ಬೆಂಗಳೂರು, ಜು.17 www.bengaluruwire.com : ರಾಜ್ಯದಲ್ಲಿ ಖಾಸಗಿ ವಲಯದ ಕೈಗಾರಿಕೆಗಳು ಹಾಗೂ ಮತ್ತಿತರ ಸಂಸ್ಥೆಗಳು ಆಡಳಿತಾತ್ಮಕ ಸ್ಥಾನಗಳಲ್ಲಿ ಶೇಕಡಾ 50 ರಷ್ಟು ಮತ್ತು ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇಕಡಾ 75 ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಾತಿ ನೀಡುವುದನ್ನು ಕಡ್ಡಾಯಗೊಳಿಸುವ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಈ ಬಗ್ಗೆ ಸಾಕಷ್ಟು ಪರ- ವಿರೋಧ ಕೇಳಿಬರುತ್ತಿದೆ.
ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಹಾಗೂ ಮೋಹನ್ ದಾಸ್ ಪೈ ಅವರಂತಹ ಉದ್ಯಮಿಗಳು ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿರುವ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜೊತೆಗೆ ಬುಧವಾರ ಮಾತನಾಡಿ, ತಂತ್ರಜ್ಞಾನ ಉದ್ಯೋಗಗಳ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಈ ವಿಚಾರ ನಮಗೆ ಅರ್ಥವಾಗುತ್ತದೆ. ಇಂತಹ ವಿಚಾರದಲ್ಲಿ ನಾವು ವಿನಾಯಿತಿ ನೀಡುತ್ತೇವೆ.
ಈ ಬಗ್ಗೆ ಅವರುಗಳು ಸರ್ಕಾರದ ಗಮನಕ್ಕೆ ತರಬೇಕು. ಸದನ ನಡೆಯುತ್ತಿರುವ ಸಮಯದಲ್ಲಿ ಮಸೂದೆಯ ಇತರೆ ಮಾಹಿತಿಯನ್ನು ನಾನು ಸದನದ ಹೊರಗೆ ಬಹಿರಂಗ ಪಡಿಸಲು ಆಗುವುದಿಲ್ಲ. ಸದನದಲ್ಲಿ ಎಲ್ಲಾ ಅಂಶಗಳು ಚರ್ಚೆಯಾಗಲಿ ಎಂದು ತಿಳಿಸಿದರು.
ಕರ್ನಾಟಕದ ಖಾಸಗಿ ಕಂಪನಿಗಳಲ್ಲೂ ಕನ್ನಡಿಗರಿಗೆ ಉದ್ಯೋಗಗಳ ಮೀಸಲಾತಿ ಕುರಿತ ಮಸೂದೆ ಕುರಿತು ಮಾತನಾಡಿದ್ದು, ಕರ್ನಾಟಕದಲ್ಲಿ ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಖಾಸಗಿ ಮಳಿಗೆಗಳಲ್ಲಿ ಕನ್ನಡ ನಾಮಫಲಕ ವಿಚಾರ ಹಾಗೂ ನಮ್ಮ ಧ್ವಜ, ಭಾಷೆ, ಸಂಸ್ಕೃತಿ, ಕಡತಗಳಲ್ಲಿ ಕನ್ನಡ ಬಳಕೆ ಸೇರಿದಂತೆ ರಾಜ್ಯದಲ್ಲಿ ಮುಂದೆ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಇಂತಿಷ್ಟು ಉದ್ಯೋಗ ಮೀಸಲಿಡುವವರೆಗೂ ನಮ್ಮ ಸರ್ಕಾರ ಕೆಲಸ ಮಾಡುತ್ತದೆ. ಈ ಬಗ್ಗೆ ನಿಟ್ಟಿನಲ್ಲಿ ಮಸೂದೆ ತಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಜೆಯ ನಂತರ ಜಯನಗರದ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗೆ ಡಬಲ್ ಡೆಕರ್ ಮಾರ್ಗದಲ್ಲಿ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಖುದ್ದು ಕಾರು ಚಲಾಯಿಸುವ ಮೂಲಕ ಇಂದು ಚಾಲನೆ ನೀಡಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಲೂಪ್‌ಗಳು ಮತ್ತು ಇಳಿಜಾರುಗಳೊಂದಿಗೆ ಸಂಚಾರ ದಟ್ಟಣೆ ಕಡಿಮೆ ಮಾಡಲು ರೈಲ್ ಕಮ್ ರೋಡ್ ಮೇಲ್ಸೇತುವೆ (ಡಬಲ್ ಡೆಕ್ಕರ್) ನಿರ್ಮಿಸಲಾಗಿದೆ ಎಂದು ಹೇಳಿದರು.
