ಹೊಸಪೇಟೆ/ಕೊಪ್ಪಳ, ಆ.12 www.bengaluruwire.com : ರಾಜ್ಯದ 70 ವರ್ಷಗಳಷ್ಟು ಹಳೆಯ ತುಂಗಭದ್ರಾ ಜಲಾಶಯದ ಈಗಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿಯಷ್ಟಿದೆ. ಆ.11ನೇ ತಾರೀಖು ಡ್ಯಾಮ್ ಸಾಮರ್ಥ್ಯ 104.18 ಟಿಎಂಸಿಯಷ್ಟು ಬಹುತೇಕ ತುಂಬಿತ್ತು. ರಾತ್ರಿ 11 ಗಂಟೆಯ ಸುಮಾರಿಗೆ ದ 33 ಕ್ರಸ್ಟ್ ಗೇಟ್ ಗಳ ಪೈಕಿ 19ನೇ ಕ್ರಸ್ಟ್ ಗೇಟ್ ಅಳವಡಿಸಿರುವ ಚೈನ್ ಕೊಂಡಿ ಬೆಸುಗೆ ಕಡಿತಗೊಂಡು ಗೇಟ್ ಕೊಚ್ಚಿಕೊಂಡು ಹೋಗಿತ್ತು. ಇದಾದ ಬಳಿಕ ಇದೊಂದೇ ಕ್ರಸ್ಟ್ ಗೇಟ್ ನಲ್ಲಿ 25 ರಿಂದ 30,000 ಕ್ಯೂಸೆಕ್ಸ್ ನೀರು ಹೊರಗೆ ಹೋಗುತ್ತಿದೆ.
20 ಅಡಿ ಅಗಲ ಹಾಗೂ 60 ಅಡಿ ಎತ್ತರದ ಬೃಹತ್ ಉಕ್ಕಿನ ಗೇಟು ಬರೋಬ್ಬರಿ 48 ಟನ್ ಗಳಷ್ಟು ಭಾರವಿದ್ದು, ಅಗಾಧ ಪ್ರಮಾಣದ ನೀರನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಅದೇಕೊ ಕಬ್ಬಿಣದ ಸರಪಳಿಗಳು ಕಡಿತಗೊಂಡು ಅಪಾರ ಪ್ರಮಾಣದ ನೀರು ತುಂಗಭದ್ರಾ ನದಿಗೆ ಹರಿದು ಹೋಗುತ್ತಿದೆ. ಇದೀಗ ಕ್ರಸ್ಟ್ ಗೇಟ್ ಗಳನ್ನು ಯುದ್ಧೋಪಾದಿಯಲ್ಲಿ ಸರಿಪಡಿಸಲು ಕ್ರಸ್ಟ್ ಗೇಟಿನ ವಿನ್ಯಾಸವನ್ನು ಹೊಸಪೇಟೆಯ ನಾರಾಯಣ ಎಂಜಿನಿಯರಿಂಗ್ ಕಂಪನಿಗೆ ನೀಡಲಾಗಿದೆ.
ಇಂದು ಬೆಳಗ್ಗೆ 7 ಗಂಟೆಯಿಂದಲೇ ಡ್ಯಾಮ್ ನಿಂದ ಹಂತ ಹಂತವಾಗಿ ನೀರು ಹೊರಬಿಟ್ಟು ಅಂತಿಮವಾಗಿ 1,50,000 ಕ್ಯೂಸೆಕ್ಸ್ ತನಕ ನೀರು ಬಿಡಲು ತುಂಗಭದ್ರಾ ಮಂಡಳಿ ತೀರ್ಮಾನಿಸಿ ಅದರಂತೆ ನೀರು ಹರಿಸುತ್ತಿದೆ. ಜಲಾಶಯದ ನೀರಿನ ಮಟ್ಟವನ್ನು ಕಡಿಮೆ ಮಾಡಿದರಷ್ಟಯೇ ಕಾಮಗಾರಿ ನಡೆಸಲು ಸಾಧ್ಯ. ಹೇಗೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂಬ ಬಗ್ಗೆ ಕನ್ಸಲ್ಟೆಂಟ್ ಕನ್ನಯ್ಯ ನಾಯ್ಡು ಸೇರಿದಂತೆ ತಂತ್ರಜ್ಞರ ತಂಡ ಅಣೆಕಟ್ಟಿಗೆ ಭೇಟಿ ನೀಡಿದ್ದು, ಪರಿಶೀಲನೆ ಕಾರ್ಯ ಕೈಗೊಂಡಿದೆ ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿದೆ.
