ಬೆಂಗಳೂರು, ಜು.19 www.bengaluruwire.com : ಬಿಬಿಎಂಪಿ ಬಿಲ್ ಪಾವತಿ ಮಾಡದ್ದರಿಂದ ಸ್ಥಗಿತಗೊಂಡಿದೆ ಎನ್ನಲಾಗಿದ್ದ ನಗರದಲ್ಲಿರುವ 11 ಇಂದಿರಾ ಕ್ಯಾಂಟೀನ್‌ಗಳು ಶುಕ್ರವಾರದಿಂದಲೇ ಕಾರ್ಯಾರಂಭ ಮಾಡಿವೆ.
ಬಿಬಿಎಂಪಿಯ ದಕ್ಷಿಣ ವಲಯದ ಬಸವನಗುಡಿ, ಬೈರಸಂದ್ರ, ವಿ.ವಿ. ಪುರ, ಜಯನಗರ, ಆಡುಗೋಡಿ, ಈಜಿಪುರ ಮತ್ತು ಸಿದ್ದಾಪುರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳು ಬಂದ್ ಆಗಿದ್ದವು. ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ, ಉಪಾಹಾರ ಮತ್ತು ರಾತ್ರಿ ಊಟವನ್ನು ರಿಯಾಯಿತಿ ದರದಲ್ಲಿ ಒದಗಿಸುತ್ತಿದ್ದ ಏಜೆನ್ಸಿಗಳಿಗೆ 40 ಕೋಟಿ ರೂ. ಬಿಲ್ ಅನ್ನು ಬಿಬಿಎಂಪಿ ಪಾವತಿಸದ ಕಾರಣ ಕಾರ್ಯಾಚರಣೆ ನಿಲ್ಲಿಸಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಅಸಲಿಗೆ ದಕ್ಷಿಣ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯವರು ಇಂದಿರಾ ಕ್ಯಾಂಟೀನ್‌ಗಳಲ್ಲಿ ನಾಗರೀಕರಿಗೆ ಒದಗಿಸಿರುವ ಆಹಾರಕ್ಕಿಂತ ಹೆಚ್ಚಿನ ಮಟ್ಟದ ಬಿಲ್‌ನ್ನು ಸಲ್ಲಿಸಿರುವುದರಿಂದ ಅನುದಾನವನ್ನು ಕಡಿತಗೊಳಿಸಲಾಗಿರುತ್ತದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.
ಈ ಕ್ಯಾಂಟೀನ್ ಗಳಲ್ಲಿ ಗುತ್ತಿಗೆ ಪಡೆದಿರುವ ಸಂಸ್ಥೆಯು ಸಲ್ಲಿಸಿರುವ ಬಿಲ್ಲುಗಳಲ್ಲಿ ಬಾಕಿ ಮೊತ್ತ ಅಂದಾಜು 40 ಕೋಟಿ ರೂ.ಗಳನ್ನು ಪಾವತಿಸದೇ ಇರುವ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಅಡುಗೆ ಕೋಣೆಯಲ್ಲಿ ನೀರಿನ ಮತ್ತು ವಿದ್ಯುತ್ ಬಿಲ್‌ಗಳನ್ನು ಪಾವತಿಸದೇ ಇರುವುದರಿಂದ ಜುಲೇ 18 ರಂದು ಕ್ಯಾಂಟೀನ್ ಗಳನ್ನು ಸ್ಥಗಿತಗೊಳಿಸಿತ್ತು.
ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಲಾಗಿದ್ದು, ಪಾಲಿಕೆಯ ವ್ಯಾಪ್ತಿಯಲ್ಲಿ ಆಹಾರದ ಗುಣಮಟ್ಟ, ಪ್ರಮಾಣವನ್ನು ಪರಿಶೀಲಿಸಲು ಪ್ರತಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಾರ್ಷಲ್ ಗಳನ್ನು ನಿಯೋಜಿಸಲಾಗಿದೆ. ಈ ಮಾರ್ಷಲ್‌ಗಳು ಪ್ರತಿ ನಿತ್ಯ ಖರ್ಚಾಗುವ ಊಟದ ಪ್ರಮಾಣದ ವರದಿ ಅನ್ವಯ ನವೆಂಬರ್-2021 ರಿಂದ ಈ ತನಕ ಸಂಬಂಧಪಟ್ಟ ಸಂಸ್ಥೆಯವರಿಗೆ ಅನುದಾನವನ್ನು ಪಾವತಿ ಮಾಡಲಾಗಿರುತ್ತದೆ. ಆದರೆ ಸಂಸ್ಥೆಯವರು ಇಂದಿರಾ ಕ್ಯಾಂಟೀನ್‌ಗಳಲ್ಲಿ ನಾಗರೀಕರಿಗೆ ಒದಗಿಸಿರುವ ಆಹಾರಕ್ಕಿಂತ ಹೆಚ್ಚಿನ ಮಟ್ಟದ ಬಿಲ್‌ನ್ನು ಸಲ್ಲಿಸಿರುವುದರಿಂದ ಅನುದಾನವನ್ನು ಕಡಿತಗೊಳಿಸಲಾಗಿರುತ್ತದೆ ಎಂದು ಸುರೋಳ್ಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುತ್ತಿಗೆದಾರರ ಜೊತೆ ಮಾಡಿಕೊಂಡಿರುವ ಒಡಂಬಡಿಕೆಯ ಪ್ರಕಾರ ನೀರು ಮತ್ತು ವಿದ್ಯುತ್ ಬಿಲ್‌ನ್ನು ಸಂಬಂಧಪಟ್ಟ ಸಂಸ್ಥೆಯವರೇ ಪಾವತಿಸಬೇಕಾಗಿರುತ್ತದೆ. ಈ ಬಗ್ಗೆ ಜು.18 ರಂದು ಸಾರ್ವಜನಿಕ ಆರೋಗ್ಯದ ಮುಖ್ಯ ಆರೋಗ್ಯಾಧಿಕಾರಿ ರವರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಸಂಸ್ಥೆಯವರ ಪ್ರತಿನಿಧಿ, ದಕ್ಷಿಣ ವಲಯ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಎಲ್ಲಾ ವಿಷಯಗಳ ಕುರಿತು ಸಂಸ್ಥೆಯ ಪ್ರತಿನಿಧಿಗಳಿಗೆ ವಿವರಿಸಿ, ತುರ್ತಾಗಿ ಸ್ಥಗಿತಗೊಂಡಿರುವ 11 ಇಂದಿರಾ ಕ್ಯಾಂಟೀನ್‌ಗಳನ್ನು ಪುನಾರಂಭಿಸುವಂತೆ ಸೂಚಿಸಲಾಗಿರುತ್ತದೆ. ಅದರಂತೆ ದಕ್ಷಿಣ ವಲಯದಲ್ಲಿ ಮುಚ್ಚಿದ್ದ ಎಲ್ಲಾ ಕ್ಯಾಂಟೀನ್‌ಗಳನ್ನು ಇಂದಿನಿಂದ ಗುತ್ತಿದಾರರು ಪುನರಾರಂಭ ಮಾಡಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಈ ರೀತಿ ಪುನರಾವರ್ತನೆಗೊಂಡಲ್ಲಿ ಕಾನೂನು ರೀತಿ ಕ್ರಮಕೈಗೊಂಡು ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗುವುದೆಂದು ಸಂಬಂಧಪಟ್ಟ ಸಂಸ್ಥೆಯವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ವಿಶೇಷ ಆಯುಕ್ತರು ವಿವರಿಸಿದ್ದಾರೆ.