ಬೆಂಗಳೂರು, ಆ.19 www.bengaluruwire.com : ರಾಜಧಾನಿ ಬೆಂಗಳೂರಿನ ಜನತೆಯು ಕಳೆದ ಎಂಟು ಹತ್ತು ದಿನಗಳಿಂದ ವಿಚಿತ್ರ ಹಾಗೂ ಅಪರೂಪದ ಹವಾಮಾನ ಘಟನೆಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಸೂರ್ಯದೋಯದ ನಂತರ ಕೆಲವು ಸಮಯ ಮೋಡಮಯ, ಆನಂತರ ಸುಡು ಬಿಸಿಲು, ಮಧ್ಯಾಹ್ನ, ಸಂಜೆ, ರಾತ್ರಿ ಮಳೆ ಆದರೂ ತೇವಾಂಶಪೂರಿತ ಉರಿ ಸೆಖೆಯಿಂದ ಜನರು ಹೈರಾಣಾಗಿದ್ದಾರೆ. ಉದ್ಯಾನ ನಗರಿಯ ಈ ವಾತಾವರಣ ಜನರನ್ನು ಕರಾವಳಿ ಜಿಲ್ಲೆಯಲ್ಲಿ ಆಗುವ ಅನುಭವಕ್ಕೆ ಸಾಕ್ಷಿಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಮಳೆಗಾಲದಲ್ಲಿ ದೀರ್ಘಾವಧಿಯ ತನಕ ಈ ಪರಿಯ ಸೆಖೆ ಮತ್ತು ತಾಪಮಾನ ಏರಿಕೆಯ ಅನುಭವ ಆಗುತ್ತಿರುವುದು ಬಹಳ ಅಪರೂಪ. ಬೆಂಗಳೂರು ಒಂದೇ ಅಲ್ಲ ಇಡೀ ದಕ್ಷಿಣ ಭಾರತದಲ್ಲಿ ಈ ಪರಿಸ್ಥಿತಿಯಿದೆ ಎಂದು ಹೇಳುತ್ತಾರೆ ಹವಾಮಾನ ಇಲಾಖೆಯ ಅಧಿಕಾರಿಗಳು. ಹವಾಮಾನ ಬದಲಾವಣೆಯಿಂದ ಮಳೆಗಾಲದಲ್ಲೂ ಸೆಖೆ, ಸುಸ್ತು ಆಗುತ್ತಿದೆ. ಇದರಿಂದ ಸ್ವಲ್ಪ ಕೆಲಸ ಮಾಡಿದರೂ ಸುಸ್ತು, ತಡಲಾಗದಷ್ಟು ಬಿಸಿ ಬಿಸಿ ಎಂದು ಜನರು ಮನೆ ಹೊರಗೆ ಮಳೆ ಬರುತ್ತಿದ್ದರೂ, ಮನೆಯೊಳಗೆ ಫ್ಯಾನ್ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಜನರು ಆರೋಗ್ಯ ಏರುಪಾರುಗುತ್ತಿದೆ.
ಮುಂಗಾರು ಮಳೆಯ ಅವಧಿಯಲ್ಲಿ ಸಾಮಾನ್ಯವಾಗಿ ಪಶ್ಚಿಮ ಭಾಗದಿಂದ ಗಾಳಿ ಬೀಸಬೇಕು. ಆದರೆ ದಕ್ಷಿಣ ಭಾಗದಿಂದ ಗಾಳಿ ಬೀಸುತ್ತಿದೆ. ಅಲ್ಲದೆ ಪೂರ್ವ ಮುಂಗಾರು ಬೀಸುವ ಬಂಗಾಳಕೊಲ್ಲಿಯಲ್ಲಿ ಮಳೆಯ ಮಾರುತಗಳು ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಪಶ್ಚಿಮದ ಬದಲು ದಕ್ಷಿಣ ದಿಕ್ಕಿನ ಸಮುದ್ರ ಪ್ರದೇಶದಿಂದ ಗಾಳಿ ಬೀಸುತ್ತಿರುವುದರಿಂದ ಕರಾವಳಿಯಲ್ಲಿನ ತೇವಾಂಶಪೂರಿತ ಉರಿ ಸೆಖೆಯ ಅನುಭವ ಜನರು ಅನುಭವಿಸುತ್ತಿದ್ದಾರೆ. ಇದು ಕೇವಲ ಬೆಂಗಳೂರು ಒಂದೇ ಅಲ್ಲ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಈ ಪರಿಸ್ಥಿತಿಯಿದೆ. ಗಾಳಿ ಬೀಸುವ ದಿಕ್ಕು ಇನ್ನು ಎರಡು ಮೂರು ದಿನಗಳಲ್ಲಿ ಬದಲಾಗಲಿದೆ. ಆನಂತರ ಪರಿಸ್ಥಿತಿ ಸರಿಯಾಗಲಿದೆ ಎಂದು ಹೇಳುತ್ತಾರೆ ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹವಾಮಾನ ಇಲಾಖೆ ನಿರ್ದೇಶಕ ಹಾಗೂ ವಿಜ್ಞಾನಿ ಸಿ.ಎಸ್.ಪಾಟೀಲ್.
