ಬೆಂಗಳೂರು, ಆ.27 www.bengaluruwire.com : ಕಾಮಗಾರಿ ಗುತ್ತಿಗೆಯಲ್ಲಿ, ಟೆಂಡರ್ ಮೂಲಕ ನಿರ್ವಹಿಸಿದ ಕಾಮಗಾರಿಗಳಿಗೆ ಹಣ ಪಾವತಿಸಲು ಪಾಲಿಕೆಯ ಅಧಿಕಾರಿಗಳು ನೂರಾರು ಕೋಟಿ ರೂಪಾಯಿ ಕಮಿಷನ್, ಭ್ರಷ್ಟಾಚಾರ ನಡೆಸುತ್ತಿರೋದು ಹಳೆಯ ವಿಷಯ.
ಬಿಬಿಎಂಪಿಯ ಮುಖ್ಯ ಅಭಿಯಂತರರುಗಳು ಯೋಜನೆ ನಿರ್ವಹಣಾ ಸಮಾಲೋಚನೆ (Project Management Consultancy- PMC) ಹೆಸರಿನಲ್ಲಿ ಕೋಟ್ಯಾಂತ ರೂ. ಹಣವನ್ನು ಕೊಳ್ಳೆ ಹೊಡೆಯುತ್ತಿರುವ ವಿಷಯ ಬಹಿರಂಗವಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳುವ ಪ್ರತಿಯೊಂದು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪಿಎಂಸಿ ಕಾರ್ಯವನ್ನು ಸಂಬಂಧಪಟ್ಟ ಆಯಾ ಮುಖ್ಯ ಅಭಿಯಂತರರುಗಳೇ ಕಾನೂನು ಬಾಹಿರವಾಗಿ ನಿರ್ವಹಿಸುತ್ತಿದ್ದಾರೆ ಎಂದು ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ವರ್ಷ ಒಂದಕ್ಕೆ ಕನಿಷ್ಠ 4 ಸಾವಿರದಿಂದ 5 ಸಾವಿರ ಕೋಟಿ ರೂಪಾಯಿಗಳಷ್ಟು ಮೊತ್ತದ ಅಭಿವೃದ್ಧಿ ಕಾರ್ಯಗಳು ಅಥವಾ ಕಾಮಗಾರಿಗಳು ನಡೆಯುತ್ತದೆ. ಇವುಗಳಿಂದ ವರ್ಷಂಪ್ರತಿ 80 ಕೋಟಿಯಿಂದ 100 ಕೋಟಿ ರೂಪಾಯಿಗಳಷ್ಟು ಮೊತ್ತ ಕೇವಲ ಪಿಎಂಸಿ ಹೆಸರಿನಲ್ಲಿ ಸಂಬಂಧಪಟ್ಟ ಆಯಾ ಮುಖ್ಯ ಅಭಿಯಂತರರುಗಳ ಜೇಬು ಸೇರುತ್ತಿದೆ. ಈ ಸಂಬಂಧ ಕಳೆದ ಹತ್ತು ವರ್ಷಗಳಿಂದ ಇಂತಹ ಕಾನೂನು ಬಾಹಿರ ಕಾರ್ಯದಲ್ಲಿ ತೊಡಗಿಕೊಂಡಿರುವ ಎಲ್ಲಾ ಮುಖ್ಯ ಅಭಿಯಂತರರುಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ರಮೇಶ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಆಗ್ರಹಿಸಿದ್ದಾರೆ.
ಪ್ರತಿಯೊಂದು ಕಾಮಗಾರಿಯ ಒಟ್ಟು ಮೊತ್ತದ ಶೇ.2 ರಷ್ಟು ಮೊತ್ತವನ್ನು ಪಿಎಂಸಿ ಹೆಸರಿನಲ್ಲಿ ಕಡಿತಗೊಳಿಸುವ ಮುಖ್ಯ ಅಭಿಯಂತರರುಗಳು ಅಂತಹ ಎಲ್ಲಾ ಪಿಎಂಸಿ ಕಾರ್ಯಗಳನ್ನು ತಮ್ಮ ಸಂಬಂಧಿಕರು, ಬೆಂಬಲಿಗರು ಅಥವಾ ಹಿಂಬಾಲಕರ ಮೂಲಕವೇ ನಡೆಸುತ್ತಿದ್ದಾರೆ. ಪ್ರತಿಯೊಂದು ಕಾಮಗಾರಿಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಕೊಳ್ಳೆ ಹೊಡೆಯುತ್ತಿರುವ ಸಂಗತಿ ಇದುವರೆವಿಗೆ ಬಿಬಿಎಂಪಿಯ ಮುಖ್ಯ ಆಯುಕ್ತರು ಹಾಗೂ ಮಾನ್ಯ ಆಡಳಿತಾಧಿಕಾರಿಗಳ ಗಮನಕ್ಕೆ ಬಾರದೇ ಇರುವುದು ನಿಜಕ್ಕೂ ದುರಾದೃಷ್ಟಕರ ಎಂದು ಟೀಕಿಸಿದ್ದಾರೆ.
