ಬೆಂಗಳೂರು, ಆ.25 www.bengaluruwire.com : ದೇಶದೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಭಗವಾನ್ ವಿಷ್ಣುವಿನ ಎಂಟನೇ ಅವತಾರಗಳಲ್ಲಿ ಒಂದಾದ ಶ್ರೀಕೃಷ್ಣನು ಜನಿಸಿದ ದಿನ ಎಂದು ಅಷ್ಟಮಿಯನ್ನು ಹಿಂದೂಗಳ ಮಹತ್ವದ ಹಬ್ಬವಾಗಿ ಆಚರಿಸಲಾಗುತ್ತದೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ದೇಶದಾದ್ಯಂತ ವಿಶೇಷವಾಗಿ ವೃಂದಾವನ, ಬರ್ಸಾನಾ, ಮಥುರಾ, ದ್ವಾರಕಾದಲ್ಲಿ ಮತ್ತು ಉಡುಪಿಯಲ್ಲಿ ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಭಾರತದ ಪ್ರಸಿದ್ಧ ಹತ್ತು ಶ್ರೀಕೃಷ್ಣ ದೇವಾಲಯಗಳು ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ
1) ದ್ವಾರಕೆಯ ದ್ವಾರಕಾಧೀಶ ದೇವಸ್ಥಾನ :
ಜಗತ್ ಮಂದಿರ ಎಂದೂ ಕರೆಯಲ್ಪಡುವ ದ್ವಾರಕಾಧೀಶ ದೇವಾಲಯವು ಭಾರತದ ನಾಲ್ಕು ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ಈ ದೇವಾಲಯ ಸಾವಿರಾರು ಭಕ್ತರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿಯೂ ಸಹ, ಸಾವಿರಾರು ದ್ವಾರಕಾಧೀಶ ದೇವಾಲಯಕ್ಕೆ ಕೃಷ್ಣ ಭಕ್ತರು ಭೇಟಿಕೊಡುತ್ತಾರೆ
2) ವೃಂದಾವನದ ಬಂಕೆ ಬಿಹಾರಿ ದೇವಸ್ಥಾನ :
ಪ್ರಪಂಚದಾದ್ಯಂತದ ಪ್ರಸಿದ್ಧ ಕೃಷ್ಣ ದೇವಾಲಯಗಳ ಪೈಕಿ ಒಂದು. ಈ ಬಂಕೆ ಬಿಹಾರಿ ದೇವಾಲಯವು ಉತ್ತರಪ್ರದೇಶದ ಪವಿತ್ರ ನಗರವಾದ ವೃಂದಾವನದಲ್ಲಿದೆ. ಜನ್ಮಾಷ್ಟಮಿಯ ಸಂದರ್ಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಾರೆ.
3) ಶ್ರೀನಾಥಜಿ ದೇವಸ್ಥಾನ, ರಾಜಸ್ತಾನ :
ಶ್ರೀನಾಥ್‌ಜಿ ದೇವಸ್ಥಾನ, ರಾಜಸ್ಥಾನದ ಪ್ರಸಿದ್ಧ ಶ್ರೀಕೃಷ್ಣ ದೇವಾಲಯವಾಗಿದೆ. ಇಲ್ಲಿನ ಮುಖ್ಯ ದೇವರು ಶ್ರೀನಾಥಜಿ, ಕೃಷ್ಣನ ಒಂದು ರೂಪ. ಕೃಷ್ಣನ ಪ್ರತಿಮೆಯನ್ನು 17 ನೇ ಶತಮಾನದ ಕೊನೆಯಲ್ಲಿ ನಾಥದ್ವಾರದಲ್ಲಿ ಪ್ರತಿಷ್ಠಾಪಿಸಲಾಯಿತು. ಶ್ರೀಕೃಷ್ಣನು ಇಲ್ಲಿ ಕಲ್ಲಿನಿಂದ ಸ್ವಯಂ ಪ್ರತ್ಯಕ್ಷನಾಗಿದ್ದಾನೆ ಮತ್ತು ಗೋವರ್ಧನ ಬೆಟ್ಟಗಳಿಂದ ಹೊರಹೊಮ್ಮಿದ್ದಾನೆ ಎನ್ನುತ್ತವೆ ಇಲ್ಲಿನ ಐತಿಹ್ಯಗಳು. ಇತಿಹಾಸದ ಪ್ರಕಾರ, ಮಥುರಾ ಬಳಿಯಿರುವ ಗೋವರ್ಧನ ಬೆಟ್ಟದಲ್ಲಿ ಮೊದಲು ಶ್ರೀಕೃಷ್ಣನ ವಿಗ್ರಹವನ್ನು ಪೂಜಿಸಲಾಯಿತು ಹೇಳಲಾಗುತ್ತೆ.
4) ವೃಂದಾವನದ ಬಲರಾಮ ದೇವಸ್ಥಾನ :
ಕೃಷ್ಣ ಬಲರಾಮ ಮಂದಿರವು ಭಾರತದ ಮೊದಲ ಮತ್ತು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಕೃಷ್ಣ ಮತ್ತು ಬಲರಾಮನಿಗೆ ಸಮರ್ಪಿತವಾಗಿರುವ ಇದನ್ನು ವೃಂದಾವನದ ಇಸ್ಕಾನ್ ದೇವಾಲಯ ಎಂದೂ ಕರೆಯುತ್ತಾರೆ.
