ತಿರುವನಂತಪುರಂ, ಆ.10 www.bengaluruwire.com : ಕೇರಳದ ವಯನಾಡಿನ 4 ಗ್ರಾಮಗಳ ವ್ಯಾಪ್ತಿಯಲ್ಲಿ ಜುಲೈ 30ರಂದು ಸಂಭವಿಸಿದ ಭಯಾನಕ ಭೂಕುಸಿತ ದುರ್ಘಟನೆಯಲ್ಲಿ ಈತನಕ 413ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 152ಕ್ಕೂ ಅಧಿಕ ಜನರು ಇನ್ನೂ ಕಾಣೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಭಾರೀ ಪ್ರಕೃತಿ ವಿಕೋಪದ ಪರಿಹಾರಕ್ಕೆ ಕೇರಳದ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿ (Chief minister distress relief fund) ಗೆ ಈ ತನಕ 96.58 ಕೋಟಿ ರೂ.ಗಳ ಹಣ ದಾನಿಗಳಿಂದ ನೆರವಿನ ರೂಪದಲ್ಲಿ ಹರಿದು ಬಂದಿದೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ವಯನಾಡು ದುರಂತ ಸ್ಥಳ ಭೇಟಿಗಾಗಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಆಗಮಿಸಿದರು. ತದನಂತರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮೊಹಮ್ಮದ್, ಕೇಂದ್ರದ ಪೆಟ್ರೋಲಿಯಮ್ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ಅವರ ಜೊತೆಗೆ ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ನಲ್ಲಿ ಭೂಕುಸಿತದಿಂದ ದುರಂತ ಸಂಭವಿಸಿದ ವಯನಾಡು ಪ್ರದೇಶದ ಮೇಲ್ಭಾಗ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸಿದರು.
ವೈಮಾನಿಕ ಸಮೀಕ್ಷೆಯಲ್ಲಿ ಪ್ರಧಾನಮಂತ್ರಿಯವರು, ಭೂಕುಸಿತದ ಮೂಲವಾದ ಇರುವಜಿಂಜಿ ಪೂಳ (ನದಿ) ನೋಡಿದರು.
ಅವರು ಪಂಚಿರಿಮಟ್ಟಂ, ಮುಂಡಕ್ಕೈ ಮತ್ತು ಚೂರಲ್ಮಲಾದಲ್ಲಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಿಗೆ ಖುದ್ದಾಗಿ ಭೇಟಿ ವೀಕ್ಷಿಸಿದರು. ಹಾಗೂ ಹಾನಿಯಾದ ಸ್ಥಳದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ದುರಂತದಲ್ಲಿ ತಮ್ಮವರನ್ನು, ಆಸ್ತಿಪಾಸ್ತಿಗಳನ್ನು ಕಳೆದುಕೊಂಡ ಜನತೆಯ ದುಖಃ, ದುಮ್ಮಾನ, ಅಹವಾಲುಗಳನ್ನು ಆಲಿಸಿ ಅವರಿಗೆ ಸಮಾಧಾನ ಹೇಳಿದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ದುರಂತ ನಡೆದ ವಯನಾಡ್ ಭೂಕುಸಿತ ಸ್ಥಳದಲ್ಲಿ 86,000 ಚದರ ಮೀಟರ್ ಭೂಮಿ ಜಾರಿದ್ದು ಅದರ ಅವಶೇಷಗಳು 8 ಕಿಮೀ ಹರಿಯಿತು ಎಂದು ತಿಳಿಸಿತ್ತು. ಇದರಿಂದಾಗಿ ವಯನಾಡಿನ ನಾಲ್ಕು ಗ್ರಾಮಗಳ ಭೌಗೋಳಿಕ ಚಿತ್ರಣವೇ ಬದಲಾಗಿ ಹೋಗಿದೆ. ಭೂಕುಸಿತದಲ್ಲಿ ಕಾಣೆಯಾದವರ ಹುಡುಕಾಟ ಸತತವಾಗಿ ನಡೆಯುತ್ತಿದ್ದು, ರಕ್ಷಣಾ ಪಡೆಗಳು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿವೆ. ಆರು ಸೈನಿಕರು, ಕೇರಳ ಪೊಲೀಸರ ವಿಶೇಷ ಕಾರ್ಯಾಚರಣೆ ವಿಭಾಗದ ನಾಲ್ವರು ಕಮಾಂಡೋಗಳು ಸೇರಿದಂತೆ 12 ಜನರ ರಕ್ಷಣಾ ತಂಡವನ್ನು ಸನ್‌ರೈಸ್ ವ್ಯಾಲಿ ಪ್ರದೇಶದಲ್ಲಿ ಹುಡುಕಾಟ ನಡೆಸಲು ನಿಯೋಜಿಸಲಾಗಿದ್ದು, ಶ್ವಾನ ದಳ ಅವರಿಗೆ ಸಹಕರಿಸಲಿದೆ.
