ಬೆಂಗಳೂರು, ಜು.13 www.bengaluruwire.com : ದಕ್ಷಿಣ ಭಾರತದಲ್ಲಿ ನಂಬರ್ ಒನ್ ಹಾಲಿನ ಉತ್ಪನ್ನಗಳ ಬ್ರಾಂಡ್ ಆಗಿ ಬೆಳೆದಿರೋ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಲ (KMF – ಕೆಎಂಎಫ್) ಕಳೆದ 10 ವರ್ಷಗಳಲ್ಲಿ ಸಾಕಷ್ಟು ಬೆಳವಣಿಗೆ ಸಾಧಿಸಿದೆ. ಪ್ರತಿದಿನ 51.66 ಲಕ್ಷ ಕೆಜಿ ಹಾಲು ಶೇಖರಣೆಯಾಗುತ್ತಿರುವ ಜಾಗದಲ್ಲಿ ಈಗ 88.01 ಲಕ್ಷ ಕೆಜಿ ಹಲು ಸಂಗ್ರಹಿಸಲಾಗುತ್ತಿದೆ.
ರಾಜ್ಯದಲ್ಲಿ 30,715 ಗ್ರಾಮಗಳಿದ್ದು, ಅದರಲ್ಲಿ 15728 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯಾಚರಣೆಯಲ್ಲಿದ್ದು, ಒಟ್ಟು 24,000 ಹಳ್ಳಿಗಳು ಹಾಲು ಉತ್ಪಾದನೆ ಕೆಎಂಎಫ್ ವ್ಯಾಪಿಗೆ ಒಳಪಟ್ಟಿದೆ. ಪ್ರತಿ ವರ್ಷ 450- 500 ಸಂಘಗಳನ್ನು ರಚಿಸುವ ಮೂಲಕ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ. ಹೀಗಾಗಿ ಮಹಾಮಂಡಲ ಪ್ರಸ್ತುತದಲ್ಲಿ ದೇಶದಲ್ಲಿಯೇ ಸಹಕಾರಿ ಹೈನು ಉದ್ಯಮದಲ್ಲಿ ಎರಡನೇ ಸ್ಥಾನದಲ್ಲಿದ್ದು ದಕ್ಷಿಣ ಭಾರತದಲ್ಲಿ ಹಾಲು ಶೇಖರಣೆ ಹಾಗೂ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಇದೇ ಜೂನ್ 28 (2024 ಇಸವಿ) ರಂದು ದಾಖಲೆಯ 1 ಕೋಟಿ ಲೀಟರ್ ಹಾಲಿನ ಶೇಖರಣೆಯಾಗಿರುವುದು ಕೆಎಂಎಫ್ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು.
2013-14ನೇ ಇಸವಿಯಲ್ಲಿ ಕೆಎಂಎಫ್ ಹೇಗಿತ್ತು? 10 ವರ್ಷಗಳ ಬಳಿಕ ಈಗ (2023-24) ಹೇಗಿದೆ? ಎಂಬುದನ್ನು ನೋಡುವುದಾದರೆ 10 ವರ್ಷಗಳ ಹೋಲಿಕೆಯ ಪಟ್ಟಿಯು ಈ ಕೆಳಕಂಡಂತಿದೆ :
10 ವರ್ಷದ ಹೋಲಿಕೆಯ ವಿವರಣಾ ಪಟ್ಟಿ:
ಕ್ರಮ ಸಂಖ್ಯೆ | ವಿವರಗಳು | ಮಾಪನ | 2013 | 2024 |
1 | ಕಾರ್ಯಾಚರಣೆಯಲ್ಲಿರುವ ಹಾಲು ಸಹಕಾರ ಸಂಘಗಳು | ಸಂಖ್ಯೆ | 12334 | 15728 |