5) ಉಡುಪಿ ಶ್ರೀ ಕೃಷ್ಣ ದೇವಸ್ಥಾನ:
ಉಡುಪಿಯ ಶ್ರೀಕೃಷ್ಣ ದೇವಸ್ಥಾನವು ಉಡುಪಿಯ ಅಷ್ಠಮಠಗಳಲ್ಲಿ ಒಂದಾಗಿದೆ. ವಿಶೇಷವಾಗಿ ಜನ್ಮಾಷ್ಟಮಿ ಮತ್ತು ದಹಿ ಹಂಡಿ ಸಮಯದಲ್ಲಿ ಶ್ರೀಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಲು ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.
6) ಬೆಂಗಳೂರಿನ ಇಸ್ಕಾನ್ ದೇವಾಲಯ :
ಬೆಂಗಳೂರಿನ ಇಸ್ಕಾನ್ ದೇವಾಲಯವು ಆಧುನಿಕ ಯುಗದಲ್ಲಿ ನಿರ್ಮಾಣವಾಗಿರುವ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿನ ಸುಂದರವಾದ ಉದ್ಯಾನವನ, ನೋಡಿದಷ್ಟು ಮುಗಿಯದ ಇಲ್ಲಿನ ವಾಸ್ತುಶಿಲ್ಪ, ಆಚಾರ ವಿಚಾರ, ರಾಧ-ಕೃಷ್ಣರನ್ನು ಆರಾಧಿಸುವ ವಿಧಾನ, ಹೀಗೆ ಬೆಂಗಳೂರಿನ ಇಸ್ಕಾನ್ ದೇವಾಲಯ ಹಲವು ಆಚಾರ- ವಿಚಾರಗಳಿಂದ ತನ್ನದೇ ಆದ ವಿಶೇಷತೆ ಹೊಂದಿದೆ.
7) ಮೈಸೂರಿನ ವೇಣುಗೋಪಾಲ ಸ್ವಾಮಿ ದೇವಾಲಯ :
12 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಸ್ಥಾನ ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಕೆಆರ್‌ಎಸ್ ಜಲಾಶಯದ ತೀರಪ್ರದೇಶದ ಮೇಲಿರುವ ಮನಮೋಹಕ ದೇವಾಲಯ ಪ್ರಕೃತಿ ಸೌಂದರ್ಯದ ಜೊತೆಗೆ ವಿಭಿನ್ನವಾದ ವಾಸ್ತುಶಿಲ್ಪದ ಸೌಂದರ್ಯದಿಂದ ಸಮೃದ್ಧವಾಗಿದೆ.
8) ಪ್ರೇಮ್ ಮಂದಿರ, ವೃಂದಾವನ :
ವೃಂದಾವನದಲ್ಲಿ ಹಲವಾರು ಕೃಷ್ಣ ದೇವಾಲಯಗಳಿವೆ. ಸುಂದರವಾದ ಉದ್ಯಾನವನಗಳು ಮತ್ತು ಕಾರಂಜಿಗಳು ಮತ್ತು ಕೃಷ್ಣ ಲೀಲೆಯ ಹಲವಾರು ಭಾವಚಿತ್ರಗಳಿಂದ ಸುತ್ತುವರೆದಿರುವ ಪ್ರೇಮ ಮಂದಿರ ಇದೆ. 2001 ರಲ್ಲಿ ಜಗದ್ಗುರು ಶ್ರೀ ಕೃಪಾಲುಜಿ ಮಹಾರಾಜರಿಂದ ರೂಪುಗೊಂಡ ಬೃಹತ್ ದೇವಾಲಯವು ವೈಭವದಿಂದ ತುಂಬಿದೆ.
9) ರಾಜಗೋಪಾಲಸ್ವಾಮಿ ದೇವಸ್ಥಾನ :
ತಮಿಳುನಾಡು- ಮನ್ನಾರ್ಗುಡಿಯಲ್ಲಿರುವ ರಾಜಗೋಪಾಲಸ್ವಾಮಿ ದೇವಾಲಯವು ದಕ್ಷಿಣ ಭಾರತದ ಪ್ರಮುಖ ವೈಷ್ಣವ ಕ್ಷೇತ್ರವಾಗಿದೆ. ಈ ಪ್ರಾಚೀನ ದೇವಾಲಯ ಸಂಕೀರ್ಣವು ತಮಿಳುನಾಡಿನ ಮನ್ನಾರ್ಗುಡಿ ಪಟ್ಟಣದಲ್ಲಿ 23 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ.
10) ಗುರುವಾಯೂರು ದೇವಸ್ಥಾನ :
ಕೇರಳದ ಗುರುವಾಯೂರು ದೇವಾಲಯವನ್ನು ಭೂಮಿಯ ಮೇಲಿನ ವಿಷ್ಣುವಿನ ಪವಿತ್ರ ನಿವಾಸ ಎಂದು ಕರೆಯಲಾಗುತ್ತದೆ. ಇದನ್ನು ದಕ್ಷಿಣ ಭಾರತದ ದ್ವಾರಕಾ ಎಂದೂ ಕರೆಯುತ್ತಾರೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.