2018 ರಿಂದ 2024ರ ನಾಲ್ಕು ಪ್ರಮುಖ ಪ್ರಾಕೃತಿಕ ದುರಂತದಲ್ಲಿ 6196 ಕೋಟಿ ರೂ. ನೆರವು :
ಕೇರಳದ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ 2018 ಮತ್ತು 2019ರಲ್ಲಿ ಕೇರಳದಲ್ಲಿ ಬಂದ ಭೀಕರ ಪ್ರವಾಹ (Flood) ಸಂದರ್ಭ, ಕೋವಿಡ್-19 (Covid-19) ಹಾಗೂ ವಯನಾಡ್ ದುರಂತವೂ ಸೇರಿದಂತೆ ಈವರೆಗೆ ಒಟ್ಟಾರೆಯಾಗಿ ಬರೋಬ್ಬರಿ 6196.61 ಕೋಟಿ ರೂ. ಹಣವು ಪರಿಹಾರ ನಿಧಿಗೆ ನೆರವಿನ ರೂಪದಲ್ಲಿ ಹರಿದು ಬಂದಿದೆ. ವಯನಾಡು ಪ್ರಕರಣ ಹೊರತುಪಡಿಸಿ ಇಲ್ಲಿಯ ತನಕ ಪರಿಹಾರ ನಿಧಿಗೆ ಬಂದ ಹಣದಲ್ಲಿ 5849.92 ಕೋಟಿ ರೂ. ಹಣವನ್ನು ಸಂಬಂಧಿಸಿದ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಕೇರಳ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ಸಂಬಂಧಿಸಿದಂತೆ ಅಧಿಕೃತವಾಗಿ ಅಲ್ಲಿನ ಸರ್ಕಾರ ತಿಳಿಸಿದೆ. ಕೇರಳದ ಸಿಎಂಡಿಆರ್ ಎಫ್ ಪೋರ್ಟಲ್ ಆನ್ ಲೈನ್ ಪೋರ್ಟಲ್ ಮೂಲಕವೊಂದರಲ್ಲೇ ಜುಲೈ 20 ರಿಂದ ಇಲ್ಲಿಯ ತನಕ 44,478 ಜನರು ಒಟ್ಟಾರೆ 24.09 ಕೋಟಿ ರೂ. ಹಣವನ್ನು ನೆರವಿನ ರೂಪದಲ್ಲಿ ವರ್ಗಾಯಿಸಿದ್ದಾರೆ.
