ವಾಷಿಂಗ್ಟನ್, ಆ.25 www.bengaluruwire.com : ಜೂನ್‌ನಲ್ಲಿ ಬೋಯಿಂಗ್‌ನ ದೋಷಯುಕ್ತ ಸ್ಟಾರ್‌ಲೈನರ್ (Starliner) ಕ್ಯಾಪ್ಸುಲ್‌ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(International Space Station -ISS)ಕ್ಕೆ ಹಾರಿಹೋದ ಇಬ್ಬರು ನಾಸಾ ಗಗನಯಾತ್ರಿಗಳು ಮುಂದಿನ ವರ್ಷದ ಆರಂಭದಲ್ಲಿ ಸ್ಪೇಸ್‌ಎಕ್ಸ್ ವಾಹನದಲ್ಲಿ ಭೂಮಿಗೆ ಮರಳುತ್ತಾರೆ ಎಂದು ನಾಸಾ (NASA) ಶನಿವಾರ ಹೇಳಿದೆ.
ಭಾರತ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ (Butch Wilmore) ಈ ಇಬ್ಬರು ಗಗನಯಾನಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಜೂನ್ ನಿಂದ ಅಲ್ಲಿ ಸಿಲುಕಿದ್ದರು. ಸ್ಟಾರ್‌ಲೈನರ್‌ನ ಪ್ರೊಪಲ್ಷನ್ ಸಿಸ್ಟಮ್‌ನಲ್ಲಿನ ಸಮಸ್ಯೆಗಳು ತನ್ನ ಮೊದಲ ಸಿಬ್ಬಂದಿಯನ್ನು ವಾಪಸ್ ಭೂಮಿಯತ್ತ ಸಾಗಿಸಲು ತುಂಬಾ ಅಪಾಯಕಾರಿ ಎಂದು ಪರಿಗಣಿಸಿತ್ತು. ಹೀಗಾಗಿ ಈ ಇಬ್ಬರೂ ಗಗನಯಾನಿಗಳು ತಾಂತ್ರಿಕ ದೋಷದಿಂದಾಗಿ ಬಾಹ್ಯಕಾಶದಲ್ಲೇ ಉಳಿಯುವಂತಾಗಿತ್ತು.
ಮುಂದಿನ ಫೆಬ್ರವರಿಯಲ್ಲಿ ಬುಚ್ ಮತ್ತು ಸುನಿತಾ ಕ್ರ್ಯೂ -9 ರೊಂದಿಗೆ ಹಿಂತಿರುಗುತ್ತಾರೆ ಮತ್ತು ಸ್ಟಾರ್ಲೈನರ್ ಸಿಬ್ಬಂದಿಯಿಲ್ಲದೆ ಹಿಂತಿರುಗುತ್ತಾರೆ. ಬೋಯಿಂಗ್ ಬಾಹ್ಯಾಕಾಶ ನೌಕೆಯ ಥ್ರಸ್ಟರ್ ಅಸಮರ್ಪಕ ಕಾರ್ಯಗಳಿಂದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ಹಿಂತಿರುಗುವುದು ವಿಳಂಬವಾಗಿದೆ ಎಂದು ನಾಸಾ ಕಾರ್ಯ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ.
ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಜೂನ್ 5ರಂದು ಆರಂಭಿಸಿದ್ದರು. ಜೂನ್ 5ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್ ತಲುಪಿದ್ದ ಅವರು 8 ದಿನ ಸಂಶೋಧನೆ ನಡೆಸಿ ವಾಪಸಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅವರು ಅಲ್ಲಿಯೇ ಸಿಲುಕಿದ್ದಾರೆ. 8 ದಿನಗಳ ಅವರ ಗಗನಯಾನ 8 ತಿಂಗಳಾಗಲಿದೆ ಎಂದು ನಾಸಾ ಶನಿವಾರ ತಿಳಿಸಿದೆ.
ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್ ಸ್ಪೇಸ್ ಕ್ರಾಫ್ಟ್ ಮೂಲಕ ವಾಫಸ್ :
“ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಸುನೀತಾ ವಿಲಿಯಮ್ಸ್ ಅವರು 2025ರ ಫೆಬ್ರವರಿಯಲ್ಲಿ ವಾಪಸಾಗಲಿದ್ದಾರೆ. ಇವರು ಬೋಯಿಂಗ್ ಸ್ಟಾರ್‌ಲೈನರ್ ಬದಲು ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್ ಸ್ಪೇಸ್ ಕ್ರಾಫ್ಟ್ (SpaceX Crew Dragon spacecraft) ನಲ್ಲಿ ವಾಪಸಾಗಲಿದ್ದಾರೆ. ಸ್ಟಾರ್‌ಲೈನರ್‌ನಲ್ಲಿ ಹಲವು ತಾಂತ್ರಿಕ ದೋಷಗಳು ಉಂಟಾಗಿರುವ ಕಾರಣ ಕ್ರ್ಯೂ ಡ್ರ್ಯಾಗನ್‌ನಲ್ಲಿ ವಾಪಸ್ ಕರೆದುಕೊಂಡು ಬರಲು ತೀರ್ಮಾನಿಸಲಾಗಿದೆ” ಎಂಬುದಾಗಿ ನಾಸಾ ಹೇಳಿದೆ.
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಹಿನ್ನೆಲೆಯೇನು? :
ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್, ಇಬ್ಬರೂ ನಾಸಾದ ಅನುಭವಿ ಗಗನಯಾತ್ರಿಗಳು ಹಾಗೂ ಮಾಜಿ ಮಿಲಿಟರಿ ಪರೀಕ್ಷಾ ಪೈಲಟ್‌ಗಳು. ಭಾರತದ ಮೂಲದ ಡಾ. ದೀಪಕ್ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಕಳೆದಿದ್ದಾರೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗಗನ ಯಾತ್ರಿಯಾಗಿದ್ದಾರೆ. ಇದುವರೆಗೆ ಸುನೀತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. (ಫೊಟೋ ಕೃಪೆ : ಎಪಿ)