ಬೆಂಗಳೂರು, ಆ.23 www.bengaluruwire.com : ಇತ್ತೀಚೆಗೆ ಸಾಮಾಜಿಕ ಜಾಲತಾಣ (Social Media) ಹಾಗೂ ವಾಟ್ಸಪ್ (Whatsup) ಗಳಲ್ಲಿ ಮಹಿಳೆಯರು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದಲ್ಲಿ ಮನೆಗೆ ತೆರಳಲು ಪೊಲೀಸರು ಉಚಿತ ಪ್ರಯಾಣ (Free Transport) ಯೋಜನೆ ಆರಂಭಿಸಿದ್ದಾರೆ ಎಂಬ ನಕಲಿ ಸುದ್ದಿ (Fake News) ಹರಿದಾಡುತ್ತಿದೆ. ಇದು ಶುದ್ಧ ಸುಳ್ಳು ಎಂದು ಬೆಂಗಳೂರು ನಗರ ಪೊಲೀಸ್ ತಿಳಿಸಿದೆ.
ಈ ಬಗ್ಗೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ, “ಎಚ್ಚರವಾಗಿರಿ!! ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದಲ್ಲಿ, ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಮೆಸೇಜ್ ಹರಿದಾಡುತ್ತಿದ್ದು, ಇದು ಸುಳ್ಳು. ಇಂತಹ ಸುಳ್ಳು ಮೆಸೇಜ್ ನಂಬಬೇಡಿ. ತುರ್ತು ಪರಿಸ್ಥಿತಿಯಲ್ಲಿ ನಮ್ಮ112 ಸಹಾಯವಾಣಿಗೆ ಕರೆಮಾಡಿ ನೆರವು ಪಡೆಯಿರಿ” ಎಂದು ಹೀಗೆ ಪೋಸ್ಟ್ ಮಾಡಿದೆ.
ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾಗಳಲ್ಲಿ, “ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯೊಳಗೆ ಮನೆಗೆ ತೆರಳಲು ವಾಹನ ಸಿಗದೇ ಒಂಟಿಯಾಗಿರುವ ಯಾವುದೇ ಮಹಿಳೆ ಪೊಲೀಸ್ ಸಹಾಯವಾಣಿ ಸಂಖ್ಯೆಗಳನ್ನು (1091 ಮತ್ತು 7837018555) ಸಂಪರ್ಕಿಸಬಹುದಾದ ಉಚಿತ ಪ್ರಯಾಣ ಯೋಜನೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ. ವಾಹನವನ್ನು ಕೋರಬಹುದು ಮತ್ತು ವಿನಂತಿಸಬಹುದು. ಅವರು 24×7 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ನಿಯಂತ್ರಣ ಕೊಠಡಿಯ ವಾಹನ ಅಥವಾ ಹತ್ತಿರದ ಪಿಸಿಆರ್ ವಾಹನ/ಎಸ್‌ಎಚ್‌ಒ ವಾಹನವು ಅವನನ್ನು ಸುರಕ್ಷಿತವಾಗಿ ಅವನ ಗಮ್ಯಸ್ಥಾನಕ್ಕೆ ಕೊಂಡೊಯ್ಯುತ್ತದೆ. ಇದನ್ನು ಉಚಿತವಾಗಿ ಮಾಡಲಾಗುವುದು. ನಿಮಗೆ ತಿಳಿದಿರುವ ಎಲ್ಲರಿಗೂ ಈ ಸಂದೇಶವನ್ನು ಹರಡಿ” ಎಂಬ ಸಂದೇಶ ಎಲ್ಲಾ ಕಡೆ ಹರಿದಾಡುತ್ತಿತ್ತು. ಆದರೆ ಇದು ಸುಳ್ಳು ಮಾಹಿತಿ ಎಂದು ಪೊಲೀಸರು ತಿಳಿಸಿದ್ದಾರೆ.
“ನಿಮ್ಮ ಹೆಂಡತಿ, ಹೆಣ್ಣುಮಕ್ಕಳು, ಸಹೋದರಿಯರು, ತಾಯಂದಿರು, ಸ್ನೇಹಿತರು ಮತ್ತು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರಿಗೆ ಸಂಖ್ಯೆಯನ್ನು ಕಳುಹಿಸಿ.. ಅದನ್ನು ಉಳಿಸಲು ಅವರನ್ನು ಕೇಳಿ.. ಎಲ್ಲಾ ಪುರುಷರು ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರೊಂದಿಗೆ ಹಂಚಿಕೊಳ್ಳಿ. ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಖಾಲಿ ಸಂದೇಶ ಅಥವಾ ಮಿಸ್ಡ್ ಕಾಲ್ ನೀಡಬಹುದು. ಇದರಿಂದ ಪೊಲೀಸರು ನಿಮ್ಮ ಸ್ಥಳವನ್ನು ಪತ್ತೆ ಹಚ್ಚಬಹುದು ಮತ್ತು ನಿಮಗೆ ಸಹಾಯ ಮಾಡಬಹುದು. ಭಾರತದಾದ್ಯಂತ ಅನ್ವಯಿಸುತ್ತದೆ” ಎಂದು ತಿಳಿಸಲಾಗಿತ್ತು. ಆದರೆ ಇದರಲ್ಲಿ ಹುರುಳಿಲ್ಲ. ಇದನ್ನು ನಂಬದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ವೈರ್, “7837018555” ಎಂಬ ಮೊಬೈಲ್ ನಂಬರಿನ ವಾಟ್ಸಪ್ ಪರಿಶೀಲಿಸಿದಾಗ ಇದು ಪಂಜಾಬಿನ ಲೂಧಿಯಾನಾದಲ್ಲಿ ನೀಡುತ್ತಿರುವ ಸೇವೆ ಎಂಬುದು ತಿಳಿದುಬಂದಿದೆ.