ಬೆಂಗಳೂರು, ಜು.24 www.bengaluruwire.com : ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಾರ್ಷಿಕ ತಲಾ 2 ಕೋಟಿ ರೂ.ಗಳ ಪೈಕಿ ಕೇವಲ 2 ವಿಧಾನಸಭಾ ಸದಸ್ಯರು ಹಾಗೂ ಒಬ್ಬರು ವಿಧಾನ ಪರಿಷತ್ ಸದಸ್ಯರು ಮಾತ್ರ ಶೇ.100ರಷ್ಟು ವೆಚ್ಚ ಮಾಡಿದ್ದಾರೆ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರಾದ ಡಿ.ಸುಧಾಕರ್ ವಿಧಾನಸಭೆಗೆ ತಿಳಿಸಿದ್ದಾರೆ.
ಕಡೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಆನಂದ್ ಕೆ.ಎಸ್ ಎಂಬುವರು ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರಿಗೆ ಅನುದಾನ ನೀಡುತ್ತಿದ್ದು, ಕ್ಷೇತ್ರದ ವ್ಯಾಪ್ತಿಯ ಹೆಚ್ಚಳದಿಂದಾಗಿ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು 2 ಕೋಟಿ ರೂ. ಅನುದಾನ ಸಾಕಾಗದಿರುವ ಬಗ್ಗೆ ಗಮನಕ್ಕೆ ಬಂದಿದೆಯೇ ಎಂಬ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಕ್ಷೇತ್ರಾಭಿವೃದ್ಧಿಗಾಗಿ 224 ವಿಧಾನಸಭಾ ಸದಸ್ಯರು ಹಾಗೂ 75 ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡುವ ವಾರ್ಷಿಕ 2 ಕೋಟಿ ರೂ.ಗಳ ಪೈಕಿ, 2023-24 ನೇ ಸಾಲಿನಲ್ಲಿ ಕೇವಲ 2 ವಿಧಾನಸಭಾ ಸದಸ್ಯರು ಮತ್ತು 1 ವಿಧಾನ ಪರಿಷತ್ ಸದಸ್ಯರು ಮಾತ್ರ ಶೇಕಡ 100 ರಷ್ಟು ವೆಚ್ಚ ಮಾಡಿರುತ್ತಾರೆ ಎಂದು ಹೇಳಿದ್ದಾರೆ.
ಉಳಿದವರಲ್ಲಿ, 40 ವಿಧಾನಸಭಾ ಸದಸ್ಯರು ಮತ್ತು 7 ವಿಧಾನ ಪರಿಷತ್ ಸದಸ್ಯರುಗಳು ಮಾತ್ರ 2 ಕೋಟಿ ರೂ.ಗಳ ಮೊತ್ತಕ್ಕೆ ಅಂದರೆ ಶೇ.100 ರಷ್ಟು ಅನುದಾನ ನೀಡಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಉಳಿದ 184 ವಿಧಾನ ಸಭಾ ಸದಸ್ಯರು ಮತ್ತು 68 ಮಾನ್ಯ ವಿಧಾನ ಪರಿಷತ್ ಸದಸ್ಯರುಗಳು ಶೇಕಡ 100 ರಷ್ಟು ಶಿಫಾರಸ್ಸು ಮಾಡಿರುವುದಿಲ್ಲ. ಆದ್ದರಿಂದ, 2 ಕೋಟಿ ರೂ.ಗಳ ಅನುದಾನ ಸಾಕಾಗುವುದಿಲ್ಲ ಎಂಬ ಅಂಶ ವಾಸ್ತವವಾಗಿರುವುದಿಲ್ಲ ಎಂದು ಸಚಿವ ಡಿ.ಸುಧಾಕರ್ ವಿವರಿಸಿದ್ದಾರೆ.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಾರ್ಷಿಕ ಒದಗಿಸುತ್ತಿರುವ 2 ಕೋಟಿ ರೂ.ಗಳ ಅನುದಾನವನ್ನು 5 ಕೋಟಿಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.