ಭಾರತೀಯ ಸೇನೆಯಿಂದ ತಾತ್ಕಾಲಿಕ ಸೇತುವೆ ನಿರ್ಮಸಿರುವ ಚಿತ್ರ.
ವಯನಾಡ್, ಆ.1 www.bengaluruwire.com : ಕೇರಳದ ವಯನಾಡು ಜಿಲ್ಲೆಯ ಚೂರಲ್‌ಮಲೆ, ಮುಂಡಕ್ಕೆ ಸೇರಿ 4 ಗ್ರಾಮಗಳ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತದ ಪರಿಣಾಮದಿಂದಾಗಿ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 270ಕ್ಕೆ ಏರಿಕೆಯಾಗಿದ್ದರೆ, 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಸೇನೆಯು ರಕ್ಷಣಾ ಕಾರ್ಯ ಪ್ರಾರಂಭಿಸಿದ್ದು, ಅವರ ಪತ್ತೆಗಾಗಿ ಹುಡುಕಾಟ ಮುಂದುವರೆಸಲಾಗಿದೆ.
ಭಾರತೀಯ ಸೇನೆ ಮತ್ತು ಬೆಂಗಳೂರು ಪೋಲೀಸ (Bangalore Police) ರ ನಡುವಿನ ಸಮನ್ವಯತೆಯಿಂದ ಕೇರಳದಲ್ಲಿ ಬ್ರಿಡ್ಜಿಂಗ್ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಂಡಿದೆ. ವಯನಾಡ್‌ನಲ್ಲಿ ಭಾರತೀಯ ಸೇನೆಯ ಎಲ್ಲಾ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುವ ಮೇಜರ್ ಜನರಲ್ ವಿಟಿ ಮ್ಯಾಥ್ಯೂ ಅವರು ಇಂದು ಬೆಳಿಗ್ಗೆ ಕೇರಳದ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಅವರಿಗೆ ಮತ್ತು ರಾಜ್ಯ ಸಚಿವ ಸಂಪುಟಕ್ಕೆ ಮಾಹಿತಿ ನೀಡಿದರು.
ಕಡಿಮೆ ಸಮಯದಲ್ಲಿ ಸೇತುವೆ ನಿರ್ಮಾಣ ಸೇರಿದಂತೆ ಸೇನೆಯ ಪ್ರಯತ್ನಗಳನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಶ್ಲಾಘಿಸಿದರು. ಸೇನೆಯ ಪ್ರಯತ್ನಗಳನ್ನು ಸಚಿವ ಸಂಪುಟವೂ ಶ್ಲಾಘಿಸಿದೆ.
ಆರು ಭಾರತೀಯ ಸೇನಾ ತುಕುಡಿಗಳು ಪರಿಹಾರ ಕಾಲಮ್‌ಗಳು, ವೈದ್ಯಕೀಯ ತಂಡಗಳು, ಶ್ವಾನದಳಗಳು ಮತ್ತು ಇಂಜಿನಿಯರ್ ಕಾರ್ಯಪಡೆಯು ಅಟ್ಟಮಲ, ಮುಂಡಕ್ಕೈ ಮತ್ತು ಚೂರಲ್‌ಮಲಾದಲ್ಲಿ ಇಂದು ಬೆಳಿಗ್ಗೆ 6.30 ಕ್ಕೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅಟ್ಟಮಾಲ, ಮುಂಡಕ್ಕೈ ಮತ್ತು ಚೂರಲ್ಮಲಾ ಈ ಮೂರು ಸ್ಥಳಗಳಲ್ಲಿ ಇತರ ರಕ್ಷಣಾ ತಂಡಗಳ ಸಮನ್ವಯದೊಂದಿಗೆ ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಸೇನೆಯ ವಿವಿಧ ತುಕುಡಿಗಳಿಂದ ಮಣ್ಣಿನ ಅಡಿ ಸಿಲುಕಿ ಹೊರಕ್ಕೆ ತೆಗೆದಿರುವ ಮೃತದೇಹಗಳನ್ನು ಮುಂದಿನ ಕ್ರಮಕ್ಕಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ರಕ್ಷಣಾ ಇಲಾಖೆ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ.
ರಾತ್ರಿಯಿಡೀ ಚೂರಲ್‌ಮಲಾ – ಮುಂಡೇಕ್ಕಾಯಿ ನಡುವೆ ಫುಟ್ ಬ್ರಿಡ್ಜ್ (Foot Bridge) – ಬೈಲಿ ಬ್ರಿಡ್ಜ್ (Bailey Bridge) ಪ್ಯಾನೆಲ್‌ಗಳನ್ನು ಬಳಸುವ ಸುಧಾರಿತ ತಾತ್ಕಾಲಿಕ ಸೇತುವೆ ನಿರ್ಮಿಸಿ ರಕ್ಷಣಾ ತಂಡಗಳು ಸಂಪರ್ಕ ಕಾರ್ಯ ಹಾಗೂ ಶೋಧ ಕಾರ್ಯ ಕೈಗೊಳ್ಳಲು ರಕ್ಷಣಾ ತಂಡಗಳು ಅನುಕೂಲ ಮಾಡಿಕೊಟ್ಟವು. ಸೇತುವೆ ನಿರ್ಮಾಣದಿಂದ ನದಿಯ ಇನ್ನೊಂದು ಬದಿಯಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ತ್ವರಿತವಾಗಿ ಸ್ಥಳಾಂತರಿಸಲಾಗುತ್ತಿದೆ.