ಪ್ರತಿಯೊಂದು ಕಾಮಗಾರಿಯ ಪಿಎಂಸಿ ಏಜನ್ಸಿಗಳನ್ನು ನಿಗದಿ ಮಾಡುವ ಸಂಬಂಧ ನಿಯಮಾನುಸಾರ ಪಿಎಂಸಿ ಮೊತ್ತ 5 ಲಕ್ಷಕ್ಕಿಂತಲೂ ಕಡಿಮೆ ಇದ್ದರೆ ಕೊಟೇಷನ್ (Quotation) ಮೂಲಕ ಮತ್ತು 5 ಲಕ್ಷಕ್ಕಿಂತಲೂ ಹೆಚ್ಚಿದ್ದರೆ ಟೆಂಡರ್ (Tender) ಆಹ್ವಾನಿಸಿದ ನಂತರ ಅರ್ಹರಿಗೆ ಈ ಕಾರ್ಯದ ಬಗ್ಗೆ ಕಾರ್ಯಾದೇಶ ಪತ್ರ ನೀಡಬೇಕಿರುತ್ತದೆ. ಆದರೆ ಇಲ್ಲಿ ತಮ್ಮವರಿಗೆ ಪಿಎಂಸಿ ಕೆಲಸ ಕೊಡಿಸಲು ಬೇರೆ ಏಜನ್ಸಿಗಳು ಕೊಟೇಷನ್ ಕೊಡದಂತೆ ಅಥವಾ ಟೆಂಡರ್ ನಲ್ಲಿ ಭಾಗವಹಿಸದಂತೆ ಆಯಾ ಮುಖ್ಯ ಅಭಿಯಂತರರು ನೋಡಿಕೊಳ್ಳುತ್ತಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿ ಬಿಲ್ಲುಗಳನ್ನು ಪಾವತಿ ಮಾಡುವಲ್ಲಿ ಹೆಚ್ಚಿನ ಆರ್ಥಿಕ ಶಿಸ್ತು ಹಾಗೂ ಪಾರದರ್ಶಕತೆಯನ್ನು ತರುವ ದೃಷ್ಟಿಯಿಂದ 2018ರ ಆಗಸ್ಟ್ 3ರಂದು ಪಾಲಿಕೆಯ ಅಂದಿನ ಆಯುಕ್ತರು ಪಿಎಂಸಿ ಪದ್ಧತಿಯನ್ನು ಜಾರಿಗೆ ತರಲು ಆದೇಶಿಸಿದ್ದರು. ಅಂದಿನ ಆಯುಕ್ತರ ಈ ಆದೇಶವು ಕೆಲವು ಭ್ರಷ್ಟ ಮುಖ್ಯ ಅಭಿಯಂತರರುಗಳಿಗೆ ವರದಾನವಾಗಿ ಪರಿಣಮಿಸಿದ್ದು, ಅದನ್ನೇ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಅಪಾರ ಪ್ರಮಾಣದ ಹಣವನ್ನು ಕಾನೂನು ಬಾಹಿರವಾಗಿ ಲೂಟಿ ಮಾಡಿರುತ್ತಾರೆ.
ಈ ಪದ್ಧತಿ ಜಾರಿ ಮಾಡಿದ ನಂತರ ಇದುವರೆಗೂ ಸುಮಾರು 500 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಪಿಎಂಸಿ ಪದ್ಧತಿ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಪೈಕಿ ಶೇ. 90 ರಷ್ಟು ಹಣವನ್ನು ನಾಲ್ಕೈದು ಪ್ರಾಮಾಣಿಕ ಮುಖ್ಯ ಅಭಿಯಂತರರುಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಮುಖ್ಯ ಅಭಿಯಂತರರುಗಳು ತಮ್ಮ ರಕ್ತ ಸಂಬಂಧಿಕರುಗಳಿಗೆ, ಹಿಂಬಾಲಕರಿಗೆ, ಮತ್ತು ಅನುಯಾಯಿಗಳಿಗೆ ನಿಯಮಬಾಹಿರವಾಗಿ ಪಿಎಂಸಿ ಪದ್ಧತಿಯ ಟೆಂಡರ್ ಗಳನ್ನು ಮಾಡಿಕೊಡುವ ಮೂಲಕ ಕೋಟ್ಯಾಂತರ ರೂ. ಹಣವನ್ನು ಲಪಟಾಯಿಸಿರುತ್ತಾರೆ ಎಂದು ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಕೂಡಲೇ, ಕಳೆದ ಹತ್ತಾರು ವರ್ಷಗಳಿಂದ ನಿತ್ಯ ನಿರಂತರವಾಗಿ ನಡೆಯುತ್ತಿರುವ ಈ ಬೃಹತ್ ಅಕ್ರಮದ ತನಿಖೆಯನ್ನು ಸಿಐಡಿ (CID)ಗೆ ವಹಿಸಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆಯುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಪಾಲಿಕೆಯ ಮುಖ್ಯ ಆಯುಕ್ತರನ್ನು ಮತ್ತು ಆಡಳಿತಾಧಿಕಾರಿ ಉಮಾಶಂಕರ್ ಅವರನ್ನು ಒತ್ತಾಯಿಸಿದ್ದಾರೆ.