ಕಳೆದ 10 ವರ್ಷಗಳಲ್ಲಿ ಇದೇ ಅವಧಿಯಲ್ಲಿ ತುಂಗಭದ್ರಾ ಜಲಾಶಯದ ಸರಾಸರಿ ಒಳಹರಿವು 63,389 ಕ್ಯೂಸೆಕ್ಸ್ ಆಗಿದ್ದರೆ, 61,874 ಕ್ಯೂಸೆಕ್ಸ್ ಹೊರ ಹರಿವನ್ನು ಹೊಂದಿತ್ತು. ಕ್ರಸ್ಟ್ ಗೇಟ್ ಹಾಳಾಗುವ ಮುನ್ನಾ ದಿನ (ಆ.10ರಂದು) ಜಲಾಶಯಕ್ಕೆ 40,925 ಕ್ಯೂಸೆಕ್ಸ್ ನೀರು ಹರಿದು ಬಂದಿದ್ದರೆ, ಕೇವಲ 28,133 ಕ್ಯೂಸೆಕ್ಸ್ ನೀರನ್ನು ತುಂಗಾಭದ್ರಾ ನದಿಗೆ ಹರಿಯಬಿಡಲಾಗಿತ್ತು. ಆದರೆ ಕ್ರಸ್ಟ್ ಗೇಟ್ ನೀರಿನಲ್ಲಿ ಕೊಚ್ಚಿ ಹೋದ ದಿನ (ಆ.11) ಅಣೆಕಟ್ಟಿಗೆ 36,739 ಕ್ಯೂಸೆಕ್ಸ್ ನೀರು ಹರಿದು ಬಂದಿತ್ತು. ಯಾವಾಗ 19ನೇ ನಂಬರಿನ ಗೇಟ್ ನೀರುಪಾಲಾಯಿತೋ, ಇದೊಂದೇ ಗೇಟ್ ನಿಂದ ಹರಿದು ಹೋಗುವ ಪ್ರಮಾಣ ಜಾಸ್ತಿಯಾಯಿತು. ಇದಲ್ಲದೆ ಒಟ್ಟಾರೆ ಇದೊಂದೇ ದಿನ 54,960 ಕ್ಯೂಸೆಕ್ಸ್ ನೀರು ಎಲ್ಲಾ ಗೇಟ್ ಗಳಿಂದ ಜಲಾಶಯದಿಂದ ಆಚೆ ಹರಿದುಹೋಯಿತು. ಪ್ರಸ್ತುತ ಅಣೆಕಟ್ಟಿನಲ್ಲಿ 97.75 ಟಿಎಂಸಿ ನೀರು ಸಂಗ್ರಹವಿದೆ.
