ಬೆಂಗಳೂರು, ಆ.09 www.bengaluruwire.com : ಬೆಂಗಳೂರು ವ್ಯಾಪ್ತಿಯಲ್ಲಿ ‘ಪೇಯಿಂಗ್ ಗೆಸ್ಟ್’ (Paying Guests -PG) ಗಳಲ್ಲಿ ಹಲವು ಕಳ್ಳತನ, ಮಹಿಳೆಯ ಸುರಕ್ಷತೆಯಲ್ಲಿ ವೈಫಲ್ಯ ಹೀಗೆ ಹಲವು ಅಪರಾಧ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ವ್ಯಾಪ್ತಿಯಲ್ಲಿರುವ ಪಿಜಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ಈ ಮಾರ್ಗಸೂಚಿಯಲ್ಲಿ ಪ್ರಮುಖವಾಗಿ ಪಿಜಿಗಳಲ್ಲಿ ಸಿಸಿಟಿವಿ ಕಡ್ಡಾಯ ಅಳವಡಿಕೆ ಕಡ್ಡಾಯ, ಸ್ವಂತ ಅಡುಗೆಮನೆಯಿದ್ದಲ್ಲಿ ಎಫ್ಎಸ್ಎಸ್ಎಐ ನಿಂದ ಆಹಾರ ಸುರಕ್ಷತಾ ಪರವಾನಗಿ, ಅಗ್ನಿ ಸುರಕ್ಷತಾ ಕ್ರಮ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.
ಬಿಬಿಎಂಪಿ ಕಾಯ್ದೆ-2020ರ ಸೆಕ್ಷನ್ 305ರ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಪೇಯಿಂಗ್ ಗೆಸ್ಟ್ ಗಳಿಗೆ ಉದ್ದಿಮೆ ಪರವಾನಗಿಯನ್ನು ನೀಡುವಾಗ ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಪಾಲಿಸದಿದ್ದರೆ ಎಲ್ಲಾ ವಲಯ ಆಯುಕ್ತರು ಪರಿಶೀಲಿಸಬೇಕು. ಈ ಗೈಡಲೈನ್ಸ್ ಉಲ್ಲಂಘಿಸುವವರ ವಿರುದ್ಧ ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 307 ಹಾಗೂ 308 ರಂತೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಉದ್ದಿಮೆ ಪರವಾನಗಿ ಪಡೆದಿರುವ ಪಿಜಿಗಳೂ ಸಹ ನವೀಕರಣ ಸಂದರ್ಭದಲ್ಲಿ ಈ ಮಾರ್ಗಸೂಚಿಗಳನ್ನು ಪಾಲಿಸಿರಬೇಕು ಎಂದು ಮುಖ್ಯ ಆಯುಕ್ತರು ಮಾರ್ಗಸೂಚಿಗಳಲ್ಲಿ ತಿಳಿಸಿದ್ದಾರೆ. ವರದಿಯೊಂದರ ಪ್ರಕಾರ ಬೆಂಗಳೂರು ಪಿಜಿ ಮಾಲೀಕರ ಸಂಘ ಹೇಳುವಂತೆ ನಗರದಲ್ಲಿ 20,000 ಕ್ಕೂ ಹೆಚ್ಚು ಪಿಜಿ ಮನೆಗಳಿದ್ದು ಅವುಗಳಲ್ಲಿ 17 ಲಕ್ಷಕ್ಕೂ ಹೆಚ್ಚು ಕೆಲಸಕ್ಕೆ ಹೋಗುವ ಮತ್ತು ವಿದ್ಯಾರ್ಥಿಗಳಿಗೆ ನೆಲ ಒದಗಿಸಿದೆ ಎಂದು ಹೇಳಿದೆ.
ಪಿಜಿ ಮಾರ್ಗಸೂಚಿಗಳು ಈ ಕೆಳಕಂಡಂತಿದೆ :
1.ವಲಯ ಆರೋಗ್ಯಾಧಿಕಾರಿ, ಆರೋಗ್ಯ ವೈದ್ಯಾಧಿಕಾರಿ ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿನ ಪಿಜಿಗಳಿಗೆ ಪ್ರತಿ 6 ತಿಂಗಳಿಗೊಮ್ಮೆ ಭೇಟಿ ನೀಡಿ ಮಾರ್ಗಸೂಚಿಗಳು ಪಾಲನೆಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು.
