ಬೆಂಗಳೂರು, ಆ.11 www.bengaluruwire.com: “ಮೂರು ರಾಜ್ಯಗಳಿಗೆ ಸೇರಿರುವ ನೀರನ್ನು ಹೇಗಾದರೂ ಮಾಡಿ ಉಳಿಸಿಕೊಂಡು ತುಂಗಭದ್ರಾ ಅಣೆಕಟ್ಟಿನ ಗೇಟನ್ನು ದುರಸ್ತಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ತುಂಗಭದ್ರಾ ಜಲಾಶಯಕ್ಕೆ ತೆರಳುವ ಮುನ್ನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು “ನೀರನ್ನು ಹೊರಗೆ ಬಿಡದ ಹೊರತು ಗೇಟ್ ದುರಸ್ತಿ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದ ಕಾರಣ ತಂತ್ರಜ್ಞರ ವರದಿಯ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.
“ಶನಿವಾರ ರಾತ್ರಿ ಜಲಾಶಯದ 10 ಗೇಟ್ ಗಳನ್ನು ತೆರೆಯಲಾಗಿತ್ತು. ಏಕಾಏಕಿ ಜಲಾಶಯದ 19 ನೇ ಗೇಟಿನ ಚೈನ್ ಲಿಂಕ್ ತುಂಡಾದ ಹಿನ್ನೆಲೆ ಎಲ್ಲಾ ಗೇಟ್ ತೆರೆದು ಅಣೆಕಟ್ಟಿನ ಮೇಲಿನ ಒತ್ತಡ ಕಡಿಮೆ ಮಾಡಲಾಗಿದೆ. ಸದ್ಯ ಜಲಾಶಯದಿಂದ 98 ಸಾವಿರ ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ. 19 ನೇ ಗೇಟ್ ಒಂದರಲ್ಲಿಯೇ 35 ಸಾವಿರ ಕ್ಯೂಸೆಕ್ ನೀರು ಹೊರಹೋಗುತ್ತಿದೆ. ಅಚ್ಚುಕಟ್ಟು ಪ್ರದೇಶದ ರೈತರು ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ರೈತರ ಒಂದು ಬೆಳೆಗಾದರೂ ನೀರನ್ನು ಉಳಿಸುತ್ತೇವೆ :
“ಜಲಾಶಯದಿಂದ 60 ಟಿಎಂಸಿ ನೀರು ಖಾಲಿ ಮಾಡಬೇಕಿದೆ. ಗೇಟನ್ನು ಮತ್ತೆ ಹಾಕಬೇಕೆಂದರೆ ಒತ್ತಡ ಕಡಿಮೆ ಮಾಡಬೇಕಿದೆ. ಜಲಾಶಯದಲ್ಲಿ 150 ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದು. ಜಲಾಶಯಕ್ಕೆ ಒಳಹರಿವು 28,000 ಕ್ಯೂಸೆಕ್ಸ್ ಇದೇ. ಕನಿಷ್ಠ ನಮ್ಮ ರೈತರಿಗೆ ಒಂದು ಬೆಳಗಾದರೂ ಒದಗಿಸುವಷ್ಟು ನೀರನ್ನು ಉಳಿಸಿಕೊಳ್ಳುತ್ತೇವೆ” ಎಂದು ತಿಳಿಸಿದರು.
“ಅಣೆಕಟ್ಟಿನ ಪ್ರಮುಖ ಮೂರು ಕಾಲುವೆಗಳಿಗೆ ನೀರನ್ನು ಹರಿಸಲು 115 ಟಿ ಎಂ ಸಿ ನೀರಿನ ಅವಶ್ಯಕತೆ ಇದೆ. ಇದೆಲ್ಲವನ್ನು ಲೆಕ್ಕಾಚಾರ ಹಾಕಿ ರೈತರನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಪಕ್ಕದ ರಾಜ್ಯಗಳಿಗೆ ಈಗಾಗಲೇ 25 ಟಿಎಂಸಿ ನೀರನ್ನು ಕೊಡಲಾಗಿದೆ. ಇನ್ನೂ 90 ಟಿಎಂಸಿ ನೀರನ್ನು ಕೊಡಬೇಕಾಗಿದೆ. ಮೂರು ರಾಜ್ಯಗಳು ಒಟ್ಟಿಗೆ ಸೇರಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ರೈತರು ಆತಂಕಕ್ಕೆ ಒಳಗಾಗಬೇಡಿ” ಎಂದರು.
“ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಈ ಮೂರು ರಾಜ್ಯಗಳ ರೈತರಿಗೆ ಬಹುಮುಖ್ಯವಾದ ಜಲಾಶಯ ಇದಾಗಿದೆ. ನಮ್ಮ ಕರ್ನಾಟಕದ 12 ಲಕ್ಷ ಹೆಕ್ಟರ್ ಅಚ್ಚುಕಟ್ಟು ಪ್ರದೇಶವನ್ನು ಇದು ಹೊಂದಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ಅನೇಕ ಜಿಲ್ಲೆಗಳು ಇದರಿಂದ ಲಾಭ ಪಡೆಯುತ್ತಿವೆ. ನಮ್ಮ ರೈತರು ಆತಂಕ ಪಡಬೇಕಾಗಿಲ್ಲ ಸರ್ಕಾರ ನಿಮ್ಮ ಜೊತೆಗಿದೆ” ಎಂದು ತಿಳಿಸಿದರು.
