ಬೆಂಗಳೂರು, ಆ.3 www.bengaluruwire.com : ಆ ಬಸ್ ಕೇವಲ ಬಸ್ ಮಾತ್ರ ಆಗಿರಲಿಲ್ಲ. ಸಾವಿರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ವಿಶೇಷಚೇತನರಿಗೆ, ಸ್ವಾತಂತ್ರ್ಯಯೋಧರಿಗೆ ಸಂಪರ್ಕ ಸೇತುವೆಯಾಯಿತು. ಅಷ್ಟೇ ಅಲ್ಲ ಅಂಚೆ ಇಲಾಖೆಯ ಕಾಗದ ಪತ್ರ ಹಾಗೂ ಪಾರ್ಸೆಲ್ ಗಳನ್ನು ದೂರದ ಊರುಗಳಿಗೆ ತಲುಪಿಸಲು ಬೆನ್ನೆಲುಬಾಯಿತು. ಇದರಲ್ಲಿ ಪ್ರಯಾಣಿಸುತ್ತಿದ್ದವರು ಕೇವಲ ಪ್ರಯಾಣಿಕರಾಗಿರಲಿಲ್ಲ. ಇದೊಂದು ಸಾರಿಗೆ ಮನೆಯಾಗಿತ್ತು. ಬಸ್ ಗಳು ಈ ಮನೆಯ ಸದಸ್ಯರಾಗಿದ್ದರು. ಚಾಲಕ ನಿರ್ವಾಹಕರೇ ಮನೆಯ ಯಜಮಾನರಾಗಿದ್ದರು. ಪ್ರಯಾಣಿಕರೆಲ್ಲ ಅತಿಥಿ- ಅಭ್ಯಾಗತರಾಗಿದ್ದರು.
ಇದ್ಯಾವುದಿದು ಕೇಳಲು ವಿಚಿತ್ರವಾಗಿದೆಯಲ್ಲಾ,….ಈಗಿನ ಕಾಲದಲ್ಲಿ ಬಸ್ ಇಷ್ಟೆಲ್ಲಾ ಸೌಲಭ್ಯಗಳನ್ನು ಒದಗಿಸಿ ಜನರ ದೈನಂದಿನ ಅಗತ್ಯಗಳನ್ನು ಪೂರೈಸುತ್ತಾ ಅಂತಾ ಮೂಗಿನ ಮೇಲೆ ಬೆರಳಿಡುವಂತಿದೆ ಅಲ್ವಾ? ಈ ಎಲ್ಲಾ ಅಂಶಗಳು ಮಲೆನಾಡು ಭಾಗದ ಜನರ ಪಾಲಿಗೆ ಅಕ್ಷರಶಃ ನಿಜವಾಗಿತ್ತು. 1991ರಲ್ಲಿ ಹಲವು ಹೋರಾಟಗಳ ಫಲವಾಗಿ ಕಾರ್ಮಿಕರಿಂದಲೇ ಜನ್ಮ ತಾಳಿದ ಸಹಕಾರ ಸಾರಿಗೆ ಟಿಸಿಎಸ್ (TCS) ಅಂತಲೇ ಜನರ ಬಾಯಲ್ಲಿ ಜನಜನಿತವಾಗಿತ್ತು. ಕೊಪ್ಪ-ಶೃಂಗೇರಿ-ತೀರ್ಥಹಳ್ಳಿ-ಚಿಕ್ಕಮಗಳೂರು-ಶಿವಮೊಗ್ಗ ಹೀಗೆ ಮಲೆನಾಡು ಭಾಗದ ಹಳ್ಳಿ ಹಳ್ಳಿಗಳ ಮೂಲೆ ಮೂಲೆಗಳಲ್ಲೂ ಸಂಚರಿಸಿ ಜನರ ಜೀವನಾಡಿಯಾಗಿತ್ತು. ಕೇವಲ ನಾಲ್ಕು ಬಸ್ ಗಳಿಂದ ಜನ್ಮ ತಾಳಿದ ಸಹಕಾರ ಸಾರಿಗೆ 25 ವರ್ಷಗಳಲ್ಲಿ 76 ಬಸ್ ಗಳಿಗೆ ಏರಿಕೆಯಾಯಿತು. ಏಷ್ಯಾ ಖಂಡದಲ್ಲೇ ಸಹಕಾರ ತತ್ವದಡಿಯಲ್ಲಿ ಆರಂಭವಾದ ಮೊದಲ ಸಾರಿಗೆ ಎಂಬ ಪ್ರಖ್ಯಾತಿಗೆ ಕೊಪ್ಪದ ಈ ಸಹಕಾರ ಸಾರಿಗೆ ಸಂಸ್ಥೆ ಸದ್ಯ ಕಣ್ಣುಮುಚ್ಚಿದೆ.
