ನವದೆಹಲಿ/ಬೆಂಗಳೂರು, ಆ.17 www.bengaluruwire.com : ಬಹುನಿರೀಕ್ಷಿತ ನಮ್ಮ ಮೆಟ್ರೋ ಮೂರನೇ ಹಂತ (Namma Metro 3rd Phase)ದ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಒಟ್ಟು 31 ನಿಲ್ದಾಣಗಳೊಂದಿಗೆ 44.65 ಕಿ.ಮೀ ಉದ್ದದ ಎರಡು ಎಲಿವೇಟೆಡ್ ಕಾರಿಡಾರ್ ಗಳನ್ನು ಹೊಂದಿರುವ ಬೆಂಗಳೂರು ಮೆಟ್ರೋ ರೈಲು ಯೋಜನೆಯ 3ನೇ ಹಂತಕ್ಕೆ ತನ್ನ ಒಪ್ಪಿಗೆ ನೀಡಿದೆ. ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ (ಹೊರ ವರ್ತುಲ ರಸ್ತೆ ಪಶ್ಚಿಮದಲ್ಲಿ) 32.15 ಕಿ.ಮೀ ಉದ್ದದ ಕಾರಿಡಾರ್ -1 ರಲ್ಲಿ 22 ನಿಲ್ದಾಣಗಳು ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗೆ (ಮಾಗಡಿ ರಸ್ತೆಯುದ್ದಕ್ಕೂ) 12.50 ಕಿ.ಮೀ ಉದ್ದದ ಕಾರಿಡಾರ್ -2 ರಲ್ಲಿ 9 ನಿಲ್ದಾಣಗಳಿರುತ್ತವೆ. ಈ ಯೋಜನೆಯು ಪೂರ್ಣಗೊಳ್ಳುವಾಗ ಒಟ್ಟು ವೆಚ್ಚ 15,611 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ.
3ನೇ ಹಂತ ಕಾರ್ಯರೂಪಕ್ಕೆ ಬಂದರೆ ಬೆಂಗಳೂರು ನಗರವು ಒಟ್ಟಾರೆ 220.20 ಕಿ.ಮೀ ಉದ್ದದ ಸಕ್ರಿಯ ಮೆಟ್ರೋ ರೈಲು ಜಾಲವನ್ನು ಹೊಂದಲಿದೆ. ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗಿನ ಮಾರ್ಗದಲ್ಲಿನ ಕಾರಿಡಾರ್-1 ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದ್ದು ಒಟ್ಟಾರೆ 322 ಆಸ್ತಿಗಳ 1,29,743 ಚದರ ಮೀಟರ್ ಜಾಗವನ್ನು ಭೂಸ್ವಾಧೀನಪಡಿಸಿಕೊಳ್ಳಲು ಗುರ್ತಿಸಲಾಗಿದೆ. ಸದ್ಯದಲ್ಲೆ ಕೆಐಎಡಿಬಿ ಈ ಕುರಿತು ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಇನ್ನು ಹೊಸಹಳ್ಳಿಯಿಂದ ಕಡಬಗೆರೆವರೆಗೆ (ಮಾಗಡಿ ರಸ್ತೆಯುದ್ದಕ್ಕೂ) ಅಂದರೆ ಕಾರಿಡಾರ್-2 ನಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಆಸ್ತಿಗಳನ್ನು ಭೂಸ್ವಾಧೀನಕ್ಕೆ ಗುರುತಿಸುವ ಕಾರ್ಯ ಆರಂಭವಾಗಬೇಕಿದೆ ಎಂದು ನಮ್ಮ ಮೆಟ್ರೋ ಮೂಲಗಳು ತಿಳಿಸಿದೆ.
3ನೇ ಹಂತದ ಯೋಜನೆ ಪ್ರಯೋಜನಗಳು:
ಬೆಂಗಳೂರು ಮೆಟ್ರೋ ರೈಲು ಯೋಜನೆಯ 3 ನೇ ಹಂತವು ನಗರದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಹಂತ -3 ನಗರದ ಮೆಟ್ರೋ ರೈಲು ಜಾಲದ ಪ್ರಮುಖ ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತದೆ.
ಹೆಚ್ಚಲಿದೆ ಮೆಟ್ರೋ ಜಾಲದ ಸಂಪರ್ಕ:
ಮೂರನೇ ಹಂತವು ಸುಮಾರು 44.65 ಕಿ.ಮೀ ಹೊಸ ಮೆಟ್ರೋ ಮಾರ್ಗಗಳನ್ನು ಸೇರಿಸುತ್ತದೆ, ಇದು ಬೆಂಗಳೂರು ನಗರದ ಪಶ್ಚಿಮ ಭಾಗವನ್ನು ಜೋಡಿಸುತ್ತದೆ. ಮೂರನೇ ಹಂತದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶ, ಬನ್ನೇರುಘಟ್ಟ ರಸ್ತೆ ಮತ್ತು ಹೊರ ವರ್ತುಲ ರಸ್ತೆಯ ಐಟಿ ಕೈಗಾರಿಕೆಗಳು, ತುಮಕೂರು ರಸ್ತೆ ಮತ್ತು ಒಆರ್ ಆರ್ ನಲ್ಲಿರುವ ಜವಳಿ ಮತ್ತು ಎಂಜಿನಿಯರಿಂಗ್ ವಸ್ತುಗಳ ಉತ್ಪಾದನಾ ಘಟಕಗಳು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಪಿಇಎಸ್ ವಿಶ್ವವಿದ್ಯಾಲಯ, ಅಂಬೇಡ್ಕರ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ಕೆಎಲ್ ಇ ಕಾಲೇಜು, ದಯಾನಂದಸಾಗರ ವಿಶ್ವವಿದ್ಯಾಲಯ, ಐಟಿಐ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳು ಸಂಪರ್ಕವನ್ನು ಪಡೆಯಲಿವೆ.
ಹಂತ -3 ಕಾರಿಡಾರ್ ಗಳು ನಗರದ ದಕ್ಷಿಣ ಭಾಗ, ಹೊರ ವರ್ತುಲ ರಸ್ತೆ ಪಶ್ಚಿಮ, ಮಾಗಡಿ ರಸ್ತೆ ಮತ್ತು ವಿವಿಧ ನೆರೆಹೊರೆಯ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸುತ್ತವೆ, ಇದು ನಗರದ ಒಟ್ಟಾರೆ ಸಂಪರ್ಕವನ್ನು ಹೆಚ್ಚಿಸುತ್ತದೆ. ವಾಣಿಜ್ಯ ಕೇಂದ್ರಗಳು, ಕೈಗಾರಿಕಾ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಸೌಲಭ್ಯಗಳಿಗೆ ಸುಧಾರಿತ ಸಂಪರ್ಕವು ನಿವಾಸಿಗಳಿಗೆ ಉತ್ತಮ ಸಂಪರ್ಕ ಹಾಗು ಸವಲತ್ತುಗಳ ಲಭ್ಯತೆಯನ್ನು ಸುಗಮಗೊಳಿಸುತ್ತದೆ.
ನಗರದ ಸಂಚಾರ ದಟ್ಟಣೆ ಇಳಿಕೆ:
ಮೆಟ್ರೋ ರೈಲು ಸಮರ್ಥ ಪರ್ಯಾಯ ರಸ್ತೆ ಸಾರಿಗೆಯಾಗುವ ಮತ್ತು ಬೆಂಗಳೂರು ನಗರದಲ್ಲಿ ಹಂತ -3 ಮೆಟ್ರೋ ರೈಲು ಜಾಲದ ವಿಸ್ತರಣೆಯೊಂದಿಗೆ ಸಂಚಾರ ದಟ್ಟಣೆಯನ್ನು ನಿವಾರಿಸುವ ನಿರೀಕ್ಷೆಯಿದೆ ಮತ್ತು ಅದು ಹೊರ ವರ್ತುಲ ರಸ್ತೆ ಪಶ್ಚಿಮ, ಮಾಗಡಿ ರಸ್ತೆ ಮತ್ತು ನಗರದ ಇತರ ಪ್ರಮುಖ ರಸ್ತೆಗಳ ಹೆಚ್ಚು ಜನದಟ್ಟಣೆಯ ಮಾರ್ಗಗಳಲ್ಲಿ ವಿಶೇಷವಾದ ಪರಿಣಾಮ ಬೀರಲಿದೆ. ರಸ್ತೆ ಸಂಚಾರದ ಒತ್ತಡವನ್ನು ಕಡಿಮೆ ಮಾಡುವುದರಿಂದ ವಾಹನಗಳ ಸುಗಮ ಚಲನೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು, ಒಟ್ಟಾರೆ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು ಇತ್ಯಾದಿಗಳಿಗೆ ಕಾರಣವಾಗುತ್ತದೆ.
ರಾಜಧಾನಿಯ ಪರಿಸರ ಪ್ರಯೋಜನಗಳು:
3 ನೇ ಹಂತದ ಮೆಟ್ರೋ ರೈಲು ಯೋಜನೆಯ ಸೇರ್ಪಡೆ ಮತ್ತು ಬೆಂಗಳೂರು ನಗರದಲ್ಲಿ ಒಟ್ಟಾರೆ ಮೆಟ್ರೋ ರೈಲು ಜಾಲದ ಹೆಚ್ಚಳವು ಸಾಂಪ್ರದಾಯಿಕ ಪಳೆಯುಳಿಕೆ ಇಂಧನ ಆಧಾರಿತ ಸಾರಿಗೆಗೆ ಹೋಲಿಸಿದರೆ ಇಂಗಾಲದ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಆರ್ಥಿಕ ಬೆಳವಣಿಗೆ ಕಾರಣವಾಗಲಿದೆ :
ಪ್ರಯಾಣದ ಸಮಯದಲ್ಲಿ ಇಳಿಕೆ ಮತ್ತು ನಗರದ ವಿವಿಧ ಭಾಗಗಳಿಗೆ ಸುಧಾರಿತ ಪ್ರಯಾಣ ಅವಕಾಶ ಲಭ್ಯತೆಯು ಜನರು ತಮ್ಮ ಕೆಲಸದ ಸ್ಥಳಗಳನ್ನು ಹೆಚ್ಚು ದಕ್ಷತೆಯಿಂದ ಮತ್ತು ತ್ವರಿತವಾಗಿ ತಲುಪಲು ಅನುವು ಮಾಡಿಕೊಡುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಹಂತ -3 ರ ನಿರ್ಮಾಣ ಮತ್ತು ಕಾರ್ಯಾಚರಣೆಯು ನಿರ್ಮಾಣ ಕಾರ್ಮಿಕರಿಂದ ಆಡಳಿತ ಸಿಬ್ಬಂದಿ ಮತ್ತು ನಿರ್ವಹಣಾ ಸಿಬ್ಬಂದಿಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ.
ಅಲ್ಲದೆ, ವರ್ಧಿತ ಸಂಪರ್ಕವು ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸುತ್ತದೆ, ವಿಶೇಷವಾಗಿ ಈ ಹಿಂದೆ ಹೂಡಿಕೆ ಅವಕಾಶಗಳು ಕಡಿಮೆ ಪ್ರಮಾಣದಲ್ಲಿ ಲಭ್ಯ ಇದ್ದ ಹೊಸ ಮೆಟ್ರೋ ನಿಲ್ದಾಣಗಳ ಬಳಿಯ ಪ್ರದೇಶಗಳಲ್ಲಿ, ಹೂಡಿಕೆ ಮತ್ತು ಅಭಿವೃದ್ಧಿಯನ್ನು ಆಕರ್ಷಿಸುತ್ತದೆ.
