ಬೆಂಗಳೂರು, ಆ.19 www.bengaluruwire.com : ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಿತ ಪ್ರದೇಶ ನಾಗಸಂದ್ರ-ಮಾದವಾರ ಮಧ್ಯೆ ಮೆಟ್ರೋ ರೈಲು ಪರೀಕ್ಷಾ ಸಂಚಾರ ಆರಂಭವಾಗಿದೆ. ರೀಚ್ -3 ಎತ್ತರಿಸಿದ ಮಾರ್ಗದಲ್ಲಿನ ನಾಗಸಂದ್ರದಿಂದ ಮಾದವಾರದ 3.14 ಕಿ.ಮೀ. ನಡುವೆ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆಯನ್ನು ಮುಂದುವರಿಸಲು, ಕೆಲವು ದಿನಗಳ ಕಾಲ ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆಯಾಗಲಿದೆ.
ಈಗಾಗಲೇ ಕನಿಷ್ಟ 5 ಕಿಮೀ ಮತ್ತು ಗರಿಷ್ಟ 35 ಕಿಮೀ ವೇಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಾಗಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ. ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಆಗಸ್ಟ್ ತಿಂಗಳ 20, 23, 30ನೇ ತಾರೀಖು ಹಾಗೂ ಸೆಪ್ಟೆಂಬರ್ 6 ಮತ್ತು 11ನೇ ತಾರೀಖಿನಂದು ಪೂರ್ಣ ದಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.
ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ಕಡೆಗೆ:
ಆಗಸ್ಟ್ 24ನೆಯ ತಾರೀಖು ಕೊನೆಯ ರೈಲು ಸೇವೆಯು ರಾತ್ರಿ 11.05 ಕ್ಕೆ ಬದಲಾಗಿ 10.00 ಗಂಟೆಗೆ ಪ್ರಾರಂಭವಾಗಲಿದೆ. ಇನ್ನು 25ನೇ ತಾರೀಖು ಈ ನಿಲ್ದಾಣಗಳ ಮಧ್ಯೆ ಮೊದಲ ರೈಲು ಸೇವೆಯು ಬೆಳಿಗ್ಗೆ 5 ಕ್ಕೆ ಬದಲಾಗಿ 6 ಗಂಟೆಗೆ ಪ್ರಾರಂಭವಾಗಲಿದೆ.
ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ಕಡೆಗೆ :
ಆಗಸ್ಟ್ 24 ರಂದು ಕೊನೆಯ ರೈಲು ಸೇವೆಯು ರಾತ್ರಿ 11.12 ಕ್ಕೆ ಪ್ರಾರಂಭವಾಗಲಿದೆ. 25ನೇ ತಾರೀಖಿನಂದುಮೊದಲ ರೈಲು ಸೇವೆಯು ಬೆಳಿಗ್ಗೆ 5.00 ಕ್ಕೆ ಪ್ರಾರಂಭವಾಗಲಿದೆ. ಇದರ ಹೊರತಾಗಿ ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನಮ್ಮ ಮೆಟ್ರೋ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನವೆಂಬರ್ ವೇಳೆಗೆ ಹೊಸ ಮಾರ್ಗ ಸಾರ್ವಜನಿಕರ ಸೇವೆಗೆ ಲಭ್ಯ? :