ಕುಂಭದ್ರೋಣ ಮಳೆಯ ನಡುವೆ ತಿರುವಿನ ಹಾದಿ :
ಮಲೆನಾಡಿನ ಕುಂಭದ್ರೋಣ ಮಳೆ, ಮಣ್ಣು ಬಿದ್ದ ಹಳ್ಳಿಯ ರಸ್ತೆಗಳು, ಹಠಾತ್ತನೇ ಎದುರಾಗುವ ತಿರುವಿರುವ ದಾರಿಗಳು, ದುರ್ಗಮ ಕಾಡಿನ ನಡುವೆ ಸಂಚರಿಸುತ್ತಾ ಸಾವಿರಾರು ಜನರ ಬದುಕಿಗೆ ಆಸರೆಯಾಗಿದ್ದ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ ಆರಂಭಗೊಂಡು ಅದು ಜನ ಜೀವನದ ಭಾಗವಷ್ಟರ ಮಟ್ಟಿಗೆ ಬೆಳೆದ ಪರಿಯನ್ನು, ಕೊನೆಗೆ ಸಂಸ್ಥೆಯೊಳಗಿನ ವಿವಿಧ ರೀತಿಯ ಬೆಳವಣಿಗೆಗಳಿಂದಾಗಿ ನಷ್ಟದ ಹಾದಿ ಹಿಡಿದು ಕೊನೆಗೆ ಹೇಗೆ ಅಳಿವು ಹೊಂದಿ, ಪುನಶ್ಚೇತನಕ್ಕಾಗಿ ಕಾಯುತ್ತಿರುವ ಹಂತದವರೆಗಿನ ಸುಧೀರ್ಘ ಪರಿಯನ್ನು ಸುಘೋಷ್ ನಿಗಳೆ ( Sughosh Nigale) ಎಂಬುವರು ಸುಮಾರು ಒಂದು ವರ್ಷಗಳ ಕಾಲ ತಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆ ಇಡೀ ಮಲೆನಾಡು ಭಾಗದ 100 ವರ್ಷಗಳ ಸಾರಿಗೆ ಇತಿಹಾಸದ ಪರಿಚಯವನ್ನು ತಮ್ಮ “ರೈಟ್…..ರೈಟ್” ಎಂಬ 49.25 ನಿಮಿಷಗಳ ಸಾಕ್ಷ್ಯಾಚಿತ್ರದಲ್ಲಿ ಅನಾವರಣ ಗೊಳಿಸಿದ್ದಾರೆ.
ವೃತ್ತಿಪರ ಪತ್ರಕರ್ತರಾಗಿ ವೃತ್ತಿ ಆರಂಭಿಸಿ, ಕನ್ನಡದ ಹಲವು ನಾಟಕ, ಧಾರಾವಾಹಿಗಳಲ್ಲಿ ನಟಿಸುತ್ತಾ ಲೇಖಕ ಹಾಗೂ ಬ್ಲಾಗರ್ ಆಗಿ ಗುರುತಿಸಿಕೊಂಡಿರುವ ಸುಘೋಷ್ ನಿಗಳೆ ತಮ್ಮ “ಕಾಶಿಯಸ್ ಮೈಂಡ್” ( Cautiousmind ) ಬ್ಯಾನರ್ ಅಡಿಯಲ್ಲಿ. ನಿರ್ಮಾಣ, ನಿರ್ದೇಶನ, ಸಾಹಿತ್ಯ, ಹಿನ್ನೆಲೆ ಧ್ವನಿ ನೀಡಿ ಈ ಅತ್ಯುತ್ತಮ ಡಾಕ್ಯುಮೆಂಟರಿಯನ್ನು ಹೊರತಂದಿದ್ದಾರೆ. ಒಟ್ಟಿನಲ್ಲಿ ಕೊಪ್ಪದ, ಮಲೆನಾಡಿನ ಹೆಮ್ಮೆಯ ಸಹಕಾರ ಸಾರಿಗೆ ಸಂಸ್ಥೆ, 29 ವರ್ಷಗಳ ಕಾಲ ವೈಭವದಿಂದ ನಡೆದ ಸಂಸ್ಥೆ ಇಂದು ಮುಚ್ಚಿದೆ. ಸಹಕಾರ ಸಾರಿಗೆ ಹುಟ್ಟಿದ, ಬೆಳೆದ, ಅವನತಿಗೊಂಡ ಕಥನವೇ ಈ ರೈಟ್…ರೈಟ್ ಸಾಕ್ಷ್ಯಾಚಿತ್ರ. ಇತ್ತೀಚೆಗಷ್ಟೇ ಈ ಸಾಕ್ಷ್ಯಾಚಿತ್ರದ ಬೆಂಗಳೂರಿನ ಸುಚಿತ್ರ ಪುರ್ವಂಕರ ಸಿನಿಮಾ ಅಕಾಡೆಮಿಯಲ್ಲಿ ಪ್ರಿಯರ್ ಶೋ ಪ್ರದರ್ಶನಗೊಂಡಾಗ, ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು.