2 | ಒಟ್ಟು ಸದಸ್ಯರು : | ಲಕ್ಷಗಳಲ್ಲಿ | 22.48 | 26.73 |
3 | ಒಟ್ಟು ಮಹಿಳಾ ಸದಸ್ಯರು | ಲಕ್ಷಗಳಲ್ಲಿ | 7.65 | 10.19 |
4 | ದೈನಂದಿನ ಸರಾಸರಿ ಹಾಲು ಶೇಖರಣೆ | ಲಕ್ಷ ಕೆ.ಜಿ. | 51.66 | 88.01 |
5 | ಉತ್ಪಾದಕರಿಗೆ ಪಾವತಿಯಾದ ಹಣ (ದಿನವೊಂದಕ್ಕೆ) | ಕೋಟಿ ರೂ.ಗಳಲ್ಲಿ | 11.01 | 30.32 |
6 | ದೈನಂದಿನ ಸರಾಸರಿ ಹಾಲು ಮಾರಾಟ | ಲಕ್ಷ ಲೀ. | 29.99 | 46.25 |
7 | ದೈನಂದಿನ ಮೊಸರು ಮಾರಾಟ | ಲಕ್ಷ ಕೆ.ಜಿ. | 3.15 | 11.41 |
8 | ಪಶು ಆಹಾರ ಮಾರಾಟ | ಮೆ.ಟನ್ | 402491 | 852564 |
9 | ಪಶು ಆಹಾರ ಘಟಕಗಳ ಸಾಮರ್ಥ್ಯ | ಮೆ.ಟನ್ | 1350 | 2730 |
ವರ್ಷದಿಂದ ವರ್ಷಕ್ಕೆ ಹಾಲು ಉತ್ಪಾದಿಸುವ ಸದಸ್ಯರ ಸಂಖ್ಯೆ, ಹಾಲು ಉತ್ಪಾದನೆಯೂ ಹೆಚ್ಚಾಗಿ ಹೈನುಗಾರರಿಗೆ ಬದುಕು ಕಟ್ಟಿ ಕೊಡುವುದರಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿರುವ ಸಹಕಾರ ಸಂಘಗಳಲ್ಲಿ ಒಟ್ಟು ಮಹಿಳಾ ಸದಸ್ಯರ ಸಂಖ್ಯೆಯು 2013ರಲ್ಲಿ 7.65 ಲಕ್ಷ ಇದ್ದಿದ್ದು, 2024ರಲ್ಲಿ 10.19 ಲಕ್ಷ ಮಹಿಳಾ ಸದಸ್ಯರು ಸೇರ್ಪಡೆಯಾಗಿದ್ದಾರೆ. ಆ ಮೂಲಕ ಗ್ರಾಮೀಣ ಭಾಗದಿಂದ ಆದಾಯ ಹಂಚಿಕೆ, ಸ್ವಾವಲಂಬನೆಗೂ ಕೆಎಂಎಫ್ ಸಹಕಾರಿಯಾಗಿದೆ. ದೈನಂದಿನ ಸರಾಸರಿ ಹಾಲು ಮಾರಾಟವು 2013ರಲ್ಲಿ 29.99 ಲಕ್ಷ ಲೀಟರ್ ಆಗಿತ್ತು. ಆದರೆ ಈಗ 46.25 ಲಕ್ಷ ಲೀ. ಹಾಲು ಕೆಎಂಎಫ್ ಮಾರಾಟ ಮಾಡುವಷ್ಟು ಸಶಕ್ತವಾಗಿ ಬೆಳೆದಿದೆ. ಪಶು ಆಹಾರ ಉತ್ಪಾದಿಸುವ ಕೆಎಂಎಫ್ ವಾರ್ಷಿಕವಾಗಿ ಮೊದಲು 4,02,491 ಮೆಟ್ರಿಕ್ ಟನ್ ಪಶು ಆಹಾರವನ್ನು ಮಾರಾಟ ಮಾಡುತ್ತಿತ್ತು. ಆದರೀಗ ಈ ಪ್ರಮಾಣವು 8,52,564 ಮೆಟ್ರಿಕ್ ಟನ್ ಗೆ ಹೆಚ್ಚಳವಾಗಿದೆ. ಇನ್ನು ಪಶು ಆಹಾರ ಘಟಕಗಳ ಸಾಮರ್ಥ್ಯವು 1,350 ಮೆಟ್ರಿಕ್ ಟನ್ ನಿಂದ 2,730 ಮೆಟ್ರಿಕ್ ಟನ್ ಗೆ ಏರಿಕೆಯಾಗಿದೆ.