ಹೂಳಿನಿಂದ ನೀರು ಸಂಗ್ರಹಣ ಸಾಮರ್ಥ್ಯ ದಿನದಿಂದ ದಿನಕ್ಕೆ ಕುಸಿತ :
1955ನೇ ಇಸವಿಯಲ್ಲಿ ನಿರ್ಮಾಣವಾದ ಅಣೆಕಟ್ಟಿನಲ್ಲಿ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿವೆ. ಮೊದಲಿಗೆ ಅಣೆಕಟ್ಟಿನ ಬಲಭಾಗ 1959-60 ಇಸವಿಯಲ್ಲಿ ಪೂರ್ಣಗೊಂಡರೆ, ಎಡಭಾಗವು 1963-1964ನೇ ಇಸವಿಯಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಅಣೆಕಟ್ಟಿನ ಈ ಮೊದಲಿನ ಬಳಕೆಯ ಸಾಮರ್ಥ್ಯ 130.70 ಟಿಎಂಸಿಯಾಗಿದ್ದರೆ, ಇದೀಗ ಸಾಕಷ್ಟು ಹೂಳು ತುಂಬಿಕೊಂಡು ಪ್ರಸ್ತುತ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ ಗರಿಷ್ಟ 105.78 ಟಿಎಂಸಿಯಷ್ಟಾಗಿದೆ. ಅಂದರೆ 24.22 ಟಿಎಂಸಿ ಅಡಿಗಳಷ್ಟು ಹೆಚ್ಚು ಹೂಳು ತುಂಬಿಕೊಂಡಿರುವುದರಿಂದ ನೀರು ಸಂಗ್ರಹಿಸುವ ಸಾಮರ್ಥ್ಯ ಅಷ್ಟರ ಮಟ್ಟಿಗೆ ಕಡಿಮೆಯಾಗಿದೆ. ಸದ್ಯ 105.78 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯವಿದ್ದರೂ ನಿರುಪಯುಕ್ತ ಶೇಖರಣೆಗೆಂದು 2.30 ಟಿಎಂಸಿ ಡ್ಯಾಮ್ ನಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳಬೇಕಿರುತ್ತದೆ.
17 ಲಕ್ಷ ಎಕರೆ ಕೃಷಿ ಭೂಮಿಗೆ ನೀರುಣಿಸುವ ಡ್ಯಾಮ್ :
ಲಕ್ಷಾಂತರ ಜನರು ತಮ್ಮ ಬೆಳೆಗಳಿಗೆ ಇದೇ ಡ್ಯಾಮಿನ ನೀರನ್ನು ನೆಚ್ಚಿಕೊಂಡಿದ್ದಾರೆ. ಕರ್ನಾಟಕದಲ್ಲಿನ ವಿಜಯನಗರ, ಬಳ್ಳಾರಿ, ಕೊಪ್ಪಳ, ಗದಗ ಹಾಗೂ ರಾಯಚೂರು ಜಿಲ್ಲೆಗಳ 12 ಲಕ್ಷ ಎಕರೆ ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣದ ಸುಮಾರು 5 ಲಕ್ಷ ಎಕರೆ ಕೃಷಿಭೂಮಿಗೆ ನೀರುಣಿಸುತ್ತಿದೆ. ಶನಿವಾರ (ಆ.11) ರಂದು ತುಂಗಭದ್ರಾ ಡ್ಯಾಮ್ ತುಂಬಿದ್ದರಿಂದ ರೈತರ ಮೊಗದಲ್ಲಿ ಖುಷಿ ಮೂಡಿತ್ತು. ಹೀಗಾಗಿ ಎರಡು ಬೆಳೆಗಳಿಗೆ ನೀರು ಸಿಗುವ ಭರವಸೆ ಮೂಡಿತ್ತು. ಯಾವಾಗ 19ನೇ ಕ್ರಸ್ಟ್ ಗೇಟ್ ನೀರು ಪಾಲಾಯಿತೋ ರೈತರು ಗಾಬರಿಗೊಂಡಿದ್ದು, ಪ್ರಸ್ತುತ ಒಂದು ಬೆಳೆಗೆ ಮಾತ್ರ ನೀರು ದೊರೆಯುವ ಭರವಸೆ ಸಿಕ್ಕಿದೆಯಷ್ಟೆ.
ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣೆ ಯೋಜನೆ :
ತುಂಗಭದ್ರ ಅಣೆಕಟ್ಟು ಕುಡಿಯುವ ನೀರು, ವಿದ್ಯುತ್ ಶಕ್ತಿ ಉತ್ಪಾದನೆ ಹಾಗೂ ವ್ಯವಸಾಯಕ್ಕೆ ನೀರು ಒದಗಿಸುವ ವಿವಿದೋದ್ದೇಶ ಯೋಜನೆಯಾಗಿದೆ. ಕರ್ನಾಟಕ ನೀರಾವರಿ ನಿಗಮ (KNN) ಮತ್ತು ತುಂಗಭದ್ರ ಮಂಡಳಿ (Tungabhadra Dam Board – TB Board) ಯಿಂದ ಒಟ್ಟಾರೆ 118 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತೆ. ಈ ಡ್ಯಾಮ್ 70 ವರ್ಷ ಹಳೆಯದಾಗಿದ್ದು, ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣೆ ಯೋಜನೆಯಡಿ (Dam Rehabilitation And Improvement Project) ಇದರ ಫೌಂಡೇಷನ್ ನಿಂದ ಅಣೆಕಟ್ಟು ಮೇಲ್ಭಾಗದ ತನಕ ತಾಂತ್ರಿಕವಾಗಿ ಕಾಮಗಾರಿಗಳನ್ನು ಕೈಗೊಂಡು ಡ್ಯಾಮ್ ಆಯಸ್ಸು ಇನ್ನೂ 30 ವರ್ಷಗಳ ಸದೃಢವಾಗಿರುವಂತೆ ಬಾಳಿಕೆ ಬರುವ ನಿಟ್ಟಿನಲ್ಲಿ ಹಲವು ಕಾರ್ಯಗಳು ನಡೆಯುತ್ತಿದೆ. ತುಂಗಭದ್ರಾ ಡ್ಯಾಮ್ ನಲ್ಲಿ ಒಟ್ಟು 33 ಗೇಟ್ ಗಳಿದ್ದು, 1 ರಿಂದ 16 ಗೇಟ್ ಗಳನ್ನು ಕೇಂದ್ರೀಯ ಜಲ ಆಯೋಗ (Central Water Commission – CWC) ನಿರ್ವಹಣೆ ಮಾಡುತ್ತಿದ್ದರೆ, 17ರಿಂದ 33ರವರೆಗಿನ ಗೇಟ್ ಗಳನ್ನು ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತಿದೆ.
ಡ್ಯಾಮ್ ಸದೃಢತೆಗಾಗಿ ನಡೆಯುತ್ತಿದೆ ಈ ಕಾಮಗಾರಿಗಳು :
ತುಂಗಭದ್ರಾ ಅಣೆಕಟ್ಟು ಒಟ್ಟು 8035 ಅಡಿ ಉದ್ದವಿದ್ದು, ನದಿಯ ತಳಭಾಗದಿಂದ 116 ಅಡಿ ಎತ್ತರವಿದೆ. ಈ ಜಲಾಶಯದ ಒಟ್ಟು ಜಲಾಯನ ಪ್ರದೇಶವು 28,167 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಗೋಡೆ ಮೇಲ್ಭಾಗದ ಅಣೆಕಟ್ಟಿನಲ್ಲಿ ತಳಪಾಯ ತಲುಪುವ ತನಕ ಸಣ್ಣದಾಗಿ, ಡ್ಯಾಮ್ ಮೇಲ್ಭಾಗದಿಂದ 6 ಹಾಗೂ ಕೆಲವು ಕಡೆ 3 ಮೀಟರ್ ಅಂತರದಲ್ಲಿ ಪ್ರೆಶರ್ ನಲ್ಲಿ ಡ್ರಿಲ್ಲಿಂಗ್ ಮಾಡಿ ಕೊರೆದು ನಂತರ ಸಿಮೆಂಟ್, ಕೆಮಿಕಲ್ ಹಾಕಿ ಫಿಲಪ್ ಮಾಡುವ (Dam body Grouting), ಡ್ಯಾಮ್ ಒಳಭಾಗ ಮತ್ತು ನೀರು ಹರಿದು ಹೋಗುವ ಹೊರಭಾಗದ ಹೊರಮೈ ಹಾಗೂ ಡ್ಯಾಮ್ ತಳಪಾಯದ ಗೋಡೆಗಳನ್ನು, ಅದರಲ್ಲಿನ ಸಣ್ಣಪುಟ್ಟ ಮೇಲ್ಮೈ ಬಿರುಕುಗಳನ್ನು ಹೆಚ್ಚಿನ ಸಾಮರ್ಥ್ಯದ ಗಾರೆ ಹಾಕಿ ಭದ್ರಪಡಿಸುವ ಕಾರ್ಯ, ಸ್ಟೀಲ್ ಫೈಬರ್ ಬಲವರ್ಧಿತ ಶಾಟ್ ಕ್ರೇಟಿಂಗ್ ಟ್ರೀಟ್ ಮೆಂಟ್ (Steel Fibre Reinforced Shotcreting Treatment – SFRS), ಅಣೆಕಟ್ಟಿನ ತಳಪಾಯದ ಡ್ರೈನೇಜ್ ನೀರು ಹರಿದು ಹೋಗುವ ಮುಚ್ಚಿರುವ ರಂಧ್ರಗಳನ್ನು ಸರಪಡಿಸುವ ಕಾರ್ಯವು ಸೇರಿದಂತೆ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣೆ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮ 2023ರ ಫೆಬ್ರವರಿಯಿಂದ ಆರಂಭಿಸಿ ತಮ್ಮ ಭಾಗದ ಕಾರ್ಯವನ್ನು ಇತ್ತೀಚೆಗಷ್ಟೆ ಮುಗಿಸಿತ್ತು.
ಇದಾದ ಬಳಿಕ ತುಂಗಭದ್ರ ಜಲಾಶಯ ಮಂಡಳಿಯು ತನ್ನ ಭಾಗದ 1 ರಿಂದ 16 ಗೇಟ್ ಗಳ ಭಾಗದಲ್ಲಿ ಇದೇ ಮಾದರಿಯ ಕಾಮಗಾರಿಗಳನ್ನು ನಡೆಸುತ್ತಿದೆ. ತುಂಗಭದ್ರ ಡ್ಯಾಮ್ ಕೇಂದ್ರ ಸರ್ಕಾರ ನೇತೃತ್ವದಲ್ಲಿ ತಮ್ಮ ಭಾಗದ ಕಾಮಗಾರಿಗಳನ್ನು ಕೈಗೊಂಡಿದ್ದು, ಆ ಕಾಮಗಾರಿಗಳು ನಡೆಯುತ್ತಿದೆ. ಒಟ್ಟಾರೆ 70 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಣೆಕಟ್ಟಿನ ಒಂದು ಗೇಟ್ ಚೈನ್ ಲಿಂಕ್ ಬೆಸುಗೆ ಕಳಚಿಕೊಂಡು ಅಪಾರ ಪ್ರಮಾಣದ ಜಲಾಶಯದ ನೀರು ನದಿಗೆ ಹೋಗುವಂತಾಯಿತು. 19ನೇ ಕ್ರೆಸ್ಟ್ ಗೇಟ್ ಅನ್ನು ಆದಷ್ಟು ಶೀಘ್ರದಲ್ಲಿ ನೀರಿನ ಜಲಾಶಯದಲ್ಲಿ ನೀರಿನ ಸಂಗ್ರಹಣೆಯನ್ನು ಕಾಯ್ದುಕೊಂಡು, ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸುವುದು ಸವಾಲಿನ ಕೆಲಸವೇ ಸರಿ. ಈ ವಿಷಯದಲ್ಲಿ ತುಂಗಭದ್ರಾ ಅಣೆಕಟ್ಟು ಮಂಡಳಿ ಯಶಸ್ಸು ಸಾಧಿಸುತ್ತದೆ ಎಂದು ಲಕ್ಷಾಂತರ ರೈತರು ಮನದಲ್ಲೇ ದೇವರನ್ನು ನೆನೆಯುತ್ತಿದ್ದಾರೆ.