ಬೆಂಗಳೂರು, ಆ.16 www.bengaluruwire.com : ರಾಜಧಾನಿಯಲ್ಲಿ ರಸ್ತೆಗುಂಡಿಗಳ ಹಾವಳಿ ಎಷ್ಟರ ಮಟ್ಟಿಗೆ ವ್ಯಾಪಕವಾಗಿದೆ ಎಂಬುದಕ್ಕೆ ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ ಅವರ ಆ.14ರಂದು ಎಕ್ಸ್ ಖಾತೆಯಲ್ಲಿ ಹಾಕಿರುವ ಪೋಸ್ಟ್ ಇದಕ್ಕೆ ಸಾಕ್ಷಿಯಾಗಿದೆ.
ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ “ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವೀಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳುಹಿಸಿದ್ದಾರೆ. @bbmpcommr ಅಥವಾ @BMRCL MD ಯಾರಾದ್ರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ” ಎಂದು ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ಟ್ಯಾಗ್ ಮಾಡಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ವ್ಯಾಪಾಕ ಟೀಕೆ ವ್ಯಕ್ತವಾಗಿದೆ.
ಸರ್ಕಾರದ ಭಾಗವಾಗಿರುವ ಪ್ರಭಾವಯುತ ಖಾತೆ ಹೊಂದಿರುವ ಸಚಿವ ಕೃಷ್ಣಭೈರೇಗೌಡ ಅವರೇ ತಾವು ಕರೆದು ಸೂಚನೆ ನೀಡುವ ಜವಾಬ್ದಾರಿಯುತ ಸ್ಥಾನದಲ್ಲಿರುವಾಗ, ಸಚಿವರೇ ಅಧಿಕಾರಿಗಳನ್ನು ಎಕ್ಸ್ ಖಾತೆಯಲ್ಲಿ ಮನವಿ ಮಾಡಿಕೊಂಡಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಸಚಿವರು ಬುಧವಾರ ರಾತ್ರಿ 8.16ಕ್ಕೆ ಹಂಚಿಕೊಂಡ ಈ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈತನಕ 69 ಸಾವಿರ ಜನ ಈ ಪೋಸ್ಟ್ ಅನ್ನು ವೀಕ್ಷಿಸಿದ್ದರೆ, 112 ಜನರು ರಿಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಅಪಲೋಡ್ ಮಾಡಿದ ಮೇಲೆ ಈತನಕ ಈ ಸಂದೇಶಕ್ಕೆ 175 ಜನರು ಟೀಕೆ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶೆಟ್ಟಿ ಎಂಬ ಖಾತೆದಾರು, “ರಾಜ್ಯದ ಕ್ಯಾಬಿನೆಟ್ ಸಚಿವರು @BBMPCOMM ನಿಂದ ಕೆಲಸ ಪಡೆಯಲು ಸಾಧ್ಯವಾಗದಿದ್ದರೆ, ಉಳಿದ ಸಾಮಾನ್ಯ ಜನರ ಬಗ್ಗೆ ಹೇಗೆ? #BBMP ಅನ್ನು ನಡೆಸಲು ಚುನಾಯಿತ ಕಾರ್ಪೊರೇಟರ್‌ಗಳನ್ನು ಹೊಂದಲು ಮತ್ತು ಹೆಚ್ಚು ಅಗತ್ಯವಿರುವ ಹೊಣೆಗಾರಿಕೆಯನ್ನು ಮರಳಿ ತರಲು ಇದು ಉತ್ತಮ ಸಮಯ. #BrandBengaluru @DKShivakuma” ಎಂದು ಬಿಬಿಎಂಪಿ ಆಯುಕ್ತರು ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಸತ್ಯ ಎಂಬ ಖಾತೆದಾರರು “ಈ ಕೆಲಸ ಯಾರ ಹೊಣೆ ಎಂಬುದೇ ತಿಳಿದಿಲ್ಲ ಸರ್ಕಾರಕ್ಕೆ!! ಈ ಕಾರಣಕ್ಕೆ #BMLTA ಸ್ಥಾಪಿಸಿ ಎಂದು ಕೋರುತ್ತಿರುವುದು” ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು “ಇಬ್ಬಲೂರಿನಿಂದ ಬೆಳ್ಳಂದೂರು ಸರ್ವೀಸ್ ರಸ್ತೆ, ಅಗರದಿಂದ ಎಚ್‌ಎಸ್‌ಆರ್ ಲೇಔಟ್ ಸರ್ವೀಸ್ ರಸ್ತೆ, ಇನ್ನೂ ಹದಗೆಟ್ಟ ಸ್ಥಿತಿಯಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಚಿವರಿಗೆ ಇಂತಹ ಗತಿಯಾದರೆ..ಜನಸಾಮಾನ್ಯರ ಸಮಸ್ಯೆಗೆ ಧ್ವನಿಯಾಗುತ್ತಾ ಈ ಎಮ್ಮೆ ಚರ್ಮದ ಸರ್ಕಾರ???” ಎಂದು ರಾಮಚಂದ್ರ ಯರಗಲ್ಲ ಟೀಕೆ ವ್ಯಕ್ತಪಡಿಸಿದ್ದಾರೆ.