2. ಪಿಜಿಗಳ ಎಲ್ಲ ಪ್ರವೇಶ ಮತ್ತು ನಿರ್ಗಮನ ದ್ವಾರ ಹಾಗೂ ಆವರಣದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. 90 ದಿನಗಳ ಬ್ಯಾಕ್ ಅಪ್ ಹೊಂದಿರಬೇಕು.
3. ವಸತಿ ಕಟ್ಟಡಗಳ ನಿಯಮಗಳ ಪ್ರಕಾರ ಪಿಜಿಗಳಲ್ಲಿ ಪ್ರತಿಯೊಬ್ಬ ನಿವಾಸಿಗೂ ಕಡ್ಡಾಯವಾಗಿ 70 ಚದರ ಅಡಿ ಕನಿಷ್ಠ ಸ್ಥಳಾವಕಾಶ ಇರಬೇಕು. ಕಟ್ಟಡದಲ್ಲಿ ಲಭ್ಯವಿರುವಸೌಕರ್ಯ ಗಳಿಗೆ ಅನುಗುಣವಾಗಿ ನಿರ್ದಿಷ್ಟ ಸಂಖ್ಯೆಯ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಗಿ ನೀಡಬೇಕು.
4. ಪಿಜಿಗಳಲ್ಲಿ ವಾಸಿಸುವ ನಿವಾಸಿಗಳಿಗೆ ಶುದ್ದ ಕುಡಿಯುವ ನೀರು ಒದಗಿಸಬೇಕು.ಪ್ರತಿಯೊಬ್ಬರಿಗೂ ಪ್ರತಿದಿನ 135 ಲೀಟರ್ ನೀರಿನ ಲಭ್ಯತೆ ಇರುವುದನ್ನು ಕಟ್ಟಡಗಳಮಾಲೀಕರು ಖಾತರಿಪಡಿಸಿಕೊಳ್ಳತಕ್ಕದ್ದು.
5. ಪಿಜಿಗಳಲ್ಲಿ ಮಾಲೀಕರು ತಮ್ಮದೇ ಆದ ಅಡುಗೆ ಮನೆ ಹೊಂದಿದ್ದಲ್ಲಿ ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ ಮೂರು ತಿಂಗಳೊಳಗೆ ಕಡ್ಡಾಯವಾಗಿ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದಿಂದ ಪರವಾನಗಿ ಪಡೆದುಕೊಂಡಿರಬೇಕು.
6. ಪಿಜಿಗಳಲ್ಲಿ ವಾಸಿಸುವ ಪ್ರತಿಯಬ್ಬರ ಸುರಕ್ಷತೆಗೆ ಕನಿಷ್ಠ ಒಬ್ಬ ಸಿಬ್ಬಂದಿ ದಿನದ 24 ಗಂಟೆಗಳ ಕಾಲ ನಿಯೋಜಿಸಿರಬೇಕು.
7. ಪಿಜಿಗಳು ವಾಣಿಜ್ಯ ಪರವಾನಗಿ ಪತ್ರ ಒಡೆಯುವಾಗ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿರುವ ಕುರಿತು ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣ ಪತ್ರ ಸಲ್ಲಿಸಿರಬೇಕು.
8. ಪಿಜಿ ಕಟ್ಟಡದಲ್ಲಿ ಬಿಬಿಎಂಪಿ ಸಹಾಯವಾಣಿ -1533, ಪೊಲೀಸ್ ಇಲಾಖೆಯ ಸಹಾಯವಾಣಿ-101 ಫಲಕವನ್ನು ಪ್ರದರ್ಶಿಸಬೇಕು.
9. ಪಿಜಿಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳ ಅಳವಡಿಕೆ ಕಡ್ಡಾಯ
10. ಪಿಜಿಗಳ ಮಾಲೀಕರು ಘನತ್ಯಾಜ್ಯ ವಿಂಗಡಿಸಿ ವಿಲೇವಾರಿ ಮಾಡಲು ಕ್ರಮಗಳನ್ನು ಅನುಸರಿಸಬೇಕು.