.ಝಡ್) ಎಂದು ಘೋಷಿಸಲಾಗಿದೆ. ಈ ಎಲ್ಲ ಪ್ರದೇಶಗಳು ಸಂರಕ್ಷಿತವಾಗಿರುತ್ತದೆ. ಹೀಗಾಗಿ ಇದಕ್ಕಷ್ಟೇ ಸೀಮಿತಗೊಳಿಸಿ ಡಾ. ಕಸ್ತೂರಿ ರಂಗನ್ ಸಮಿತಿಯ ಶಿಫಾರಸಿನಂತೆ ಕೇಂದ್ರ ಸರ್ಕಾರ ಹೊರಡಿಸಿರುವ 6ನೇ ಅಧಿಸೂಚನೆಗೆ ಸರ್ಕಾರದ ನಿಲುವು ವ್ಯಕ್ತಪಡಿಸಲು ಸಚಿವ ಸಂಪುಟಕ್ಕೆ ಶಿಫಾರಸು ಮಾಡಬಹುದು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಶ್ಚಿಮ ಘಟ್ಟ ಪ್ರದೇಶದಲ್ಲಿ 1533 ವಸತಿ ಪ್ರದೇಶಗಳಿದ್ದು, ಇಲ್ಲಿರುವ ಜನರ ಬದುಕಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ನಿರ್ದಿಷ್ಟ ಷರತ್ತುಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರಕ್ಕೆ ಸೆಪ್ಟೆಂಬರ್ ಅಂತ್ಯದೊಳಗೆ ರಾಜ್ಯದ ನಿಲುವು ತಿಳಿಸಬೇಕಾಗುತ್ತದೆ. ಅಂತಿಮವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಂತರ ಪಶ್ಚಿಮಘಟ್ಟದ 10 ಜಿಲ್ಲೆಗಳ ಜನಪ್ರತಿನಿಧಿಗಳ ಅಭಿಪ್ರಾಯಪಡೆದು ಸಚಿವ ಸಂಪುಟಕ್ಕೆ ಅಂತಿಮ ಶಿಫಾರಸು ಸಲ್ಲಿಸಲು ತೀರ್ಮಾನಿಸಲಾಯಿತು.