ಬೆಂಗಳೂರು, ಆ.12 www.bengaluruwire.com :ಆನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆ.12 ವಿಶ್ವ ಆನೆಗಳ ದಿನಾ ಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಜನರಿಗೆ ಆನೆಯ ಮಹತ್ವ ಹಾಗೂ ಅವುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta Biological Park)ದಲ್ಲಿ ವಿಶ್ವ ಆನೆ ದಿನಾಚರಣೆಯನ್ನು ಸ್ವಾರಸ್ಯಕರವಾಗಿ ಆಚರಿಸಲಾಯಿತು.

ಉದ್ಯಾನವನ ಹಾಗೂ ಸಫಾರಿಯಲ್ಲಿ ಒಟ್ಟು 27 ಆನೆಗಳಿವೆ. ಆನೆಗಳಿಗೆ ಕಾಡಿನಲ್ಲಿ ಸಿಗದಂತಹ ವಿಶೇಷ ಖಾದ್ಯಗಳಾದ ಹಲಸಿನ ಹಣ್ಣು, ಕಲ್ಲಂಗಡಿ, ನೆಲಗಡಲೆಯಂತಹ ವಿಶೇಷ ಆಹಾರಗಳನ್ನು ಕಾರ್ಯನಿರ್ವಾಹಕ ನಿರ್ದೇಶಕ ವಿಶಾಲ್ ಸೂರ್ಯ ಸೇನ್, ವೈದ್ಯಾಧಿಕಾರಿ ಕಿರಣ್, ಆರ್‌ಎಫ್‌ಒ ದಿನೇಶ್, ಶೈಕ್ಷಣಿಕ ಅಧಿಕಾರಿ ಅಮಲಾ, ಆನೆ ಮೇಲ್ವಿಚಾರಣಾ ಅಧಿಕಾರಿ ಸುರೇಶ್ ಹಾಗೂ ಸಿಬ್ಬಂದಿ ವರ್ಗ ನೇತೃತ್ವದಲ್ಲಿ ನೀಡಲಾಯಿತು.

ಮೃಗಾಲಯದ ಸ್ವಯಂಸೇವಕರು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಆನೆಗಳ ವಂಶವೃಕ್ಷ, ಆನೆಗಳ ಜೀವಶಾಸ್ತ್ರ, ನಡವಳಿಕೆ, ರೂಪಾಂತರಗಳು ಮತ್ತು ಅವುಗಳ ಪರಿಸರ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಕುಟುಂಬದ ಬಂಧವನ್ನು ತೋರಿಸಲು ಬನ್ನೇರಘಟ್ಟ ಜೈವಿಕ ಉದ್ಯಾನವನದಲ್ಲಿರುವ ಆನೆಗಳ ವಂಶವೃಕ್ಷದ ಹಿರಿಮೆ, ಪರಿಸರದಲ್ಲಿ ಆನೆಗಳ ಸಂರಕ್ಷಣೆಯ ಬಗ್ಗೆ ಸಂದರ್ಶಕರಿಗೆ ವಿವರಿಸಲಾಯಿತು.

ಚಿಕ್ಕ ಮಕ್ಕಳು ಆನೆಯ ಮುಂದೆ ಪೋಟೋಗೆ ಪೋಸು ನೀಡಿ ಸಂಭ್ರಮಿಸಿದರು. ಇತ್ತೀಚೆಗೆ ಮೂರು ಜನರನ್ನು ತುಳಿದು ಕೊಂದು ಹಾಕಿದ್ದ ಮಕ್ನಾ ಆನೆಯನ್ನು ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಎಂಟು ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಸೀಗೆ ಕಟ್ಟೆಯ ಶಿಬಿರಕ್ಕೆ ಸ್ಥಳಾಂತರಿಸಿ ಮಾನವ – ಆನೆಗಳ ಸಂಘರ್ಷಕ್ಕೆ ಕಡಿವಾಣ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