ವಿಶ್ವಸನೀಯ ಮೂಲಗಳ ಪ್ರಕಾರ ಅಕ್ಟೋಬರ್ ಅಥವಾ ನವಂಬರ್‌ನಲ್ಲಿ ಹಸಿರು ಮಾರ್ಗದ ವಿಸ್ತರಿತ ಪ್ರದೇಶದಲ್ಲಿ ವಾಣಿಜ್ಯ ಸೇವೆಗಳು ಆರಂಭವಾಗಲಿವೆ. ರೇಷ್ಮೆ ಮಂಡಳಿಯಿಂದ ನಾಗಸಂದ್ರದವರೆಗೂ ಇದ್ದ ಹಸಿರು ಮಾರ್ಗದ ನಮ್ಮ ಮೆಟ್ರೋ ಮಾರ್ಗ ಇದೀಗ ಮಾದವಾರ (Bangalore International Exhibition Centre – ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ) ದವರೆಗೂ ವಿಸ್ತರಣೆಯಾಗಿದೆ. ಈ ಮೂಲಕ ಹಸಿರು ಮಾರ್ಗವು 34.64 ಕಿಮೀ ಉದ್ದವಾಗಲಿದೆ. , ಬೆಂಗಳೂರಿನ ಒಟ್ಟು ನಮ್ಮ ಮೆಟ್ರೋ ಮಾರ್ಗ 76.89 ಕಿಮೀ ಗೆ ವಿಸ್ತರಣೆಯಾಗಲಿದೆ. ಪ್ರಾಥಮಿಕ ಹಂತದ ಪರೀಕ್ಷೆ ಆರಂಭವಾಗಿದ್ದು, ಸುಮಾರು 15 ದಿನ ಈ ಪರೀಕ್ಷೆ ನಡೆಯಲಿದೆ. ನಂತರ 45 ದಿನಗಳ ಕಾಲ ಸಿಗ್ನಲಿಂಗ್, ದೂರ ಸಂಪರ್ಕ, ವಿದ್ಯುತ್ ಸರಬರಾಜು, ಸಾಮರ್ಥ್ಯ ಪರಿಶೀಲನೆ ಸೇರಿದಂತೆ ಸಂಚಾರಕ್ಕೆ ಅಗತ್ಯವಿರುವ ಎಲ್ಲಾ ಪರೀಕ್ಷೆಗಳು ನಡೆಯಲಿವೆ.
ನಂತರ ಗುಣಮಟ್ಟ ತಪಾಸಣಾ ಸಂಸ್ಥೆಗಳು ಸುರಕ್ಷತಾ ಪರೀಕ್ಷೆ ನಡೆಸಿ ಅಂತಿಮ ವರದಿ ನೀಡಲಿವೆ. ಈ ವರದಿಯನ್ನು ಸ್ವೀಕರಿಸಿದ ನಂತರ ರೈಲ್ವೆ ಸುರಕ್ಷತಾ ಮಂಡಳಿಯು ಅನುಮತಿ ನೀಡಲಿದೆ. ನಂತರ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಈ ನವೆಂಬರ್ ವೇಳೆಗೆ ಪ್ರಯಾಣಿಕರ ಸೇವೆಗೆ ನಮ್ಮ ಮೆಟ್ರೋ ಸಜ್ಜಾಗಲಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಈ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್), ಮಾದವಾರ ನಿಲ್ದಾಣಗಳು ಇರುತ್ತವೆ. ಈ ನಿಲ್ದಾಣಗಳ ಕಾಮಗಾರಿಯೂ ಬಹುತೇಕ ಮುಕ್ತಾಯಗೊಂಡಿದೆ. ನಾಗಸಂದ್ರ- ಮಾದವಾರ ಮಾರ್ಗ ಪೂರ್ಣಗೊಂಡರೆ ಹಸಿರು ಮಾರ್ಗದ ನಿರ್ಮಾಣ ಶೇ.100ರಷ್ಟು ಪೂರ್ಣಗೊಂಡಂತಾಗುತ್ತದೆ.
ಮೆಜಿಸ್ಟಿಕ್ ಹಸಿರು ಮಾರ್ಗದ ಹಳಿಯ ಮೇಲೆ ಬಿದ್ದ ಇಬ್ಬರು ಬಚಾವ್ :
ಇಂದು ಮಧ್ಯಾಹ್ನ ಗಂಟೆ 1.13ರ ಸುಮಾರಿಗೆ ಹಸಿರು ಮಾರ್ಗದ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಲ್ಲಿ ಜಯನಗರದಿಂದ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರಲ್ಲಿ (ಅಂಧರು) ಇಬ್ಬರು ಆಸ್ಮಿಕವಾಗಿ ಹಳಿ ಮೇಲೆ ಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ತುರ್ತು ಟ್ರಿಪ್ ಸಿಸ್ಟಂ ಕಾರ್ಯಾಚರಣೆ ನಡೆಸಿ ಸಹ ಪ್ರಯಾಣಿಕರ ನೆರವಿನಿಂದ ರಕ್ಷಿಸಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ದೃಢಪಟ್ಟಿದೆ. ಮಧ್ಯಾಹ್ನ ಗಂಟೆ 1.26 ಕ್ಕೆ ಎಂದಿನಂತೆ ರೈಲು ಕಾರ್ಯಾಚರಣೆಯನ್ನು ಪುನರಾರಂಭಿಸಲಾಯಿತು.