ಪ್ರತಿಸ್ಪರ್ಧಿ ಸಂಸ್ಥೆಗಳಿಗಿಂತ ಕಡಿಮೆ ದರದಲ್ಲಿ ಹಾಲು ಮಾರಾಟ :
25 ದೇಶಗಳಿಗೆ ಹಾಲು ರಫ್ತು :
ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿಯ ಆವರಣದಲ್ಲಿ ಸೆಂಟ್ರಲ್ ಕ್ವಾಲಿಟಿ ಅಶ್ಯೂರೆನ್ಸ್ ಲ್ಯಾಬೋರೇಟರಿ (CQAL) ಒಂದು ವಿಶ್ಲೇಷಣಾತ್ಮಕ ಪ್ರಯೋಗಾಲಯವಾಗಿದ್ದು ಭಾರತದ ನಂ.1 ಎನ್ಎಬಿಎಲ್ (National Accreditation Board for Testing and Calibration Laboratories – NABL) ಪ್ರಮಾಣ ಪತ್ರವನ್ನು ಹೊಂದಿರುವ ಏಕೈಕ ಸಂಸ್ಥೆಯಾಗಿದೆ. ಖಾಸಗಿ ಬ್ರ್ಯಾಂಡ್ ಗಳಿಗೆ ಹೋಲಿಸಿದರೆ “ನಂದಿನಿ” ಬ್ರಾoಡ್ ನ ಉತ್ಕೃಷ್ಟ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳು ಇನ್ನಿತರ ಪ್ರತಿಸ್ಪರ್ಧಿ ಸಂಸ್ಥೆಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡುತ್ತಿದೆ. ನಂದಿನಿ ಬ್ರಾಂಡ್ ಹಾಲು ಪ್ರತಿ ಲೀಟರ್ ಗೆ 44 ರೂ. ದರದಲ್ಲಿ ಮಾರುತ್ತಿದ್ದರೆ, ಕೇರಳದ ಮಿಲ್ಮಾ ಪ್ರತಿಸ್ಪರ್ಧಿ ಸಂಸ್ಥೆಯು 52 ರೂ., ದೆಹಲಿ ಮದರ್ ಡೈರಿ ಹಾಲು 54 ರೂ., ಗುಜರಾತ್ ಅಮೂಲ್ ಹಾಗೂ ಮಹಾರಾಷ್ಟ್ರದ ಅಮುಲ್ ಹಾಲು ತಲಾ 56 ರೂ.ಗಳಿಗೆ ಹಾಗೂ ಆಂಧ್ರಪ್ರದೇಶದ ವಿಜಯ್ ಬ್ರಾಂಡ್ ಹಾಲು ಲೀಟರ್ ಗೆ 58 ರೂ. ದರದಲ್ಲಿ ಮಾರಾಟವಾಗುತ್ತಿದೆ.
ಕೆಎಂಎಫ್ ಪ್ರಸ್ತುತ ಕೇವಲ ಕರ್ನಾಟಕವಲ್ಲದೆ ದೇಶ – ವಿದೇಶಗಳಲ್ಲೂ ತನ್ನ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಮುಂಬೈ, ಹೈದರಾಬಾದ್, ವಿದರ್ಭ, ಚೆನೈ, ಗೋವಾ, ಪುಣೆಗಳಂತಹ ನೆರೆ ರಾಜ್ಯಗಳ ಪ್ರಮುಖ ನಗರಗಳಲ್ಲಿ ದಿನವಹಿ ಹಾಲು ಮತ್ತು ಮೊಸರು ಹಾಗೂ ಇತರೆ ನಂದಿನಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದರಲ್ಲದೆ ಯುಎಚ್ ಟಿ ವರ್ಗದ (Ultra Heat Treatment Category) ಹಾಲು ಮತ್ತು ಇತರೆ ಹಾಲಿನ ಉತ್ಪನ್ನಗಳನ್ನು ಸಿಂಗಪೂರ್, ಭೂತಾನ್, ಮಧ್ಯಪ್ರಾಚ್ಯ ರಾಷ್ಟ್ರಗಳು, ಬ್ರುನೈ, ದುಬೈ, ಯು.ಎಸ್.ಎ. ಒಳಗೊಂಡ0ತೆ ವಿವಿಧ 25 ದೇಶಗಳಿಗೆ ರಫ್ತು ಮಾಡುತ್ತಿದೆ. ಇನ್ನು ರಕ್ಷಣಾ ಇಲಾಖೆಯ ಸೈನಿಕರಿಗೆ ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳೆಂದರೆ ಅಚ್ಚುಮೆಚ್ಚು ಎಂಬ ಅಭಿಪ್ರಾಯವಿದೆ. ತೆಲಂಗಾಣ ಅಂಗನವಾಡಿ ಮಕ್ಕಳಿಗೆ ದಿನವಹಿ ಯುಹೆಚ್ ಟಿ ಹಾಲನ್ನು ಸರಬರಾಜು ಮಾಡಲಾಗುತ್ತಿದೆ.