ಬೆಂಗಳೂರಿನಲ್ಲಿ ಮಳೆಗಾಲಲ್ಲಿ ಸಾಮಾನ್ಯವಾಗಿ 27 ರಿಂದ 28 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುತ್ತದೆ. ಆದರೆ ಈಗ 30 ರಿಂದ 31 ಡಿಗ್ರಿಯ ತನಕ ತಾಪಮಾನವಿದೆ. ಹೀಗಾಗಿ ಮೋಡವಿದ್ದರೂ ಸೆಖೆಯ ಅನುಭವವಾಗುತ್ತಿದೆ. ಕೆಲವರು ಮನೆಯೊಳಗೆ ಇದ್ದರೂ ಬೆವರುವಂತಾಗಿದೆ.
ಕಳೆದ ಒಂದು ತಿಂಗಳಿನಿಂದ ಶೀತ, ನೆಗಡಿ, ಗಂಟಲು ನೋವು, ಉರಿಶೀತ, ಮೈಕೈ ನೋವು, ಸಾಮಾನ್ಯ ಸೋಂಕುಗಳು ಹೆಚ್ಚಾಗಿವೆ. ಅದರಲ್ಲೂ ಕಳೆದ ಎಂಟು ಹತ್ತು ದಿನಗಳಿಂದ ಹವಾಮಾನದಲ್ಲಿ ಹೆಚ್ಚಾಗಿ ಬದಲಾವಣೆ ಕಂಡು ಬಂದಿರುವುದರಿಂದ ಹೊರ ರೋಗಿಗಳ ಸಂಖ್ಯೆಯಲ್ಲಿ ಶೇ.10ರಷ್ಟು ಹೆಚ್ಚಾಗಿದೆ. ಮೂಗು, ಗಂಟಲು ಮತ್ತು ವಾಯುಮಾರ್ಗಗಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ವೈರಲ್ ಸೋಂಕು ಪ್ರಕರಣಗಳಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ ವಿಕ್ಟೋರಿಯಾ ಆಸ್ಪತ್ರೆ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ.ರವಿ ಅವರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಒಂದೆಡೆ ಮಳೆ ಬಂದರೂ ಅತಿಯಾದ ಸೆಕೆ, ಬೆಳಗಿನ ಹೊತ್ತು ಆಗಾಗ ಬಿಸಿಲು, ಮಳೆಯ ವಾತಾವರಣದಿಂದಾಗಿ ಡೆಂಗ್ಯೂ, ಟೈಫಾಯ್ಡ್ ಹಾಗೂ ವೈರಲ್ ಜ್ವರ ಕೂಡ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಸಾರ್ವಜನಿಕರು ಆರೋಗ್ಯ ಮತ್ತು ನೈರ್ಮಲ್ಯತೆ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿದೆ. ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ : Namma Metro News | ನಾಳೆ ಹಸಿರು ಮಾರ್ಗದಲ್ಲಿನ ಈ ಭಾಗದಲ್ಲಿ ಮೆಟ್ರೊ ರೈಲು ಸಂಚಾರ ಸಂಪೂರ್ಣ ಬಂದ್