ಆಂಧ್ರಪ್ರದೇಶ, ಆ.24 www.bengaluruwire.com : ತಿರುಪತಿಯ ಶ್ರೀ ವೆಂಕಟೇಶ್ವರ ಸನ್ನಿಧಿಗೆ ಪ್ರತಿ ದಿನ ಲಕ್ಷಾಂತರ ಭಕ್ತರು ವಿವಿಧ ಹರಕೆಗಳನ್ನು ಹೊತ್ತು ಬರುತ್ತಾರೆ. ಹೀಗೆ ತಮ್ಮ ಮನೋ ಕಾಮನೆಗಳು ಈಡೇರಿದವರು, ಕೆಜಿಗಟ್ಟಲೆ ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳನ್ನು ಬಾಲಾಜಿಯ ಹುಂಡಿಗೆ ಸಮರ್ಪಿಸುತ್ತಾರೆ.
ಆದರೆ ಇಲ್ಲೊಂದು ಕುಟುಂಬ ಆ.22 ರಂದು ಇಪ್ಪತೈದು ಕೆಜಿ ಚಿನ್ನಾಭರಣ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬಂದಿದ್ದಾರೆ. ಇವರನ್ನು ಕಂಡು ಅಲ್ಲಿದ್ದ ಭಕ್ತರೂ ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬಂದ ಈ ಕುಟುಂಬವನ್ನು ಅಲ್ಲಿಯ ಭಕ್ತರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ನಮ್ಮ ಸಂಸ್ಕೃತಿಯಲ್ಲಿ ಚಿನ್ನದ ಆಭರಣಗಳನ್ನು ಧರಿಸುವುದು ಸಂಪ್ರದಾಯ. ಆದರೆ ಕೆಲವರು ಶೋಕಿಗಾಗಿ ಕೈನ ಎಲ್ಲಾ ಹತ್ತು ಬೆರಳಿಗೆ ಉಂಗುರ, ಕತ್ತಿಗೆ ಚಿನ್ನಾಭರಣ ಹಾಕಿ ಓಡಾಡುವುದನ್ನು ಆಗಾಗ ನೋಡಿರುತ್ತೇವೆ. ಆದರೆ ತಿರುಪತಿ ದೇವಸ್ಥಾನಕ್ಕೆ ಕೆಜಿಗಟ್ಟಲೆ ಚಿನ್ನ ಧರಿಸಿ ಬಂದ ಈ ಕುಟುಂಬ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಪುಣೆ ಮೂಲದ ಕುಟುಂಬವೊಂದು ತಮ್ಮ ಕೊರಳಿಗೆ ಸುಮಾರು ಇಪ್ಪತೈದು ಕೆಜಿ ತೂಕದ ಚಿನ್ನದ ಆಭರಣಗಳನ್ನು ಧರಿಸಿಕೊಂಡು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಇಬ್ಬರು ಪುರುಷರು, ಓರ್ವ ಮಹಿಳೆ ಹಾಗೂ ಒಂದು ಮಗು ಸೇರಿ ನಾಲ್ವರು ಆಗಮಿಸಿದ್ದರು. ಆ ಪೈಕಿ ಇಬ್ಬರು ಪುರುಷರ ಕೊರಳಿನಲ್ಲಿ ಕೆಜಿಗಟ್ಟಲೆ ಚಿನ್ನದ ಆಭರಣ ಹಾಕಿಕೊಂಡಿದ್ದರು. ಅಲ್ಲದೆ ಅವರ ಜೊತೆ ಬಂದ ಮಹಿಳೆಯೂ ಚಿನ್ನದ ಬಣ್ಣದ ಸೀರೆ ಉಟ್ಟಿದ್ದು ಇದೂ ಕೂಡಾ ಚಿನ್ನದ ಲೇಪನದಿಂದ ಕೂಡಿದ್ದು ಎಂದು ಹೇಳಲಾಗಿದೆ.