ಹೊಸ ಮೆಟ್ರೋ ಮಾರ್ಗಗಳು ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಾಣ:
“ಮುಂದಿನ ದಿನಗಳಲ್ಲಿ ಹೊಸ ಮೆಟ್ರೊ ಮಾರ್ಗಗಳನ್ನು ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುವುದು. ಇಂದಿನ ದಿನಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳುವುದು ಕಷ್ಟದ ಕೆಲಸ. ಡಬಲ್ ಡೆಕ್ಕರ್ ಮಾದರಿಯಿಂದ ಸಂಚಾರ ದಟ್ಟಣೆ ಸೇರಿದಂತೆ ಅನೇಕ ಉಪಯೋಗಗಳಿವೆ. ಹೆಚ್ಚು ಖರ್ಚಾದರೂ ಈ ಮಾದರಿ ಬೆಂಗಳೂರಿಗೆ ಅನುಕೂಲ” ಎಂದರು.
ಪ್ರಸ್ತುತ ಐದು ಕಾಲು ಕಿ.ಮೀ ಉದ್ದ ಡಬಲ್ ಡೆಕ್ಕರ್ ನಿರ್ಮಾಣಕ್ಕೆ ಸುಮಾರು 450 ಕೋಟಿ ರೂಪಾಯಿ ಖರ್ಚಾಗಿದೆ. ಈಗಿನ ಲೆಕ್ಕಾಚಾರ ನೋಡಿದರೆ ಹೆಚ್ಚೇನಿಲ್ಲ ನಾನು, ಮುಖ್ಯಮಂತ್ರಿಗಳು ಹಾಗೂ ರಾಮಲಿಂಗಾರೆಡ್ಡಿ ಅವರು ಅನೇಕ ವಿಚಾರಗಳನ್ನು ಚರ್ಚೆ ನಡೆಸಿದ್ದೇವೆ. ಡಬಲ್ ಡೆಕ್ಕರ್ ಯೋಜನೆ ಜಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಾರಣ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಈ ಯೋಜನೆ ಜಾರಿಯಾದರೂ ಅದನ್ನು ರಾಮಲಿಂಗಾರೆಡ್ಡಿ ಮಾಡೆಲ್ ಎಂದು ಹೇಳುತ್ತೇನೆ.
ಬೆಂಗಳೂರಿನಲ್ಲಿ 100 ಕಿ.ಮೀ ಉದ್ದ ಸಿಗ್ನಲ್ ಫ್ರೀ ಕಾರಿಡಾರ್ ಮಾಡಲು 120- 150 ಕೋಟಿ ರೂ. ಖರ್ಚಾಗುತ್ತದೆ ಎಂದು ಅಧಿಕಾರಿಗಳು ಅಂದಾಜು ವೆಚ್ಚ ತಿಳಿಸಿದ್ದಾರೆ. ವಿಶ್ವದರ್ಜೆ ಗುಣಮಟ್ಟದ ಡಬಲ್ ಡೆಕ್ಕರ್ ನಿರ್ಮಾಣ ಮಾಡಿದ್ದೇವೆ. ಬಿಬಿಎಂಪಿ ಮತ್ತು ಬಿಎಂಆರ್ ಸಿಎಲ್ ಈ ಯೋಜನೆಯ ವೆಚ್ಚವನ್ನು ಹಂಚಿಕೊಳ್ಳುತ್ತಾರೆ” ಎಂದರು.
5, 745 ಕೋಟಿ ರೂ. ವೆಚ್ಚದಲ್ಲಿ ಪೇಸ್ 2 ಯೋಜನೆ :
ಹೊಸೂರು ರಸ್ತೆ ಕಡೆ ತೆರಳುವ ಸುಮಾರು ಶೇ 30 ರಷ್ಟು ನಾಗರೀಕರಿಗೆ ಡಬಲ್ ಡೆಕ್ಕರ್ ನಿಂದ ಉಪಯೋಗವಾಗಲಿದೆ. ಎಲೆಕ್ಟ್ರಾನಿಕ್ ಸಿಟಿ, ಎಚ್ ಎಸ್, ಆರ್ ಲೇಔಟ್, ಮಹದೇವಪುರ ವಾಸಿಗಳಿಗೆ ಬಹಳ ಅನುಕೂಲವಾಗಲಿದೆ. 5 ಪಥಗಳುಳ್ಳ ಸುಮಾರು 9.5 ಕಿಮೀ ಉದ್ದವಿರುವ 5,745 ಕೋಟಿ ವೆಚ್ಚದಲ್ಲಿ ಆರ್ ವಿ ನಗರ ಮಹದೇವಪುರ ಎಲಿವೇಟೆಡ್ ಪೇಸ್ 2 ಯೋಜನೆಯನ್ನು ಜಾರಿಗೆ ಕಾರ್ಯಕ್ರಮ ರೂಪಿಸಲಾಗಿದೆ” ಎಂದರು.