ನಂದಿನಿ ಕೆಫೆ ಮೂ ಎಂಬ ಯುವಪೀಳಿಗೆ ಉದ್ದೇಶಿತ ಒಟ್ ಲೆಟ್ :
ಯುವ ಪೀಳಿಗೆಯ ಅಭಿರುಚಿಗಳನ್ನು ಪರಿಗಣಿಸಿ, ರಾಜ್ಯ, ಹೊರರಾಜ್ಯ ಹಾಗೂ ಹೊರದೇಶಗಳಲ್ಲೂ ಸಹ ವಿನೂತನ ಮಾದರಿಯಲ್ಲಿ ನಂದಿನಿ ಕೆಫೆ ಮೂ ಪ್ರಾರಂಭಿಸಲು ಯೋಜಿಸಿದ್ದು, ಈಗಾಗಲೆ ಕರ್ನಾಟಕ, ಕೇರಳ, ಮುಂಬೈ, ದುಬೈಗಳಲ್ಲಿ ‘ನಂದಿನಿ ಕೆಫೆ ಮೂ’ ಗಳನ್ನು ತೆರೆಯಲಾಗಿದೆ. ನಂದಿನಿ ಉತ್ಪನ್ನಗಳಲ್ಲಿ ಸುಮಾರು 150 ಕ್ಕೂ ಹೆಚ್ಚು ಉತ್ಪನ್ನಗಳಿದ್ದು. ಮುಖ್ಯವಾಗಿ ಸಿಹಿ ಉತ್ಪನ್ನಗಳು, ಸುವಾಸಿತ ಹಾಲು (ಟೆಟ್ರಾ ಮತ್ತು ಪೆಟ್ ಬಾಟಲ್), ಯು.ಹೆಚ್.ಟಿ. ಮತ್ತು ಫ್ಲೆಕ್ಸಿ ಪ್ಯಾಕ್ ಹಾಲು, ಬೆಣ್ಣೆ, ಪನ್ನೀರ್, ಖೋವಾ ಮತ್ತು ಚೀಸ್. ಐಸ್ ಕ್ರೀಂ, ಚಾಕೊಲೇಟುಗಳು, ಹಾಲಿನ ಪುಡಿ ಮತ್ತು ಇನ್ಸ್ಟಾಂಟ್ ಮಿಕ್ಸ್, ಬೇಕರಿ ಐಟಮ್ಸ್, ಕುರುಕು ತಿಂಡಿ, ನಂದಿನಿ ಆಕ್ವಾ ಗಳನ್ನು ಒಳಗೊಂಡಿದೆ.