ಸಾಕ್ಷ್ಯಾಚಿತ್ರ ನೋಡಿದವರು ಏನಂತಾರೆ? :
ಇದೀಗ ಯೂಟ್ಯೂಬ್ ನಲ್ಲಿ ಅಪಲೋಡ್ ಮಾಡಿದ್ದು, ಯೂಟ್ಯೂಬ್ ಖಾತೆದಾರರು ಈ ಸಾಕ್ಷ್ಯಾಚಿತ್ರದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ, ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
@user-fg9zw1wq8w ಎಂಬ ಯೂಟ್ಯೂಬ್ ಬಳಕೆದಾರರು ,“ರೈಟ್…..ರೈಟ್” ಸಾಕ್ಷ್ಯಾಚಿತ್ರದ ಬಗ್ಗೆ ನೆಟ್ಟಿನಗರ ಕೆಲವೊಂದು ಅನಿಸಿಕೆ, ಅಭಿಪ್ರಾಯಗಳು ಹೀಗಿದೆ : ತುಂಬಾ ಚನ್ನಾಗಿ ನಮ್ಮೂರಿನ ಹೆಮ್ಮೆ ಆಗಿದ್ದ ಸಹಕಾರ ಸಾರಿಗೆ ಸಂಸ್ಥೆಯ ವೈಭವನ್ನ ಹಾಗೂ ಸಂಸ್ಥೆ ತನ್ನ ಕಛೇರಿಗೇ ಬೀಗ ಹಾಕುವವರೆಗೆ ಹಾಗೆಯೇ ಹಾಕಿದ ಬೀಗ ವನ್ನ ತೆರೆಯಲು ಇರುವ ಸವಾಲುಗಳನ್ನ ತುಂಬಾ ಚೆನ್ನಾಗಿ ವಿಶ್ಲೇಸಿದ್ದೀರಿ… ನಿಮ್ಮೆಲ್ಲಾ ಮಾಹಿತಿಗೆ ಧನ್ಯವಾದಗಳು. ಏನೇ ಆಗಲಿ ನಮ್ಮ ಕೊಪ್ಪದ ಊರಿನ ವೈಭವ ಆದಷ್ಟು ಬೇಗ ಮರುಕಳಿಸಲಿ… ನನಗೂ ಕೂಡ ಸಹಕಾರ ಸಾರಿಗೆಯ ಬಸ್ ಪಾಸ್ ಕಾಲೇಜು ವಿದ್ಯಾಭ್ಯಾಸವನ್ನ ಪೂರ್ಣಗೊಳಿಸಲು.. (ಸಹಕಾರ ಸಾರಿಗೆ )ಸಹಕರಿಸಿತ್ತು…” ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇನ್ನು ಮತ್ತೊಂದು ಖಾತೆದಾರರಾದ @udayakumar7834 “ರೈಟ್….ರೈಟ್ ನಿಂದ ಸ್ಟಾಪ್ ಸ್ಟಾಪ್ ವರೆಗೆ ನಮ್ಮೂರಿನ ಹೆಮ್ಮೆಯ ಸಹಕಾರ ಸಾರಿಗೆ ಕುರಿತಾದ ಸಾಕ್ಷ್ಯಚಿತ್ರ ಬಹಳ ಸುಂದರವಾಗಿ ಮೂಡಿಬಂದಿದೆ. ಸಹಕಾರ ಸಾರಿಗೆ ಸಂಸ್ಥೆಯ ಉಗಮ..ಏಳ್ಗೆ…ಮತ್ತು ಅವಸಾನ ಎಲ್ಲವನ್ನೂ ವಿಷಯಾಧಾರಿತವಾಗಿ ಬಿತ್ತರಿಸಲಾಗಿದೆ. ಪೀಠಿಕೆಯಾಗಿ ಕೊಪ್ಪ ಹಾಗೂ ಮಲೆನಾಡಿನ ಸೊಬಗನ್ನು ಚಿತ್ರೀಕರಿಸಿರುವುದು ಸಾಕ್ಷ್ಯಚಿತ್ರಕ್ಕೆ ಮೆರುಗನ್ನು ನೀಡಿದೆ. ಈ ಸಂಸ್ಥೆಗೂ ಮುಂಚಿನ ಶಂಕರ್ ಟ್ರಾನ್ಸ್ ಪೋರ್ಟ್ ಮತ್ತು ಶಾರದಾ ಮೋಟಾರ್ಸ್ ವಿಚಾರಗಳು ಉಲ್ಲೇಖನೀಯ. ನಮ್ಮ ಕುಟುಂಬದ ಹಿರಿಯರಾದ ದಿವಂಗತ ಮಾಧವರಾಯರ ಹೆಸರು ಪ್ರಸ್ತಾಪವಾಗಿದ್ದು ಸಂತಸ ತಂದಿದೆ. ಶಂಕರ್ ಟ್ರಾನ್ಸ್ ಪೋರ್ಟ್ ನ ಮಾಲೀಕರಾಗಿದ್ದ ಕೊಪ್ಪದ ಹೆಮ್ಮೆಯ ಶ್ರೀಯುತ ರಮೇಶರಾವ್ ರವರ ಸಂದರ್ಶನವಿದ್ದಿದ್ದರೆ ಒಳ್ಳೆಯದಿತ್ತು.”