ಸಚಿವ ರಾಮಲಿಂಗರೆಡ್ಡಿ ಮಾದರಿ ಜಾರಿ :
ಬೆಂಗಳೂರು ಅಭಿವೃದ್ಧಿ ಸಚಿವನಾಗಿದ್ದೇನೆ. ಈ ಸ್ಥಾನದಲ್ಲಿ ಕಳೆದ ಆಡಳಿತ ಅವಧಿಯಲ್ಲಿ ರಾಮಲಿಂಗಾರೆಡ್ಡಿ ಅವರು ಹಾಗೂ ಬಿಎಂಆರ್ ಸಿಎಲ್ ಎಂಡಿಯಾಗಿ ಕೊರೊಲಾ ಇದ್ದರು. ಇವರಿಬ್ಬರು ಚರ್ಚೆ ನಡೆಸಿ ಹೊಸತನದ ಡಬಲ್ ಡೆಕ್ಕರ್ ಮಾಡಲ್ ಅನ್ನು ಪರಿಚಯಿಸಿದರು. ಇದನ್ನು ಉದ್ಘಾಟನೆ ಮಾಡುವ ಭಾಗ್ಯ ನನ್ನದಾಗಿದೆ. ನಾನು ನಾಗ್ಪುರದಲ್ಲಿ ಈ ಮಾದರಿಯನ್ನು ನೋಡಿಕೊಂಡು ಬಂದಿದ್ದೇ” ಎಂದು ತಿಳಿಸಿದರು.
“ಡಬಲ್ ಡೆಕ್ಕರ್ ಯೋಜನೆಯ ಉಪಯೋಗ ತಿಳಿಯಲು ಜನರು ಮೇಲೆ ಹಾಗೂ ಕೆಳಗೆ ಸಂಚರಿಸಿ ಅನುಭವ ಪಡೆಯಬೇಕು. ಈ ಯೋಜನೆ ವೀಕ್ಷಿಸಲು ನೂತನ ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಅವರಿಗೂ ಮನವಿ ಮಾಡಲಾಗುವುದು. ಪ್ರಾಯೋಗಿಕ ಸಂಚಾರ ನಡೆಸಿದ ಮೇಲೆ ಒಂದಷ್ಟು ಕುಂದುಕೊರತೆಗಳು ತಿಳಿಯುತ್ತವೆ. ಇದೆಲ್ಲವನ್ನು ಬಗೆಹರಿಸಿ ಜನರ ಓಡಾಟಕ್ಕೆ ಮುಕ್ತಗೊಳಿಸಲಾಗುವುದು” ಎಂದು ಹೇಳಿದರು.
ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗಿನ ರೈಲ್ ಕಮ್ ರೋಡ್ ಫ್ಲೈಓವರ್ 5.12 ಕಿಮೀ ಉದ್ದದ ಲೂಪ್ ಮತ್ತು ಇಳಿಜಾರುಗಳೊಂದಿಗೆ ಪೂರ್ಣಗೊಂಡಿದೆ ಎಂದರು. ರಾಗಿಗುಡ್ಡ, ಎಚ್ ಎಸ್ ಆರ್ ಲೇಔಟ್ ಮತ್ತು ಹೊಸೂರು ರಸ್ತೆಯನ್ನು ತಲುಪಲು ಸಿಗ್ನಲ್ ಮುಕ್ತ ರಸ್ತೆಯಾಗಿರುತ್ತದೆ. ಕೆಆರ್ ಪುರ ಮತ್ತು ಹೊಸೂರು ರಸ್ತೆ ಕಡೆಗೆ ಹೋಗುವ ಪ್ರಯಾಣಿಕರಿಗೆ ಸಹಾಯವಾಗಲಿದೆ ಎಂದರು.
ಈ ರಸ್ತೆಯಿಂದ ಪ್ರಯಾಣದ ಸಮಯ ಶೇ.30 ಕ್ಕಿಂತ ಹೆಚ್ಚು ಉಳಿತಾಯವಾಗಲಿದೆ. ಡಬಲ್ ಡೆಕ್ಕರ್ ಫ್ಲೈಓವರ್ ಗೆ 449 ಕೋಟಿ ರೂಪಾಯಿ ವೆಚ್ಚವಾಗಿದೆ. ಒಟ್ಟಾರೆ ಈ ರೈಲ್ ಕಮ್ ರೋಡ್ ಫ್ಲೈಓವರ್ ಬೆಂಗಳೂರಿನ ನವೀನ ಮೂಲಸೌಕರ್ಯಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾಧ್ಯಮಗೋಷ್ಠಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಸತೀಶ್ ರೆಡ್ಡಿ, ರಾಮಮೂರ್ತಿ, ಬಿ ಎಂ ಆರ್ ಸಿ ಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್, ಬಿಬಿಎಂಪಿ ಆಡಳಿತಧಿಕಾರಿ ಉಮಾಶಂಕರ್, ಬಿಎಂಆರ್ ಡಿಎ ಆಯುಕ್ತ, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಉಪಸ್ಥಿತರಿದ್ದರು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.