ಬೈಲಿ ಸೇತುವೆಯ ನಿರ್ಮಾಣವನ್ನು ಮದ್ರಾಸ್ ಇಂಜಿನಿಯರ್ಸ್ ಟಾಸ್ಕ್ ಫೋರ್ಸ್ (Madras Engineers Task Force) ನಿಂದ ಮೀಪಾಡಿ-ಚೂರ್ಮಲಾ ಮೇಲೆ ರಾತ್ರಿಯಿಡೀ ಮಾಡಲಾಯಿತು. ಸೇತುವೆಯ ಪೂರ್ಣಗೊಂಡ ನಂತರ, ಸಂಪರ್ಕ ಕಡಿತಗೊಂಡ ಪ್ರದೇಶಗಳಿಗೆ, ಹೆಚ್ಚಿನ ಇಂಜಿನಿಯರಿಂಗ್ ಉಪಕರಣಗಳನ್ನು ರಕ್ಷಣಾ ಕಾರ್ಯ ಕೈಗೊಳ್ಳುವ ಸಲುವಾಗಿ ಕೊಂಡೊಯ್ಯಲಾಗುತ್ತಿದೆ. ನದಿಯ ದಡದ ಮೂಲಕ ಅವಶೇಷಗಳ ಅಡಿ ಅಗೆದು ರಿಮೋಟ್ ಸೆನ್ಸಿಂಗ್ ತಾಂತ್ರಿಕ ಉಪಕರಣಗಳ ಮೂಲಕ ಅನ್ವೇಷಿಸಿ, ಒಳಗೆ ಸಿಲುಕಿರುವವರನ್ನು ರಕ್ಷಿಸುವ ಕೆಲಸ ಮುಂದುವರೆದಿದೆ.
ನಿನ್ನೆ ಸಂಜೆ 7 ಗಂಟೆಗೆ ಕೇರಳ ಪೊಲೀಸ್ ಡಿಜಿ ನೇತೃತ್ವದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಎಲ್ಲಾ ಇಲಾಖೆಗಳೊಂದಿಗೆ ಸಭೆ ನಡೆಸಲಾಗಿತ್ತು. ನಿನ್ನೆ ಶೋಧ ಕಾರ್ಯಾಚರಣೆಗಾಗಿ 5 ಜೆಸಿಬಿಗಳನ್ನು ಹೊಳೆಯ ಪಶ್ಚಿಮ ಭಾಗಕ್ಕೆ ಸ್ಥಳಾಂತರಿಸಲಾಗಿದತ್ತು. ಬದುಕುಳಿದವರು ಮತ್ತು ಮೃತರ ಪತ್ತೆಗಾಗಿ ಜೆಸಿಬಿಗಳು ಇಂದು ಹೂಳು ಮತ್ತು ಅವಶೇಷಗಳನ್ನು ತೆರವುಗೊಳಿಸಲಿವೆ. ನಿನ್ನೆ ರಾತ್ರಿ 10 ಗಂಟೆಗೆ ಪೊಲೀಸ್ ನಿಯಂತ್ರಣ ಕೊಠಡಿಯ ಪ್ರಕಾರ ಒಟ್ಟು 166 ಮಂದಿ ಮೃತಪಟ್ಟಿದ್ದರೆ, 225 ಗಾಯಗೊಂಡಿದ ಮಾಹಿತಿ ಲಭ್ಯವಾಗಿತ್ತು. ಆ ಪ್ರಮಾಣ ಈಗ ಏರಿಕೆಯಾಗಿದೆ.
ಭಾರತೀಯ ಸೇನೆಯ ಬ್ರಿಡ್ಜಿಂಗ್ ಸಲಕರಣೆಗಳನ್ನು ಭೂ ಕುಸಿತಗೊಂಡ ಕೇರಳದ ಭೂ ಕುಸಿತ ಪೀಡಿತ ವಯನಾಡ್ ಸ್ಥಳಕ್ಕೆ ತಲುಪಿಸಲು ಜುಲೈ 30 ರಂದೇ ಬೆಂಗಳೂರು ಪೊಲೀಸರ ನೆರವಿನೊಂದಿಗೆ ಭಾರತೀಯ ಸೇನೆಯ ಎಂಇಜಿ (MEG) ಮತ್ತು ಸೆಂಟರ್‌ನ ಪಡೆಗಳು ರಸ್ತೆಯಲ್ಲಿನ ದಟ್ಟಣೆಯನ್ನು ತೆರವುಗೊಳಿಸಲು ಮತ್ತು ವೇಗವಾಗಿ ಚಲಿಸುವ ಲೇನ್‌ಗಳನ್ನು ಒದಗಿಸುವ ಮೂಲಕ ತ್ವರಿತವಾಗಿ ಬೆಂಗಳೂರಿನಿಂದ ತಾತ್ಕಾಲಿಕ ಸೇತುವೆ ನಿರ್ಮಾಣದ ಪರಿಕರಗಳನ್ನು ಸ್ಥಳಾಂತರಿಸಿದವು.