“ಇದು 60 ರಿಂದ 70 ವರ್ಷ ಹಳೆಯ ಜಲಾಶಯವಾಗಿದ್ದು. ಘಟನೆಗೆ ಸಂಬಂಧಿಸಿದಂತೆ ನಾನು ಯಾವ ಅಧಿಕಾರಿಗಳನ್ನೂ ದೂರುವುದಿಲ್ಲ. ದೇಶದ ಸಂಪತ್ತನ್ನು ಕಾಪಾಡಬೇಕಿದೆ. ಅಣೆಕಟ್ಟಿನ ಎರಡು ಕಿಲೋಮೀಟರ್ ಸುತ್ತಳತೆಯಲ್ಲಿ ತಂತ್ರಜ್ಞರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಹೊರತುಪಡಿಸಿ ಜನಪ್ರತಿನಿಧಿಗಳಿಗೂ ಸಹ ಪ್ರವೇಶವನ್ನು ನಿರ್ಬಂಧಿಸಲಾಗಿದೆ” ಎಂದರು.
“ಅಣೆಕಟ್ಟಿನ 1 ರಿಂದ 16 ನೇ ಗೇಟುಗಳನ್ನು ಸಿಡಬ್ಲ್ಯೂಸಿ ನಿರ್ವಹಣೆ ಮಾಡುತ್ತದೆ. 17 ರಿಂದ 32 ರವರೆಗಿನ ಜವಾಬ್ದಾರಿ ಕರ್ನಾಟಕ ಸರ್ಕಾರದ್ದಾಗಿದೆ. ಕೇಂದ್ರ ಜಲ ಆಯೋಗದವರು ಸಹ ಒಂದಷ್ಟು ತಂತ್ರಜ್ಞರನ್ನು ಕಳುಹಿಸಿದ್ದಾರೆ. ನಾವು ಸಹ ನುರಿತ ತಂತ್ರಜ್ಞರನ್ನು ಕಳುಹಿಸಿದ್ದೇವೆ. ನಾನು ಸಹ ಶನಿವಾರ ರಾತ್ರಿಯಿಂದಲೇ ಅಧಿಕಾರಿಗಳ ಜೊತೆ ದೂರವಾಣಿ ಸಂಪರ್ಕದಲ್ಲಿದ್ದು ಪ್ರತಿ ಕ್ಷಣದ ಮಾಹಿತಿ ಪಡೆಯುತ್ತಿದ್ದೇನೆ” ಎಂದು ಹೇಳಿದರು.
“ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿದಿದೆ” :
“ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿದ ಕಾರಣ ಈ ತೊಂದರೆ ಉಂಟಾಗಿದೆ. ಭಾರಿ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿದ್ದು, ಅಣೆಕಟ್ಟಿನ ಭದ್ರತೆಯ ದೃಷ್ಟಿಯಿಂದ ಎಲ್ಲಾ ಗೇಟ್ ಗಳನ್ನು ತೆರೆದು ನದಿಗೆ ನೀರು ಬಿಡಲಾಗುತ್ತಿದೆ. ಅಣೆಕಟ್ಟಿನ ಕೆಳಭಾಗದ ಹಾಗೂ ನದಿ ಪಾತ್ರದ ಎಲ್ಲಾ ಜನರಿಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ” ಎಂದರು.
ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗುತ್ತದೆಯೇ ಎಂದು ಪ್ರಶ್ನಿಸಿದಾಗ “ಇದು ಅತ್ಯಂತ ಗಂಭೀರವಾದ ವಿಚಾರವಾಗಿದ್ದು. ಇದರಲ್ಲಿ ನಾನು ಯಾರ ಮಾತನ್ನು ಕೇಳುವುದಿಲ್ಲ. ಸ್ಥಳೀಯರು ಹಾಗೂ ರೈತರು ಒಂದಷ್ಟು ಅಭಿಪ್ರಾಯಗಳನ್ನು ಸೂಚಿಸುತ್ತಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನು ಗೌರವಿಸಲಾಗುವುದು. ಆದರೆ ಅಂತಿಮವಾಗಿ ತಂತ್ರಜ್ಞರ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು. ನಮಗೆ ನಮ್ಮ ರೈತರ ಹಿತ ಮುಖ್ಯ” ಎಂದು ಹೇಳಿದರು.
ಮಂಗಳವಾರ ಟಿಬಿ ಡ್ಯಾಮ್ ಗೆ ಸಿಎಂ ಭೇಟಿ :
ಈ ಮಧ್ಯೆ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಟ್ ಘಟನೆ ಕುರಿತಂತೆ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳು ಮಂಗಳವಾರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇಂದು ಬೆಳಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಅವರೊಂದಿಗೆ ಮಾತುಕತೆ ನಡೆಸಿ ಸಂಪೂರ್ಣ ವಿವರ ಪಡೆದರು. ಯಾವುದೇ ಹಾನಿ ಸಂಭವಿಸದಂತೆ ಮುಂಜಾಗ್ರತೆ ವಹಿಸುವಂತೆ ಸೂಚಿಸಿದರು.
ಜಲ ಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೂ ಸಿಎಂ ಚರ್ಚಿಸಿದರು.