ನವದೆಹಲಿ, ಜು.28 www.bengaluruwire.com : 2024-25ರ ಮೌಲ್ಯಮಾಪನ ವರ್ಷಕ್ಕೆ 5 ಕೋಟಿಗೂ ಹೆಚ್ಚು ತೆರಿಗೆ ರಿಟರ್ನ್‌ಗಳನ್ನು ತನ್ನ ಇ-ಫೈಲಿಂಗ್ ಪೋರ್ಟಲ್ ಮೂಲಕ ಇದುವರೆಗೆ ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.8ರಷ್ಟು ಹೆಚ್ಚಾಗಿದೆ.
ಜುಲೈ 26 ರಂದು, ಪೋರ್ಟಲ್ 28 ಲಕ್ಷ (Income Tax Return- ITR) ಗಳನ್ನು ಸ್ವೀಕರಿಸಿದೆ. ಇದು ಗಡುವು ಸಮೀಪಿಸುತ್ತಿದ್ದಂತೆ ಕೊನೆಯ ಹಂತದಲ್ಲಿ ಐಟಿಆರ್ ಫೈಲಿಂಗ್‌ಗಳು ಹೆಚ್ಚಾಗುತ್ತಿರುವುದನ್ನು ಸೂಚಿಸುತ್ತದೆ. ಇ-ಫೈಲಿಂಗ್ ಪ್ರಕ್ರಿಯೆಯ ಸುಗಮ ಕಾರ್ಯಾಚರಣೆಗೆ ಇಲಾಖೆಯು ಪೋರ್ಟಲ್ ಅನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಿರುವ ಇನ್ಫೋಸಿಸ್ ಜೊತೆಗಿನ ತಾಂತ್ರಿಕ ಪಾಲುದಾರಿಕೆ ಹೊಂದಿದೆ.
“2024 ಜುಲೈ 26 ರವರೆಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಮೌಲ್ಯಮಾಪನಾ ವರ್ಷ 2024-25 ಗಾಗಿ 5 ಕೋಟಿಗೂ ಹೆಚ್ಚು ಐಟಿಆರ್ ಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ. ಇದು ಹಿಂದಿನ ವರ್ಷದಲ್ಲಿ ಸಲ್ಲಿಸಿದ ಆದಾಯ ತೆರಿಗೆಗಳಿಗಿಂತ ಶೇ.8 ಹೆಚ್ಚು. ಜುಲೈ 26 ರಂದು 28 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಇನ್ಫೋಸಿಸ್ ಇ-ಫೈಲಿಂಗ್ ಪೋರ್ಟಲ್ ಅನ್ನು ನಿರ್ವಹಿಸಲು ಆದಾಯ ತರಿಗೆ ಇಲಾಖೆಯ ತಂತ್ರಜ್ಞಾನ ಪಾಲುದಾರಿಕೆ ಹೊಂದಿದೆ. ಅಡೆತಡೆಯಿಲ್ಲದ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಸೂಚನೆ ನೀಡಲಾಗಿದೆ. ಇ-ಫೈಲಿಂಗ್ ಗರಿಷ್ಠ ಅವಧಿಯಲ್ಲಿ ಇನ್ಫೋಸಿಸ್ ತಡೆರಹಿತ ಸೇವೆಗಳನ್ನು ನೀಡುವ ಭರವಸೆ ನೀಡಿದೆ. ಮೌಲ್ಯಮಾಪನಾ ವರ್ಷ (Assement Year) 2024-25 ಗಾಗಿ ಆದಾಯ ತೆರಿಗೆ ಸಲ್ಲಿಕೆಯನ್ನು ಮಾಡಲು ಕೊನೆಯ ದಿನ ಜುಲೈ 31 ಆಗಿದೆ.
ಚಾರ್ಟರ್ಡ್ ಅಕೌಂಟೆಂಟ್‌ಗಳ ಅಪೆಕ್ಸ್ ಬಾಡಿ ಐಸಿಎಐ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಿದ್ದ ಅಧಿವೇಶನದಲ್ಲಿ, ಐ-ಟಿ ಪೋರ್ಟಲ್‌ನಲ್ಲಿನ ದೋಷಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಪ್ರತಿಕ್ರಿಯೆಯಾಗಿ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಅಧ್ಯಕ್ಷ ರವಿ ಅಗರವಾಲ್ ಅವರು ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ನ ಸರಿಯಾದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಸೇವಾ ಪೂರೈಕೆದಾರರೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿದೆ ಎಂದು ಹಾಜರಿದ್ದವರಿಗೆ ಭರವಸೆ ನೀಡಿದರು.
“ನಾವು ಕೆಲಸದಲ್ಲಿರುವ ನಮ್ಮ ಸೇವಾ ಪೂರೈಕೆದಾರರಾದ ಇನ್ಫೋಸಿಸ್, ಐಬಿಎಂ ಮತ್ತು ಹಿಟಾಚಿಗಳೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿದ್ದೇವೆ. ಅನುಸರಣೆ ಕೂಡ ಉತ್ತಮವಾಗಿದೆ. ವೆಬ್‌ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನನಗೆ ಭರವಸೆ ನೀಡಲಾಗಿದೆ, ”ಅಗರವಾಲ್ ಹೇಳಿದ್ದಾರೆ.
ಐ-ಟಿ ಕಾಯಿದೆಯ ಹೆಚ್ಚು ಸರಳೀಕೃತ ಆವೃತ್ತಿಯನ್ನು ಹೊಂದಲು ಸಿಬಿಡಿಟಿ ಮುಂದಿನ ಆರು ತಿಂಗಳಲ್ಲಿ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ. ಮೌಲ್ಯಮಾಪನಾ ವರ್ಷ 2013-14 ರಲ್ಲಿ 3.80 ಕೋಟಿ ಐಟಿಆರ್ ಸಲ್ಲಿಸಿದ್ದರು. ಆದರೆ ಎಫ್ ವೈ 2022-23 ರಲ್ಲಿ ಸಲ್ಲಿಸಿದ ಒಟ್ಟು ಆದಾಯ ತೆರಿಗೆ ಸಲ್ಲಿಕೆಗಳ ಸಂಖ್ಯೆ 7.78 ಕೋಟಿಗಳಷ್ಟಿದ್ದು, ಐಟಿಆರ್ ಗಳ ಒಟ್ಟು ಸಂಖ್ಯೆಗೆ ಹೋಲಿಸಿದರೆ ಶೇ.104.91 ರಷ್ಟು ಹೆಚ್ಚಳವಾಗಿತ್ತು.