ಇದರ ಸಾಮಾಜಿಕ ಪರಿಣಾಮ ಏನು? :
ಬೆಂಗಳೂರಿನಲ್ಲಿ 3ನೇ ಹಂತದ ಮೆಟ್ರೋ ರೈಲು ಜಾಲದ ವಿಸ್ತರಣೆಯು ಸಾರ್ವಜನಿಕ ಸಾರಿಗೆಗೆ ಹೆಚ್ಚು ಸಮಾನ ಪ್ರವೇಶಾವಕಾಶವನ್ನು ಒದಗಿಸುತ್ತದೆ. ವೈವಿಧ್ಯಮಯ ಸಾಮಾಜಿಕ-ಆರ್ಥಿಕ ಗುಂಪುಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸಾರಿಗೆ ಅಸಮಾನತೆಯನ್ನು ಕಡಿಮೆ ಮಾಡುತ್ತದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಮೂಲಕ ಮತ್ತು ಅಗತ್ಯ ಸೇವೆಗಳ ಲಭ್ಯತೆಯನ್ನು ಮತ್ತು ಅವುಗಳಿಗೆ ಪ್ರವೇಶವನ್ನು ಸುಧಾರಿಸುವ ಮೂಲಕ ಉನ್ನತ ಗುಣಮಟ್ಟದ ಜೀವನಕ್ಕೆ ಕೊಡುಗೆ ನೀಡುತ್ತದೆ.
ಬಹು ಮಾದರಿ ಏಕೀಕರಣ/ ಸಂಯೋಜನೆ ಮತ್ತು ಕೊನೆಯ ಮೈಲಿವರೆಗೂ ಸಂಪರ್ಕ:
ಜೆ.ಪಿ.ನಗರ 4ನೇ ಹಂತದಲ್ಲಿ, ಜೆ.ಪಿ.ನಗರ, ಕಾಮಾಕ್ಯ, ಮೈಸೂರು ರಸ್ತೆ, ಸುಮನಹಳ್ಳಿ, ಪೀಣ್ಯ, ಬಿಇಎಲ್ ವೃತ್ತ, ಹೆಬ್ಬಾಳ, ಕೆಂಪಾಪುರ, ಹೊಸಹಳ್ಳಿ ಸೇರಿದಂತೆ 10 ಸ್ಥಳಗಳಲ್ಲಿ ಬಹು ಮಾದರಿ ಏಕೀಕರಣವನ್ನು ಯೋಜಿಸಲಾಗಿದೆ. ಹಂತ -3ರ ಎಲ್ಲಾ ನಿಲ್ದಾಣಗಳಲ್ಲಿ ಮೀಸಲಾದ ಬಸ್ ಬೇಗಳು, ಪಿಕ್ ಅಪ್ ಮತ್ತು ಡ್ರಾಪ್ ಆಫ್ ಬೇಗಳು, ಪಾದಚಾರಿ ಮಾರ್ಗಗಳು, ಐಪಿಟಿ ಅಥವಾ ಆಟೋ ರಿಕ್ಷಾ ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿದೆ.
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮೆಟ್ರೋ ನಿಲ್ದಾಣಗಳಿಗೆ ಬಿಎಂಟಿಸಿ ಫೀಡರ್ ಬಸ್ ಗಳನ್ನು ಓಡಿಸುತ್ತಿದ್ದು, ಇದನ್ನು ಹಂತ -3ರ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು. 11 ಪ್ರಮುಖ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹಂತ -1 ಮತ್ತು ಹಂತ -2 ರ ಅಸ್ತಿತ್ವದಲ್ಲಿರುವ ನಿಲ್ದಾಣಗಳನ್ನು ಹಂತ -3 ರ ಉದ್ದೇಶಿತ ನಿಲ್ದಾಣಗಳೊಂದಿಗೆ ಸಂಯೋಜಿಸಲಾಗಿದೆ. ಎರಡು ರೈಲ್ವೆ ನಿಲ್ದಾಣಗಳಿಗೆ (ಲೊಟ್ಟೆಗೊಲ್ಲಹಳ್ಳಿ ಮತ್ತು ಹೆಬ್ಬಾಳ) ಎಫ್ಒಬಿಗಳು ಹಾಗೂ ಸ್ಕೈವಾಕ್ಗಳ ಮೂಲಕ ನೇರ ಸಂಪರ್ಕ ಒದಗಿಸಲಾಗುವುದು. ಹಂತ -3 ಮೆಟ್ರೋ ನಿಲ್ದಾಣಗಳಲ್ಲಿ, ಬೈಕುಗಳು ಮತ್ತು ಸೈಕಲ್ ಗಳಿಗೆ ಶೇರಿಂಗ್ ಸೌಲಭ್ಯವನ್ನು ಸಹ ಯೋಜಿಸಲಾಗಿದೆ.