ಬೆಂಗಳೂರು, ಆ.23 www.bengaluruwire.com : ರಾಜಧಾನಿಯ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕನಸಿನ ಯೋಜನೆಯಾದ ಹೆಬ್ಬಾಳ ಮೇಲು ಸೇತುವೆ ಎಸ್ಟೀಮ್ ಮಾಲ್ ಹತ್ತಿರದಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ನ ಮೇಲ್ಸೇತುವೆ ತನಕದ ಭೂಗತ ಸುರಂಗ ಮಾರ್ಗ (Underground Vehicular Tunnel In Twin Tube Mode) ನಿರ್ಮಿಸುವ ಮಹತ್ವದ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ತನ್ನ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಸಭೆ ಬಳಿಕ ಕಾನೂನು ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಹೆಬ್ಬಾಳ ಮೇಲು ಸೇತುವೆ ಎಸ್ಟೀಮ್ ಮಾಲ್ ಹತ್ತಿರದಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ನ ಮೇಲ್ಸೇತುವೆ ತನಕ 27 ಕಿ.ಮೀ ಉದ್ದದ 12690 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಭೂಗತ ವಾಹನ ಸುರಂಗ ಮಾರ್ಗವನ್ನು ಟ್ವಿನ್ ಟ್ಯೂಬ್ ಮಾದರಿಯಲ್ಲಿ ನಿರ್ಮಿಸಲು ಸಚಿವ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ ಎಂದರು.
ಸಿಲಿಕಾನ್ ಸಿಟಿಯ ಸುಮಾರು 190ಕಿ.ಮೀ ಉದ್ದದ ವಾಹನ ದಟ್ಟಣೆಯ 11 ಕಾರಿಡಾರ್ಗಳನ್ನು ಆಯ್ಕೆ ಮಾಡಿ, ಭೂಗತ ವಾಹನ ಸುರಂಗ ಮಾರ್ಗ ನಿರ್ಮಾಣ ಮಾಡಲು ಸೂಕ್ತವೆಂದು ಅಭಿಪ್ರಾಯಪಡಲಾಗಿದೆ. ಅಲ್ಲದೇ, ಬೆಂಗಳೂರು ಹೃದಯ ಭಾಗದಲ್ಲಿ ಒಟ್ಟು ಸುಮಾರು 99.50 ಕಿ.ಮೀ ಉದ್ದದ 17 ಮೇಲ್ಸೇತುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಬೇಕಿದೆ ಎಂದು ಅವರು ಹೇಳಿದರು.
ಯೋಜನೆಯ ಬಗ್ಗೆ ಸಂಕ್ಷಿಪ್ತ ವಿವರ :
* ಹೆಬ್ಬಾಳ ಕೆರೆಯ ಮುಂಭಾಗದಿಂದ ಉತ್ತರ-ದಕ್ಷಿಣ ಸುರಂಗ ರಸ್ತೆ ಕಾರಿಡಾರ್ ಆರಂಭವಾಗಿ ಕೇಂದ್ರೀಯ ರೇಷ್ಮೆ ಮಂಡಳಿಯವರೆಗೆ ಇರಲಿದೆ.
• ಕೆರೆಯ ಮುಂಭಾಗ ವಾಹನಗಳ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶವಿರುತ್ತದೆ. ಮುಂದೆ ಹೆಬ್ಬಾಳ ಪಶುವೈದ್ಯ ಆಸ್ಪತ್ರೆ ಬಳಿ ವಾಹನಗಳ ನಿರ್ಗಮನ ಮತ್ತು ಪ್ರವೇಶಕ್ಕಾಗಿ ‘ಪಾಯಿಂಟ್’ ನಿರ್ಮಿಸಲಾಗುತ್ತದೆ.
• ಮೇಖಿ ವೃತ್ತದ ಅರಮನೆ ಮೈದಾನ, ಗಾಲ್ಫ್ ಮೈದಾನ ಮತ್ತು ಮಹಾರಾಣಿ ಕಾಲೇಜಿನ ಬಳಿಯಲ್ಲಿ ‘ಪಾಯಿಂಟ್’ ನಿರ್ಮಾಣಗೊಳ್ಳಲಿದೆ.
• ಇಲ್ಲಿಂದ ಮುಂದೆ ಎರಡನೇ ಹಂತದಲ್ಲಿ ಕಾಮಗಾರಿ ಸಾಗಲಿದೆ.
• ಪೂರ್ವ-ಪಶ್ಚಿಮ ಕಾರಿಡಾರ್, ಉತ್ತರ-ದಕ್ಷಿಣ ಕಾರಿಡಾರ್ ನಿರ್ಮಾಣವಾಗಲು ಪ್ರಸ್ತಾಪಿಸಲಾಗಿದೆ.
• ರಾಷ್ಟ್ರೀಯ ಹೆದ್ದಾರಿ 7 ಹಾಗೂ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಪರ್ಕ ಲಭ್ಯವಾಗಲಿದೆ.
• ಪ್ರಮುಖ ರಸ್ತೆ, ಬೈಪಾಸ್ ರಸ್ತೆಗಳಲ್ಲಿ ಪ್ರವೇಶ-ನಿರ್ಗಮನಕ್ಕೆ ಅವಕಾಶವಿರಲಿದೆ.
ನಗರದಲ್ಲಿ 250 ಅಡಿ ಎತ್ತರದ ಆಕಾಶ ಗೋಪುರ ನಿರ್ಮಾಣ :
ಬೆಂಗಳೂರು ನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತಾಸೆಯಾಗಿ, ನಗರದ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಚಿರಸ್ಥಾಯಿಯಾಗಿಸಲು ನೈಸ್ ರಸ್ತೆ ಕ್ಲೋವರ್ ಲೀಫ್ ಇರುವ ಹೆಮ್ಮಿಗೆಪುರದ ಬಳಿ 500 ಕೋಟಿ ರೂ. ವೆಚ್ಚದಲ್ಲಿ 250 ಮೀಟರ್ ಎತ್ತರದ ಆಕಾಶ ಗೋಪುರ (Skydeck -ಸ್ಕೈಡೆಕ್) ನಿರ್ಮಿಸಲು ತಾಂತ್ರಿಕ ಅನುಮೋದನೆ ನೀಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
52 ಹೊಸ ಇಂದಿರಾ ಕ್ಯಾಂಟೀನ್:
ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ 52 ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಇದಕ್ಕೆ ತಗಲುವ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಟಿಡಿಆರ್ ಯೋಜನೆ ಭೂಪರಿಹಾರಕ್ಕೆ ಮಾರ್ಗಸೂಚಿ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಟಿಡಿಆರ್ ಯೋಜನೆಯಡಿ ಸ್ವಾಧೀನಪಡಿಸುವ ಪ್ರಕ್ರಿಯೆಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಸೂಚನೆಯ ಅನ್ವಯ ಸಾರ್ವಜನಿಕರಿಗೆ ಭೂಪರಿಹಾರ ನೀಡಲು ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.