1 ಕೋಟಿ ಗೂ ಅಧಿಕ ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ :
ರಾಜ್ಯದ ಶಾಲಾ ಮಕ್ಕಳು ಹಾಗೂ ಅಂಗನವಾಡಿ ಮಕ್ಕಳುಗಳ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್ ಮತ್ತು ಕೊಬ್ಬಿನೊಂದಿಗೆ ಪೌಷ್ಠಿಕಾಂಶದ ಆಹಾರವನ್ನು ಒದಗಿಸಲು ಕೆಎಂಎಫ್ ಸಹಯೋಗದೊಂದಿಗೆ ಕರ್ನಾಟಕ ಸರ್ಕಾರವು 1 ಆಗಸ್ಟ್ 2013 ರಂದು ಕ್ಷೀರ ಭಾಗ್ಯ ಯೋಜನೆಯನ್ನು ಪ್ರಾರಂಭಿಸಿತು. ಕ್ಷೀರ ಭಾಗ್ಯ ಯೋಜನೆ ಯಶಸ್ವಿಯಾಗಿ 10 ವರ್ಷ ಪೂರೈಸಿದ ಕಾರಣ ಕ್ಷೀರ ದಶಮಾನೋತ್ಸವ ಆಚರಿಸಿತ್ತು. ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ 55,683 ಶಾಲೆಗಳು ಹಾಗೂ 64,000 ಅಂಗನವಾಡಿ ಸೇರಿದಂತೆ ಒಟ್ಟಾರೆ 1 ಕೋಟಿಗೂ ಅಧಿಕ ಮಕ್ಕಳು ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ರೈತರಿಗೆ ಪ್ರತಿದಿನ ಸರಾಸರಿ 29 ಕೋಟಿ ರೂ. ಹಣ ಬಟವಾಡೆ :
ರಾಜ್ಯ ಸರ್ಕಾರದ ಬರ ಪರಿಹಾರ ನಿಧಿಯಿಂದ ಪಶುಸಂಗೋಪನೆ ಇಲಾಖೆ ಮುಖಾಂತರ ರಾಜ್ಯದ ಹಾಲು ಉತ್ಪಾದಕರಿಗೆ ಒಟ್ಟಾರೆ 40 ಕೋಟಿ ರೂ. ಮೊತ್ತದ ಸುಮಾರು 11 ಲಕ್ಷ ಮೇವಿನ ಬೀಜಗಳ ಮಿನಿ ಕಿಟ್ ವಿತರಣೆ ಮಾಡಲಾಗಿರುತ್ತದೆ. ಕೆಎಂಎಫ್ ಜಿಲ್ಲಾ ಹಾಲು ಒಕ್ಕೂಟಗಳಿಂದ ಪ್ರತಿ 10 ದಿನಗಳಿಗೊಮ್ಮೆ ತಪ್ಪದೆ ಹಾಲು ಉತ್ಪಾದಕರಿಗೆ ಪ್ರತಿದಿನ ಒಟ್ಟಾರೆ ಸರಾಸರಿಯಾಗಿ.29 ಕೋಟಿ ರೂ.ಗಳ ಮೊತ್ತವನ್ನು ಉತ್ಪಾದಕರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಮುಖಾಂತರ ಹಾಲಿನ ಬಟಾವಾಡೆ ಮಾಡಲಾಗುತ್ತಿದೆ. ರೈತರಿಂದ ಮತ್ತು ರೈತ ಉತ್ಪಾದಕರ ಸಂಸ್ಥೆ (FPO)ಯಿಂದ ನೇರವಾಗಿ ರಾಸುಗಳ ಆಹಾರ ಉತ್ಪಾದನೆಗೆ ಅಗತ್ಯವಾದ ಮೆಕ್ಕೇಜೋಳ ಖರೀದಿಸುವ ಮಹತ್ವದ ಕಾರ್ಯವನ್ನು ಕೆಎಂಎಫ್ ಮಾಡಿದೆ. ರಾಸುಗಳಿಗೆ ಮನೆ ಬಾಗಿಲಿಗೆ ವೈದ್ಯಕೀಯ ಸೌಲಭ್ಯ, ಉಚಿತ ಚಿಕಿತ್ಸೆ ಮತ್ತು ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೆ ರೈತರಿಗೆ ರಾಸುಗಳ ನಿರ್ವಹಣೆ ತರಬೇತಿ ಕಾರ್ಯಕ್ರಮಗಳು, ಹಸುಗಳಲ್ಲಿ ಕಾಣಿಸಿಕೊಳ್ಳುವ ಅಗೋಚರ ಕೆಚ್ಚಲಬಾವು ನಿಯಂತ್ರಣ ಕಾರ್ಯವನ್ನು ಕೆಎಂಎಫ್ ತನ್ನ ಒಕ್ಕೂಟದಡಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ.
