ಬೆಂಗಳೂರು, ಜು.28 www.bengaluruwire.com : ರಾಜಧಾನಿ ಬೆಂಗಳೂರಿನ ಎಷ್ಟೋ ಕೆರೆಗಳು ಅಭಿವೃದ್ಧಿಯ ವೇಗದಲ್ಲಿ ವಿವಿಧ ಕಾರಣಗಳಿಗೆ ಒತ್ತುವರಿಯಾಗಿ ತನ್ನ ಮೂಲಸ್ವರೂಪ ಕಳೆದುಕೊಳ್ಳುತ್ತಿದೆ. ಆ ಸರದಿಯಲ್ಲಿ ಇದೀಗ ಆರ್.ಆರ್.ನಗರ ವಲಯ ವ್ಯಾಪ್ತಿಯ ಮೈಲಸಂದ್ರ ಕೆರೆ-1 ಸೇರಿದೆ.
ನಿರ್ಮಲ ಗಿರಿ ರಸ್ತೆಯಲ್ಲಿನ ಮೈಲಸಂದ್ರ ಕೆರೆಯನ್ನು ಸರ್ಕಾರಿ ರಜಾ ದಿನವಾದ ಭಾನುವಾರ, ವ್ಯವಸ್ಥಿತವಾಗಿ ಯೋಜನೆ ರೂಪಿಸಿಕೊಂಡು ಟಿಪ್ಪರ್ ಮೂಲಕ ಮಣ್ಣು ಹಾಕಿ ಕೆರೆಯ ಹಸಿರು ವಲಯದ ಬಫರ್ ಜೋನ್ ಅತಿಕ್ರಮಣ ಮಾಡಿ ಮಣ್ಣು ಹಾಕಿ ರಸ್ತೆ ಮಾಡಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸಂಬಂಧ ಕೆರೆ ಕಾಯುತ್ತಿದ್ದ ಬಿಬಿಎಂಪಿಯ ಹೋಂ ಗಾರ್ಡ್ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದರೂ, ಸ್ಥಳದಲ್ಲಿ ಕೆರೆಯ ಒಂದು ಭಾಗದಲ್ಲಿ ರಸ್ತೆ ವಿಸ್ತರಣೆಗಾಗಿ ಮಣ್ಣು ಹಾಕಿ ತರುತ್ತಿದ್ದ ಟಿಪ್ಪರ್ ಹಾಗೂ ಜೆಸಿಬಿ (ವಾಹನ ಸಂಖ್ಯೆ KA 05 AN 2565 ಮತ್ತೊಂದು ವಾಹನ ಸಂಖ್ಯೆ KA 02 MD 9679) ವಾಹನಗಳಲ್ಲಿದ್ದ ಸಿಬ್ಬಂದಿಯನ್ನು ಕೇಳಿದಾಗ ಯಾವುದೇ ರೀತಿ ಸಕರಾತ್ಮಕವಾದ ಉತ್ತರ ಮತ್ತು ಅನುಮತಿ ಪತ್ರ ತೋರಿಸಿಲ್ಲ. ಆಗ ಫೊಟೊ ಸಮೇತ ದೂರು ನೀಡಿದರೂ ಅವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಸ್ಥಳೀಯರಾದ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.
ಅಸಲಿಗೆ ಮೈಲಸಂದ್ರ ಗ್ರಾಮದಲ್ಲಿ ಒಟ್ಟು ಎರಡು ಕೆರೆಗಳಿವೆ. ಮೈಲಸಂದ್ರ ಕೆರೆ-1 ಹಾಗೂ ಮೈಲಸಂದ್ರ ಕೆರೆ- 2. ಮೈಸೂರು ಮುಖ್ಯರಸ್ತೆಯಿಂದ ಆದಿತ್ಯ ಬೇಕರಿಯವರೆಗೆ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಬಿಬಿಎಂಪಿ ರಸ್ತೆ ಮೂಲ ಸೌಕರ್ಯ ವಿಭಾಗದಿಂದ 3.450 ಕಿ.ಮೀ ರಸ್ತೆ ಅಭಿವೃದ್ಧಿಪಡಿಸುತ್ತಿದ್ದು ಇದರಲ್ಲಿ ಎರಡನೆಯ ಕೆರೆಯ ಏರಿಯಲ್ಲಿನ ರಸ್ತೆಯನ್ನು ಅಗಲೀಕರಣ ಮಾಡಲು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಷರತ್ತು ಬದ್ಧ ಅನುಮತಿ ನೀಡಿದೆ. ಹೀಗಾಗಿ ಈ ಭಾಗದಲ್ಲಿ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಲಾಗಿದೆ.
ಆದರೆ 12 ಎಕರೆಗೂ ಹೆಚ್ಚಿನ ವಿಸ್ತೀರ್ಣದ ಮೈಲಸಂದ್ರ ಕೆರೆ-1 ಉತ್ತರಹಳ್ಳಿ ಮುಖ್ಯರಸ್ತೆ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಬರುವ ಮಾರ್ಗದಲ್ಲಿ ಮೇಲ್ಭಾಗದಲ್ಲಿದೆ. ಈ ಕೆರೆ ಏರಿಯಲ್ಲಿ ಕಂದಾಯ ದಾಖಲೆಗಳ ಪ್ರಕಾರ ನಕಾಶೆ ರಸ್ತೆಯಿದ್ದು, ನಂತರ 10 ಅಡಿ ರಸ್ತೆಯಿತ್ತು. ಆನಂತರ ಕೆರೆ ಸುತ್ತಮುತ್ತಲ ಅಪಾರ್ಟ್ ಮೆಂಟ್ ಹಾಗೂ ಶಾಲೆಯಿದ್ದು ಅವುಗಳ ಸುಗಮ ಓಡಾಡಕ್ಕೆ ಬಿಬಿಎಂಪಿಯಿಂದ ರಸ್ತೆ ಅಗಲೀಕರಣಕ್ಕೆ ಅನುಮತಿ ದೊರೆಯದ್ದರೂ ಸಹ ಅಕ್ರಮವಾಗಿ ಈ ಕೆರೆಯ ಏರಿಯಲ್ಲಿ 600 ಮೀಟರ್ ಅಷ್ಟು ದೂರದ ತನಕ 15 ಅಡಿಗಳಷ್ಟು ಅಗಲ ನಿಧಾನವಾಗಿ ಮಣ್ಣು ಹಾಕಿ ರಸ್ತೆಯನ್ನು ಅಗಲ ಮಾಡಲಾಗುತ್ತಿದೆ ಎಂದು ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳು ದೂರಿದ್ದಾರೆ.
ಉತ್ತರಹಳ್ಳಿ ಮುಖ್ಯ ರಸ್ತೆ ಹಾಗೂ ಬಿಜಿಎಸ್ ಆಸ್ಪತ್ರೆ ಬಳಿಯಿರುವ ಈ ಮೈಲಸಂದ್ರ ಕೆರೆ-1 ರಲ್ಲಿ ಯಥಾಸ್ಥಿತಿ ಕಾಪಾಡಿ ಕೆರೆಯ ಪರಿಸರವನ್ನು ಉಳಿಸುವಂತೆ ಸ್ಥಳೀಯರು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರನ್ನು ಆಗ್ರಹಿಸಿದ್ದಾರೆ.