ಬೆಂಗಳೂರು, ಆ.5 www.bengaluruwire.com : ರಾಜ್ಯ ರಾಜಧಾನಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏಳು ಸ್ಥಳಗಳನ್ನು ಗುರುತಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಮಂಗಳವಾರ ಅಥವಾ ಬುಧವಾರ ಚರ್ಚಿಸಿ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಕ್ಷಿಪ್ರಗತಿಯಲ್ಲಿ ಪ್ರಸ್ತಾವನೆ ಸಲ್ಲಿಸಲು ಸೋಮವಾರ ಇಲ್ಲಿ ನಡೆದ ನಿರ್ಣಾಯಕ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಐಡೆಕ್ ಮತ್ತು ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್ ಸಂಸ್ಥೆಗಳು ಸಿದ್ಧಪಡಿಸಿರುವ ಪ್ರಾತ್ಯಕ್ಷಿಕೆಯನ್ನು ಅವರು ವೀಕ್ಷಿಸಿದರು.
ನಂತರ ಮಾತನಾಡಿದ ಇಬ್ಬರೂ ನಾಯಕರು, ‘ನೂತನ ವಿಮಾನ ನಿಲ್ದಾಣಕ್ಕೆ ಐಡೆಕ್ ಸಂಸ್ಥೆಯು 9 ಜಾಗಗಳನ್ನು ಗುರುತಿಸಿದೆ. ಈ ಪೈಕಿ ಎರಡು ಸ್ಥಳಗಳನ್ನು ತಾಂತ್ರಿಕ ಕಾರಣಗಳಿಂದ ಕೈಬಿಡಲಾಗಿದೆ. ಉಳಿದ ಸ್ಥಳಗಳ ಮಾಹಿತಿಯೊಂದಿಗೆ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಕಳಿಸಲಾಗುವುದು. ಇದಕ್ಕೂ ಮೊದಲು ಮುಖ್ಯಮಂತ್ರಿಗಳ ಜತೆ ಅಂತಿಮ ಚರ್ಚೆ ನಡೆಸಲಾಗುವುದು’ ಎಂದರು.
ವಿಮಾನ ನಿಲ್ದಾಣಕ್ಕೆ ಯಾವ ಜಾಗ ಸೂಕ್ತ ಎನ್ನುವುದನ್ನು ಬೆಂಗಳೂರು ಮತ್ತು ಕರ್ನಾಟಕದ ಹಿತದೃಷ್ಟಿಯಿಂದ ತೀರ್ಮಾನಿಸಲಾಗುವುದು. ಇದರಲ್ಲಿ ರಾಜಕೀಯ ಏನೂ ಇರುವುದಿಲ್ಲ. ಪ್ರಾಧಿಕಾರವು 15 ಮಾನದಂಡಗಳನ್ನು ಇಟ್ಟುಕೊಂಡಿದ್ದು, ಅದರಂತೆ ನಿರ್ಧಾರವಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ಶಿವಕುಮಾರ್ ಮಾತನಾಡಿ, ನೂತನ ವಿಮಾನ ನಿಲ್ದಾಣದ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಈಗಾಗಲೇ ಹತ್ತಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ. ಬೆಂಗಳೂರು ನಗರದ ಅಭಿವೃದ್ಧಿ, ಅವಕಾಶ ಮತ್ತು ಪ್ರಯಾಣಿಕರು ಹಾಗೂ ಸರಕು ಸಾಗಣೆ ಒತ್ತಡ ಪರಿಗಣಿಸಿ, ಮುಂದಿನ ಹೆಜ್ಜೆ ಇಡಲಾಗುವುದು ಎಂದು ನುಡಿದರು.
ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಬಿಎಂಆರ್ ಡಿಎ ಆಯುಕ್ತೆ ಹಾಗೂ ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಕೊರ್ಲಪಟಿ, ಕೆಎಸ್ಎಸ್ಐಡಿಸಿ ಎಂ.ಡಿ.ಸತೀಶ ಮುಂತಾದವರು ಇದ್ದರು.