ವಾರ್ಷಿಕ 10 ಲಕ್ಷ ರಾಸುಗಳಿಗೆ ಗುಂಪು ವಿಮೆ :
ಕರ್ನಾಟಕ ಹಾಲು ಮಹಾಮಂಡಳವು ಜಿಲ್ಲಾ ಹಾಲು ಒಕ್ಕೂಟಗಳ ಮುಖಾಂತರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಪ್ರತಿ ವರ್ಷ ಪ್ರತಿ ಸಂಘಕ್ಕೆ 4.50 ಲಕ್ಷ ರೂನಂತೆ .12 ಕೋಟಿ ರೂ. ನೀಡಲಾಗುತ್ತಿದೆ. ಕಹಾಮ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಹೈನು ರಾಸುಗಳಿಗೆ ಗುಂಪು ವಿಮೆ ಯೋಜನೆಯಡಿ ವಾರ್ಷಿಕ 10 ಲಕ್ಷ ರಾಸುಗಳಿಗೆ 125 ಕೋಟಿ ರೂ. ಮೊತ್ತದಲ್ಲಿ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಶುದ್ಧ ಹಾಲು ಉತ್ಪಾದನೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಎನ್.ಪಿ.ಡಿ.ಡಿ. ಯೋಜನೆಯಡಿಯಲ್ಲಿ 2017-18 ರಿಂದ ಇಲ್ಲಿಯವರೆಗೆ 125 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಹಾಮದ ಮೂಲಕ ಜಿಲ್ಲಾ ಹಾಲು ಒಕ್ಕೂಟಗಳಿಗೆ ನೀಡಲಾಗುತ್ತಿದೆ. ಹೀಗೆ ಕೆಎಂಎಫ್ ಸಹಕಾರ ತತ್ವದಲ್ಲಿ ರಾಜ್ಯದ ಲಕ್ಷಾಂತರ ರೈತರಿಗೆ ಆ ಮೂಲಕ ಲಕ್ಷಾಂತರ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ, ಆದಾಯವನ್ನು ಒದಗಿಸಿದೆ.
ಕೆಎಂಎಫ್ ಗೂ ಇದೆ ಹಲವು ಸವಾಲುಗಳು :
ಕೆಎಂಎಫ್ ದೇಶ ವಿದೇಶಗಳಲ್ಲಿ ತನ್ನ ಖ್ಯಾತಿ ಹೊಂದಿದ್ದರೂ ಕೆಲವೊಂದು ಸವಾಲುಗಳನ್ನು ಹೊಂದಿದೆ. ಅವುಗಳೆಂದರೆ, ಹೆಚ್ಚುವರಿ ಹಾಲಿನ ವಿಲೇವಾರಿ, ಖಾಸಗಿ ಬ್ರಾಂಡ್ಗಳೊಂದಿಗೆ ಸ್ಪರ್ಧಿಸಿ, ಉತ್ತಮ ಗುಣಮಟ್ಟದ ಹಾಲನ್ನು ಸಂಗ್ರಹಿಸುವುದು ಮತ್ತು ವರ್ಷವಿಡೀ ರೈತರಿಗೆ ಉತ್ತಮ ದರವನ್ನು ಒದಗಿಸುವುದು, ಉತ್ಪನ್ನಗಳ ನಕಲಿ ತಡೆಯುವುದು, ಇತರ ರಾಜ್ಯಗಳು ಮತ್ತು ದೇಶಗಳಿಗೆ ಮಾರುಕಟ್ಟೆಯ ವಿಸ್ತರಣೆ, ಎಲ್ಲಾ ತನ್ನ ಹಾಲು ಉತ್ಪಾದನಾ ಸ್ಥಾವರಗಳ ಯಾಂತ್ರೀಕರಣಗೊಳಿಸುವುದು ಸೇರಿದಂತೆ ಹಲವು ಸವಾಲುಗಳನ್ನು ಹೊಂದಿದ್ದರೂ, ಅದನ್ನು ನಿಭಾಯಿಸಿಕೊಂಡು ಮಾರುಕಟ್ಟೆಯಲ್ಲಿ ಮುನ್ನುಗ್ಗುತ್ತಿದೆ.