2018 ಮತ್ತು 2019ರ ಇಸವಿಯಲ್ಲಿ ಕೇರಳದಲ್ಲಿ ಕಂಡು ಬಂದ ರಣಭೀಕರ ಪ್ರವಾಹದಲ್ಲಿ ಅಪಾರ ಪ್ರಮಾಣ ಸಾವು-ನೋವು, ಆಸ್ತಿಪಾಸ್ತಿ ನಷ್ಟವಾಗಿತ್ತು. ಈ ಸಂದರ್ಭದಲ್ಲಿ 4970.29 ಕೋಟಿ ರೂ. ಹಣ ಪರಿಹಾರ ನಿಧಿಗೆ ಬಂದಿದ್ದರೆ, ಕೋವಿಡ್-19 ಮಹಾಮಾರಿ ಸೋಂಕು ವ್ಯಾಪಿಸಿದಾಗ, ಪರಿಹಾರ ಕಾರ್ಯಗಳಿಗಾಗಿ ಜನರು 1129.74 ಕೋಟಿ ರೂ. ಹಣ ಪರಿಹಾರ ರೂಪದಲ್ಲಿ ಮುಖ್ಯಮಂತ್ರಿಗಳ ನಿಧಿಗೆ ಸಂದಾಯವಾಗಿತ್ತು. ಇದೀಗ 2024ರ ಜುಲೈ 30 ರಂದು ವಯನಾಡಿನ 4 ಗ್ರಾಮಗಳ ವ್ಯಾಪ್ತಿಯಲ್ಲಿ ಪ್ರಳಯ ಸದೃಶ ಭೂಕುಸಿತದಲ್ಲಿ 413ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ಇಡೀ ಊರಿಗೆ ಊರೇ ತೆರೆದ ಸ್ಮಶಾನವಾಗಿ ಜನರ ಬದುಕನ್ನು ಮೂರಾಬಟ್ಟೆನ್ನಾಗಿಸಿದೆ. ಈ ಪ್ರಾಕೃತಿಕ ವಿಕೋಪ ಸೃಷ್ಟಿಸಿದ ಸಾವು-ನೋವಿಗೆ ಮರುಗಿದ ದೇಶ ವಿದೇಶಗಳ ಜನತೆ ಕೇರಳ ಸರ್ಕಾರದ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ 96.58 ಕೋಟಿ ರೂ.ಗಳ ನೆರವು ಹರಿದು ಬಂದಿದೆ.
ದೇಶ ವಿದೇಶಗಳಿಂದ ಸಾಮಾನ್ಯ ಜನರಿಂದ ಹಿಡಿದು ಸಿನಿಮಾ ನಟ, ನಟಿಯರು, ಉದ್ಯಮಿಗಳು ತಮ್ಮ ಕೈಲಾದಷ್ಟು ನೆರವನ್ನು ನೀಡುತ್ತಿದ್ದಾರೆ. ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಅವರು ಕೇರಳ ಸಿಎಂ ಪರಿಹಾರ ನಿಧಿಗೆ ₹ 25 ಲಕ್ಷ ದೇಣಿಗೆ ನೀಡಿರುವುದಾಗಿ ಘೋಷಿಸಿದ ನಂತರ, ಚಿರಂಜೀವಿ ಕೂಡ ತಾವು ಮತ್ತು ರಾಮ್ ಚರಣ್ ₹ 1 ಕೋಟಿ ನೀಡಿವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.
ನೀವು ದೇಣಿಗೆ ನೀಡಲು ಬಯಸಿದರೆ, ವಿವರಗಳು ಇಲ್ಲಿವೆ:
ವಯನಾಡ್ ಭೂಕುಸಿತದ ಸಂತ್ರಸ್ತರಿಗೆ ನೀವು ದೇಣಿಗೆ ನೀಡಲು ಬಯಸಿದರೆ ವಿವರಗಳು ಇಲ್ಲಿವೆ: “ಖಾತೆ ಸಂಖ್ಯೆ: 67319948232 ಹೆಸರು: ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿ, ಬ್ಯಾಂಕ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ: ಸಿಟಿ ಬ್ರಾಂಚ್, ತಿರುವನಂತಪುರಂ IFSC SBIN0070028 | ಸ್ವಿಫ್ಟ್ ಕೋಡ್: SBININBBT08 ಖಾತೆ ಪ್ರಕಾರ: ಉಳಿತಾಯ | ಪ್ಯಾನ್: AAAGD0584M.” UPI QR CODE / VPA : cmdrfkerala@sbi
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.