“ಸಹಕಾರ ಸಾರಿಗೆಯ ಸಂಕಷ್ಟ ಪರಿಹಾರಕ್ಕೆ ವಿಪ್ರ ನೌಕರರ ಸಂಘವೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಜನ ಪ್ರತಿನಿಧಿಗಳು ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡಿದಾಗ್ಯೂ ಈ ನಮ್ಮ ಸಂಸ್ಥೆಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಕೊರಗು ಎಲ್ಲರಿಗೂ ಇದೆ. ಸಹಕಾರ ಸಾರಿಗೆಯ ಬಸ್ಸುಗಳು ಇಲ್ಲದೇ ಕೊಪ್ಪ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಮಲೆನಾಡಿನ ರಸ್ತೆಗಳು ಸಾರಿಗೆ ಬಸ್ಸುಗಳು ಇವತ್ತು ಬರಬಹುದು ನಾಳೆ ಬರಬಹುದು ಎಂದು ಕಾಯುತ್ತಲೇ ಇವೆ. ನಿಮ್ಮ ಈ ಸಾಕ್ಷ್ಯಚಿತ್ರವನ್ನು ನೋಡಿ ಯಾರಾದರೂ ಮಹನೀಯರು ದೊಡ್ಡ ಮನಸ್ಸು ಮಾಡಿ ಹೆಮ್ಮೆಯ ಸಹಕಾರ ಸಾರಿಗೆಗೆ ಕಾಯಕಲ್ಪ ನೀಡುವಂತಾಗಲಿ ಎಂದು ಹೃದಯ ಪೂರ್ವಕವಾಗಿ ಆಶಿಸುತ್ತೇನೆ” ಎಂದು ಹೇಳಿದ್ದಾರೆ.
@vasudev8885 ಎಂಬುವರು, “ಸುಘೋಷ್ ಸಾರ್ ಮಲೆನಾಡಿನ ರಸ್ತೆ ರಾಜ ನ ಚಿತ್ರಣ ಚೆನ್ನಾಗಿ ಮೂಡಿ ಬಂದಿದೆ” ಎಂದು ಹೇಳಿದ್ದಾರೆ.
ಒಟ್ಟಾರೆ ಮಲೆನಾಡಿನ ಜನರ ವ್ಯಾಪಾರ- ವಹಿವಾಟು, ದೈನಂದಿನ ಓಡಾಟದ ಜೀವನ, ಶಾಲೆ- ಕಾಲೇಜು ವಿದ್ಯಾರ್ಥಿಗಳ ಮಿತ್ರನಾಗಿ ಹಳ್ಳಿಯ ಮುಗ್ಧ ಜನರ ಬದುಕಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣವಾದ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ ಟಿಸಿಎಸ್ ಮತ್ತೆ ಆರಂಭವಾಗಲು ಸರ್ಕಾರದ ಸಹಾಯ ಹಸ್ತ ಶೀಘ್ರದಲ್ಲೇ ದೊರೆಯಬೇಕು ಎಂಬ ಆಗ್ರಹವು ಎಲ್ಲೆಡೆಯಿಂದ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಯಶಸ್ಸಾದರೆ ಸುಘೋಷ್ ನಿಗಳೆಯವರು ನಿರ್ಮಿಸಿದ “ರೈಟ್…..ರೈಟ್” ಡಾಕ್ಯುಮೆಂಟರಿ ಸಾರ್ಥಕತೆ ಪಡೆದುಕೊಳ್ಳುತ್ತದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.