ಬೆಂಗಳೂರು, ಆ.13 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಎರಡು ದಿನ ಬಾಕಿಯಿದೆ. ರಾಜ್ಯ ಸರ್ಕಾರದಿಂದ ನಡೆಯುವ ಕಾರ್ಯಕ್ರಮ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಯೋಜನೆ ನಡೆಯುತ್ತಿದ್ದು, ಆಗಸ್ಟ್ 15 ರಂದು ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ಮಾಡಿ ಗೌರವ ವಂದನೆ ಸ್ವೀಕರಿಸಿದ್ದಾರೆ. ಬಳಿಕ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡುತ್ತಾರೆ.
ಸ್ವಾತಂತ್ರ್ಯಾ ದಿನಾಚರಣೆ ಹಿನ್ನಲೆಯಲ್ಲಿ ಮಾಣಿಕಾ ಷಾ ಮೈದಾನದಲ್ಲಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರ ಪೊಲೀಸ್ ಆಯುಕ್ತ ದಯಾನಂದ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಅಂಗಾಂಗ ದಾನ ಮಾಡಿರುವ ಒಟ್ಟು 64 ಕುಟುಂಬದ ಸದಸ್ಯರಿಗೆ ಮುಖ್ಯಮಂತ್ರಿಗಳು ಪ್ರಶಂಸಾ ಪತ್ರ ನೀಡಿ ಗೌರವಿಸಲಿದ್ದಾರೆ ಎಂದರು.
ಸ್ವಾಂತಂತ್ರ್ಯೋತ್ಸವದಲ್ಲಿ ಮಿಂಚಲಿದೆ ಪಂಚಗ್ಯಾರಂಟಿ ಪ್ರದರ್ಶನ :
ಸ್ವಾತಂತ್ರ್ಯೋತ್ಸವದ ಅಂಗವಾಗಿ ನಾಡಗೀತೆ ಮತ್ತು ರೈತಗೀತೆ, 750 ಪ್ರೌಢಶಾಲಾ ಮಕ್ಕಳಿಂದ ಜಯಭಾರತಿ ಎಂಬ ಕಾರ್ಯಕ್ರಮ, ರಾಷ್ಟ್ರೀಯ ಸೇವಾ ಯೋಜನೆ, ರಾಜ್ಯ ಎನ್.ಎಸ್.ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸರ್ಕಾರದ ಐದು ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಬಗ್ಗೆ 400 ಮಕ್ಕಳು ಪ್ರದರ್ಶನ ಕಾರ್ಯಕ್ರಮ ನೀಡಲಿದ್ದಾರೆ. ಬಿಬಿಎಂಪಿಯ ಸಂಯುಕ್ತ ಪದವಿಪೂರ್ವ ಕಾಲೇಜಿನ 700 ಮಕ್ಕಳಿಂದ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ದೇವಿ ಕುರಿತ ಕಾರ್ಯಕ್ರಮ, ಮರಾಠ ಲೈಟ್ ಇನ್ ಫೆಂಟ್ರಿ ರೆಜಿಮೆಂಟಿನ ಸೈನಿಕರಿಂದ ನಾಡಿನ ಹೆಸರಾಂತ ಸಾಹಸ ಕ್ರೀಡೆಯಾದ ಮಲ್ಲಕಂಬ ಪ್ರದರ್ಶನ, ಸೇನಾಪಡೆಯ ಪ್ಯಾರಚೂಟ್ ರೆಜಿಮೆಂಟ್ ತರಬೇತಿ ಕೇಂದ್ರದ ಸೇನಾನಿಗಳಿಂದ ಪ್ಯಾರಾ ಮೋಟಾರ್ ಪ್ರದರ್ಶನ, ಕಾರ್ಪ್ಸ್ ಮಿಲಿಟರಿ ಪೊಲೀಸ್ ಕೇಂದ್ರ ಮತ್ತು ಶಾಲೆಯಿಂದ ಮೋಟಾರ್ ಸೈಕಲ್ ಪ್ರದರ್ಶನವಿರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ಮಾಣಿಕ್ ಷಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುತ್ತಿದ್ದು, ಭದ್ರತೆಗಾಗಿ 100 ಸಿಸಿ ಕ್ಯಾಮರಾ ವ್ಯವಸ್ಥೆ, 2 ಬ್ಯಾಗೇಜ್ ಸ್ಕ್ಯಾನರ್ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣಾ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ. ಕೆಎಸ್ ಆರ್ ಪಿ, ಸಿಆರ್ ಪಿಎಫ್, ಬಿಎಸ್ಎಫ್, ಅಗ್ನಿಶಾಮಕ ದಳ ಸೇರಿದಂತೆ 1500 ಮಂದಿ ಗೌರವರಕ್ಷೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ. ನಗರದಲ್ಲಿ ಕೆಲವು ಕಡೆ ಸಂಚಾರ ಮಾರ್ಗ ಬದಲಾವಣೆ ಮಾಡಿ ಬೆಂಗಳೂರು ನಗರ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಇದರ ಅಂಗವಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದ ಒಳಗಡೆ ಮತ್ತು ಸುತ್ತ-ಮುತ್ತಲ ಭಾಗಗಳಲ್ಲಿ ಈ ಕೆಳಕಂಡಂತೆ ಸಂಚಾರ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಾಹನ ಪ್ರವೇಶ, ನಿಲ್ದಾಣ ವ್ಯವಸ್ಥೆ ಹೇಗಿರುತ್ತೆ? :
ಕಾರ್ ಪಾಸ್‌ಗಳನ್ನು ಹೊಂದಿರುವ ಎಲ್ಲಾ ಆಹ್ವಾನಿತರು ಅವರುಗಳ ಪಾಸ್‌ಗಳಲ್ಲಿ ನಿಗದಿಪಡಿಸಿದ ಗೇಟ್‌ಗಳಲ್ಲಿ ಆಗಮಿಸಿ ನಿಗದಿತ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಬೇಕು. ತುರ್ತು ಸೇವಾ ವಾಹನಗಳಾದ ಅಂಬುಲೆನ್ಸ್, ಅಗ್ನಿಶಾಮಕ ದಳದ ವಾಹನಗಳು, ನೀರಿನ ಟ್ಯಾಂಕರ್, ಕೆ.ಎಸ್.ಆರ್.ಪಿ., ಕ್ಯೂ.ಆರ್.ಟಿ, ಬಿ.ಬಿ.ಎಂ.ಪಿ. ಹಾಗೂ ಪಿಡಬ್ಲ್ಯೂಡಿ ವಾಹನಗಳು ಪ್ರವೇಶ ದ್ವಾರ-2ರ ಮುಖಾಂತರ ಪರೇಡ್ ಮೈದಾನದ ಒಳಗೆ ಪ್ರವೇಶಿಸಿ ನಂತರ ಪೋರ್ಟ್ ವಾಲ್ ಹಿಂಭಾಗದಲ್ಲಿ (ದಕ್ಷಿಣದ ಕಡೆಗೆ) ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಮಾಧ್ಯಮದವರ ವಾಹನಗಳು ಪ್ರವೇಶ ದ್ವಾರ-4ರ ಮೂಲಕ ಒಳ ಪ್ರವೇಶಿಸಿ ಮೈದಾನದ ಪೂರ್ವ ಭಾಗದಲ್ಲಿ ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ.
ಇದನ್ನೂ ಓದಿ :
1) ಜಗತ್ ಪ್ರಸಿದ್ಧರಾಗಿದ್ದ ಭಾರತದ ಈ ವ್ಯಕ್ತಿಗಳು ತಮ್ಮ ಕೆಲಸಗಳಿಗೆ ಹೆಚ್ಚಾಗಿ ಬಳಸುತ್ತಿದ್ದ ಕೈ ಯಾವುದು ಗೊತ್ತಾ?
ವಾಹನ ನಿಲುಗಡೆ ನಿಷೇಧವಿರುವ ರಸ್ತೆಗಳು :
* ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ
* ಕಬ್ಬನ್ ರಸ್ತೆ, ಸಿ.ಟಿ.ಓ. ವೃತ್ತದಿಂದ ಕೆ.ಆರ್.ರಸ್ತೆ & ಕಬ್ಬನ್‌ರಸ್ತೆ ಜಂಕ್ಷನ್‌ವರೆಗೆ
* ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ.
ಬೆಂಗಳೂರು ಸಂಚಾರ ಪೊಲೀಸರಿಂದ ಸಾರ್ವಜನಿಕ ಬಂಧುಗಳಲ್ಲಿ ವಿಶೇಷ ಮನವಿ ಮಾಡಲಾಗಿದ್ದು, ಮಾಣಿಕ್ ಷಾ ಪರೇಡ್ ಮೈದಾನ ಹಾಗೂ ಸುತ್ತಮುತ್ತ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕೊರತೆ ಇರುವುದರಿಂದ ಹಾಗೂ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾರ್ವಜನಿಕರು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಮೆಟ್ರೋ ಸೇವೆಯನ್ನು ಬಳಸುವಂತೆ ನಗರ ಸಂಚಾರಿ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ. ಯಾವುದೇ ಸಹಾಯಕ್ಕಾಗಿ ಪೊಲೀಸರು ಸದಾ ನಿಮ್ಮೊಂದಿಗಿರುತ್ತಾರೆ. ದಯವಿಟ್ಟು ಸ್ಥಳದಲ್ಲಿರುವ ಪೊಲೀಸರನ್ನು ಸಂಪರ್ಕಿಸಿ ಅಥವಾ 112ಗೆ ಕರೆ ಮಾಡಿ, ಸ್ವಾತಂತ್ರೋತ್ಸವ ದಿನಾಚರಣೆ ಸಂಭ್ರಮಾಚರಣೆಯನ್ನು ಯಶಸ್ವಿಗೊಳಿಸಲು ತಮ್ಮ ಸಹಕಾರವನ್ನು ಬಯಸುತ್ತೇವೆ ಎಂದು ಪೊಲೀಸರು ಮನವಿ ಮಾಡಿದ್ದಾರೆ.