ಬೆಂಗಳೂರು, ಜು.27 www.bengaluruwire.com : ಕನ್ನಡ ಹಬ್ಬ ಕರ್ನಾಟಕ ರಾಜ್ಯೋತ್ಸಕ್ಕೆ ಕೆಲವು ತಿಂಗಳು ಬಾಕಿ ಇರುವ ಮುನ್ನವೇ ಬೆಂಗಳೂರಿನಲ್ಲಿ ಕನ್ನಡಮಯ ವಾತಾವರಣ ಪ್ರಾರಂಭವಾಗಿದೆ. ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ವಿ.ರಾಣಿ ಗೋವಿಂದರಾಜು ಅವರು ಸಮ್ಮಳನದ ಅಧ್ಯಕ್ಷತೆ ವಹಿಸಿದ್ದರು.
ಶನಿವಾರ ಬೆಳಗ್ಗೆಯೇ ಧ್ವಾಜಾರೋಹಣ ನೆರವೇರಿಸಲಾಯಿತು. ಬಳಿಕ ಶ್ರೀರಾಮಪುರಂ ಸನ್ ರೈಸ್ ವೃತ್ತದಿಂದ ಶೇಷಾದ್ರಿಪುರಂ ವರೆಗೆ ಕನ್ನಡ ಜಾಗೃತಿ ಮೆರವಣಿಗೆ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಸಾಗಿ ಕನ್ನಡ ಹಬ್ಬಕ್ಕೆ ಮೆರಗು ನೀಡಿದರು. ವಿವಿಧ ಸಾಂಸ್ಕೃತಿಕ ಮೇಳಗಳು ಕನ್ನಡ ಜಾಗೃತಿ ಮೆರವಣಿಗೆಯಲ್ಲಿ ಗಮನ ಸೆಳೆದವು.
ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದೇಶದ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡದಲ್ಲಿ ಸಾಂಸ್ಕೃತಿಕ ಬಂಡಾರವೇ ಇದೆ. ಕನ್ನಡ ಭಾಷೆಯ ಜ್ಞಾನ ಇಂದು ದೇಶ ವಿದೇಶಗಳಲ್ಲಿ ಪಸರಿಸಿದೆ. ಯಾವುದೇ ದೇಶಕ್ಕೆ ಹೋದರು ನಮ್ಮ ಕನ್ನಡಿಗರು ನೆಲೆಸಿರುವುದನ್ನ ನಾವು ಕಾಣುತ್ತೇವೆ. ಕನ್ಮಡ ಭಾಷೆಗಿರುವ ಶ್ರೀಮಂತಿಕೆಯ ಸಾಹಿತ್ಯ, ಸಂಸ್ಕೃತಿ, ಅಪಾರ ಜ್ಞಾನ ಸಂಪತ್ತಿನಿಂದಾಗಿ ಇದು ಸಾಧ್ಯವಾಗಿದೆ ಎಂದರು. ಗಾಂಧಿನಗರದಲ್ಲಿ 5 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು, ಕನ್ನಡಕ್ಕೆ ನಮ್ಮ ಕಡೆಯಿಂದ ಒಂದು ಸಣ್ಣ ಸೇವೆ. ಯುವಕರು ನಮ್ಮ ಕನ್ನಡ ಭಾಷೆಯಲ್ಲಿರುವ ಜ್ಞಾನವನ್ನು ಸಂಪಾದಿಸಿಕೊಂಡು, ಕನ್ನಡ ಸೇವೆಗೆ ಸದಾ ಸಜ್ಜಾಗಿರಬೇಕು ಎಂದು ಕರೆ ನೀಡಿದರು.
ವಿ. ರಾಣಿ ಗೋವಿಂದರಾಜು ಅವರು ಕನ್ನಡ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ಕವಿ ಗೋಷ್ಠಿ ಸೇರಿದಂತೆ, ಕನ್ನಡ ನಾಳೆಗಳು ಹೇಗಿರಬೇಕು ಹಾಗೂ ಸರ್ವಜನಾಂಗದ ಶಾಂತಿಯ ತೋಟ – ಗಾಂಧಿನಗರ ಕ್ಷೇತ್ರ ಎಂಬ ಗೋಷ್ಠಿಗಳನ್ನ ಆಯೋಜಿಸಲಾಗಿತ್ತು. ಅಲ್ಲದೇ ಕನ್ನಡ ಸೇವೆ ಸಲ್ಲಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವತ್ತಕ್ಕೂ ಹೆಚ್ಚು ಗಣ್ಯರನ್ನು ಇದೇ ವೇಳೆ ಸನ್ಮಾನಿಸಲಾಯಿತು.